ಶುಕ್ರವಾರ, ಡಿಸೆಂಬರ್ 6, 2019
18 °C

ಬೆಳದಿಂಗಳ ಚಾರಣದಿ ಕೊಡಚಾದ್ರಿ ಸೊಬಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳದಿಂಗಳ ಚಾರಣದಿ ಕೊಡಚಾದ್ರಿ ಸೊಬಗು

ಶಿವಮೊಗ್ಗ: ನದಿ ಹರಿದಿತ್ತು, ಬನ ಮೆರೆದಿತ್ತು, ಬೀಸುವ ಕುಳಿರ್ಗಾಳಿಗೆ ಮೈ ನಡುಗುತಲಿತ್ತು. ನಿರ್ಜನ ಪ್ರದೇಶ, ನೀರವ ಕಾಲ, ನಮ್ಮ ಕಾಲ್ನಡಿಗೆಯ ಸಪ್ಪಳ ನಮಗೇ ಕೇಳುತಲಿತ್ತು. ಬೆಳದಿಂಗಳ ಚಂದಿರ ಹಾಲು ಬೆಳಕ ಹಾಸಿ, ನಸು ನಗುತಲಿ ದಾರಿ ತೋರುತಲಿತ್ತು ಮೈಮನ ದಣಿದರೂ  ಪುಲಕಿತಗೊಂಡು, ಆ ಬೆಳಕಿಗೇ ಕಂಗಳು ಹೊಂದಿಕೊಂಡು ಚಾರಣ ಸಾಗುತಲಿತ್ತು, ಬೆಳದಿಂಗಳ ಚಾರಣ ಸಾಗುತ್ತಿತ್ತು.

ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಸಂಸ್ಕೃತ ಭಾರತಿ ಮತ್ತು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ, ತರುಣೋದಯ ಘಟಕದ ಸದಸ್ಯರು ಹೊಸನಗರ ತಾಲ್ಲೂಕು ಕೊಡಚಾದ್ರಿ ಬೆಟ್ಟಕ್ಕೆ ಬೆಳದಿಂಗಳ ಚಾರಣ ಹೊರಟ ಕ್ಷಣದ ಚಿತ್ರಣ. 49 ಜನರಿದ್ದ ತಂಡ ಸದ್ದುಗದ್ದಲವಿಲ್ಲದೇ ಮೌನವನ್ನೇ ಹೊದ್ದುಚಾರಣದ ಸವಿ ಅನುಭವಿಸುತ್ತಾ ಹೊರಟಿತ್ತು. ಮಧ್ಯರಾತ್ರಿಯ ನೀರವ ಮೌನದ ಹಾದಿಯ ಮೇಲೆ ಬೆಳದಿಂಗಳು ಚೆಲ್ಲಿ, ಮನಸ್ಸು ಸೂರೆಗೊಂಡಿತ್ತು. ಕೈಗಳಲ್ಲಿದ್ದ ಟಾರ್ಚ್‌ಗಳ ಅಗತ್ಯ ಇಲ್ಲದಂತೆ ಮಾಡಿತ್ತು.

ಬೆಟ್ಟ ಹತ್ತುವ ಮೊದಲೇ ಯಾರೂ ಜೋರಾಗಿ ಮಾತನಾಡದೇ ಕಾಡಿನ ನೀರವ ಮೌನಕ್ಕೆ ಕಿವಿಯಾಗಬೇಕು ಎಂಬ ಒಡಂಬಡಿಕೆ ಮಾಡಿಕೊಂಡಿದ್ದೆವು. ಆದರೂ ಕೆಲವರು ಅಬ್ಬ, ಅಯ್ಯೋ, ಉಸ್, ಪಸ್ ಎಂದು ಬಿಡುತ್ತಿದ್ದ ದೀರ್ಘ ಉಸಿರು, ಇನ್ನು ಎಷ್ಟು ದೂರ ನಡೀಬೇಕು ಎನ್ನುವ ಕೆಲವರ ಪ್ರಶ್ನೆ, ಇನ್ನೇನು ಸ್ವಲ್ಪದೂರ ಎಂಬ ಪಿಸುಮಾತಿನ ಉತ್ತರ ಅಬ್ಬರದ ಅಲೆಯಂತೆ ತೇಲಿ ಬರುತ್ತಿತ್ತು. ಇಂತಹ ಅಪರೂಪದ ಬೆಳದಿಂಗಳ ಚಾರಣ ಆಯೋಜಿಸುವುದು. ಪರ್ವತ ಪ್ರದೇಶಗಳ ನಡುವೆ ಸಾಗುವುದು. ಪ್ರತಿಯೊಬ್ಬರ ಜೀವನದಲ್ಲಿ ಲಭ್ಯವಾಗುವ ಅಪರೂಪದ ಸನ್ನಿವೇಶಗಳು.

