ಭಾನುವಾರ, ಡಿಸೆಂಬರ್ 8, 2019
21 °C
ವಿದೇಶಿಗರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ಜಾಲ ಸಿಸಿಬಿ ಬಲೆಗೆ

ನಕಲಿ ಕ್ರೆಡಿಟ್/ಡೆಬಿಟ್ ಕಾರ್ಡ್ ತಯಾರಿಸಿ ₹ 100 ಕೋಟಿ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಕಲಿ ಕ್ರೆಡಿಟ್/ಡೆಬಿಟ್ ಕಾರ್ಡ್ ತಯಾರಿಸಿ ₹ 100 ಕೋಟಿ ವಂಚನೆ

ಬೆಂಗಳೂರು: ಬ್ಯಾಂಕ್ ಖಾತೆಯ ವಿವರಗಳನ್ನು ಕದ್ದು ನಕಲಿ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ತಯಾರಿಸಿ ವಿದೇಶಿಗರ ಖಾತೆಗಳಿಂದ ಈವರೆಗೆ ₹ 100 ಕೋಟಿಗೂ ಹೆಚ್ಚು ಹಣವನ್ನು ದೋಚಿರುವ ಮಹಾನ್ ವಂಚಕರ ಜಾಲ ಸಿಸಿಬಿ ಬಲೆಗೆ ಬಿದ್ದಿದೆ.

‘ಶ್ರೀಲಂಕಾದ ಜಾಫ್ನಾ ಪಟ್ಟಣದ ದಿವ್ಯನ್ (30), ಕನಕನಗರದ ನವಾಜ್‌ ಶರೀಫ್ (22) ಹಾಗೂ ಎಚ್‌ಆರ್‌ಬಿಆರ್‌ ಲೇಔಟ್‌ನ ನದೀಮ್ ಶರೀಫ್ (30) ಎಂಬುವರನ್ನು ಬಂಧಿಸಿದ್ದೇವೆ. ಆರೋಪಿಗಳಿಂದ ವಿವಿಧ ಬ್ಯಾಂಕ್‌ಗಳ 144 ಕ್ರೆಡಿಟ್ ಕಾರ್ಡ್‌ಗಳು,  ಹೊರ ರಾಜ್ಯಗಳ ಅಂಗಡಿಗಳಿಗೆ ಸೇರಿದ 36 ಸ್ವೈಪಿಂಗ್ ಯಂತ್ರಗಳು, 16 ನಕಲಿ ಚಾಲನಾ ಪರವಾನಗಿಗಳು, ಕಾರ್ಡ್‌ ರೀಡರ್, ಲ್ಯಾಮಿನೇಷನ್ ಹಾಗೂ ಮುದ್ರಣ ಯಂತ್ರವನ್ನು ಜಪ್ತಿ ಮಾಡಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ತಿಳಿಸಿದರು.

‘ಎಲೆಕ್ಟ್ರಾನಿಕ್ಸ್‌ ವಿಷಯದಲ್ಲಿ ಡಿಪ್ಲೊಮೊ ಶಿಕ್ಷಣ ಪಡೆದಿರುವ ದಿವ್ಯನ್, 10 ವರ್ಷಗಳ ಹಿಂದೆ ಭಾರತಕ್ಕೆ ಬಂದು ಚೆನ್ನೈನಲ್ಲಿ ನೆಲೆಸಿದ್ದ. ಆನ್‌ಲೈನ್ ವಂಚನೆ ಸಂಬಂಧ ಚೆನ್ನೈ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.  ಎರಡೇ ತಿಂಗಳಲ್ಲಿ ಜಾಮೀನು ಪಡೆದು ಹೊರ ಬಂದ ದಿವ್ಯನ್, ಚೆನ್ನೈನಲ್ಲೇ ಇದ್ದರೆ ಪೊಲೀಸರು ತನ್ನನ್ನು ಶ್ರೀಲಂಕಾಕ್ಕೆ ಗಡಿಪಾರು ಮಾಡಿಬಿಡುತ್ತಾರೆಂದು ಬೆಂಗಳೂರಿಗೆ ಬಂದಿದ್ದ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ನಗರಕ್ಕೆ ಬಂದ ಆತನಿಗೆ, ಇಲ್ಲಿ ನೆಲೆಸಿದ್ದ ನೈಜೀರಿಯಾದ ಡ್ರಗ್ ಪೂರೈಸುತ್ತಿದ್ದ  ಟಾಮ್‌ ಜೋ ಎಂಬಾತನ ಪರಿಚಯವಾಯಿತು. ಆತ ಜಾಲಹಳ್ಳಿಯಲ್ಲಿರುವ ಮಧುಗುಪ್ತಾ ಎಂಬುವರಿಗೆ ಸೇರಿದ ‘ಪ್ರೆಸ್ಟಿಜ್ ಕಾಲಿಂಗ್‌ವುಡ್’ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಹೆಸರಿನಲ್ಲೇ ದಿವ್ಯನ್‌ಗೆ ಫ್ಲ್ಯಾಟ್‌ ಕೊಡಿಸಿದ್ದ. ಆರೋಪಿ ದುಪ್ಪಟ್ಟು ಬಾಡಿಗೆ ಕೊಡುವುದಾಗಿ ಹೇಳಿದ್ದರಿಂದ ಮಾಲೀಕರು ಯಾವುದೇ ಕರಾರು ಮಾಡಿಕೊಳ್ಳದೆ  ಫ್ಲ್ಯಾಟ್ ನೀಡಿದ್ದರು.’

