ಶನಿವಾರ, ಡಿಸೆಂಬರ್ 7, 2019
16 °C

ಶಿಥಿಲ ಶಾಲಾ ಕಟ್ಟಡ, ಪಾಳುಬಿದ್ದ ಆಯುರ್ವೇದ ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಥಿಲ ಶಾಲಾ ಕಟ್ಟಡ, ಪಾಳುಬಿದ್ದ ಆಯುರ್ವೇದ ಆಸ್ಪತ್ರೆ

ಹೊಳೆನರಸೀಪುರ: ತಾಲ್ಲೂಕಿನ ಉದ್ದೂರು ಗ್ರಾಮದಲ್ಲಿ ದಶಕಗಳ ಹಿಂದೆಯೇ ನಿರ್ಮಿಸಲಾಗಿದ್ದ ಶಾಲಾ ಕಟ್ಟಡ ಹಾಗೂ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಕಟ್ಟಡಗಳಿಗೆ ಉದ್ಘಾಟನೆಯ ಭಾಗ್ಯವೇ ಕೂಡಿ ಬರಲಿಲ್ಲ. ಸರ್ಕರಿ ಆಸ್ಪತ್ರೆ ನಿರ್ಮಾಣಗೊಂಡು 23 ವರ್ಷಗಳಾದವು. ಕಪ್ಪು ಹಲಗೆ ಯೋಜನೆಯ ಅಡಿ ಶಾಲೆ ಕಟ್ಟಡ ನಿರ್ಮಿಸಿ 19 ವರ್ಷಗಳಾದವು. ಸ್ಥಳೀಯ ರಾಜಕೀಯ ತಿಕ್ಕಾಟದಿಂದಾಗಿ ಕಟ್ಟಡ ಬಳಕೆಯಾಗದೇ ಅಪಾರ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಗೋಡೆಗಳು ಬಿರುಕು ಬಿಟ್ಟಿವೆ, ಹೆಂಚುಗಳು ಮುರಿದು ಬಿದ್ದಿವೆ. ಮತ್ತೆ ಈ ಕಟ್ಟಡಗಳನ್ನು ಬಳಕೆ ಮಾಡಬೇಕಾದರೆ ದುರಸ್ತಿ ಕಾರ್ಯ ಮಾಡಲೇಬೇಕು. ಈ ಕಟ್ಟಡಗಳ ಬಗ್ಗೆ ಸ್ಥಳೀಯರಿಗೂ ಮಾಹಿತಿ ಇಲ್ಲದಂತಾಗಿದೆ. ಕಾಂಪೌಂಡ್‌ ಆವರಣದಲ್ಲಿ ಶಾಲೆ, ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ಈ ಎರಡೂ ಕಟ್ಟಡಗಳ ನಿರ್ಮಾಣಕ್ಕೂ ಮುನ್ನ ಇದ್ದ ಹಳೇ ಕಟ್ಟಡದಲ್ಲಿಯೇ ಈಗಲೂ ಶಾಲಾ ತರಗತಿಗಳು ನಡೆಯುತ್ತಿವೆ.

‘ಜನರ ಅನುಕೂಲಕ್ಕಾಗಿ ಸರ್ಕಾರ ಆಸ್ಪತ್ರೆ ಮತ್ತು ಶಾಲೆ ಕಟ್ಟಡ ನಿರ್ಮಿಸಿತು. ಆದರೆ, ಉದ್ಘಾಟನೆ ಮಾತ್ರ ಮಾಡಲಿಲ್ಲ. ಕಾರಣ ಕೇಳಿದರೆ ಯಾರಿಗೂ ಗೊತ್ತಿಲ್ಲ.  ನಮ್ಮೂರಿಗೆ ರಾಜಕೀಯ ಗ್ರಹಣ ಹಿಡಿದಿದೆ’ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದರು.

ದನದ ಕೊಟ್ಟಿಗೆಯಂತೆ ಕಾಣುವ ಹೆಂಚಿನ ಸಣ್ಣ ಮನೆಯಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ನಡೆಯುತ್ತಿದೆ. ಸರ್ಕಾರಿ ಪ್ರಾಥಮಿಕ ಶಾಲೆ ಹಳೇ ಕಟ್ಟಡದಲ್ಲಿ ನಡೆಯುತ್ತಿದೆ.

ಗಬ್ಬು ನಾರುತ್ತಿರುವ ಕಾಂಪೌಂಡ್‌: ಕಾಂಪೌಂಡಿನ ಒಳಗೆ ಪಾರ್ಥೇನಿಯಂ ಗಿಡಗಳು ಬೆಳೆದಿವೆ. ಚರಂಡಿಗಳು ಹೂಳು ತುಂಬಿ ಗಬ್ಬು ನಾರುತ್ತಿದೆ. 

ಆರೋಗ್ಯ ಜಾಗೃತಿ ಮೂಡಿಸಲು ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಜಾಹೀರಾತು ನೀಡುತ್ತಿದೆ. ಆದರೆ, ಗ್ರಾಮಗಳಲ್ಲಿಯ ಪಾರ್ಥೇನಿಯಂ ಕಳೆ ನಾಶ ಮಾಡಲು, ಚರಂಡಿ ಸ್ವಚ್ಛಗೊಳಿಸಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎನ್ನುತ್ತಾರೆ ನಿವಾಸಿ ಭಗವಾನ್‌.

ಅವ್ಯವಸ್ಥೆಯ ನಡುವೆಯೇ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಪಾಠ– ಪ್ರವಚನಗಳು ನಡೆಯುತ್ತಿವೆ. ಈಚೆಗೆ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ. ‘ನಾಡ ಕಚೇರಿ ಹಾಗೂ ಪೊಲೀಸ್‌ ಠಾಣೆಗೆ ಹೋಗಲು ಹಳ್ಳಿ ಮೈಸೂರಿಗೆ ಹೋಗಬೇಕು. ಆದರೆ, ಅಲ್ಲಿಗೆ ಹೋಗಲು ಬಸ್‌ ಸೌಕರ್ಯವೂ ಸಮರ್ಪಕವಾಗಿಲ್ಲ’ ಎನ್ನುತ್ತಾರೆ ಗ್ರಾಮಸ್ಥರು.

* * 

ಬಹಳ ಹಿಂದೆ ಶಾಲೆ ಮತ್ತು ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ಯಾವ ಕಾರಣಕ್ಕಾಗಿ ಉದ್ಘಾಟನೆ ಆಗಲಿಲ್ಲ ಎಂಬ ಮಾಹಿತಿ ಇಲ್ಲ

ತಮ್ಮಣ್ಣೇಗೌಡ

ಕಾರ್ಯನಿರ್ವಹಣಾಧಿಕಾರಿ

ತಾಲ್ಲೂಕು ಪಂಚಾಯಿತಿ

 

ಪ್ರತಿಕ್ರಿಯಿಸಿ (+)