ಸೋಮವಾರ, ಡಿಸೆಂಬರ್ 16, 2019
18 °C

ಐಐಟಿಗಳ ಸಾಧನೆ: ಭಾರತದ ಅದೇ ಕತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಐಟಿಗಳ ಸಾಧನೆ: ಭಾರತದ ಅದೇ ಕತೆ!

ಇದೊಂದು ಲಕ್ಷಕ್ಕೂ ಹೆಚ್ಚು ಶುಲ್ಕ ಪಡೆಯುವ ಶಾಲೆ. ಎರಡನೇ ತರಗತಿಯ ಮಗುವಿನ ಪುಸ್ತಕಗಳಲ್ಲಿನ ಪ್ರಶ್ನೋತ್ತರಗಳನ್ನು ನೋಡಿ ಗಾಬರಿಯಾಯಿತು. ವಿವರಣೆ ಕೇಳಿದಾಗ ಸಂದ ಉತ್ತರ: ‘ಈ ಶಾಲೆಯ ಮಕ್ಕಳನ್ನ ‘ಐಐಟಿಗೆ ರೆಡಿ’ ಮಾಡುತ್ತಿದ್ದೇವೆ!’

ನಿಜ, ಐಐಟಿ ಎಂದರೆ ಎಂಜಿನಿಯರಿಂಗ್ ವಿದ್ಯಾಭ್ಯಾಸದ ಆಕಾಂಕ್ಷಿಗಳ ಕಾಶಿ! ಈ ಐಐಟಿಗಳಿಗೆ ಸೇರಲು ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಬೇಕು. ಅದಕ್ಕೆ ತರಬೇತಿ ಈಗ ಪೂರ್ವಪ್ರಾಥಮಿಕ ತರಗತಿಗಳಿಂದಲೇ ಆರಂಭವಾಗುತ್ತಿದೆ ಎಂದರೆ ಅವುಗಳಿಗಿರುವ ಪ್ರಾಮುಖ್ಯ ಅರಿವಿಗೆ ಬಾರದಿರದು. ಹಾಗೆಯೇ, ಇಂದು ಐಐಟಿ

ಗಳಲ್ಲಿ ಪದವಿ ಪಡೆದ ಅನೇಕರು ಬೇರೆ ಬೇರೆ ದೇಶಗಳಲ್ಲಿನ ಪ್ರತಿಷ್ಠಿತ ತಂತ್ರಜ್ಞಾನ ಸಂಸ್ಥೆಗಳಲ್ಲಿ ಉನ್ನತ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ವಾರ್ಷಿಕ ಸಂಬಳ ಕೋಟಿಗಳಲ್ಲಿದೆ ಎಂಬುದೂ ನಿಜವೇ. ವಸ್ತುಸ್ಥಿತಿ ಹೀಗಿರುವಾಗ ನಮ್ಮ ಪಿಯುಸಿ ಮಕ್ಕಳು ಈ ಪ್ರವೇಶ ಪರೀಕ್ಷೆಯನ್ನು ಪಾಸು ಮಾಡಲು ಪಡುವ ಕಷ್ಟ, ಪಡೆಯುವ ತರಬೇತಿ, ಪೋಷಕರ ಹಂಬಲ – ಇವೆಲ್ಲವೂ ಸಮರ್ಥನೀಯವೇ. ಆದರೆ ಇತ್ತೀಚಿನ ವರದಿಯೊಂದು ಈ ಐಐಟಿಗಳ ಸುತ್ತಲಿನ ಪ್ರಭಾವಳಿಯನ್ನು ಕಳಚಿಹಾಕಿದೆ. ಜಾಗತಿಕ ಮಟ್ಟದ ಸಂಸ್ಥೆಗಳಿಗೆ ಹೋಲಿಸಿದರೆ ಇವುಗಳ ಸಾಧನೆಯೇನೇನೂ ಅಲ್ಲ ಎಂದು ಹೇಳಿದೆ!

