ಶನಿವಾರ, ಡಿಸೆಂಬರ್ 14, 2019
22 °C

‘ಸಂಚಾರಿ' ಮಹಿಳಾ ಕಾಲೇಜಿಗೆ ಬೇಕಿದೆ 'ಕಟ್ಟಡಭಾಗ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಂಚಾರಿ' ಮಹಿಳಾ ಕಾಲೇಜಿಗೆ ಬೇಕಿದೆ 'ಕಟ್ಟಡಭಾಗ್ಯ'

ಪುತ್ತೂರು: ಪುತ್ತೂರು ತಾಲ್ಲೂಕಿನ ಜನತೆಯ ದೀರ್ಘಕಾಲದ ನಿರೀಕ್ಷೆ ಹಾಗೂ ಕ್ಷೇತ್ರದ ಶಾಸಕಿ ಶಕುಂತಳಾ ಶೆಟ್ಟಿ ಅವರ ಬಹು ಆಕಾಂಕ್ಷಿತ ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜು ಇದೀಗ ಸ್ವಂತ ಕಟ್ಟಡದ ಭಾಗ್ಯಕ್ಕಾಗಿ ಕಾಯುತ್ತಿದೆ.

ಕಳೆದ 4 ವರ್ಷಗಳಿಂದ ಪುತ್ತೂರು ನಗರದ ವಿವಿಧ ಕಡೆಗಳಲ್ಲಿ ತರಗತಿಗಳನ್ನು ನಡೆಸಿಕೊಂಡು ಬರಲಾಗುತ್ತಿರುವ  ಈ ಮಹಿಳಾ ಕಾಲೇಜಿಗಾಗಿ ಬನ್ನೂರು ಗ್ರಾಮದ ಆನೆಮಜಲು ಎಂಬಲ್ಲಿ ಜಾಗವೂ ದೊರಕಿದೆ. ಕಟ್ಟಡದ ಯೋಜನೆಯೂ ಆಗಿದೆ.

ಆದರೆ ಸರ್ಕಾರದಿಂದ ದುಡ್ಡು ಮಾತ್ರ ಬಂದಿಲ್ಲ. ಉನ್ನತ ಶಿಕ್ಷಣ ಇಲಾಖೆ ಇನ್ನೂ ಕೂಡಾ ಇತ್ತ ಗಮನ ಹರಿಸಿಲ್ಲ. ಹಾಗಾಗಿ ಪ್ರಸ್ತುತ ಹಳೆ ತಾಲ್ಲೂಕು ಕಚೇರಿ ಹಾಗೂ ಹಳೆಯ ಪುರಸಭೆಯ ಕಚೇರಿಯಲ್ಲಿ ತರಗತಿಗಳು ನಡೆಯುತ್ತಿರುವುದರಿಂದ ಇಲ್ಲಿನ ವಿದ್ಯಾರ್ಥಿನಿಯರ ಪಾಲಿಗೆ ಇದು ಅಲೆದಾಟದ ಸಂಚಾರಿ ಕಾಲೇಜು ಆಗಿಯೇ ಉಳಿದುಕೊಂಡಿದೆ.

ಪುತ್ತೂರಿಗೆ ಮಹಿಳಾ ಪ್ರಥಮ ದರ್ಜೆ ಕಾಲೇಜು ಮಂಜೂರುಗೊಂಡಿದ್ದ ವೇಳೆ ಇಲ್ಲಿ ಇದಕ್ಕೆ ಸಮರ್ಪಕವಾದ ಸ್ಥಳವೇ ಇರಲಿಲ್ಲ. ಹಾಗಾಗಿ ನೆಲ್ಲಿಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಯಿತು. ಪುತ್ತೂರಿನ ತಾಲ್ಲೂಕು ಕಚೇರಿ ನೂತನವಾಗಿ ನಿರ್ಮಾಣಗೊಂಡ ಮಿನಿವಿಧಾನ ಸೌಧಕ್ಕೆ ಸ್ಥಳಾಂತರಗೊಂಡ ಬಳಿಕ ಈ ಮಹಿಳಾ ಕಾಲೇಜನ್ನು ಹಳೆಯ ತಾಲ್ಲೂಕು ಕಚೇರಿಗೆ ಸ್ಥಳಾಂತರಿಸಲಾಗಿತ್ತು.