‘ಇದೇ ಅವಧಿಯಲ್ಲಿ ಆತನಿಗೆ ಫೇಸ್‌ಬುಕ್ ಮೂಲಕ ನವಾಜ್ ಶರೀಫ್ ಹಾಗೂ ನದೀಮ್ ಶರೀಫ್ ಅವರ ಪರಿಚಯವಾಯಿತು. ‘ದಂಧೆಗೆ ಕೈಜೋಡಿಸಿದರೆ ಕಡಿಮೆ ಅವಧಿಯಲ್ಲೇ ಶ್ರೀಮಂತರಾಗಬಹುದು’ ಎಂದು ಅವರಿಗೆ ಆಮಿಷ ಒಡ್ಡಿದ ದಿವ್ಯನ್, ಅವರು ಒಪ್ಪಿದ ಬಳಿಕ ತನ್ನ ಫ್ಲ್ಯಾಟ್‌ನಲ್ಲೇ ನಕಲಿ ಕಾರ್ಡ್‌ಗಳನ್ನು ತಯಾರಿಸಲು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದ’

ಕಾರ್ಯವೈಖರಿ ಹೀಗೆ: ‘ವಿದೇಶಿಗರಿಗೆ ವಂಚಿಸಿದರೆ ಅಲ್ಲಿನ ಪೊಲೀಸರು ತಮ್ಮನ್ನು ಹುಡುಕಿಕೊಂಡು ಬೆಂಗಳೂರಿನವರೆಗೆ ಬರುವುದಿಲ್ಲ ಎಂಬುದು ಆರೋಪಿಗಳ ನಂಬಿಕೆಯಾಗಿತ್ತು. ಹೀಗಾಗಿಯೇ ಆಸ್ಟ್ರೇಲಿಯಾ, ಜರ್ಮನಿ, ಜಪಾನ್, ಇಂಗ್ಲೆಂಡ್ ಹಾಗೂ ಯೂರೋಪ್ ರಾಷ್ಟ್ರಗಳ ಬ್ಯಾಂಕ್ ಖಾತೆದಾರರ ವಿವರಗಳನ್ನು ಕಳ್ಳ ವ್ಯವಹಾರಕ್ಕೆ ಬಳಕೆಯಾಗುತ್ತಿರುವ ‘ಡಾರ್ಕ್ ವೆಬ್’ ವೆಬ್‌ಸೈಟ್‌ನಿಂದ ಪಡೆದುಕೊಳ್ಳುತ್ತಿದ್ದರು’ ಎಂದು ತನಿಖಾಧಿಕಾರಿಗಳು ಹೇಳಿದರು.

‘ಖಾತೆಗಳ ವಿವರ ಕೈಸೇರಿದ ಬಳಿಕ ಅಮೆಜಾನ್ ಹಾಗೂ ಆಲಿಬಾಬಾ ಆನ್‌ಲೈನ್ ವಹಿವಾಟು ತಾಣಗಳಿಂದ ಮ್ಯಾಗ್ನೆಟಿಕ್ ಸ್ವೈಪ್ ಕಾರ್ಡ್‌ಗಳನ್ನು ಖರೀದಿಸುತ್ತಿದ್ದರು. ನಂತರ ಲ್ಯಾಪ್‌ಟಾಪ್‌ನಲ್ಲಿದ್ದ ಅಸಲಿ ಕಾರ್ಡ್‌ಗಳ ವಿವರಗಳನ್ನು  ‘ಎಂ.ಎಸ್.ಆರ್ 2000’  ಸಾಫ್ಟ್‌ವೇರ್ ಮೂಲಕ ನಕಲಿ ಕಾರ್ಡ್‌ಗಳಿಗೆ ವರ್ಗಾಯಿಸುತ್ತಿದ್ದರು.’