ವಿಷಯವನ್ನು ಸ್ವಲ್ಪ ವಿವರವಾಗಿ ನೋಡೋಣ. ಭವ್ಯಭಾರತದ ಭವಿಷ್ಯವನ್ನು ಬೆಳಗಬೇಕು ಎಂಬ ಕನಸಿನೊಂದಿಗೆ ಈ ಐಐಟಿಗಳನ್ನು ಹುಟ್ಟುಹಾಕಲಾಯಿತು. ಇದು ಅಂದಿನ ಪ್ರಧಾನಿ ನೆಹರೂ ಕನಸಿನ ಕೂಸು. ಕೆಲವು ವಿದೇಶೀತಜ್ಞರ ಮಾರ್ಗದರ್ಶನ ಹಾಗೂ ಸಹಭಾಗಿತ್ವದೊಂದಿಗೆ ಇವು ಆರಂಭವಾದವು.

ಐಐಟಿ ಖರಗಪುರ ಮೊಟ್ಟಮೊದಲ ಐಐಟಿ (1951); ಆನಂತರ ಕ್ರಮವಾಗಿ ಐಐಟಿ ಬಾಂಬೆ (1958), ಐಐಟಿ ಮದ್ರಾಸ್‍ (1959), ಐಐಟಿ ಕಾನ್ಪುರ (1959) ಮತ್ತು ಐಐಟಿ ದೆಹಲಿ (1961) ಸ್ಥಾಪನೆಯಾದವು. 1961ರಲ್ಲಿಯೇ ಐಐಟಿ ಕಾಯಿದೆಯನ್ನೂ ಭಾರತದ ಸಂಸತ್ತು ಜಾರಿಗೆ ತಂದು ಈ ಐಐಟಿಗಳು ಭಾರತದ ರಾಷ್ಟ್ರೀಯ ಮಹತ್ವದ ಸಂಸ್ಥೆಗಳು ಎಂದು ಘೋಷಿಸಿತು. ಮೂರು ದಶಕಗಳ ಆನಂತರ ಐಐಟ ಗುವಾಹಟಿಯನ್ನು ಸ್ಥಾಪಿಸಲಾಯಿತು (1994). ರೂರ್ಕಿ ವಿಶ್ವವಿದ್ಯಾನಿಲಯವನ್ನು ಐಐಟಿಯನ್ನಾಗಿ ಪರಿವರ್ತಿಸಿ ಐಐಟಿ ರೂರ್ಕಿ ಎಂದು ಹೆಸರಿಸಲಾಯಿತು (2001). ಮುಂದೆ 2008ರಿಂದ 2012ರ ವರೆಗೆ ಒಂಬತ್ತು ಐಐಟಿಗಳನ್ನು ಸ್ಥಾಪಿಸಲಾಯಿತು.

ಇತ್ತೀಚೆಗೆ ಧಾರವಾಡದ ಐಐಟಿಯೂ ಸೇರಿದಂತೆ ಏಳು ಹೊಸ ಐಐಟಿಗಳನ್ನು ಸ್ಥಾಪಿಸಲಾಗಿದೆ/ಪ್ರಸ್ತಾವಿಸಲಾಗಿದೆ. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರಿಯಾದ ಐಐಟಿಗಳು ಭಾರತದಲ್ಲಿ ಅತಿಹೆಚ್ಚು ಸರ್ಕಾರಿ ಅನುದಾನವನ್ನು ಪಡೆಯುವ ಸಂಸ್ಥೆಗಳೂ ಹೌದು. ಭಾರತದ ಎಂಜಿನಿಯರಿಂಗ್‍ ಕಾಲೇಜುಗಳಿಗೆ ಸರ್ಕಾರ ವಾರ್ಷಿಕ ಇಪ್ಪತ್ತು ಕೋಟಿಯವರೆಗೂ ಅನುದಾನವಿತ್ತರೆ ಐಐಟಿಗಳಿಗೆ ವಾರ್ಷಿಕ ನೂರಮುವ್ವತ್ತು ಕೋಟಿಯಷ್ಟು ಅನುದಾನವನ್ನು ಕೊಡುತ್ತದೆ. ಇಲ್ಲಿನ ವಿದ್ಯಾರ್ಥಿ–ಶಿಕ್ಷಕ ಅನುಪಾತವೂ 1:8 ರಷ್ಟಿದೆ. ಸಮಿತಿ ವಿಧಿಸಿರುವ ಕನಿಷ್ಠ ಅನುಪಾತ 1:9. ಇಷ್ಟೆಲ್ಲ ಪ್ರತಿಷ್ಠೆ, ಸವಲತ್ತುಗಳನ್ನು ಐಐಟಿಗಳು ಹೊಂದಿವೆ.

