ಶುಕ್ರವಾರ, ಡಿಸೆಂಬರ್ 6, 2019
18 °C

ನಗರದಲ್ಲಿ ಜರ್ಮನ್ ತಂತ್ರಜ್ಞಾನ ತರಬೇತಿ ಸಂಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದಲ್ಲಿ ಜರ್ಮನ್ ತಂತ್ರಜ್ಞಾನ ತರಬೇತಿ ಸಂಸ್ಥೆ

ಮೈಸೂರು: ಜಿಲ್ಲೆಯಲ್ಲಿ ಸದ್ಯದಲ್ಲೇ ಕರ್ನಾಟಕ–ಜರ್ಮನ್ ತಂತ್ರಜ್ಞಾನ ತರಬೇತಿ ಸಂಸ್ಥೆಯನ್ನು ಆರಂಭಿಸ­ಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಇಲ್ಲಿ ಘೋಷಿಸಿದರು. ಜಾಗತಿಕ ಯುವ ಕೌಶಲ ದಿನಾಚರಣೆ ಅಂಗವಾಗಿ ಕಲಾಮಂದಿರದಲ್ಲಿ ಕೌಶಲಾಭಿವೃದ್ಧಿ ಇಲಾಖೆ ಆಯೋಜಿಸಿದ್ದ ಉದ್ಯೋಗ ಮೇಳ, ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ಜರ್ಮನ್ ತಂತ್ರಜ್ಞಾನ ತರಬೇತಿ ಸಂಸ್ಥೆ ಈಗಾಗಲೇ ಬೆಂಗಳೂರು, ಮಂಗಳೂರು, ದಾಂಡೇಲಿ ಸೇರಿದಂತೆ ಹಲವು ನಗರಗಳಲ್ಲಿ ಇದೆ. ಕೆಲವು ತಿಂಗಳಲ್ಲಿ ಮೈಸೂರಿನಲ್ಲಿಯೂ ಆರಂಭಿ­ಸ­ಲಾಗುವುದು. ಉದ್ಯೋಗ ಅರಸಿ ಬಂದವರಿಗೆ ಕೌಶಲ ತರಬೇತಿ ನೀಡಿ ಸಮರ್ಥರನ್ನಾಗಿ ಮಾಡಲಾಗುವುದು’ ಎಂದರು.

ಕೌಶಲ್ಯ ಕರ್ನಾಟಕ ಕಾರ್ಯಕ್ರಮ­ದಡಿ ತರಬೇತಿ ಮತ್ತು ಉದ್ಯೋಗ ಬಯಸಿ ಜಿಲ್ಲೆಯಲ್ಲಿ 34,700 ಅಭ್ಯರ್ಥಿ­ಗಳು ನೋಂದಣಿ ಮಾಡಿಕೊಂಡಿದ್ದಾರೆ. ನಾವು 25,000 ಗುರಿ ಹೊಂದಿದ್ದೆವು ಎಂದು ಮಾಹಿತಿ ನೀಡಿದರು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 1,200 ಐಟಿಐ ವಿದ್ಯಾರ್ಥಿಗಳಿಗೆ ಅವರು ಸಾಂಕೇತಿಕ­ವಾಗಿ ‘ಟೂಲ್‌ ಕಿಟ್‌’ ವಿತರಿಸಿದರು.