‘ಜತೆಗೆ ಆ ಕಾರ್ಡ್‌ಗಳ ಮೇಲೆ ನಮೂದು ಮಾಡಬೇಕಾದ 16 ಅಂಕಿಗಳು ಮತ್ತು ಬ್ಯಾಂಕ್‌ನ ಹೆಸರನ್ನು ಎಂಬೋಸರ್ ಯಂತ್ರದ ಮೂಲಕ ಪಂಚಿಂಗ್ ಮಾಡಿ ನಕಲಿ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ತಯಾರಿಸುತ್ತಿದ್ದರು’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಶೇ 20 ಕಮಿಷನ್: ಹೀಗೆ ತಯಾರಾದ ನಕಲಿ ಕಾರ್ಡ್‌ಗಳನ್ನು ದಿವ್ಯನ್ ಬೆಂಗಳೂರು, ಪುದುಚೆರಿ, ಹರಿಯಾಣ ಹಾಗೂ ಮುಂಬೈನಲ್ಲಿರುವ ತನ್ನ ಏಜೆಂಟ್‌ಗಳಿಗೆ ನೀಡುತ್ತಿದ್ದ.

ಸ್ಥಳೀಯ ಮಾಲ್‌ಗಳು ಹಾಗೂ ಅಂಗಡಿ ಮಾಲೀಕರನ್ನು ಭೇಟಿಯಾಗುತ್ತಿದ್ದ ಆ ಏಜೆಂಟ್‌ಗಳು, ‘ನಿಮ್ಮ ಸ್ವೈಪಿಂಗ್ ಯಂತ್ರಗಳಲ್ಲಿ ನಮ್ಮ ಕಾರ್ಡ್‌ಗಳನ್ನು ಸ್ವೈಪ್ ಮಾಡುತ್ತೇವೆ. ಎಷ್ಟು ಹಣ ಸ್ವೈಪ್ ಮಾಡುತ್ತೇವೆಯೋ, ಅದರಲ್ಲಿ ಶೇ 20ರಷ್ಟನ್ನು ನಿಮಗೆ ಕೊಡುತ್ತೇವೆ’ ಎಂದು ಆಮಿಷ ಒಡ್ಡುತ್ತಿದ್ದರು.

ಅದಕ್ಕೆ ಒಪ್ಪಿದ ನಂತರ ತಮ್ಮ ಕಾರ್ಡ್‌ಗಳನ್ನು ಸ್ವೈಪ್ ಮಾಡಿ, ಅಂಗಡಿ ಮಾಲೀಕರಿಗೆ ಶೇ 20ರಷ್ಟು ಕಮಿಷನ್ ನೀಡುತ್ತಿದ್ದರು. ಉಳಿದ ಹಣವನ್ನು ಏಜೆಂಟ್‌ಗಳು ಹಾಗೂ ಬಂಧಿತ ಆರೋಪಿಗಳು ಐಷಾರಾಮಿ ಜೀವನ ನಡೆಸುತ್ತಿದ್ದರು.

ತಮ್ಮ ಖಾತೆಯಿಂದ ಹಣ ಡ್ರಾ ಆದ ಸಂಬಂಧ ವಿದೇಶಿಗರು ಸ್ಥಳೀಯ ಠಾಣೆಗಳ ಮೆಟ್ಟಿಲೇರಿದರೂ, ‘ಇದೊಂದು ಸಾಮಾನ್ಯ ಪ್ರಕರಣ’ ಎಂದು ಆ ರಾಷ್ಟ್ರಗಳ ಪೊಲೀಸರು ಸುಮ್ಮನಾಗುತ್ತಿದ್ದರು.

