ಶನಿವಾರ, ಡಿಸೆಂಬರ್ 14, 2019
22 °C

ಎರವಲು ನೀರಲ್ಲಿ ಭಾರಿ ಇಳುವರಿ!

ಎಂ.ವಿ.ಗಡಾದ Updated:

ಅಕ್ಷರ ಗಾತ್ರ : | |

ಎರವಲು ನೀರಲ್ಲಿ ಭಾರಿ ಇಳುವರಿ!

ಹತ್ತಿ ಬೆಳೆಯುವ ರೈತರು ವರ್ಷಕ್ಕೊಮ್ಮೆ  ಉತ್ಪನ್ನ ಪಡೆಯುತ್ತಾರೆ. ಆದರೆ ಇಲ್ಲೊಬ್ಬ ಯುವ ರೈತ  ಪ್ರತಿ ತಿಂಗಳಿಗೊಮ್ಮೆ  ಕೈತುಂಬ ಹಣ ಗಳಿಸುತ್ತಿದ್ದಾರೆ. ಮೂರು ತಿಂಗಳ ಅವಧಿಯಲ್ಲಿ 31 ಕ್ವಿಂಟಲ್‌ ಮೆಣಸಿನಕಾಯಿ ಬೆಳೆಯುವ ಮೂಲಕ ಮಂದಹಾಸ ಬೀರುತ್ತಿದ್ದಾರೆ. ಕಡಿಮೆ ನೀರು ಬಳಸಿಕೊಂಡರೆ, ಬರದಲ್ಲಿಯೂ ಉತ್ತಮ ಇಳುವರಿ ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಸವಣೂರ ಹೋಬಳಿಯ ಕುರಬರಮಲ್ಲೂರ ಗ್ರಾಮದ ಸುರೇಶ, ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಬೇರೆಯವರಿಂದ ನೀರು ಪಡೆದು ಉತ್ತಮ ಫಸಲು ಪಡೆದಿದ್ದಾರೆ. ಇವರ ಬಳಿ ಕೊಳವೆಬಾವಿ ಇಲ್ಲ. ಬೇರೆಯವರಿಂದ ಸ್ವಲ್ಪ ನೀರು  ಪಡೆದು, ಅದನ್ನು ಪೋಲು ಮಾಡದೆ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.

ಸಾವಯವ ಕೃಷಿ: ಅದರಲ್ಲಿಯೂ ಸಾವಯವ ಕೃಷಿ ಮೂಲಕ ಸುರೇಶ ಈ ಸಾಧನೆ ಮಾಡುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ. ರಾಸಾಯನಿಕ ಔಷಧ ಮತ್ತು ಗೊಬ್ಬರ ಬಳಸದೆ ನಾಲ್ಕು ಚಕ್ಕಡಿ ತಿಪ್ಪೆ ಗೊಬ್ಬರ ಹಾಕಿ, ಮೆಣಸಿನಕಾಯಿ ಬೆಳೆದಿದ್ದಾರೆ.

‘ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆಯಿಂದ ಭೂಮಿ ವಿಷವಾಗುತ್ತದೆ. ಅದಕ್ಕೆ ನಾನು ಸಾವಯವ ಕೃಷಿಯನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ಯಾವುದೇ ನಿರ್ವಹಣೆ ಇಲ್ಲದೆ,  31  ಕ್ವಿಂಟಲ್‌ ಹಸಿ ಮೆಣಸಿನಕಾಯಿ ತೆಗೆದಿದ್ದೇನೆ.  50 ಕ್ವಿಂಟಲ್ ಬೆಳೆ ಸಿಗುವ ನಿರೀಕ್ಷೆ ಇದೆ’ ಎಂದು ಸುರೇಶ ಹೇಳಿದರು.

‘ನೀರಿನ ಕೊರತೆ, ಪ್ರತಿಕೂಲ ಹವಾಮಾನದ ಪರಿಸ್ಥಿತಿಗೆ ಹೊಂದಿಕೊಳ್ಳುವಂತಹ ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಬೇಕು. ಹಣ ಇಲ್ಲದಿದ್ದರೂ ಉತ್ತಮವಾಗಿ ಕೃಷಿಯನ್ನು ಮಾಡಬಹುದು. ರಾಸಾಯನಿಕ ಬಳಸಿ ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಸಾವಯವ ಕೃಷಿ ಮಾಡಿ ಉತ್ತಮ ಆರೋಗ್ಯಕರ ಬೆಳೆಯನ್ನು ಜನರಿಗೆ ನೀಡುತ್ತಿದ್ದೇವೆ ಎಂಬ ತೃಪ್ತಿಯೊಂದಿಗೆ ಕೃಷಿ ಮಾಡುತ್ತಿದ್ದೇನೆ’ ಎಂದು ಸುರೇಶ ಹೇಳಿದರು.

ಪ್ರಸಕ್ತ ವರ್ಷ ಮುಂಗಾರು ಉತ್ತಮ ಮಳೆ ಇಲ್ಲದೇ ರೈತರು ಕಂಗೆಟ್ಟಿದ್ದಾರೆ. ಆದರೆ ಶಿಗ್ಗಾವಿ ತಾಲ್ಲೂಕಿನ ಚಾಕಾ ಪುರದ ರೈತ ಬಸನಗೌಡ ಪಾಟೀಲ ಮಾತ್ರ ಅಲ್ಪ ನೀರಿನಲ್ಲೇ ‘ವಾಹ್..’ ಎನ್ನುವಂತೆ ಮೆಣಸಿನ ಕಾಯಿ ಬೆಳೆದಿದ್ದಾರೆ.

