ಭಾನುವಾರ, ಡಿಸೆಂಬರ್ 15, 2019
18 °C

ಕಸದ ರಾಶಿಯಿಂದ ಎದ್ದಿದೆ ದಟ್ಟ ಹೊಗೆ, ಆವರಗೊಳ್ಳ ಗ್ರಾಮಸ್ಥರ ಮುಗಿಯದ ಗೋಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಸದ ರಾಶಿಯಿಂದ ಎದ್ದಿದೆ ದಟ್ಟ ಹೊಗೆ, ಆವರಗೊಳ್ಳ ಗ್ರಾಮಸ್ಥರ ಮುಗಿಯದ ಗೋಳು

ದಾವಣಗೆರೆ: ಕಸದ ಬೆಟ್ಟದಲ್ಲಿ ಮತ್ತೆ ಕಾವು ಏರುತ್ತಿದೆ. ತ್ಯಾಜ್ಯದ ಒಡಲಿನಿಂದ ಹೊರಡುವ ಹೊಗೆ ಇನ್ನಷ್ಟು ದಟ್ಟವಾಗಿದೆ. ಹೊರಸೂಸುವ ವಾಸನೆ ಉಸಿರು ಕಟ್ಟಿಸುತ್ತಿದೆ. ಸುತ್ತಮುತ್ತಲಿನ ಹೊಲದಲ್ಲಿ ಹಸಿರು ಉಕ್ಕುತ್ತಿಲ್ಲ. ಹೈನುಗಾರಿಕೆ ಸ್ಥಗಿತಗೊಂಡಿದೆ. ಕುರಿ ಸಾಕಾಣಿಕೆ ಕುಸಿದಿದೆ.

ದಾವಣಗೆರೆ ನಗರದದಿಂದ ಕೊಂಡಜ್ಜಿ ರಸ್ತೆಯಲ್ಲಿ ಎಂಟು ಕಿ.ಮೀ ದೂರದಲ್ಲಿ ಆವರಗೊಳ್ಳ ಗ್ರಾಮವಿದೆ. ಅಲ್ಲಿ ಮಹಾನಗರ ಪಾಲಿಕೆ 15 ವರ್ಷದ ಹಿಂದೆ ಜಾಗ ಪಡೆದು ಘನ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಿಸಿದೆ. ಸಕಾಲಕ್ಕೆ ತ್ಯಾಜ್ಯ ಸಂಸ್ಕರಣೆಗೊಳ್ಳದೇ ಕಸದ ಬೆಟ್ಟಗಳು ಆಕಾಶದೆತ್ತರಕ್ಕೆ ಬೆಳೆದು ನಿಂತಿವೆ. ಇದರಿಂದ ಗ್ರಾಮದ ಸುತ್ತಲಿನ ಪರಿಸರ ಹದಗೆಟ್ಟಿದೆ. ಜನಜೀವನಕ್ಕೆ ಸಂಕಷ್ಟ ಎದುರಾಗಿದೆ.

‘ಜೋರಾಗಿ ಗಾಳಿ ಬೀಸಿದರೆ ಕೆಟ್ಟ ವಾಸನೆ ಇಡೀ ಊರಿಗೆ ಹಬ್ಬುತ್ತೆ. ನೊಣ, ಸೊಳ್ಳೆಗಳ ಕಾಟ ವಿಪರೀತವಾಗಿದೆ’ ಎಂದು ಪ್ರತಿನಿತ್ಯ ತಾವು ಅನುಭವಿಸುವ ಕಿರಿಕಿರಿ ಬಿಚ್ಚಿಟ್ಟರು ಆವರಗೊಳ್ಳದ ಶಾರದಮ್ಮ.‘ಮಗನಿಗೆ ಪದೇಪದೇ ಜ್ವರ ಬರುತ್ತಿದೆ. ಕಂಡಕಂಡ ಡಾಕ್ಟರ್‌ಗೆಲ್ಲಾ ತೋರಿಸಿದೆವು. ಹೇಳಿದ ಔಷಧಗಳನ್ನೆಲ್ಲ ಕೊಟ್ಟೆವು. ಆದರೂ ವಾಸಿ ಆಗುತ್ತಿಲ್ಲ. ಪರಿಸರ ಸ್ವಚ್ಛ ಇರಬೇಕು, ಉತ್ತಮ ವಾತಾವರಣ ಬೇಕು ಎನ್ನುತ್ತಾರೆ ಡಾಕ್ಟರ್‌. ಆದರೆ, ಬಾಳಿ, ಬದುಕಿದ ಊರಿದು. ಇದನ್ನು ಬಿಟ್ಟು ಬೇರೆ ಎಲ್ಲಿಗೆ ಹೋಗಬೇಕು? ತೋಚುತ್ತಿಲ್ಲ’ ಎಂದು ಮರುಗುತ್ತಾರೆ ಗ್ರಾಮದ ಲಲಿತಾ.