ಎಂಟು ಭಾಷೆ, ನಾಲ್ಕು ಹೆಸರು: ‘ತನ್ನ ವಂಚನೆ ಮೂಲಕ ದಿವ್ಯನ್ ಚೆನ್ನೈ ಪೊಲೀಸರಿಗೆ ಚಿರಪರಿಚಿತನಾಗಿದ್ದ. ಅದೇ ಹೆಸರನ್ನು ಬಳಸಿ ಕೃತ್ಯ ಎಸಗಿದರೆ ಬೇಗನೆ ಸಿಕ್ಕಿ ಬೀಳುತ್ತೇನೆ ಎಂಬುದು ಆತನಿಗೆ ಗೊತ್ತಿತ್ತು. ಈ ಕಾರಣದಿಂದ ನಗರದಲ್ಲಿ ತನ್ನ ಅಸಲಿ ಹೆಸರನ್ನು ಯಾರಿಗೂ ಹೇಳದ ಆತ, ಪುಲಕೇಶಿ, ದಿನೇಶ್, ಗಣೇಶ್ ಹಾಗೂ ವಿಷ್ಣು ಎಂಬ ಹೆಸರುಗಳಿಂದ ಗುರುತಿಸಿಕೊಂಡಿದ್ದ. ಕನ್ನಡ, ತಮಿಳು ಸೇರಿದಂತೆ ದಿವ್ಯನ್‌ಗೆ ಎಂಟು ಭಾಷೆಗಳು ಗೊತ್ತಿದ್ದವು’ ಎಂದು ಅಧಿಕಾರಿಗಳು ಹೇಳಿದರು.

‘ಇನ್ನು ಸೈಬರ್ ವಂಚನೆ ಸಂಬಂಧ ನದೀಮ್ ಕಾಟನ್‌ಪೇಟೆ, ಕಾಟನ್‌ಪೇಟೆ ಹಾಗೂ ಮುಂಬೈನ ಸಿಸಿಬಿ ಪೊಲೀಸರಿಗೆ ಬೇಕಾಗಿದ್ದ. ಈ ರೀತಿ ಗಳಿಸಿದ ಹಣದಲ್ಲೇ ಆತ ಎಚ್ಆರ್‌ಬಿಆರ್‌ ಲೇಔಟ್‌ನಲ್ಲಿ ಐದು ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಿಸಿದ್ದಾನೆ.

ನವಾಜ್ ಕೂಡ ಎರಡು ಅಂತಸ್ತಿನ ಮನೆ ಕಟ್ಟಿಸಿಕೊಂಡಿದ್ದಾನೆ’ ಎಂದು ಮಾಹಿತಿ ನೀಡಿದರು.

**

ಬ್ಯಾಂಕ್ ಅಧಿಕಾರಿಗಳ ಜತೆ ಸಭೆ

‘ನಗದುರಹಿತ ವ್ಯವಹಾರ ಹೆಚ್ಚಾಗುತ್ತಿರುವಂತೆಯೇ ಆನ್‌ಲೈನ್‌ ವಂಚನೆ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಹೀಗಾಗಿ, ರಿಸರ್ವ್‌ ಬ್ಯಾಂಕ್  ಹಾಗೂ ಇನ್ನಿತರೆ ಬ್ಯಾಂಕ್‌ಗಳ ಅಧಿಕಾರಿಗಳ ಜತೆ ಸಭೆ ನಡೆಸಿ, ಗ್ರಾಹಕರ ಹಣಕ್ಕೆ ಭದ್ರತೆ ಒದಗಿಸಲು ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ’ ಎಂದು ಪ್ರವೀಣ್ ಸೂದ್ ತಿಳಿಸಿದರು.

‘ದುಷ್ಕರ್ಮಿಗಳು ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ನಕಲು ಮಾಡಿ ಹಣ ಡ್ರಾ ಮಾಡುತ್ತಿದ್ದಾರೆ. ಅಲ್ಲದೆ, ಎಟಿಎಂ ಯಂತ್ರಗಳಲ್ಲಿ ಸ್ಕಿಮ್ಮಿಂಗ್ ಸಾಧನಗಳನ್ನು ಅಳವಡಿಸಿ ಗ್ರಾಹಕರ ಕಾರ್ಡ್‌ಗಳ ವಿವರಗಳನ್ನು ಕದಿಯುತ್ತಿದ್ದಾರೆ. ಈ ತಂತ್ರ ಬಳಸಿಯೇ ಕಳೆದ ವಾರ 29 ಮಂದಿಯ ಖಾತೆಗೆ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಬ್ಯಾಂಕ್ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ’ ಎಂದು ಮಾಹಿತಿ ನೀಡಿದರು.