ಬಸನಗೌಡ ಅವರ ಎರಡು ಎಕರೆ ಜಮೀನಿನಲ್ಲಿ ಎರಡು ಕೊಳವೆ ಬಾವಿ ಗಳಿವೆ. ಒಂದು ಬತ್ತಿದ್ದು, ಇನ್ನೊಂದ ರಲ್ಲಿ 2 ಇಂಚಿನಷ್ಟು ನೀರಿದೆ. ಅದನ್ನೇ ಬಂಡವಾಳ ಮಾಡಿಕೊಂಡ ಅವರು, ತುಂತುರು ನೀರಾವರಿ ಪದ್ಧತಿ ಮೂಲಕ ಮೆಣಸಿನಕಾಯಿ ಬೆಳೆದಿದ್ದಾರೆ. ಇಂಥ ಬರಗಾಲದಲ್ಲೂ ಐದಾರು ಅಡಿಗಳಷ್ಟು ಎತ್ತರ ಬೆಳೆದಿರುವ ಗಿಡಗಳಲ್ಲಿ ಮೆಣಸಿನ ಕಾಯಿ

ತುಂಬಿ ತುಳುಕುತ್ತಿವೆ. ಕಾಯಿಗಳ ಭಾರದಿಂದ ಗಿಡಗಳು ಬಾಗುತ್ತಿವೆ. ಕಾರ್ಮಿಕರು ಮೆಣಸಿನ ಕಾಯಿ ಬಿಡಿಸಲು  ಹೋಗದಷ್ಟು ಗಿಡಗಳು ವ್ಯಾಪಿಸಿವೆ.

‘ಪ್ರತಿ ಗಿಡದಲ್ಲಿ ಕನಿಷ್ಠ ಒಂದೊಂದು ಬೀಡಿಗೆ ಸುಮಾರು 150ಕ್ಕೂ ಹೆಚ್ಚು ಕಾಯಿಗಳು ಸಿಗುತ್ತಿವೆ. ಕಾಯಿಗಳ ಭಾರಕ್ಕೆ ಗಿಡಕ್ಕೆ ನೆಲಕ್ಕೆ ಮುಟ್ಟುತ್ತಿವೆ. ತಿಂಗಳಿಗೆ ಎರಡು ಬಾರಿ ಕಾಯಿ ಬಿಡಿಸಲಾಗುತ್ತಿದೆ. ಮೊದಲ ಬೀಡಿಗೆ ಸುಮಾರು ₹70 ಸಾವಿರ ಆದಾಯ ಬಂದಿದೆ. ಎರಡನೇ ಬಿಡಿಗೆ ₹1.80 ಲಕ್ಷ ಆದಾಯ ಸಿಕ್ಕಿದೆ. ಇದು ಕೇಲವ 1 ಎಕರೆ ಜಮೀನಿಲ್ಲಿ ಬೆಳೆದ ಬೆಳೆಯ ಲೆಕ್ಕಾಚಾರ’ ಎನ್ನುತ್ತಾರೆ ಬಸನಗೌಡ.‘ಮತ್ತೊಂದು ಎಕರೆಯಲ್ಲೂ ಮೆಣಸಿನಕಾಯಿ ಬೆಳೆದಿದ್ದೇನೆ.  ಅದು ಇನ್ನೂ ಕಾಯಿ ಬಿಡಿಸುವ ಹಂತ ತಲುಪಿಲ್ಲ’ ಎಂದು ಅವರು ಹೇಳಿದರು.

ಸಾವಯವ ಪ್ರಭಾವ: ‘ಮೆಣಸಿನ ಕಾಯಿ ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಕೆ ಮಾಡಿಲ್ಲ. ರಾಸಾಯನಿಕ ಗೊಬ್ಬರ ದಿಂದ ಭೂಮಿಯ ಫಲವತ್ತತೆ ಹಾಳಾಗುತ್ತದೆ. ಹೀಗಾಗಿ ಸುಮಾರು 20 ಟ್ರ್ಯಾಕ್ಟರ್‌ಗಳಷ್ಟು ದನದ ಕೊಟ್ಟಿಗೆ ಗೊಬ್ಬರ ಹಾಗೂ ಸಾವಯವ ಗೊಬ್ಬರವನ್ನು ಹಾಕಿದ್ದೇನೆ’ ಎನ್ನುವ ಅವರು, ಸ್ವಯಂ ಕೋಳಿ ಫಾರಂ ಇಟ್ಟುಕೊಂಡಿದ್ದಾರೆ. ‘ಐದು ಗುಂಟೆಯಲ್ಲಿರುವ ಕೋಳಿ ಫಾರಂನಲ್ಲಿ ಸಿಗುವ ಗೊಬ್ಬರವನ್ನೂ ಹೊಲಕ್ಕೆ ಬಳಸುತ್ತೇವೆ’ ಎನ್ನುತ್ತಾರೆ ಅವರು.

* * 

ಇಂತಹ ಬರಗಾಲದಲ್ಲಿಯೂ ಫಸಲು ಇಷ್ಟು ಚೆನ್ನಾಗಿ ಬರುತ್ತೆ ಎನಿಸಿರಲಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಮಟ್ಟದಲ್ಲಿ ಸಾವಯವ ಕೃಷಿ ಮಾಡುವೆ

ಸುರೇಶ

ಕುರಬರಮಲ್ಲೂರ ರೈತ

 

ಪ್ರತಿಕ್ರಿಯಿಸಿ (+)