ಸರಿ, ಈ ಐಐಟಿಗಳ ಸಾಧನೆಯೇನು? ಜಾಗತಿಕ ಮಟ್ಟದಲ್ಲಿ ಇವುಗಳದ್ದೇ ದರ್ಜೆಯ ಸಂಸ್ಥೆಗಳ ಜೊತೆಯಲ್ಲಿ ಹೋಲಿಸಿದಾಗ ಇವುಗಳ ಸ್ಥಾನವೇನು? ಈ ಕುತೂಹಲಕಾರಿ ಪ್ರಶ್ನೆ ಉದ್ಭವಿಸುತ್ತದೆ. ಈ ತಂತ್ರಜ್ಞಾನದ ‘ದೈತ್ಯ’ಸಂಸ್ಥೆಗಳನ್ನು ಮೌಲ್ಯಮಾಪನ ಮಾಡುವುದು ಹೇಗೆ ಎಂಬುದೂ ಮನಸ್ಸಿಗೆ ಬಂದೀತು. ಆದರೆ, ಅಂತಹ ಕಾರ್ಯ ಈಗ ನಡೆದಿದೆ.

ಭಾರತದಲ್ಲಿನ ಹಳೆಯ ಮತ್ತು ಹೊಸ ಐಐಟಿಗಳ - ಒಟ್ಟು ಇಪ್ಪತ್ತಮೂರು - ಸಾಧನೆಯನ್ನು ಅಳೆದು ತೂಗಿನೋಡುವ ಕೆಲಸ ನಡೆದಿದ್ದು ಜಾಗತಿಕ ಸ್ತರದಲ್ಲಿ ಇದರದೇ ಮಟ್ಟದ ಸಂಸ್ಥೆಗಳೊಂದಿಗೆ ಹೋಲಿಸುವ ಮೂಲಕ. ಇದು ಕ್ಲಿಷ್ಟವಾದ ಕಾರ್ಯವೇ ಎನ್ನುವುದೂ ಸರಿಯೇ. ಎರಡು ಬೇರೆ ಬೇರೆ ವಿಶ್ವವಿದ್ಯಾನಿಲಯದ ನಾಲ್ವರು ತಜ್ಞರು ಈ ಐಐಟಿಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಿ ವರದಿಯನ್ನು ಪ್ರಕಟಿಸಿದ್ದಾರೆ.

