ಭಾನುವಾರ, ಡಿಸೆಂಬರ್ 15, 2019
18 °C

ಸೆ.23ರಿಂದ ಅ.2ರವರೆಗೆ ಶರಣಸಂಸ್ಕೃತಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆ.23ರಿಂದ ಅ.2ರವರೆಗೆ ಶರಣಸಂಸ್ಕೃತಿ ಉತ್ಸವ

ಚಿತ್ರದುರ್ಗ: ಪ್ರತಿ ವರ್ಷದಂತೆ ಈ ವರ್ಷವೂ ಸೆ.23ರಿಂದ ಅ.2ರವರೆಗೆ ಮುರುಘಾಮಠದಿಂದ ಶರಣಸಂಸ್ಕೃತಿ ಉತ್ಸವವನ್ನು ನಡೆಸಲು ಶನಿವಾರ ಮುರುಘಾಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ಮುಖಂಡರು, ಸ್ವಾಮೀಜಿಗಳು ಉತ್ಸವ ಆಯೋಜನೆ ಕುರಿತು ಸಲಹೆ ನೀಡಿದರು.

ಇದಕ್ಕೂ  ಮುನ್ನ ಸಭೆಯಲ್ಲಿ ಮಾತನಾಡಿದ ಶಿವಮೂರ್ತಿ ಶರಣರು, ‘ಹಲವು ವರ್ಷಗಳಿಂದ ಶೂನ್ಯಪೀಠವು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕವಾದ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. 20–30 ವರ್ಷಗಳಿಂದ ದಸರಾ ಮಹೋತ್ಸವವನ್ನು ಶರಣಸಂಸ್ಕೃತಿ ಉತ್ಸವವನ್ನಾಗಿ ಆಚರಿಸಲಾಗುತ್ತಿದೆ’ ಎಂದರು.

‘12ನೇ ಶತಮಾನದಲ್ಲಿ ಬಸವಾದಿ ಶರಣರು ಎಲ್ಲ ವರ್ಗದವರನ್ನು ಜೊತೆಗೆ ಕರೆದುಕೊಂಡು ಹೋದಂತೆ 21ನೇ ಶತಮಾನದಲ್ಲಿ ಬಸವಣ್ಣವರ ಹಾದಿಯನ್ನೇ ಅನುಸರಿಸುತ್ತಿದ್ದೇವೆ.  ಚಿತ್ರದುರ್ಗ ಬರಗಾಲ ಪ್ರದೇಶ. ನಾವು ಇರುವುದೇ ಬರಗಾಲದ ನಾಡಿನಲ್ಲಿ. ಕಷ್ಟಗಳು ಸಂಕಷ್ಟಗಳು ಬರುತ್ತವೆ. ಆದರೆ ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸಬೇಕಿದೆ’ ಎಂದರು.

‘ನಾವು ಕಾರ್ಯಕ್ರಮಕ್ಕಾಗಿ ಕಾರ್ಯಕ್ರಮ ಆಯೋಜಿಸುವುದಿಲ್ಲ. ಅಭಿವೃದ್ಧಿಪರ ಗೋಷ್ಠಿಗಳನ್ನು ಆಯೋಜಿಸುತ್ತೇವೆ. ಪ್ರತಿ ವರ್ಷ ಒಂದೊಂದು ಸಮುದಾಯದವರನ್ನು ಗೌರವ ಅಧ್ಯಕ್ಷರಾಗಿ ನೇಮಿಸುತ್ತೇವೆ. ಈ ಬಾರಿ ವೇಮನ ಗುರುಪೀಠದ ಬಸವ ವೇಮನ ಸ್ವಾಮೀಜಿ ಗೌರವ ಅಧ್ಯಕ್ಷರನ್ನಾಗಿ ಮತ್ತು ಭೀಮಸಮುದ್ರದ ಉದ್ಯಮಿ ಶಂಕರಮೂರ್ತಿ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದ್ದೇವೆ’ ಎಂದರು.

ಬಸವ ವೇಮನ ಸ್ವಾಮೀಜಿ ಮಾತನಾಡಿ, ‘ಶ್ರೀಮಠದಿಂದ ಪ್ರಾಪಂಚಿಕ ಜ್ಞಾನದ ಜತೆಗೆ ಆಧ್ಯಾತ್ಮಿಕ ಅನುಭವ ಅರಿತಿದ್ದೇವೆ’ ಎಂದರು. ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಉದ್ಯಮಿ ಶಂಕರಮೂರ್ತಿ, ‘ಹಲವು ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಿಂಬಿಸುವ ಉತ್ಸವ ಶರಣಸಂಸ್ಕೃತಿ ಉತ್ಸವ. ಉತ್ಸವದ ಸಂದರ್ಭದಲ್ಲಿ ನಡೆಯುವ ಮಹಾದಾಸೋಹ ಸೇವೆ ವಹಿಸಿಕೊಳ್ಳುತ್ತೇನೆ’ ಎಂದರು.