ಸೂರ್ಯೋದಯದ ಪುಳಕ: ಕೊಡಚಾದ್ರಿಯ ವಿಶ್ರಾಂತಿಗೃಹದ ಸ್ವಲ್ಪ ಮೇಲೆ ಸೂರ್ಯೋದಯ ವೀಕ್ಷಿಸುವ ಸ್ಥಳ ತಲುಪಿದೆವು. ಅಲ್ಲಿಂದ ಶಂಕರಾಚಾರ್ಯರು ತಪಸ್ಸು ಮಾಡಿದ ಸರ್ವಜ್ಞ ಪೀಠದತ್ತ ಹೊರಟೆವು. ಅಲ್ಲಿ ಸೂರ್ಯೋದಯ ವೀಕ್ಷಿಸಿದೆವು. ಕೊಡಚಾದ್ರಿಯ ತುತ್ತ ತುದಿಯಲ್ಲಿರುವ ಸರ್ವಜ್ಞ ಪೀಠದಲ್ಲಿ ಶಂಕರಾಚಾರ್ಯರು ತಪಸ್ಸು  ಮಾಡಿದ್ದರೆಂದೂ, ದೇವಿ ಮೂಕಾಂಬಿಕೆ ಮೊದಲು ಇಲ್ಲಿಯೇ ಸ್ಥಾಪನೆ ಮಾಡಿದ್ದರೆಂದೂ, ನಂತರ ದೇವಿ ಮೂರ್ತಿ ಕೊಲ್ಲೂರಿನಲ್ಲಿ ನೆಲೆಗೊಳಿಸಿದರು ಎಂದು ಸ್ಥಳ ಪುರಾಣ ಹೇಳುತ್ತದೆ.

ಪರ್ವತದ ತುತ್ತತುದಿಯಿಂದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಗೋಪುರದ ತುದಿ ಕಾಣಬಹುದು. ಇಲ್ಲಿ ಕುಳಿತು ಬೆಳಗಿನ ಜಾವ 6 ಗಂಟೆಗೆ ಪೂರ್ವದಿಕ್ಕಿಗೆ ತಿರುಗಿದರೆ ಸುಂದರ ಸೂರ್ಯೋದಯ ವೀಕ್ಷಿಸಬಹುದು. ಸಂಜೆ 6ಕ್ಕೆ ಪಶ್ಚಿಮದಲ್ಲಿ ಸೂರ್ಯಾಸ್ತ ವೀಕ್ಷಿಸಬಹುದು. ಇದು ಸ್ಥಳದ ವಿಶೇಷ.

ತೇಲುತ್ತಿದ್ದ ಮೋಡಗಳು, ಇನಿತು ಕೈಚಾಚಿ ದರೆ ಮೋಡವೇರಿ ಆಗಸದಲ್ಲಿ ನಾವು ಮರೆ ಯಾಗಹುದು ಎನ್ನುವ ಪುಳಕ ಎಲ್ಲರಲ್ಲಿ ಆವರಿಸಿತ್ತು. ಸೂರ್ಯನ ಕಿರಣಗಳಿಂದ ಸುತ್ತಲಿನ ಪರ್ವತ ಪ್ರದೇಶದಲ್ಲಿ ಸೊಬಗಿನ ಚಿತ್ತಾರ ಮೂಡಿಸಿದ್ದ. ಕಣ್ಣು ಹಾಯಿಸಿದಷ್ಟು ದೂರದವರೆಗೂ ಹಬ್ಬಿದ್ದ ಮೋಡಗಳ ಸಾಲು. ನಾವು ಆ ಬೆಟ್ಟದ ಮೇಲೆ ತೇಲುತ್ತಿರುವ ಗಂಧರ್ವರು ಅನ್ನಿಸಿತು. ಬೇರೆ ಬೇರೆ ಭಾಗಗಳಿಂದ ಬಂದಿದ್ದ ಚಾರಣಿಗರ ಜತೆ ಸೆಲ್ಫಿ, ಛಾಯಾಚಿತ್ರ ತೆಗೆದುಕೊಂಡೆವು.