‘ಕಸದ ರಾಶಿ ಬಂದ ಮೇಲೆ ಊರಿನಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕುರಿ, ದನಕರುಗಳನ್ನು ಸಾಯಿಸಿವೆ. ಮಕ್ಕಳ ಮೇಲೂ ದಾಳಿ ಮಾಡಿವೆ. ಈಚೆಗೆ ವಿರೂಪಣ್ಣ ಅವರ ಮನೆಯ ದನದ ಹೆಣ್ಣುಕರು ಮೇಲೆ ದಾಳಿ ಮಾಡಿ, ಮೈತುಂಬಾ ಗಾಯ ಮಾಡಿವೆ’ ಎಂದು ಕರುವಿನ ಮೈದಡವಿ ತೋರಿಸಿದರು ತಿಪ್ಪೇಶಿ.

‘ಮನೆ ಬಾಗಿಲಲ್ಲೇ ಹೋಗುವ ಕಸದ ಲಾರಿ, ಅವುಗಳು ಚೆಲ್ಲುವ ಕಸ, ಹೊರಹೊಮ್ಮುವ ವಾಸನೆ, ಇವೆಲ್ಲವನ್ನೂ ನೋಡಿ ಸಾಕಾಗಿ ಹೋಗಿತ್ತು. ಒಂದು ದಿವಸ ಊರಿನವರೆಲ್ಲ ಸೇರಿ ಲಾರಿ ಅಡ್ಡ ಹಾಕಿದೆವು ಅಷ್ಟೆ. ಯಾರ ಮೇಲೂ ಹಲ್ಲೆ ಮಾಡಲಿಲ್ಲ. ಆದರೆ, ನಮ್ಮೆಲ್ಲರ ಮೇಲೆ ಕ್ರಿಮಿನಲ್ ಕೇಸ್‌ ಆಯ್ತು. ಕೋರ್ಟ್‌, ಕಚೇರಿ ಎಂದು ಏಳೆಂಟು ವರ್ಷ ಅಲೆದಾಡಿದವು. ಇನ್ನು ಇದರ ಸಹವಾಸ ಸಾಕು ಅನ್ನಿಸಿತು. ಈಗ ಮೌನವಾಗಿ ಎಲ್ಲವನ್ನೂ ಸಹಿಸಿಕೊಳ್ಳಬೇಕಾದ ಕರ್ಮ ನಮ್ಮದು’ ಎಂದು ದುಃಖಿತರಾಗುತ್ತಾರೆ ರೈತ ಜಿ.ರುದ್ರಮುನಿ.

‘ಕಸದ ರಾಶಿಯಿಂದ ಆಗುತ್ತಿರುವ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗದೆ ಗ್ರಾಮಸ್ಥರೆಲ್ಲ ಸೇರಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರನ್ನೇ ಭೇಟಿ ಮಾಡಿದೆವು. ಅವರು ಪಾಲಿಕೆ ಅಧಿಕಾರಿಗಳನ್ನು ಕರೆಸಿದರು. ಅವರ ಅಧ್ಯಕ್ಷತೆಯಲ್ಲೇ ಕಸ ಹೊತ್ತ ಲಾರಿ, ಟ್ರ್ಯಾಕ್ಟರ್‌ಗಳು ಗ್ರಾಮದ ಒಳಗೆ ಪ್ರವೇಶಿಸಬಾರದು. ಕಸಕ್ಕೆ ಟಾರ್ಪಲ್ ಮುಚ್ಚಿ ಸಾಗಿಸಬೇಕು. ಹಾಳಾದ ರಸ್ತೆಯನ್ನು ಪಾಲಿಕೆಯೇ ರಿಪೇರಿ ಮಾಡಿಸಬೇಕು ಎಂದು ತೀರ್ಮಾನಿಸಲಾಯಿತು. ಆದರೆ, ಇದ್ಯಾವುದೂ ಪಾಲನೆಯಾಗುತ್ತಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ವೀರಣ್ಣ.

