ಸೋಮವಾರ, ಡಿಸೆಂಬರ್ 16, 2019
17 °C

ಗಾರ್ಮೆಂಟ್‌ಗಳತ್ತ ಮುಖ ಮಾಡಿದ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾರ್ಮೆಂಟ್‌ಗಳತ್ತ ಮುಖ ಮಾಡಿದ ರೈತರು

ಕೊಡಿಗೇನಹಳ್ಳಿ: ಈ ವರ್ಷವಾದರೂ ಮುಂಗಾರು ಮಳೆ ಕಾಲಕ್ಕೆ ಸರಿಯಾಗಿ ಸುರಿದು ಆಸರೆಯಾಗುತ್ತೆ ಎಂದು ರೈತರು ನಂಬಿದ್ದರು. ಆದರೆ ಮಳೆ ಬೀಳದೆ ಮತ್ತೊಮ್ಮೆ ಬರದ ಚಿತ್ರಣ ಕಣ್ಮುಂದೆ ನಿಂತು ಕೃಷಿ ಬಗ್ಗೆ ಬೇಸರ ಉಂಟಾಗಿ ಕಾರ್ಖಾನೆಗಳತ್ತ ಮುಖ ಮಾಡಿದ್ದಾರೆ.

‘ಮಧುಗಿರಿ ತಾಲ್ಲೂಕು ಬಯಲು ಸೀಮೆ ಪ್ರದೇಶ. ಅದರಲ್ಲೂ ಇಲ್ಲಿನ ರೈತರು ಮಳೆಯನ್ನೆ ನಂಬಿರುವುದರಿಂದ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗಿ ಫಲವತ್ತಾದ ಭೂಮಿಗಳೆಲ್ಲಾ ಮರುಭೂಮಿಯಾಗುತ್ತಿವೆ. ಜತೆಗೆ ಸೀಮೆಜಾಲಿ ಗಿಡಗಳ ಪೊದೆಗಳಾಗಿ ಎಲ್ಲ ಕಡೆ ಆವರಿಸುತ್ತಿದೆ. ಇಂದು ಮಳೆ ರೈತರೊಂದಿಗೆ ಜೂಜಾಟವಾಡುತ್ತಿದೆ ಎಂಬ ಮಾತು ಮೊತ್ತೊಮ್ಮೆ ನೆನಪಿಸುತ್ತಿದೆ’ ಎಂದು ರೈತ ಶ್ರಾವಂಡನಹಳ್ಳಿ ಸಿದ್ದಲಿಂಗಪ್ಪ ಆತಂಕ ವ್ಯಕ್ತಪಡಿಸಿದರು. 

‘ಈ ವರ್ಷ ಮುಂಗಾರು ಮಳೆ ಮುಂಚೆಯೆ ಸುರಿದ ಕಾರಣ ಆರು ವರ್ಷಗಳ ಬರ ಮರೆತ ರೈತರು ಖುಷಿಯಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಭೂಮಿಯನ್ನು ಅಚ್ಚುಕಟ್ಟುಮಾಡಿ ಬಿತ್ತನೆಗಾಗಿ ಎದುರು ನೋಡುತ್ತಿದ್ದರು. ಈಗ ತಿಂಗಳು ಕಳೆದರೂ ಮಳೆ ಮತ್ತೆ ಬಾರದೆ ಇರುವುದರಿಂದ ತಲೆ ಮೇಲೆ ಕೈಯಿಟ್ಟು ಪ್ರತಿದಿನ ಆಕಾಶದತ್ತ ನೋಡುವಂತಾಗಿದೆ’ ಎನ್ನುತ್ತಾರೆ ಗುಟ್ಟೆ ನರಸಿಂಹಪ್ಪ.