‘ಎಟಿಎಂ ಕೇಂದ್ರಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಲು ಹಾಗೂ ಸುರಕ್ಷತೆಗೆ ಆಧುನಿಕ ತಂತ್ರಜ್ಞಾನ ಬಳಸಲು ವಿನಂತಿಸಲಾಗಿದೆ. ಕಾರ್ಡ್‌ಗಳ ಬದಲು ಗ್ರಾಹಕರಿಗೆ ಚಿಪ್ ವ್ಯವಸ್ಥೆ ಮಾಡುವಂತೆಯೂ ಸಲಹೆ ನೀಡಲಾಗಿದೆ’ ಎಂದು ಹೇಳಿದರು.

**

ಟಿ.ವಿ ಖರೀದಿಸಿ ಸಿಕ್ಕಿಬಿದ್ದರು!

ಜೂನ್ 21ರಂದು ದೊಡ್ಡಕಲ್ಲಸಂದ್ರದ ‘ವಿಷ್ಣುಪ್ರಿಯಾ ಇಂಟರ್‌ನ್ಯಾಷನಲ್’ ಮಳಿಗೆಯಲ್ಲಿ ಮೂರು ಟಿ.ವಿಗಳನ್ನು ಖರೀದಿಸಿದ್ದ ಆರೋಪಿಗಳು, ₹ 1.10 ಲಕ್ಷಕ್ಕೆ ನಕಲಿ ಕಾರ್ಡ್‌ಗಳನ್ನು ಸ್ವೈಪ್ ಮಾಡಿ ಬಂದಿದ್ದರು.

ಯಂತ್ರದಲ್ಲಿನ ದೋಷದಿಂದಾಗಿ  ಹಣ ಅಂಗಡಿ ಮಾಲೀಕರ ಖಾತೆಗೆ ಜಮೆ ಆಗಿರಲಿಲ್ಲ. ಆರೋಪಿಗಳು ಕೊಟ್ಟು ಹೋಗಿದ್ದ ಮೊಬೈಲ್ ಸಂಖ್ಯೆಗೆ ತಕ್ಷಣ ಕರೆ ಮಾಡಿದ್ದ ಅವರು, ‘ಹಣ ಜಮೆ ಆಗಿಲ್ಲ’ ಎಂದಿದ್ದರು. ಆದರೆ, ಅವರು ಸರಿಯಾಗಿ ಸ್ಪಂದಿಸದ ಕಾರಣ ಮಾಲೀಕರು ಸೈಬರ್ ಕ್ರೈ ಪೊಲೀಸರಿಗೆ ದೂರು ಕೊಟ್ಟಿದ್ದರು.

ಆ ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಹೊರಟ ಸಿಸಿಬಿ ಎಸಿಪಿ ಎಚ್‌.ಎಂ.ಮಹದೇವಪ್ಪ ಅವರ ತಂಡ, ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಆರೋಪಿಗಳು ಉಳಿದುಕೊಂಡಿದ್ದ ಫ್ಲ್ಯಾಟ್ ಮೇಲೆ ದಾಳಿ ನಡೆಸಿತ್ತು. ಆಗ ಜಾಲದ ಇಡೀ ಅಕ್ರಮ ಬಯಲಾಯಿತು.

**

ಫ್ಲ್ಯಾಟ್‌ನಲ್ಲಿ ಇವೂ ಸಿಕ್ಕವು

ವಿವಿಧ ರಾಜ್ಯಗಳ 40 ಹುಡುಗಿಯರ ಫೋಟೊಗಳು, ಚುಚ್ಚುಮದ್ದುಗಳು, ಕಾಂಡೋಮ್‌ಗಳು ಹಾಗೂ ಮಾದಕ ವಸ್ತುಗಳು ಫ್ಲ್ಯಾಟ್‌ನಲ್ಲಿ ಸಿಕ್ಕಿವೆ. ಆ ಯುವತಿಯರೆಲ್ಲ ನನ್ನ ಗೆಳತಿಯರು ಎಂದು ದಿವ್ಯನ್ ಹೇಳಿಕೆ ಕೊಟ್ಟಿದ್ದಾಗಿ ತನಿಖಾಧಿಕಾರಿಗಳು ತಿಳಿಸಿದರು.

ಪ್ರತಿಕ್ರಿಯಿಸಿ (+)