‘ಇದೇ ವರ್ಷದ ಆರಂಭದಲ್ಲಿ ತ್ಯಾಜ್ಯಕ್ಕೆ ಬೆಂಕಿ ಬಿದ್ದಾಗ ಅಲ್ಲಿಗೆ ಭೇಟಿ ನೀಡಿದ್ದ ಮೇಯರ್‌, ಗ್ರಾಮದಲ್ಲಿ ವಾರಕ್ಕೊಮ್ಮೆ ಫಾಗಿಂಗ್ ಮಾಡಿ ಚರಂಡಿಗಳಿಗೆ ಔಷಧ ಸಿಂಪಡಿಸಲಾಗುವುದು. ಆವರಗೊಳ್ಳದಿಂದ ಘಟಕಕ್ಕೆ ಹೋಗುವ ರಸ್ತೆಯನ್ನು ಶೀಘ್ರ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಯಾವುದೂ ಕಾರ್ಯಗತವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ವೀರಣ್ಣ.

ತ್ಯಾಜ್ಯದಿಂದ ಗೊಬ್ಬರ

ತ್ಯಾಜ್ಯದ ಗುಡ್ಡ ಕರಗಿಸಲು ಪಾಲಿಕೆ ಈಗ ಒಂದು ಉಪಾಯ ಕಂಡುಕೊಂಡಿದೆ. ಕಸದಿಂದ ಗೊಬ್ಬರ ಉತ್ಪಾದನೆಗೆ ಮುಂದಾಗಿದೆ. ಇದಕ್ಕಾಗಿ ದೇವನಗರಿ ಗ್ರೀನ್ ಪ್ಲಾನೆಟ್ ಇನ್‌ಫ್ರಾ ಪ್ರೈ. ಲಿಮಿಟೆಡ್‌ ಕಂಪೆನಿಗೆ ಗುತ್ತಿಗೆ ನೀಡಿದೆ. ಮೂರು ತಿಂಗಳ ಹಿಂದೆ ಸಂಸ್ಕರಣಾ ಘಟಕದ ಆವರಣದಲ್ಲೇ ಗೊಬ್ಬರ ಉತ್ಪಾದಿಸುವ ಘಟಕ ಸ್ಥಾಪಿಸಲಾಗಿದೆ. ಪ್ರತಿ ದಿವಸ 8ರಿಂದ 10 ಟನ್‌ ಗೊಬ್ಬರ ಉತ್ಪಾದನೆಯಾಗುತ್ತಿದೆ ಎನ್ನುತ್ತಾರೆ ಕಂಪೆನಿ ನಿರ್ದೇಶಕ ಬಿ.ಟಿ.ಧನ್ಯಕುಮಾರ್.

ಈ ಗೊಬ್ಬರಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಸೃಷ್ಟಿಯಾಗುತ್ತಿದೆ. ಕೃಷಿ ವಿಜ್ಞಾನಿಗಳು ಪರೀಕ್ಷಿಸಿಯೇ ಗೊಬ್ಬರ ಬಳಸುವಂತೆ ರೈತರಿಗೆ ಸಲಹೆ ನೀಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಆದರೆ, ಇದು ರಾಕ್ಷಸನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ದಿನಕ್ಕೆ  100ಕ್ಕೂ ಹೆಚ್ಚು ಟನ್‌ ಸಂಗ್ರಹವಾಗುವ ತ್ಯಾಜ್ಯದಲ್ಲಿ ಕೇವಲ 30ರಿಂದ 40 ಟನ್‌ ಗೊಬ್ಬರ ಉತ್ಪಾದನೆಗೆ ಹೋದರೆ ಕಸದ ರಾಶಿ ಕರಗುವುದು ಯಾವಾಗ ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ.