ಈ ಭಾಗದಲ್ಲಿ ಹೆಚ್ಚಾಗಿ ಮೆಕ್ಕೆಜೋಳ, ರಾಗಿ, ಶೇಂಗಾ, ತೊಗರಿ, ಅವರೆ ಬೆಳೆಯುವ ಮುಖ್ಯ ಬೆಳೆಗಳಾಗಿವೆ. ಮಳೆ ಕಡಿಮೆಯಾದಂತೆಲ್ಲಾ ಕೃಷಿಯಿಂದ ಕೈ ಸುಟ್ಟುಕೊಂಡು ಕೆಲವು ಕುಟುಂಬ ಪಟ್ಟಣದತ್ತ ವಲಸೆ ಹೊರಟರೆ, ಕೆಲವರು ಕೃಷಿ ಜೊತೆಗೆ ಕೃಷಿಯೇತರ ಚಟುವಟಿಕೆಗಳಾದ ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆ ಕೆಲಸಗಳಲ್ಲಿ  ತೊಡಗಿಸಿಕೊಂಡಿದ್ದಾರೆ.

ಕೈಗಾರಿಕೆ ಹಾಗೂ ಉದ್ಯಮವಿಲ್ಲದ ಈ ಭಾಗದ ಯುವ ಜನರು ನಿತ್ಯ ಹಿಂದೂಪುರ, ಗೌರಿಬಿದನೂರು, ದೊಡ್ಡಬಳ್ಳಾಪುರ, ಮಧುಗಿರಿ, ಮತ್ತು ತುಮಕೂರು ಗಾರ್ಮೆಂಟ್ಸ್‌ಗಳ ಕಡೆ ಮುಖ ಮಾಡಿದ್ದಾರೆ. ಇನ್ನೊಂದೆಡೆ ಮನೆ, ಮಠ ಬಿಟ್ಟು ಹೋಗದೆ ಉಳಿದಿರುವ ಮತ್ತಷ್ಟು ಕುಟುಂಬಗಳು ಜಮೀನು ಹಾಗೂ ಪಾಳು ಭೂಮಿಯಲ್ಲಿ ಸೀಮೆಜಾಲಿ ಗಿಡಗಳನ್ನು ಕಡಿದು ಸೌದೆ ಮಾರಿ ಜೀವನ ಮಾಡುತ್ತಿದ್ದಾರೆ.

‘ಸರ್ಕಾರ ಈಗಲಾದರು ಎಚ್ಚೆತ್ತು ಯುವಕರಿಗೆ ಕಾರ್ಖಾನೆಗಳಲ್ಲಿ ಕೆಲಸ ಮತ್ತು ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿದರೆ ಮಾತ್ರ ಈ ಭಾಗದ ಜನರ ಉಳಿಗಾಲ’ ಎಂದು ಚಿಕ್ಕಮಾಲೂರು ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಧಾರಣ ಮಳೆ

ಬುಧವಾರ ಸಂಜೆ ಕೊಡಿಗೇನಹಳ್ಳಿ ಗ್ರಾಮದಲ್ಲಿ 10 ನಿಮಿಷಗಳ ಕಾಲ ಮಳೆ ಸುರಿಯಿತು. ಇದರಿಂದ ಬಿತ್ತನೆ ಮಾಡಲು ಆಗದಿದ್ದರೂ, ಮೋಡ ಕವಿದ ವಾತಾವರಣ ಇರುವುದರಿಂದ ಮುಂದಿನ ದಿನಗಳಲ್ಲಿ ಮಳೆ ಬರಬಹುದು ಎಂಬ ಆಶಯವಿದೆ

* *

ದುಡಿಯುವ ಕೈಗಳಿಗೆ ಉದ್ಯೋಗ ಮತ್ತು ಶಾಶ್ವತ ನೀರಾವರಿ ಕಲ್ಪಿಸಿದರೆ ಜನರು ಸ್ವತಂತ್ರವಾಗಿ ಬದುಕಬಲ್ಲರು.

ಶಿವಕುಮಾರ್

ಸಂಚಾಲಕ, ಮಧುಗಿರಿ ರೈತ ಸಂಘ 

ಪ್ರತಿಕ್ರಿಯಿಸಿ (+)