ಈ ವರದಿಯು ಪ್ರತಿಷ್ಠಿತ ವಿಜ್ಞಾನ ಸಂಶೋಧನಾ ಪತ್ರಿಕೆಯಾದ ‘ಕರೆಂಟ್‍ ಸೈನ್ಸ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಈ ವರದಿಯಲ್ಲಿ ಭಾರತದ ಐಐಟಿಗಳ ಸಾಧನೆಯನ್ನು ವಿಶ್ಲೇಷಿಸಿ ಜಾಗತಿಕ ಮಟ್ಟದ ಎರಡು ತಂತ್ರಜ್ಞಾನ ವಿದ್ಯಾಕೇಂದ್ರಗಳಾದ ಎಂಐಟಿ (ಮೆಸ್ಸಾಚ್ಯುಸೆಟ್ಸ್ ಇನ್ಸ್‌ಟಿಟ್ಯೂಟ್‍ ಆಪ್‍ ಟಿಕ್ನಾಲಜಿ, ಅಮೆರಿಕ ಸಂಯುಕ್ತ ಸಂಸ್ಥಾನ) ಮತ್ತು ಎನ್‍ಟಿಯೂ (ನಂನ್ಯಾಂಗ್‍ ಟೆಕ್ನಲಾಜಿಕಲ್‍ ಯೂನಿವರ್ಸಿಟಿ, ಸಿಂಗಾಪುರ)ಗಳಿಗೆ ಸಾಧನಾಂಶಗಳೊಂದಿಗೆ ಹೋಲಿಸಲಾಗಿದೆ. ಭಾರತದ ಐಐಟಿಗಳ ಜಾಗತಿಕ ಮಟ್ಟದಲ್ಲಿಯ ಸಾಧನೆ ನಿರಂತರವಾಗಿ ಕೆಳಮಟ್ಟದ್ದು (ಕಂಟಿನ್ಯೂಯಸ್ಲಿ ಪೂವರ್) ಎಂಬುದನ್ನು ಈ ವರದಿ ನಿರೂಪಿಸಿದೆ.

ಈ ವಿದೇಶೀ ಮಾರ್ಗದರ್ಶಕರ, ಸಹಭಾಗಿತ್ವ ಮಾರ್ಗದರ್ಶನದೊಂದಿಗೆ ಸ್ಥಾಪಿತವಾದ ಐಐಟಿಗಳು ಸ್ವದೇಶೀ ಮಾರ್ಗದರ್ಶನದಲ್ಲಿ ಹುಟ್ಟಿದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ)ಯ ಮಟ್ಟದಲ್ಲಿಯೂ ಇಲ್ಲ ಎಂದು ಹೇಳಲಾಗಿದೆ. ಇನ್ನೊಂದು ತುಂಬ ಕುತೂಹಲಕಾರಿ ವಿಷಯವೆಂದರೆ, ಅನೇಕ ಐಐಟಿಗಳು ಜಾಗತಿಕವಾಗಿ ಹೆಸರು ಮಾಡಿರುವುದು ಭೌತವಿಜ್ಞಾನ, ರಸಾಯನವಿಜ್ಞಾನದಂತಹ ಶುದ್ಧವಿಜ್ಞಾನದ ವಿಷಯಗಳಲ್ಲಿಯೇ ಹೊರತು, ಈ ಐಐಟಿಗಳನ್ನು ಸ್ಥಾಪಿಸಲಾದ ತಾಂತ್ರಿಕ ವಿಷಯಗಳಲ್ಲಿ ಅಲ್ಲ! ಇದು ಖೇದಕಾರಿ ಅಂಶವೂ ಹೌದು.

ಮಾನದಂಡವೇನು?

ಇಲ್ಲಿ ಮೌಲ್ಯಮಾಪನಕ್ಕೆ ಬಳಸಲಾಗಿರುವ ಅಂಶಗಳೆಂದರೆ – ಈ ಸಂಸ್ಥೆಗಳು ನಡೆಸಿರುವ ಸಂಶೋಧನಾ ಕಾರ್ಯಗಳು. ಇದುವರೆಗೂ ಪ್ರಕಟಿಸಿರುವ ಒಟ್ಟು ಸಂಶೋಧನಾ ಪ್ರಬಂಧಗಳ ಸಂಖ‍್ಯೆ (ಟಿಪಿ - ಟೋಟಲ್‍ ಪೇಪರ್ಸ್), ಎಷ್ಟು ಬಾರಿ ಇತರ ಸಂಶೋಧಕರು ಇವರ ಸಂಶೋಧನೆಯನ್ನು ಉಲ್ಲೇಖಿಸಿದ್ದಾರೆ ಎನ್ನುವ ಅಂಶ (ಟಿಸಿ - ಟೋಟಲ್ ಸೈಟೇಷನ್ಸ್), ಒಂದು ಸಂಶೋಧನೆಯ ಸರಾಸರಿ ಉಲ್ಲೇಖ (ಎಸಿಪಿಪಿ - ಆವರೇಜ್ ಸೈಟೇಷನ್‍ ಪರ್‍ ಪೇಪರ್), ಅತಿ ಹೆಚ್ಚು ಉಲ್ಲೇಖಿತ ಸಂಶೋಧನಾ ಪ್ರಬಂಧ (ಎಚ್‍ಐಸಿಪಿ - ಸೈಟೆಟ್‍ ಇನ್‍ ಟಾಪ್‍ 1% ಸೈಟೆಡ್‍ ಪೇಪರ್‍), ಅಂತರರಾಷ್ಟ್ರೀಯ ಸಹಯೋಗದಲ್ಲಿ ಸಿದ್ಧವಾದ ಸಂಶೋಧನಾ ಪ್ರಬಂಧ (ಐಸಿಪಿ - ಇಂಟರ್‌ನ್ಯಾಷನಲಿ ಕೊಲಬರೇಟಿವ್‍ ಪೇಪರ್)

