ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವರ್ಷವಾದರೂ ಕುಗ್ಗದ ಉತ್ಸಾಹ

Last Updated 16 ಜುಲೈ 2017, 10:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನರಗುಂದ ರೈತ ಬಂಡಾಯದ ಉಜ್ವಲ ಪರಂಪರೆಯನ್ನು ಹೊಂದಿರುವ ನಾವು ಮಹದಾಯಿ ಹೋರಾಟವನ್ನು ಅಷ್ಟು ಸುಲಭಕ್ಕೆ ಬಿಟ್ಟು ಕೊಡಲು ಹೇಗೆ ಸಾಧ್ಯ? ನಡೆಯಲಿ ಮತ್ತೊಂದು ಬಂಡಾಯ. ನಮ್ಮ ಪಾಲಿನ ನೀರು ಹರಿ­ಯುವವರೆಗೂ ನಮ್ಮ ನೆತ್ತರು ಹರಿಸಲು ಸಿದ್ಧ. ಬೆನ್ನು ತಿರುಗಿಸಿ ಓಡುವ ಹೇಡಿಗಳಲ್ಲ ನಾವು...!
ಇದು ನವಲಗುಂದದಲ್ಲಿ ಸರ್ಕಾರಿ ಕಚೇರಿಗಳಿಗೆ ಹಾನಿ ಮಾಡಿದ ಆರೋ­ಪದ ಮೇರೆಗೆ ಬಳ್ಳಾರಿ, ಚಿತ್ರದುರ್ಗ ಜೈಲಿನಲ್ಲಿ ಬಂದಿಯಾಗಿದ್ದ ರೈತರು ಬಿಡುಗಡೆಯಾಗಿ ಹುಬ್ಬಳ್ಳಿಗೆ ಬಂದ ಸಂದರ್ಭದಲ್ಲಿ ನೀಡಿದ ಹೇಳಿಕೆಯ ಒಂದು ಝಲಕ್‌.

ರೈತ ಹುತಾತ್ಮ ದಿನಾಚರಣೆ ಅಂಗ­ವಾಗಿ ಮಹದಾಯಿ ನದಿ ತಿರುವು ಹಾಗೂ ಕಳಸಾ–ಬಂಡೂರಿ ನಾಲಾಗಳನ್ನು ಜೋಡಿಸ­ಬೇಕು ಎಂಬ ಏಕೈಕ ಬೇಡಿಕೆ­ಯನ್ನಿಟ್ಟುಕೊಂಡು ನರಗುಂದ­ದಲ್ಲಿ ಆರಂಭವಾದ ರೈತ ಹೋರಾಟಕ್ಕೆ ಭಾನುವಾರ (ಜುಲೈ 16) ಭರ್ತಿ ಎರಡು ವರ್ಷಗಳು ತುಂಬಲಿವೆ. ಇತ್ತೀಚಿನ ದಶಕಗಳಲ್ಲಿ ನಡೆದ ಅತಿ ದೀರ್ಘ ಅವಧಿಯ ರೈತ ಚಳವಳಿ ಎಂಬ ಅಭಿದಾನಕ್ಕೆ ಇದು ಪಾತ್ರವಾಗಿದೆ.

ಎರಡು ವರ್ಷಗಳ ಈ ದುರ್ಗಮ ಪಯಣದಲ್ಲಿ ಹಲವು ರೈತರು ಬಿಸಿಲು, ಮಳೆ, ಚಳಿ ಎನ್ನದೇ ವೇದಿಕೆಯಲ್ಲೇ ಕಾಲ ಕಳೆದಿದ್ದಾರೆ. ತಮ್ಮ ಒಡಲ ಉರಿಯನ್ನು ಸಮಾಜಕ್ಕೆ ಮುಟ್ಟಿಸಲು ಹತ್ತಾರು ಗಂಟೆ ಹುಬ್ಬಳ್ಳಿ– ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್‌ ಮಾಡಿದ್ದಾರೆ. ಪೊಲೀಸರ ಲಾಠಿ ಏಟಿಗೆ ಎದೆಯೊಡ್ಡಿದ್ದಾರೆ. ಹಲವು ದಿನಗಳ ಉಪವಾಸ ವನವಾಸದ ಬಳಿಕ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಆದಾಗ್ಯೂ, ಮತ್ತೆ ಅದೇ ಉತ್ಸಾಹದೊಂದಿಗೆ ಚಳವಳಿಯಲ್ಲಿ ಧುಮುಕಿದ್ದಾರೆ. ‘ಎರಡು ವರ್ಷವೇನು ಹತ್ತು ವರ್ಷ ಬೇಕಾದರೂ ನಡೆಯಲಿ ನಮ್ಮ ಪಾಲಿನ ನೀರನ್ನು ಪಡೆದೇ ತೀರುತ್ತೇವೆ’ ಎಂಬ ಹಕ್ಕೊತ್ತಾಯವನ್ನು ಜನಪ್ರತಿನಿಧಿಗಳ ಮುಂದೆ ಮಂಡಿಸಿದ್ದಾರೆ.