ಅರಣ್ಯರೋದನವಾದ ಗ್ರಾಮಸ್ಥರ ಮೊರೆ

ಕಸದ ರಾಶಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಪಾಲಿಕೆ ಧೋರಣೆ ವಿರುದ್ಧ ಆವರಗೊಳ್ಳದ ಗ್ರಾಮಸ್ಥರದ್ದು ನಿರಂತರ ಹೋರಾಟ. ಪೊಲೀಸ್‌ ಠಾಣೆ, ಕೋರ್ಟ್‌, ಕಚೇರಿಗಳ ಮೆಟ್ಟಿಲು ತುಳಿದಿದ್ದಾರೆ. ಆದರೆ, ಅವರ ಕೂಗು ಅರಣ್ಯರೋದನವಾಗಿದೆ

ದಾವಣಗೆರೆ: ‘ನಿತ್ಯ ನೂರು ಟನ್‌ಗೂ ಅಧಿಕ ಘನತ್ಯಾಜ್ಯ ಬಂದುಬೀಳುತ್ತಿದೆ. ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದೇ ದೊಡ್ಡ ಸವಾಲಾಗಿದೆ. ಮನೆ ತಾಜ್ಯದೊಂದಿಗೆ ಕೋಳಿ ತ್ಯಾಜ್ಯ ಹಾಗೂ ಕೆಲವೊಮ್ಮೆ ಕ್ಲಿನಿಕ್‌ಗಳ ವೈದ್ಯಕೀಯ ತ್ಯಾಜ್ಯವೂ ಬರುತ್ತದೆ. ಈಗಾಗಲೇ ಸುಮಾರು 15 ವರ್ಷಗಳಿಂದ ಅಲ್ಲಲ್ಲಿ ಬಿದಿರುವ ಬೆಟ್ಟದಷ್ಟು ತ್ಯಾಜ್ಯ ಇನ್ನೂ ಸಂಸ್ಕರಣೆಯಾಗಿಲ್ಲ. ಇದರೊಂದಿಗೆ ಮತ್ತೊಂದು ತ್ಯಾಜ್ಯದ ರಾಶಿ ಸೃಷ್ಟಿಯಾಗುತ್ತಿದೆ...

ದಾವಣಗೆರೆ ತಾಲ್ಲೂಕಿನ ಆವರಗೊಳ್ಳ ಗ್ರಾಮದ ಹೊರವಲಯದಲ್ಲಿ ಪಾಲಿಕೆಗೆ ಸೇರಿದ ಘನತ್ಯಾಜ್ಯ ವಸ್ತುಗಳ ಸಂಸ್ಕರಣಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಒಬ್ಬರು ಬೇಸರದಿಂದ ಹೇಳಿದ್ದು ಹೀಗೆ.

3 ಎಕರೆ ಪ್ರದೇಶದ ಒಂದು ಭಾಗದಲ್ಲಿ ರಾಶಿ ರಾಶಿ ತ್ಯಾಜ್ಯ ತಂದು ಸುರಿಯಲಾಗಿದೆ. ಪಾಲಿಕೆ ಸಿಬ್ಬಂದಿ ಮನೆಯಿಂದ ತ್ಯಾಜ್ಯ ಸಂಗ್ರಹಿಸುವಾಗಲೇ ಹಸಿ ಹಾಗೂ ಒಣ ಕಸ ಎಂದು ಬೇರ್ಪಡಿಸಿ, ಸಂಗ್ರಹಿಸಿ ತಂದು ಘಟಕದಲ್ಲಿ ಬೇರೆ ಬೇರೆ ಹಾಕಬೇಕಿತ್ತು. ಆದರೆ, ಈ ನಿಯಮವೂ ಇಲ್ಲಿ ಸಂಪೂರ್ಣವಾಗಿ ಉಲ್ಲಂಘನೆಯಾಗಿದೆ. ಹೀಗಾಗಿ ತ್ಯಾಜ್ಯದ ಬೆಟ್ಟ ಸೃಷ್ಟಿಯಾಗಿದೆ. ಇದರಿಂದ ನಿತ್ಯ ದುರ್ವಾಸನೆ ಹೊರಹೊಮ್ಮುತ್ತಿದೆ. ಘಟಕದ ಸುತ್ತಮುತ್ತಲ ಜಮೀನುಗಳಲ್ಲಿ ರೈತರು ಹಾಗೂ ಕೃಷಿ ಕಾರ್ಮಿಕರು ಕೆಲಸ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ.