ಪರ್ವತ ಇಳಿದು ಎತ್ತರದ ಪ್ರದೇಶದಲ್ಲಿರುವ ಭಟ್ಟರ ಮನೆಯ ಉಪ್ಪಿಟ್ಟು, ಚಿತ್ರಾನ್ನ ಬೆಚ್ಚನೆಯ ಚಹಾ ಸೇವಿಸಿ, ತಣ್ಣನೆಯ ನೀರಿನಲ್ಲಿಯೇ ಮಜ್ಜನಗೈದೆವು. ಧೈರ್ಯ, ಸಾಹಸದ ಸಂಕೇತ:  ಬೆಟ್ಟಿ ಇಳಿಯುವು ದಕ್ಕೂ ಮೊದಲು ಎಸ್. ದತ್ತಾತ್ರಿ ಅವರು ಚಾರಣ ಕುರಿತು ಒಂದಷ್ಟು ಮಾಹಿತಿ ನೀಡಿದರು.

ಚಾರಣ ಧೈರ್ಯ, ಸಾಹಸ, ಆತ್ಮಸ್ಥೈರ್ಯ, ನಾಯಕತ್ವ, ಸಂಘಟನಾಶಕ್ತಿ, ಸೂಕ್ತ ಯೋಜನೆ, ಯೋಚನೆಯ ಸಮ್ಮಿಶ್ರಣ. ಮನಸ್ಸು ಪ್ರಫುಲ್ಲಗೊಂಡು, ದೇಹದ ಆರೋಗ್ಯ, ಮುಖದ ತೇಜಸ್ಸು ಕೂಡ ವೃದ್ಧಿಸುತ್ತದೆ. ಹವ್ಯಾಸ ಚಾರಣ ಅದ್ಭುತ ಅನುಭವ ನೀಡಿದೆ ಎಂದು ಬಣ್ಣಿಸಿದರು.

ಪರ್ವತದ ಇಳಿಜಾರಿನಲ್ಲಿ ಕಂಡ ಸಸ್ಯ ಸಂಪತ್ತು: ಸಂಪೆಕಟ್ಟೆ ಮಾರ್ಗವಾಗಿ ಪರ್ವತ ಇಳಿಯುವಾಗ ಹಲವರು ಜೀಪಿನಲ್ಲಿ ಹೋಗುವ ಪ್ರಸ್ತಾವ ಮುಂದಿಟ್ಟರು. ಅದಕ್ಕೆ ಒಪ್ಪದ ವಿಜಯೇಂದ್ರ ಎಲ್ಲರನ್ನೂ ಹುರಿದುಂಬಿಸಿ ಇಳಿಯಲು ಪ್ರೇರೇಪಿಸಿದರು. 4 ಗಂಟೆ ಅವಧಿಯ ಪರ್ವತ ಇಳಿಯುವ ಸಾಹಸದ ನಂತರ ಚಕ್ರಾ ನದಿ ತೀರ ತಲುಪಿದ್ದೆವು. ಜುಳುಜುಳು ಹರಿಯುತ್ತಿದ್ದ ನದಿಯಲ್ಲಿ ಮನದಣಿಯೆ ಕೈಕಾಲು ತೊಳೆದು, ದಣಿವಾರುವಷ್ಟು ನೀರು ಕುಡಿದೆವು. ಅಲ್ಲಿಗೆ ಸುಮಾರು 24 ತಾಸುಗಳಲ್ಲಿ 30 ಕಿಲೋ ಮೀಟರ್‌ ಚಾರಣ ಅಂತ್ಯಗೊಂಡಿತ್ತು.

ಕೊಡಚಾದ್ರಿ ಕುರಿತು ಕೆಲವು ಮಾಹಿತಿ: ಸಮುದ್ರಮಟ್ಟದಿಂದ ಸುಮಾರು 4,650 ಅಡಿ ಎತ್ತರದಲ್ಲಿರುವ ಕೊಡಚಾದ್ರಿ ಹೆಸರಿನ ಸುಂದರ ಪ್ರದೇಶ, ಕಡಿದಾದ ಪರ್ವತ ಶ್ರೇಣಿಗಳನ್ನು ಹೊಂದಿದೆ. ಸಾವಿರಾರು ಜೀವ ವೈವಿಧ್ಯ, ಪ್ರಾಣಿ ಸಂಕುಲ, ಸದಾ ಕಂಗೊಳಿಸುವ ಹಸಿರು  ಪ್ರಕೃತಿಯ ಈ ಸುಂದರ ತಾಣ ಅಧ್ಯಯನಕಾರರಿಗೆ, ಸಂಶೋಧಕರಿಗೆ, ಪರಿಸರ ಪ್ರೇಮಿಗಳಿಗೆ, ಕವಿಗಳಿಗೆ, ಚಾರಣ ಪ್ರಿಯರಿಗೆ, ಸಾಹಸ ಮನೋಭಾವದವರಿಗೆ ಕೈಬೀಸಿ ಕರೆಯುತ್ತವೆ.