ವಸ್ತುಪ್ರದರ್ಶನಕ್ಕೆ ತೆರಳಿ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ಉದ್ಯೋಗ ತರಬೇತಿ ಇಲಾಖೆ ವತಿಯಿಂದ ವಿವಿಧ ಮಳಿಗೆಗಳಲ್ಲಿ ಐಟಿಐ ಸಾಮಗ್ರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಸೈಕಲ್‌ ತುಳಿದು ವಿದ್ಯುತ್‌ ಉತ್ಪಾದನೆ ಮಾಡುವುದು, ನೀರೆತ್ತುವ ಕೈಪಂಪು, ಬಟ್ಟೆಗಳ ವಿನ್ಯಾಸ ವಿಧಾನವನ್ನು ನೋಡಿದರು. ಕಡಿಮೆ ಮಳಿಗೆ ಇದ್ದ ಕಾರಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ವಿಧಾನ ಪರಿಷತ್‌ ಉಪಸಭಾಪತಿ ಮರಿತಿಬ್ಬೇ­ಗೌಡ, ಸಂಸದ ಆರ್‌.ಧ್ರುವನಾರಾಯಣ, ಶಾಸಕರಾದ ವಾಸು, ಎಂ.ಕೆ.ಸೋಮ­ಶೇಖರ್‌, ಎಚ್‌.ಪಿ.ಮಂಜುನಾಥ್‌, ವಿಧಾನಪರಿಷತ್‌ ಸದಸ್ಯ ಧರ್ಮಸೇನ, ರಾಜ್ಯ ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ, ವರುಣಾ ವಸತಿ ಯೋಜನೆಗಳ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ, ಮೇಯರ್‌ ರವಿಕುಮಾರ್‌, ಮೈಲ್ಯಾಕ್‌ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌, ಮೃಗಾಲಯ ಪ್ರಾಧಿಕಾರ ಅಧ್ಯಕ್ಷೆ ಮಲ್ಲಿಗೆ ವೀರೇಶ್‌, ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಸಿದ್ದರಾಜು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜೀವಕುಮಾರ್‌, ಆಯುಕ್ತ ಸಮೀರ್‌ ಶುಕ್ಲಾ, ಜಿಲ್ಲಾಧಿಕಾರಿ ಡಿ.ರಂದೀಪ್‌ ಇದ್ದರು.

ನಿವೃತ್ತಿ ಜೀವನಕ್ಕೆ ಮೈಸೂರೇ ಬೆಸ್ಟ್: ಸಿದ್ದರಾಮಯ್ಯ

ಮೈಸೂರು: ‘ನಿವೃತ್ತಿ ಜೀವನವನ್ನು ಮೈಸೂರಿನಲ್ಲೇ ಕಳೆಯಲು ನಿರ್ಧರಿಸಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿವಿಧ ಕಾರ್ಯಕ್ರಮಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ‘60ರ ದಶಕದಿಂದಲೂ ಮೈಸೂರಿನಲ್ಲೇ ನೆಲೆಸಿದ್ದೇನೆ. ರಾಜಕೀಯ ನಿವೃತ್ತಿ ನಂತರವೂ ಇಲ್ಲಿಯೇ ಕಾಲ ಕಳೆಯುತ್ತೇನೆ. ನನಗೆ ಬೆಂಗಳೂರು ಹಿಡಿಸದು’ ಎಂದರು.

‘ವಕೀಲನಾಗಿ ಇಲ್ಲಿ ವೃತ್ತಿಜೀವನ ಆರಂಭಿಸಿದಾಗ ಅನೇಕ ಕಕ್ಷಿದಾರರಿಂದ ಶುಲ್ಕ ಪಡೆಯುತ್ತಲೇ ಇರಲಿಲ್ಲ. ಅವರಿಗೆ ಬಸ್‌ ಪ್ರಯಾಣಕ್ಕಾಗಿ ಹಣ ಕೊಟ್ಟು ಕಳುಹಿಸುತ್ತಿದ್ದೆ. ನನ್ನ ರಾಜಕೀಯ ಜೀವನವೂ ಇಲ್ಲಿಂದಲೇ ಆರಂಭವಾಗಿದ್ದು. ಸರ್ವಸ್ವವೂ ಮೈಸೂರೇ ಆಗಿರುವಾಗ ಬೇರೆ ಕಡೆ ಚಿಂತಿಸುವ ಮನಸ್ಸೇ ಬಂದಿಲ್ಲ’ ಎಂದು ಹೇಳಿದರು.