– ಹೀಗೆ ಈ ಸಂಸ್ಥೆಗಳು ನಡೆಸಿರುವ ಸಂಶೋಧನೆಗಳನ್ನು ಈ ಮೌಲ್ಯಮಾಪನದಲ್ಲಿ ಬಳಸಲಾಗಿದೆ. ಮೌಲ್ಯಮಾಪನಕ್ಕೆ ಅನುಕೂಲವಾಗುವಂತೆ ಹಳೆ ಹಾಗೂ ಹೊಸ ಐಐಟಿಗಳೆಂದು ಕಾಲ\ವನ್ನು ದೃಷ್ಠಿಯಲ್ಲಿಟ್ಟುಕೊಂಡು ಮೂರು ಗುಂಪುಗಳನ್ನಾಗಿ ರಚಿಸಿಕೊಳ್ಳಲಾಗಿದೆ. ಸಹಜವಾಗಿಯೇ ಕಳೆದ ಐದು ವರ್ಷಗಳಲ್ಲಿ ಸ್ಥಾಪನೆಯಾದ ಐಐಟಿಗಳನ್ನು ಈ ಮೌಲ್ಯಮಾಪನದಲ್ಲಿ ಪರಿಗಣಿಸಲಾಗಿಲ್ಲ.

ಹೀಗೆಯೇ, ‘ಜಾಗತಿಕ ಮಟ್ಟದ ಸಂಸ್ಥೆಗಳಿಗೆ ಹೋಲಿಸಿದಾಗ ನಮ್ಮ ಐಐಟಿಗಳು ಆ ಸಾಲಿಗೆ ಬರಲು ಇವು ತುಂಬ ದೂರದ ಹಾದಿಯನ್ನು ಕ್ರಮಿಸಬೇಕಿದೆ’ ಎಂದು ವರದಿಯಲ್ಲಿ ಹೇಳಿದ್ದು, ಎಆರ್‌ಡ್ಲ್ಯೂಯು (ಅಕಾಡೆಮಿಕ್‍ ರ‍್ಯಾಂಕಿಂಗ್ ಆಫ್‍ ವರ್ಲ್ಡ್ ಯೂನಿವರ್ಸಿಟೀಸ್‍)ನ ಜೇಷ್ಠತಾಪಟ್ಟಿಯ ಮೊದಲ 500 ವಿಶ್ವವಿದ್ಯಾನಿಲಯಗಳಲ್ಲಿ ಯಾವ ಐಐಟಿಯೂ ಸ್ಥಾನ ಗಳಿಸಿಲ್ಲ ಎಂದೂ ವರದಿ ಹೇಳಿದೆ. ಎಂದರೆ ಇದೊಂದು ರೀತಿ ಕ್ರಿಕೆಟ್‍ ಪಂದ್ಯಾವಳಿಗಳು ನಡೆದಾಗ ಪತ್ರಿಕೆಗಳು ಕೊಡುವ ಶೀರ್ಷಿಕೆಯಂತೆ ‘ಭಾರತದ ಅದೇ ಹಳೆಯ ಕಥೆ’ಯೇ ಆಗಿದೆ.