ಇಲ್ಲಿ ಮಕ್ಕಳ ಸಂಖ್ಯೆ ಜಾಸ್ತಿಯಾದಾಗ ತರಗತಿ ನಡೆಸಲು ಸ್ಥಳಾವಕಾಶದ ಸಮಸ್ಯೆ ಎದುರಾಗಿತ್ತು. ಹೀಗಾಗಿ ಕೆಲ ತರಗತಿಯನ್ನು ಪುರಸಭೆಯ ಹಳೆಯ ಕಚೇರಿಯಲ್ಲಿ ನಡೆಸುವ ತೀರ್ಮಾನವನ್ನು ಶಾಸಕಿ ಶಕುಂತಳಾ ಶೆಟ್ಟಿ ಮತ್ತು ನಗರಸಭೆಯ ಅಧ್ಯಕ್ಷರು ಹಾಗೂ ಸದಸ್ಯರು ಸೇರಿಕೊಂಡು ಕೈಗೊಂಡಿದ್ದರು. ವರ್ಷಗಳು ಉರುಳಿದರೂ ಪರ್ಯಾಯ ವ್ಯವಸ್ಥೆ ಆಗದ ಕಾರಣ ಇಲ್ಲಿನ ಮಕ್ಕಳು ಈ ಎರಡು ಕಟ್ಟಡಗಳ ನಡುವಿನ ಅಲೆದಾಟದ ವ್ಯವಸ್ಥೆಯ ಶಿಕ್ಷಣದಲ್ಲೇ ಉಳಿದುಕೊಳ್ಳುವಂತಾಗಿದೆ.

ಈ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸ್ವಂತ ಕಟ್ಟಡಕ್ಕಾಗಿ ಪುತ್ತೂರು ನಗರದ ಹೊರವಲಯದಲ್ಲಿರುವ ಬನ್ನೂರಿನಲ್ಲಿ ಸರ್ವೆ ನಂಬರ್ 73/1ರಲ್ಲಿ  4.70 ಎಕರೆ ಸ್ಥಳ ಮಂಜೂರುಗೊಳಿಸುವ ಕೆಲಸವೂ ನಡೆದಿದೆ. ಇಲ್ಲಿ ಸುಮಾರು ₹ 8 ಕೋಟಿ ವೆಚ್ಚದಲ್ಲಿ 25 ಕೋಣೆಗಳ ಕಾಲೇಜು ಕಟ್ಟಡಕ್ಕಾಗಿ ನೀಲನಕ್ಷೆಯೂ ತಯಾರಾಗಿದೆ. ಆದರೆ ಸರ್ಕಾರದಿಂದ ಬರಬೇಕಾಗಿದ್ದ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಇದರಿಂದಾಗಿ ಈ ಕಾಲೇಜು ಅತಂತ್ರ ಸ್ಥಿತಿಯಲ್ಲಿಯೇ ಉಳಿದುಕೊಂಡಿದ್ದು, ಸ್ವಂತ ಕಟ್ಟಡ ಯೋಗದಿಂದ ದೂರ ಉಳಿದಿದೆ. 

ಜಿಲ್ಲೆಯಲ್ಲಿ ಮಂಗಳೂರನ್ನು ಹೊರತುಪಡಿಸಿದರೆ ಪುತ್ತೂರಲ್ಲಿ ಮಾತ್ರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇದೆ. ಹೀಗಿದ್ದರೂ ಇಲ್ಲಿಗೆ ಹಣ ಬಿಡುಗಡೆಯಾಗದಿರುವುದು ಕಾಲೇಜಿನ ವ್ಯವಸ್ಥೆಗೆ ತೊಡಕಾಗಿ ಪರಿಣಮಿಸಿದೆ. ಸದ್ಯಕ್ಕೆ ಗ್ರಂಥಪಾಲಕ, ಪ್ರಾಂಶುಪಾಲರು,ದೈಹಿಕ ಶಿಕ್ಷಕ ನಿರ್ದೇಶಕರು  ಸಹಿತ ಇಲ್ಲಿ 8 ಮಂದಿ ಉಪನ್ಯಾಸಕರಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ತಲಾ ಎರಡರಂತೆ 6 ತರಗತಿಗಳು ಹಾಗೂ ಕಲಾ ವಿಭಾಗದಲ್ಲಿ 4 ತರಗತಿಗಳಿವೆ. ಈ ಬಾರಿ ಕಲಾ ವಿಭಾಗದಲ್ಲಿ ಶೇ 96 ಹಾಗೂ ವಾಣಿಜ್ಯ ವಿಭಾಗದಲ್ಲಿ  ಶೇ 70 ಫಲಿತಾಂಶ ಈ ಕಾಲೇಜಿಗೆ ಲಭಿಸಿದೆ.