1982ರಲ್ಲಿ ರೈತರ ಹೊಲಗಳಿಗೆ ಮಲಪ್ರಭಾ ಕಾಲುವೆಯಿಂದ ನೀರು ಬರದಿದ್ದರೂ ಅಂದಿನ ಆರ್‌. ಗುಂಡೂರಾವ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನೀರಾವರಿ ತೆರಿಗೆ ವಸೂಲಿ ಮಾಡಲು ನಿರ್ಧರಿಸಿತ್ತು. ಇದರಿಂದ ಕೆರಳಿದ ರೈತರು ನರಗುಂದ– ನವಲಗುಂದದಲ್ಲಿ ನಡೆಸುತ್ತಿದ್ದ ಹೋರಾಟ ಆ ವರ್ಷದ ಜುಲೈ 21ರಂದು ಹಿಂಸಾಚಾರಕ್ಕಿಳಿಯಿತು. ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ನವಲಗುಂದ ತಾಲ್ಲೂಕು ಅಳಗವಾಡಿಯ ರೈತ ಬಸಪ್ಪ ಲಕ್ಕುಂಡಿ, ನರಗುಂದದ ಈರಪ್ಪ ಕಡ್ಲಿಕೊಪ್ಪ ಹುತಾತ್ಮರಾದರು.

ಆ ನೆನಪಿಗಾಗಿ ನರಗುಂದದಲ್ಲಿ ಸ್ಥಾಪಿಸಲಾದ ಸ್ಮಾರಕದ ಎದುರು ರೈತ ಸೇನಾ–ಕರ್ನಾಟಕ ಸಂಘಟನೆಯ ರೈತರು 2015ರ ಜುಲೈ 16ರಂದು ಪ್ರತಿಭಟನೆ ಆರಂಭಿಸಿದರು.
‘ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ಎಂಬಂತೆ ಈ ಹೋರಾಟದ ಕಿಚ್ಚು ಬಿರುಗಾಳಿಗೆ ಸಿಕ್ಕು ಸುತ್ತಮುತ್ತಲ ಪ್ರದೇಶವನ್ನು ಆವರಿಸಿಕೊಂಡ ದಾವಾನಲ­ದಂತೆ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಧಾರವಾಡಗಳಿಗೆ ವ್ಯಾಪಿಸಿತು. ರಾಷ್ಟ್ರೀಯ ಹೆದ್ದಾರಿ ತಡೆ, ರೈಲು ತಡೆ ಕರೆಗಳಿಗೆ ಲೆಕ್ಕವೇ ಇಲ್ಲದಂತಾಯ್ತು. ಈ ಒತ್ತಡಕ್ಕೆ ಮಣಿದ ಪ್ರಧಾನಿ ನರೇಂದ್ರ ಮೋದಿ ಅವರು ರೈತರು, ಜನಪ್ರತಿನಿಧಿಗಳನ್ನು ಒಳಗೊಂಡ ನಿಯೋಗವನ್ನು ಭೇಟಿ ಮಾಡಲು ನಿರ್ಧರಿಸಿದರು. ಆದರೆ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ನಾಯಕರನ್ನು ಒಪ್ಪಿಸುವಂತೆ ಹೇಳಿ ಕಳಿಸಿದರು.

ಸಭೆಯ ನಂತರ ದೆಹಲಿಯಲ್ಲಿ ಮಾಧ್ಯಮಗಳ ಎದುರು ಹೇಳಿಕೆ ನೀಡಿದ ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಪ್ರಧಾನಿ ನಮ್ಮ ರಾಜ್ಯದ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ ಎನ್ನುತ್ತಿದ್ದಂತೆಯೇ ಇಲ್ಲಿ ರೈತ ಹೋರಾಟಗಾರರ ಸಹನೆಯ ಕಟ್ಟೆ ಒಡೆದು ಹೋಯಿತು. ಇದಕ್ಕೆ ಪ್ರತಿಕ್ರಿಯೆ­ಯಾಗಿ ನವಲಗುಂದ ತಾಲ್ಲೂಕಿನ ಯಮನೂರು ಗ್ರಾಮದಲ್ಲಿ ಎರಡು ಸಾರಿಗೆ ಸಂಸ್ಥೆಯ ಬಸ್‌ಗಳು ಆಹುತಿ­ಯಾದವು. ಅದಾದ ಕೆಲವೇ ದಿನಗಳಲ್ಲಿ ರಾಜ್ಯ ಹಾಗೂ ಕೇಂದ್ರದಿಂದ ಪೂರಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ರೈತರು ಕಂಗೆಟ್ಟಿದ್ದರು.

