ಭಾನುವಾರ, ಡಿಸೆಂಬರ್ 8, 2019
21 °C

ಕುಣಿಗಲ್ ಕುದುರೆ ಕಾರುಬಾರಿಗೆ ತೆರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್ ಕುದುರೆ ಕಾರುಬಾರಿಗೆ ತೆರೆ?

ಕುಣಿಗಲ್: ನೂತನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ಕಾರ್ಮಿಕರ ವೇತನ ಭಾರ ‘ಕುಣಿಗಲ್ ಸ್ಟಡ್ ಫಾರಂ’ಗೆ ಹೊರೆಯಾಗಿ ಪರಿಣಮಿಸಿದೆ. ಫಾರಂ ಮುಚ್ಚಲು ಆಡಳಿತ ಮಂಡಳಿ ಮುಂದಾಗಿದೆ. ಇದರಿಂದ ಕಾರ್ಮಿಕರು ಆತಂಕಗೊಂಡಿದ್ದು ಜುಲೈ 20ರಂದು ಆಡಳಿತ ಮಂಡಳಿ ಮತ್ತು ಕಾರ್ಮಿಕರ ಸಭೆ ನಡೆಯಲಿದೆ. ಇಲ್ಲಿ ಫಾರಂ ಅಂತಿಮ ಭವಿಷ್ಯ ನಿರ್ಧಾರವಾಗಲಿದೆ.

ಉದ್ಯಮಿ ವಿಜಯ ಮಲ್ಯ ಒಡೆತನದ ಈ ಫಾರಂನಲ್ಲಿ130 ಕಾಯಂ ನೌಕರರು, 80 ಅರೆಕಾಲಿಕ ನೌಕರರು ಮತ್ತು ಭದ್ರತಾ ಸಿಬ್ಬಂದಿ ಇದ್ದಾರೆ. 200 ಕುದುರೆಗಳು ಇವೆ.

‘ಇಲ್ಲಿ ರೇಸ್ ಕುದುರೆಗಳನ್ನು ಸಾಕಿ ಜೂಜು ಕ್ಲಬ್‌ಗಳಿಗೆ ಮಾರಾಟ ಮಾಡಲಾಗುತ್ತೆ. ಜಿಎಸ್‌ಟಿಯಲ್ಲಿ ಕುದುರೆ ರೇಸ್ ಅನ್ನು ಜೂಜು ಎಂದು ಪರಿಗಣಿಸಲಾಗಿದೆ.

ಈ ಮುಂಚೆ ಶೇ12ರಷ್ಟಿದ್ದ ತೆರಿಗೆ 28ಕ್ಕೆ ಹೆಚ್ಚಿದೆ. ಒಂದು ಕುದುರೆ ಗೆದ್ದರೆ ಜಾಕಿ, ತರಬೇತುದಾರ, ಆ ಕುದುರೆ ನೋಡಿಕೊಳ್ಳುವ ವೈದ್ಯರೂ ತಾವು ಪಡೆಯುವ ಸಂಭಾವನೆಗೆ ತೆರಿಗೆ ಕಟ್ಟಬೇಕಾಗುತ್ತದೆ. ಅಂತಿಮವಾಗಿ ಗೆದ್ದವನಿಗೆ ಶೇ 40 ರಷ್ಟು ಹಣ ಮಾತ್ರ ಉಳಿಯುತ್ತದೆ’ ಎಂದು ನೌಕರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕುದುರೆ ಸಾಕುವ ಶೋಕಿ ಇರುವವರು ಅವುಗಳನ್ನು ಇಲ್ಲಿಗೆ ತಂದು ಬಿಡುತ್ತಾರೆ. ಅಂತಹವರಿಂದ ಫಾರಂ, ಮಾಸಿಕ ನಿರ್ವಹಣಾ ಶುಲ್ಕವನ್ನು ಪಡೆದುಕೊಳ್ಳುತ್ತದೆ. ಈಗ ಈ ಶುಲ್ಕಕ್ಕೂ ತೆರಿಗೆ ವಿಧಿಸಲಾಗಿದೆ. ಕುದುರೆ ಮರಿ ಬೆಳೆಸುವವರು, ಖರೀದಿಸುವವರೂ ತೆರಿಗೆ ಕಟ್ಟಬೇಕು’ ಎಂದರು.

ಕಾರ್ಮಿಕರ ಹೊರೆ: ‘ಸ್ಟಡ್ ಫಾರಂ ಕಾರ್ಮಿಕರಿಗೆ ನೀಡುತ್ತಿರುವ ಸಂಬಳವೂ ಹೆಚ್ಚಿದೆ. ಮಾಸಿಕ ಕನಿಷ್ಠ ₹ 20 ಸಾವಿರದಿಂದ ಗರಿಷ್ಠ ₹ 50 ಸಾವಿರದವರೆಗೆ ಸಂಬಳ ಪಡೆಯುತ್ತಿದ್ದಾರೆ. ಬೋನಸ್, ಶೂ, ಬಟ್ಟೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದಾಯ ಕಡಿಮೆ ಇದ್ದು ಕಾರ್ಮಿಕರ ವೇತನವೇ ಹೆಚ್ಚಾಗಿದೆ. ಇದರಿಂದ ಫಾರಂ ನಡೆಸುವುದು ಕಷ್ಟ’ ಎಂದು ತಿಳಿಸಿದರು.