ತಾಲ್ಲೂಕಿನ ಇತರ ಕಾಲೇಜುಗಳಿಗೆ ವಿದ್ಯಾರ್ಥಿಗಳ ಕೊರತೆಯಾದರೆ ಈ ಮಹಿಳಾ ಕಾಲೇಜಿನಲ್ಲಿ ಅವಕಾಶ ಸಿಗದೆ ಸುಮಾರು 40ರಷ್ಟು ವಿದ್ಯಾರ್ಥಿನಿಯರು ಕಟ್ಟಡದ ಸ್ಥಳಾವಕಾಶ ಕೊರತೆಯಿಂದ ವಾಪಸ್‌ ಹೋಗುವಂತಾಗಿದೆ, ಕಲಾ ಮತ್ತು ವಾಣಿಜ್ಯ ವಿಭಾಗಗಳು ಇರುವ ಈ ಮಹಿಳಾ ಕಾಲೇಜಿನಲ್ಲಿ ಪ್ರಸ್ತುತ 610 ಮಂದಿ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ. ಕಾಲೇಜಿನಲ್ಲಿ ಸ್ಥಳಾವಕಾಶವಿದ್ದಲ್ಲಿ ಇನ್ನೂ 50 ಮಂದಿ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಪಡೆಯಲು ಅನುಕೂಲವಾಗುತ್ತಿತ್ತು.

ಜಿಲ್ಲೆಯಾಗುವ ಕನಸು ಕಾಣುತ್ತಿರುವ ಪುತ್ತೂರಿಗೆ ಮಹಿಳಾ ಕಾಲೇಜು ಕೂಡಾ ಒಂದು ಪ್ರಮುಖ ಆಸ್ತಿ. ಇಲ್ಲಿನ ಗ್ರಾಮಾಂತರ ಪ್ರದೇಶಗಳ ಹೆಣ್ಣು ಮಕ್ಕಳ ವಿದ್ಯೆಯ ಕನಸನ್ನು ನನಸು ಮಾಡುವಲ್ಲಿ ಈ ಮಹಿಳಾ ಕಾಲೇಜಿನ ಕೊಡುಗೆ ಇದೆ. ಈಗಾಗಲೇ ಪುತ್ತೂರು ತಾಲ್ಲೂಕು ವ್ಯಾಪ್ತಿಯನ್ನು ಮೀರಿ ಹೆಣ್ಣು ಮಕ್ಕಳು ಈ ಕಾಲೇಜನ್ನು ಆಶ್ರಯಿಸುತ್ತಿದ್ದಾರೆ. ಆದರೆ ವಿದ್ಯೆಯ ಕನಸಿನೊಂದಿಗೆ ಬರುವ ವಿದ್ಯಾರ್ಥಿನಿಯರಿಗೆ ಇಲ್ಲಿನ ವ್ಯವಸ್ಥೆಯದ್ದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಸ್ವಂತ ಕಟ್ಟಡವಿಲ್ಲದೆ ಇಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಹಳೆ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಶೀಟ್ ಅಳವಡಿಸಿ ಮಕ್ಕಳಿಗೆ ತಾತ್ಕಾಲಿಕ ತರಗತಿಗಳನ್ನು ಮಾಡುವ ಚಿಂತನೆ ಇಲ್ಲಿನ ಪ್ರಾಂಶುಪಾಲರದ್ದಾಗಿದೆ.

ಶೀಘ್ರ ಹಣ ಬಿಡುಗಡೆಯ ನಿರೀಕ್ಷೆ

ಪುತ್ತೂರಿಗೆ ಮಹಿಳಾ ಪ್ರಥಮ ದರ್ಜೆ ಕಾಲೇಜು ಮಂಜೂರಾಗಲು ನಾನು ಸಾಕಷ್ಟು ಕಷ್ಟ ಪಟ್ಟಿದ್ದೇನೆ. ಸ್ವಂತ ಕಟ್ಟಡಕ್ಕಾಗಿ ಈಗಾಗಲೇ ಹಲವಾರು ಬಾರಿ ಉನ್ನತ ಶಿಕ್ಷಣ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ಜಾಗದ ಸಮಸ್ಯೆ ಪರಿಹಾರವಾಗಿದ್ದು, ಕನಿಷ್ಠ 8 ಕೋಣೆಗಳ ಕಟ್ಟಡವನ್ನಾದರೂ ನೀಡುವಂತೆ ಒತ್ತಾಯಿಸಿದ್ದೇನೆ.

ಮುಂದಿನ ಸೆಪ್ಟಂಬರ್ ತಿಂಗಳಲ್ಲಿ ಕಟ್ಟಡಕ್ಕಾಗಿ ಹಣ ಮಂಜೂರುಗೊಳ್ಳಬಹುದು ಎಂಬ ನಿರೀಕ್ಷೆ ಇದೆ. ಮಹಿಳಾ ಕಾಲೇಜಿನಲ್ಲಿನ ಸ್ಥಳಾವಕಾಶದ  ಕೊರತೆಯ ಬಗ್ಗೆಯೂ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿ ಮಹಿಳಾ ಕಾಲೇಜು ಸ್ವಂತ ಕಟ್ಟಡ ಪಡೆಯುವ ಬಗ್ಗೆ ಆಶಾಭಾವನೆಯಿಂದ ಇದ್ದೇನೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)