ಸಂಸದ ಬಿ.ಎನ್.ಚಂದ್ರಪ್ಪ, ‘ಮೈಸೂರಿನ ದಸರಾದಷ್ಟೇ ಮುರುಘಾಮಠದ ಶರಣಸಂಸ್ಕೃತಿ ಉತ್ಸವ ಸುಂದರವಾಗಿರುತ್ತದೆ. ಸಂಗೀತ ಕೇಳಿ ಹಸುಗಳು ಹಾಲು ಹೆಚ್ಚು ಕೊಡುವಂತೆ ಬರದ ನಾಡಿನಲ್ಲಿ ಶರಣಸಂಸ್ಕೃತಿ ಉತ್ಸವದ ಮೂಲಕ ಮಳೆ ಬೆಳೆ ಹೆಚ್ಚು ಆಗಲಿ’ ಎಂದರು.

ವೇದಿಕೆಯಲ್ಲಿ ಮಹಾಂತ ರುದ್ರೇಶ್ವರ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಅಥಣಿ ಗಚ್ಛಿನಮಠದ ಶಿವಬಸವ ಸ್ವಾಮೀಜಿ, ಶಿವಮೊಗ್ಗ ಬಸವಕೇಂದ್ರ ಬಸವ ಮರುಳಸಿದ್ಧ ಸ್ವಾಮೀಜಿ, ಹಾವೇರಿ ಹೊಸಮಠದ ಬಸವಶಾಂತಲಿಗ ಸ್ವಾಮೀಜಿ,  ಬಸವ ಹರಳಯ್ಯ ಸ್ವಾಮೀಜಿ, ಸಾಯಿಗಾಂವನ ಗುರುಬಸವೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ, ರೆವರಂಡ್ ಫಾದರ್ ಕೆ. ರಾಜು, ಮುಸ್ಲಿಂ ಸಮಾಜದ ಮೌಲ್ವಿಗಳಾದ ಸರ್‌ ಖಾಜಿ ಶಂಷುದ್ದೀನ್, ಮಾಜಿ ಶಾಸಕ ಎ.ವಿ.ಉಮಾಪತಿ, ಎಂ.ಬಿ.ತಿಪ್ಪೇರುದ್ರಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಫಾತ್ಯರಾಜನ್, ಎಚ್.ಎನ್. ತಿಪ್ಪೇಸ್ವಾಮಿ, ಶಂಕ್ರಣ್ಣ,  ರೈತ ಮುಖಂಡ ನುಲೇನೂರು ಎಲ್.ಬಿ. ರಾಜಶೇಖರ್, ನಿರಂಜನಮೂರ್ತಿ, ಮೋಕ್ಷರುದ್ರಸ್ವಾಮಿ, ರುದ್ರಾಣಿ ಗಂಗಾಧರ್ ಹಾಜರಿದ್ದರು. ಜಮುರಾ ಕಲಾವಿದರು ವಚನ ಗೀತೆ ಪ್ರಾರ್ಥಿಸಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ಕೆ.ಎನ್. ವಿಶ್ವನಾಥ್ ನಿರೂಪಿಸಿದರು.

ಸಭೆಯಲ್ಲಿ ‘ಸೇವೆ’ ಘೋಷಿಸಿದವರು

ರಾಜ್ಯಸಭಾ ಮಾಜಿ ಸದಸ್ಯ ಎಚ್. ಹನುಮಂತಪ್ಪ ₹1 ಲಕ್ಷ, ಹೊಳಲ್ಕೆರೆ ಮಾಜಿ ಶಾಸಕ ಪಿ.ರಮೇಶ್ ₹50 ಸಾವಿರ ಹಾಗೂ ಕ್ಷೇತ್ರದ ಜನರಿಂದ ₹50 ಸಾವಿರ ಸಂಗ್ರಹಿಸುವುದಾಗಿ ಭರವಸೆ ನೀಡಿದರು.

ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ್ ಶರಣಸಂಸ್ಕೃತಿ ಉತ್ಸವದ ಜಾನಪದ ಕಲಾಮೇಳದ ಖರ್ಚನ್ನು ವಹಿಸಿಕೊಳ್ಳುವುದಾಗಿ ತಿಳಿಸಿದರು. ರಾಣೆಬೆನ್ನೂರಿನ ಬಿ.ಆರ್.ಪಾಟೀಲ್ ₹1 ಲಕ್ಷ, ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ₹ 50 ಸಾವಿರ, ನಿಕಟಪೂರ್ವ ಕಾರ್ಯಾಧ್ಯಕ್ಷ ಕೆ.ಎಂ.ವೀರೇಶ್ ₹50 ಸಾವಿರ, ಸರ್‌ ಖಾಜಿ ಶಂಷುದ್ದೀನ್ ₹5 ಸಾವಿರ, ಟಿ.ಎನ್.ಕೃಷ್ಣಮೂರ್ತಿ ಸಾಂಸ್ಕೃತಿಕ ಕಾರ್ಯಕ್ರಮದ ಖರ್ಚು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ನವೀನ್  ಒಂದುದಿನದ ದಾಸೋಹದ ಖರ್ಚು, ಜಿಲ್ಲಾ ಪಂಚಾಯ್ತಿ ಸದಸ್ಯ ಕೆಜಿಟಿ ಗುರುಮೂರ್ತಿ ಕಬಡ್ಡಿ ಪಂದ್ಯಾವಳಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಸಭೆಯಲ್ಲಿ ವಾಗ್ದಾನ ಮಾಡಿದರು.

ಪ್ರತಿಕ್ರಿಯಿಸಿ (+)