ಭಾರತದಲ್ಲಿನ ಸಮಗ್ರ ಶಾಲೆಗಳ ಗುಣಮಟ್ಟವನ್ನು ಹಿಂದೆ ಇದೇ ಪುರವಣಿಯಲ್ಲಿ ವಿಶ್ಲೇಷಿಸಲಾಗಿತ್ತು. ಭಾರತದ ಅಂತರರಾಷ್ಟ್ರೀಯ ಶಾಲೆಗಳನ್ನು ಬೇರೆ ಬೇರೆ ದೇಶಗಳ ಇದೇ ಮಟ್ಟದ ಶಾಲೆಗಳೊಂದಿಗೆ ಹೋಲಿಸಲಾಗಿತ್ತು. ಅಲ್ಲಿಯೂ ಸಹ ಭಾರತದ ಈ ‘ಧರೆಗಿಳಿದ ಸ್ವರ್ಗದಂತಹ’ ಶಾಲೆಗಳು ಇನ್ನಿಲ್ಲದಂತೆ ನೆಲ ಕಚ್ಚಿದ್ದವು. ಈಗ ಐಐಟಿಗಳ ಕಥೆಯೂ ಹೀಗೆ ಎಂಬುದು ಬಯಲಾಗಿದೆ. ಹಾಗಾದರೆ ಸಮಸ್ಯೆಯ ಮೂಲ ಎಲ್ಲಿದೆ ಎಂಬುದನ್ನು ನಮ್ಮ ಜನಪ್ರತಿನಿಧಿಗಳು, ಶಿಕ್ಷಣತಜ್ಞರು, ಸಮಾಜಶಾಸ್ತ್ರಜ್ಞರು, ಉದ್ದಿಮೆಗಳ ಚುಕ್ಕಾಣಿ ಹಿಡಿದವರು ತೀವ್ರವಾಗಿ ಯೋಚಿಸಬೇಕಾಗಿದೆ. ಅಷ್ಟು ಮಾತ್ರವಲ್ಲ, ಸಾರ್ವಜನಿಕ ಶಿಕ್ಷಣ ಇಲಾಖೆ, ಖಾಸಗಿ ಶಾಲೆಗಳು ಹಾಗೂ ವಿದ್ಯಾವಂತ ಪೋಷಕರು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ – ಈ ಎಲ್ಲರೂ – ಇಂತಹ ವಿಷಯಗಳನ್ನು ಕುರಿತು ಆಲೋಚಿಸಬೇಕಾಗಿದೆ.

ಅತ್ಯುತ್ತಮ ವಿದ್ಯಾರ್ಥಿಗಳಿಂದಲೇ ಅತ್ಯುತ್ತಮ ಸಂಶೋಧನೆ ಸಾಧ್ಯ, ಅಲ್ಲವೆ? ಅಂತಹ ಸಂಶೋಧನೆಗೆ ಸೂಕ್ತವಾದ ಮನಸ್ಸುಗಳನ್ನು ನಮ್ಮ ಶಾಲೆಗಳು ನಿರ್ಮಿಸುತ್ತಿವೆಯೇ – ಎಂದೂ ಸಹ ಶಿಕ್ಷಣದಲ್ಲಿ ಆಸಕ್ತಿಯಿರುವ ಯಾರೇ ಆದರೂ ಯೋಚಿಸಬೇಕು. ಹಾಗೆಯೇ, ನಮ್ಮ ಸರ್ಕಾರಿ, ಖಾಸಗಿ ಶಾಲೆಗಳಿಗೆ ಉತ್ತಮ ಸಾಧನೆಯನ್ನು ತೋರಲು ಇದೊಂದು ಅವಕಾಶವೂ ಹೌದು, ಕೈಗಂಬವೂ ಹೌದು.

ಪ್ರತಿಕ್ರಿಯಿಸಿ (+)