(ಲೇಖಕರು ಅಧ್ಯಕ್ಷರು ಶ್ರೀ ಲಲಿತಾ ಮಹಿಳಾ ಒಕ್ಕೂಟ)

ಇತಿಹಾಸಿಕ ಪ್ರಸಿದ್ಧ ಪರ್ವತ

ಇದು ಅಶ್ವತ್ಥಾಮ, ಶಂಕರಾಚಾ ರ್ಯರು ತಪಸ್ಸು ಮಾಡಿದ ಸ್ಥಳ. ಶಂಖತೀರ್ಥ, ನಾದತೀರ್ಥ, ಅಗಸ್ಥ್ಯ ತೀರ್ಥ ಎಂದು ಗುರುತಿಸುವ ಚಕ್ರ ತೀರ್ಥ ಹೊಂದಿರುವ, ಪರ್ವತೇ ಶ್ವರಿ, ಕಾಲಭೈರವ, ಗುಹಾಗಣಪತಿ, ಸರ್ವರೂ ಪೂಜಿಸುವ ಸರ್ವಜ್ಞಪೀಠ ಹೊಂದಿರುವ ಕೊಡಚಾದ್ರಿ ದಕ್ಷಿಣಕಾಶಿ ಎಂದೇ ಹೆಸರಾಗಿದೆ.

ಮೂಕಾಸುರನ ವಧೆ ಮಾಡಿದ ಮೂಕಾಂಬಿಕೆಯನ್ನು ಶಾಂತ ಸ್ಥಿತಿಗೆ ತಂದ ಸ್ಥಳ ಎಂದೂ ಹೇಳುತ್ತಾರೆ. ಹೀಗೆ ಸಪ್ತ ಪರ್ವತಗಳು, ಸಪ್ತ ನದಿಗಳು, ಸಪ್ತ ದೇವಾಲಯಗಳು, ಸಪ್ತ ಮುಖಗಳಿಂದ ಕೂಡಿರುವ, ಇಳಿಜಾರು ಪರ್ವತಗಳಿಂದ, ಚೂಪಾದ ಮಡಿಕೆ ಆಕಾರದ ಪರ್ವತಶ್ರೇಣಿಗಳಿಂದ ಕೂಡಿರುವ ಕೊಡಚಾದ್ರಿ ಜಗತ್ತಿನಲ್ಲಿಯೇ ವಿಶಿಷ್ಟವಾಗಿದೆ.  ಕೊಳ್ಳ ಪ್ರದೇಶದಲ್ಲಿ ಹರಿವ ಜೀವ ಜಲಧಾರೆಗಳು, ವಿಷ ಸರ್ಪಗಳು, ಬೇರೆ ಬೇರೆ ಜಾತಿಯ ಕಾಡುಮೃಗಗಳು ಇವೆ. ಸುಮಾರು 1,500 ಎಕರೆ ನಿತ್ಯಹರಿದ್ವರ್ಣ ಕಾಡು, 60 ಸಾವಿರ ಎಕರೆ ಹುಲ್ಲುಗಾವಲು ಪ್ರದೇಶ ಒಳಗೊಂಡಿದೆ.

ಮನುಷ್ಯನ ದುರಾಸೆಯ ಫಲವಾಗಿ ಈ ಪರ್ವತವೂ ವಿನಾಶದ ಅಂಚು ತಲುಪುತ್ತಿದೆ. ಈ ನಿಸರ್ಗದಲ್ಲಿನ ಹಲವು ಪ್ರಾಣಿ, ಪಕ್ಷಿ ಸಂಕುಲಗಳು ಈಗಾಗಲೇ ಕಣ್ಮರೆಯಾಗಿವೆ. ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಕೊಡಚಾದ್ರಿಯ ಒಳ ಪ್ರದೇಶ ನಿಷಿದ್ಧ. ಚಾರಣ ಮಾಡುವವರು ಈ ಕುರಿತು ಜಾಗ್ರತೆ ವಹಿಸಬೇಕು.   ಅನುಮತಿ ನೀಡಿರುವ ಜಾಗದಲ್ಲಿ ಮಾತ್ರ ಚಾರಣ ಮಾಡಬೇಕು. ವಿಶ್ವದ ಪಾರಂಪರಿಕ ಪಟ್ಟಿಗೆ ಸೇರಿರುವ ಪರ್ವತ ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯವೂ ಹೌದು.

ಪ್ರತಿಕ್ರಿಯಿಸಿ (+)