ಎಲ್‌.ಮಂಜುನಾಥ

ದಟ್ಟ ಹೊಗೆ: ಸುಮಾರು 15 ವರ್ಷಗಳಿಂದ ಸಂಗ್ರಹವಾಗಿರುವ ತ್ಯಾಜ್ಯದಲ್ಲಿ ಉಷ್ಣತೆ ಹೆಚ್ಚಾಗುತ್ತಿದ್ದು, ಮಿಥೇನ್‌ ಅನಿಲ ಉತ್ಪತ್ತಿಯಾಗುತ್ತಿದೆ. ಇದರಿಂದ ಆಗಾಗ ಬೆಂಕಿಯೂ ಕಾಣಿಸಿಕೊಳ್ಳುತ್ತಿದೆ. ಕೆಲವೊಮ್ಮೆ ಪಾಲಿಕೆ ಸಿಬ್ಬಂದಿ ಕೂಡ ಕಸ ಸುರಿದು ಹೋಗುವಾಗ ತ್ಯಾಜ್ಯಕ್ಕೆ ಬೆಂಕಿ ಹಚ್ಚಿ ಹೋಗುತ್ತಾರೆ ಎಂಬ ಆರೋಪಗಳೂ  ಇವೆ. ಈ ರೀತಿ ನಿಧಾನವಾಗಿ ಹೊತ್ತಿಕೊಳ್ಳುವ ಬೆಂಕಿಯಿಂದ ದುರ್ವಾಸನೆಯುಕ್ತ ಹೊಗೆಉಂಟಾಗುತ್ತದೆ. ಇದರಿಂದ ಗ್ರಾಮದ ಸುಮಾರು 6 ಸಾವಿರ ಜನರ ಉಸಿರಾಟಕ್ಕೆ ತೊಂದರೆಯಾಗುತ್ತಿದೆ.  ಬೆಂಕಿಯನ್ನು ನಿಯಂತ್ರಿಸಲು ಪಾಲಿಕೆ ಅಧಿಕಾರಿಗಳು ₹ 4.10 ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯದ ಮೇಲೆ ಅಲ್ಲಲ್ಲಿ ಮಣ್ಣು ಸುರುವಿದ್ದಾರೆ.

ಬೆಂಕಿ ನಿಷೇಧ: ಸೂಚನೆಬಯಲು ಪ್ರದೇಶಗಳಲ್ಲಿ ಘನತ್ಯಾಜ್ಯಕ್ಕೆ ಬೆಂಕಿ ಹಾಕುವಂತಿಲ್ಲ ಎಂದು ನ್ಯಾಯಾಲಯವು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಒಣ ಕಸ ಹಾಗೂ ಅಪಾಯಕಾರಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬಯಲಿನಲ್ಲಿ ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಈ ಹಿಂದೆ ಆದೇಶ ನೀಡಿತ್ತು. ನಿಯಮ ಉಲ್ಲಂಘಿಸಿದ್ದಲ್ಲಿ ತ್ಯಾಜ್ಯ ಸುಡುವವರಿಗೆ ಹಾಗೂ ತ್ಯಾಜ್ಯಕ್ಕೆ ಬೆಂಕಿ ಹಾಕುವವರಿಗೆ ದಂಡ ವಿಧಿಸುವುದಾಗಿಯೂ ಸೂಚನೆ ನೀಡಿದೆ. ಆದರೆ, ಯಾವ ನಿಯಮವೂ ಇಲ್ಲಿ ಪಾಲನೆಯಾಗಿಲ್ಲ.

ತ್ಯಾಜ್ಯಕ್ಕೆ ಬೆಂಕಿ ಬಿದ್ದಿತ್ತು

ಇದೇ ಜನವರಿ ಮೊದಲ ವಾರದಲ್ಲಿ ತ್ಯಾಜ್ಯದ ರಾಶಿಗೆ ಬೆಂಕಿ ಬಿದ್ದಿತ್ತು. ಕೆಲವು ದಿನಗಳ ಕಾರ್ಯಾಚರಣೆ ನಂತರ ಬೆಂಕಿಯನ್ನು ತಹಬದಿಗೆ ತರಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಆಗಿನ ಮೇಯರ್‌ ರೇಖಾ ನಾಗರಾಜ್, ಹೊಗೆ ಆಡದಂತೆ ಅದರ ಮೇಲೆ ಮಣ್ಣು ಹಾಕಲು ಸೂಚಿಸಿದ್ದರು. ಅದರಂತೆ ತ್ಯಾಜ್ಯದ ಮೇಲೆ ಮಣ್ಣು ಹಾಕಲಾಗಿದೆ. ಇಷ್ಟಾದರೂ ಈಗ ಹೊಗೆ ಕಾಣಿಸಿಕೊಂಡಿದೆ.