‘ಕಾಯಂ ಕಾರ್ಮಿಕರ ಮೇಲೆ ಕೆಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ. ಅರೆಕಾಲಿಕ ನೌಕರರನ್ನು ಕೆಲಸದಿಂದ ತೆಗೆಯುವ ಹುನ್ನಾರ ನಡೆಯುತ್ತಿದೆ. ಸರಿಯಾಗಿ ಸಂಬಳ ನೀಡುತ್ತಿಲ್ಲ. ಆಡಳಿತ ಮಂಡಳಿಗೆ ನೋಟಿಸ್‌ ನೀಡಿದ್ದೇವೆ’ ಎಂದು ಕಾರ್ಮಿಕ ಮುಖಂಡ ಅಬ್ದುಲ್ ಮುನಾಫ್‌ ದೂರಿದರು.

2022ಕ್ಕೆ ಗುತ್ತಿಗೆ ಅವಧಿ ಮುಕ್ತಾಯ

ಟಿಪ್ಪು ಸುಲ್ತಾನ ಕಾಲದಿಂದಲೂ ಇಲ್ಲಿ ಕುದುರೆಗಳನ್ನು ಪಳಗಿಸಲಾಗುತ್ತಿತ್ತು. ಸ್ವಾತಂತ್ರ್ಯ ನಂತರ ಈ ಸ್ಥಳ ಬೆಂಗಳೂರಿನ ಟರ್ಫ್‌ ಕ್ಲಬ್‌ ವಶಕ್ಕೆ ಒಳಪಟ್ಟಿತ್ತು. ರಾಜ್ಯ ಸರ್ಕಾರಕ್ಕೆ ಸೇರಿದ 430 ಎಕರೆಯ ಫಾರಂ ಅವನ್ನು 1992ರಲ್ಲಿ ಮಲ್ಯ ಟೆಂಡರ್‌ನಲ್ಲಿ 30 ವರ್ಷ ಗುತ್ತಿಗೆ ಪಡೆದಿದ್ದರು. 2022ಕ್ಕೆ ಈ ಗುತ್ತಿಗೆ ಮುಗಿಯಲಿದೆ.

1970ರಲ್ಲಿ ಇಲ್ಲಿನ ಫಾರಂನ ಕಿಂಬಲರ್ ಹೆಸರಿನ ಕುದುರೆ ಕುದುರೆ ರೇಸ್‌ ವಿಶ್ವಕಪ್ ಗೆದ್ದಿತ್ತು. ಸದ್ಯ ಅಮೆರಿಕದ ‘ಏರ್ ಸಪರ್ಟ್’ ತಳಿಯ ಕುದುರೆ ಫಾರಂನ ಪ್ರಮುಖ ತಳಿಯಾಗಿದೆ. ‘ಪ್ಯಾಂಟಾಬುಲಸ್ ಕಿಂಗ್’ ಹೆಸರಿನ ಕುದುರೆ ಬೆಂಗಳೂರು ಡರ್ಬಿ, ‘ಪ್ಲೀಟಿಂಗ್ ಇಂಡಿಯನ್’ ಹೆಸರಿನ ಕುದುರೆ ಮೈಸೂರು ಡರ್ಬಿ ಹಾಗೂ ‘ಅರೇಬಿಯಾ ಪ್ರಿನ್ಸ್’ ಹೈದರಾಬಾದ್ ಡರ್ಬಿಯಲ್ಲಿ ಅಗ್ರ ಸ್ಥಾನ ಪಡೆದಿವೆ. ಮಲೇಶಿಯಾ ಮತ್ತು ಸಿಂಗಪುರದ ‘ಟಿಂಕೋ ಗೋಲ್ಡ್ ಕಪ್’ ಸ್ಪರ್ಧೆಯಲ್ಲಿ ಕುಣಿಗಲ್ ಕುದುರೆಗಳು ವಿಜಯ ಪತಾಕೆ ಹಾರಿಸಿವೆ.

*  * 

ಡಿಸೆಂಬರ್‌ ಅಂತ್ಯಕ್ಕೆ ಫಾರಂ ಅಳಿವು ಉಳಿವಿನ ಸ್ಪಷ್ಟ ಚಿತ್ರಣ ದೊರೆಯಲಿದೆ. ಕಾರ್ಮಿಕರ ವೇತನ ಪಾವತಿ ವಿಳಂಬವಾಗುತ್ತಿದೆ.  ಅರೆಕಾಲಿಕ ನೌಕರರ ನಡುವಿನ ಭಿನ್ನಾಭಿಪ್ರಾಯದಿಂದ ಗೊಂದಲ ಉಂಟಾಗಿದೆ.

ಡಾ. ದಿನೇಶ್ , ಸ್ಟಡ್ ಫಾರಂ ವ್ಯವಸ್ಥಾಪಕ

ಪ್ರತಿಕ್ರಿಯಿಸಿ (+)