ನೂಕುನುಗ್ಗಲು

ಮೈಸೂರು: ವಿವಿಧ ಹುದ್ದೆಗಳಿಗೆ ಬಯೊಡೇಟಾ ನೀಡಲು ಕಲಾಮಂದಿರದ ಆವರಣದಲ್ಲಿ ಅಪಾರ ಆಕಾಂಕ್ಷಿಗಳು ಸೇರಿದ್ದರಿಂದ ನೂಕುನುಗ್ಗಲು ಉಂಟಾಯಿತು. ಸುಮಾರು 98 ವಿವಿಧ ಕಂಪೆನಿಗಳು ಬಂದಿದ್ದವು. ವಸ್ತುಪ್ರದರ್ಶನ ಹಾಗೂ ಉದ್ಯೋಗ ಮಳಿಗೆ ಸೇರಿ 100 ಮಳಿಗೆ ಹಾಕಲಾ ಗಿತ್ತು. ಸಾವಿರಾರು ಆಕಾಂಕ್ಷಿಗಳು ತಮ್ಮ ಬಯೊಡೇಟಾ ನೀಡಿ ಹೆಸರು ನೋಂದಾಯಿಸಿಕೊಂಡರು. ಕೆಲವೆಡೆ ಗೊಂದಲ ನೆಲೆಸಿತ್ತು.

ಆಗಸ್ಟ್‌ನಲ್ಲಿ ಬೃಹತ್‌ ಉದ್ಯೋಗ ಮೇಳ

ಮೈಸೂರು: ಮೈಸೂರು–ಚಾಮರಾಜನಗರದ ಉದ್ಯೋಗ ಆಕಾಂಕ್ಷಿಗಳನ್ನು ಸೇರಿಸಿ ಆಗಸ್ಟ್‌ನಲ್ಲಿ ಬೃಹತ್‌ ಉದ್ಯೋಗ ಮೇಳ ಆಯೋಜಿಸುವಂತೆ ಕೌಶಲಾಭಿವೃದ್ಧಿ ಇಲಾಖೆಗೆ ಸಿದ್ದರಾಮಯ್ಯ ಸೂಚನೆ ನೀಡಿದರು. ‘ಸ್ಥಳದಲ್ಲಿಯೇ 10 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಬೇಕು. ಇದಕ್ಕಾಗಿ ಕೈಗಾರಿಕಾ ಸಂಸ್ಥೆಗಳು, ಪ್ರಮುಖ ಕಂಪೆನಿಗಳನ್ನು ಆಹ್ವಾನಿಸಬೇಕು. ಸ್ವಯಂ ಉದ್ಯೋಗ ಮಾಡುವವರಿಗೆ ಬ್ಯಾಂಕುಗಳು ಸಹಾಯ ಮಾಡುತ್ತವೆ’ ಎಂದರು.

* * 

ಮೈಸೂರಿನಲ್ಲಿ ಉದ್ಯೋಗಮೇಳವನ್ನು ಯಶಸ್ವಿಗೊಳಿಸಲು ಈಗಿನಿಂದಲೇ ತಯಾರಿ ನಡೆಸುತ್ತೇವೆ. ಆಗಸ್ಟ್‌ ಕೊನೆಯ ವಾರದಲ್ಲಿ ಆಯೋಜಿಸುತ್ತೇವೆ

ಮುರಳೀಧರ ಹಾಲಪ್ಪ

ಅಧ್ಯಕ್ಷ,  ರಾಜ್ಯ ಕೌಶಲಾಭಿವೃದ್ಧಿ ನಿಗಮ

ಮೇಳದಲ್ಲಿಕಿಟ್‌ ಉಚಿತವಾಗಿ ಲಭಿಸಿದ್ದು ತುಂಬಾ ಖುಷಿ ನೀಡಿದೆ. ಐಟಿಐ (ವೆಲ್ಡರ್‌) ವ್ಯಾಸಂಗಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಕಿಟ್‌ನಲ್ಲಿ ನೀಡಿದ್ದಾರೆ

ಚಂದ್ರು

ವಿದ್ಯಾರ್ಥಿ, ಐಟಿಐ, ಎನ್‌.ಆರ್‌.ಮೊಹಲ್ಲಾ

ಪ್ರತಿಕ್ರಿಯಿಸಿ (+)