ಘನತ್ಯಾಜ್ಯ ವೈಜ್ಞಾನಿಕ ವಿಲೇವಾರಿಗೆ ಸಂಬಂಧಿಸಿದಂತೆ ಪಾಲಿಕೆ ಆಯಕ್ತ ಬಿ.ಎಚ್‌.ನಾರಾಯಣಪ್ಪ ಅವರನ್ನು ‘ಪ್ರಜಾವಾಣಿ’ ಸಂದರ್ಶಿಸಿದಾಗ...

* ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ಘನತ್ಯಾಜ್ಯವೆಷ್ಟು 

ಸುಮಾರು 110 ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಹಸಿ ಕಸ ಹಾಗೂ ಒಣ ಕಸ ಎಂದು ಬೇರ್ಪಡಿಸಿ ಪಾಲಿಕೆಯ ಗಂಟಿಗಾಡಿಯ ಸಿಬ್ಬಂದಿಗೆ ನೀಡಬೇಕು ಎಂದು ಈಗಾಗಲೇ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಆದರೆ, ಯಾರೂ ಇದನ್ನು ಪಾಲನೆ ಮಾಡುತ್ತಿಲ್ಲ. ಹೀಗಾಗಿ ಎಲ್ಲ ತ್ಯಾಜ್ಯವು ಮಿಶ್ರಣವಾಗಿ ಟನ್‌ಗಟ್ಟಲೆ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ನಿತ್ಯ 45 ಟ್ರ್ಯಾಕ್ಟರ್‌, 14 ಟಿಪ್ಪರ್ ಹಾಗೂ 5 ಲಾರಿಗಳ ಮೂಲಕ ಘನತ್ಯಾಜ್ಯವನ್ನು ನಗರದಿಂದ ಘಟಕಕ್ಕೆ ಸಾಗಿಸಲಾಗುತ್ತಿದೆ.

* ಘನತ್ಯಾಜ್ಯದ ವೈಜ್ಞಾನಿಕವಾಗಿ ವಿಲೇವಾರಿ ವಿಧಾನ ತಿಳಿಸಿ.

‘ಸುಮಾರು 15 ವರ್ಷಗಳಿಂದ ಘಟಕದಲ್ಲಿ ಮೂರು ಲಕ್ಷಕ್ಕೂ ಅಧಿಕ ಟನ್ ಘನತ್ಯಾಜ್ಯ ಸಂಗ್ರಹವಾಗಿದೆ. ಪ್ರಸ್ತುತ ಒಂದು ಸ್ಕ್ರೀನಿಂಗ್‌ ಮಿಷನ್‌ನಿಂದ ಮಾತ್ರ  ತ್ಯಾಜ್ಯವವನ್ನು ಬೇರ್ಪಡಿಸಿ, ಗೊಬ್ಬರ ತಯಾರಿಸಲಾಗುತ್ತಿದೆ. ಇದರ ಜೊತೆಗೆ ವಿವಿಧ ಹಂತದ ಇನ್ನೂ ನಾಲ್ಕು ದೊಡ್ಡ ಯಂತ್ರಗಳ ಅವಶ್ಯವಿದೆ. ಇದಕ್ಕಾಗಿ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದ್ದು, ಶೀಘ್ರದಲ್ಲಿಯೇ ಪ್ರಸ್ತಾವ ಸಲ್ಲಿಸಲಾಗುವುದು. ಯಂತ್ರಗಳು ಬಂದ ನಂತರ ಗೊಬ್ಬರ ತಯಾರಿಕೆ ಪ್ರಕ್ರಿಯೆ ವೇಗ ಪಡೆಯಲಿದೆ. ಪ್ರಸ್ತುತ ಇರುವ ತ್ಯಾಜ್ಯ ನಮಗೆ ಚಿನ್ನವಿದ್ದಂತೆ. ಇದರಿಂದ ಕನಿಷ್ಠ 2 ಲಕ್ಷ ಟನ್‌ ಗೊಬ್ಬರ ತಯಾರಿಸಿ, ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸುವ ಚಿಂತನೆ ಇದೆ. ಇದರಿಂದ ಪಾಲಿಕೆಗೆ ಉತ್ತಮ ಆದಾಯವೂ ಬರುತ್ತದೆ.

* ಯೋಜನೆಯ ವೆಚ್ಚ?

  ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದಕ್ಕಾಗಿ ಈಗಾಗಲೇ ₹ 27 ಕೋಟಿ ಅಂದಾಜು ವೆಚ್ಚದ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದ್ದು,ಸ್ಮಾರ್ಟ್‌ಸಿಟಿ ಯೋಜನೆ ಜಾರಿ ವೇಳೆ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು. ಜೊತೆಗೆ ತ್ಯಾಜ್ಯ ಸಾಗಿಸುವ ವಾಹನಗಳ ದುರಸ್ತಿ ಹಾಗೂ ಸ್ವಚ್ಛತೆಗೆ ಘಟಕದ       ಆವರಣದಲ್ಲೇ ಗ್ಯಾರೇಜ್‌ ಆರಂಭಿಸುವ ಚಿಂತನೆ ಇದೆ. ಇನ್ನು ಎರಡು ವರ್ಷಗಳ ಅವಧಿಯಲ್ಲಿ ಈ ಸಮಸ್ಯೆ ಪರಿಹರಿಸಲಾಗುವುದು.

* ನಾಯಿಗಳ ಹಾವಳಿ ಹೆಚ್ಚುತ್ತಿದೆಯಲ್ಲ?

ಘಟಕದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿರುವುದು ನಿಜ. ತ್ಯಾಜ್ಯದಲ್ಲಿನ ಪ್ಲಾಸ್ಟಿಕ್‌, ಕಬ್ಬಿಣ ಆಯ್ದುಕೊಳ್ಳಲು ನಿತ್ಯ ಸುಮಾರು 30 ಜನ ಚಿಂದಿ ಆಯುವವರು ಘಟಕಕ್ಕೆ ಬರುತ್ತಾರೆ. ಇವರೊಂದಿಗೆ ನಾಯಿಗಳೂ ಬರುತ್ತವೆ. ಅವು ಕೊಳೆತ ಆಹಾರ ಹಾಗೂ ಕೋಳಿತ್ಯಾಜ್ಯ ತಿನ್ನುತ್ತವೆ. ಇದರಿಂದ ಕೆಲವೊಮ್ಮೆ ಸ್ಥಳೀಯರ ಮೇಲೆ ಹಾಗೂ ಜಮೀನಿನಲ್ಲಿದ್ದ ದನ, ಕರು ಹಾಗೂ ಕುರಿಗಳ ಮೇಲೆ ದಾಳಿ ಮಾಡಿರುವ ಬಗ್ಗೆ ದೂರುಗಳು ಬಂದಿವೆ. ಘಟಕದೊಳಗೆ ನಾಯಿ ಹಾವಳಿ ನಿಯಂತ್ರಿಸಲಾಗುವುದು.

* ಘನತ್ಯಾಜ್ಯದೊಂದಿಗೆ ವೈದ್ಯಕೀಯ ತ್ಯಾಜ್ಯ ಸೇರಿಕೊಂಡಿವೆಯಲ್ಲಾ....

ಘನತ್ಯಾಜ್ಯ ಮಾತ್ರ ಸಂಗ್ರಹಿಸಲಾಗುತ್ತಿದೆ. ಕೆಲವೊಮ್ಮೆ ಕ್ಲಿನಿಕ್‌ನವರು ಹಾಗೂ ಮನೆಯೊಳಗೆ ಆಸ್ಪತ್ರೆ ಮಾಡಿಕೊಂಡವರು ವೈದ್ಯಕೀಯ ತ್ಯಾಜ್ಯವನ್ನು ತಿಪ್ಪೆಗೆ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು.

 * * 

ಭೂಮಿ ಊಳಿದರೆ ಪ್ಲಾಸ್ಟಿಕ್‌ ರಾಶಿಯೇ ನೇಗಿಲಿಗೆ ಸಿಗುತ್ತೆ. ಜೀವನಕ್ಕಿರುವುದು ಇದಿಷ್ಟೇ ತುಂಡು ಭೂಮಿ. ಬೆಳೆನೂ ಸಿಗುತ್ತಿಲ್ಲ. ಪಾಳು ಬಿಡಲೂ ಮನಸೊಪ್ಪುತ್ತಿಲ್ಲ.

–ಜಿ.ರುದ್ರಮುನಿ

ಆವರಗೊಳ್ಳ, ರೈತ

ವರದಿ: ಎಲ್‌.ಮಂಜುನಾಥ/ ಪ್ರಕಾಶ್ ಕುಗ್ವೆ

ಪ್ರತಿಕ್ರಿಯಿಸಿ (+)