ಪರಿಸ್ಥಿತಿಯ ದುರ್ಲಾಭ ಪಡೆದ ಕೆಲ ದುಷ್ಕರ್ಮಿಗಳು 2016ರ ಜುಲೈ 28ರಂದು ನವಲಗುಂದದ ತಾಲ್ಲೂಕು ಕಚೇರಿ, ಪುರಸಭೆ, ನೀರಾವರಿ ಕಚೇರಿ, ಬ್ಯಾಂಕ್‌ ಹಾಗೂ ಬಸ್‌ ನಿಲ್ದಾಣಗಳಿಗೆ ಬೆಂಕಿ ಇಟ್ಟರು. ಆ ಸಂದರ್ಭದಲ್ಲಿ ಮೂಕ ಪ್ರೇಕ್ಷಕರಾಗಿದ್ದ ಪೊಲೀಸರು ಕೆಲ ದಿನಗಳಲ್ಲಿ ಸಣ್ಣ ನೆಪ ಮುಂದಿಟ್ಟುಕೊಂಡು ಯಮನೂರು, ಅಳಗವಾಡಿ ಗ್ರಾಮಗಳಿಗೆ ತೆರಳಿ ಅಮಾಯಕ ರೈತರು, ಮಹಿಳೆಯರು, ವೃದ್ಧರೂ ಎನ್ನದೇ ಮನಬಂದಂತೆ ಥಳಿಸಿದರು. ಈ ಘಟನೆಗೆ ರಾಜ್ಯದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಯಿತು. ಘಟನೆ ಹಿನ್ನೆಲೆಯಲ್ಲಿ ನವಲಗುಂದ ಪೊಲೀಸ್‌ ಇನ್‌ಸ್ಪೆಕ್ಟರ್‌ ಅರುಣಕುಮಾರ್ ಹಪ್ಪಳಿ, ಪಿಎಸ್‌ಐ ಶಿವಯೋಗಿ ಲೋಹಾರ್ ಅವರನ್ನು ತಕ್ಷಣ ವರ್ಗಾವಣೆ ಮಾಡಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿತು.

ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರು ಭೇಟಿ ನೀಡಿ ಪೊಲೀಸರ ‘ಕೃತ್ಯ’ವನ್ನು ಕಣ್ಣಾರೆ ಕಂಡರು. ಹೈಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಹಿರಿಯ ಐಪಿಎಸ್‌ ಅಧಿಕಾರಿ ಕಮಲ್‌ ಪಂತ್ ಅವರೂ ಪ್ರತ್ಯೇಕವಾಗಿ ಸ್ಥಳಕ್ಕೆ ಭೇಟಿ ನೀಡಿ ಲಾಠಿ ಏಟು, ಬೂಟಿನೇಟು ತಿಂದ ಸಂತ್ರಸ್ತರಿಂದ ಮಾಹಿತಿ ಪಡೆದರು. ನಿರಾಯುಧರಾದ ಜನಗಳ ಮೇಲೆ ಮನಬಂದಂತೆ ಥಳಿಸಿದ ಪೊಲೀಸರ ಕ್ರಮವನ್ನು ಹೈಕೋರ್ಟ್‌ ಕಠಿಣ ಪದ ಬಳಸಿ ಟೀಕೆಗೆ ಗುರಿಪಡಿಸಿತು.

ನವಲಗುಂದದ ಸರ್ಕಾರಿ ಕಚೇರಿ­ಗಳನ್ನು ಹಾನಿ ಮಾಡಿದ ಆರೋಪದ ಮೇರೆಗೆ 176 ರೈತರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಬಳ್ಳಾರಿ, ಚಿತ್ರದುರ್ಗದ ಜೈಲುಗಳಿಗೆ ಅಟ್ಟಲಾ­ಯಿತು. ನವಲಗುಂದದ ಪಕ್ಷಾತೀತ ರೈತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ ಅವರ ಪುತ್ರ ಹರಿಕೃಷ್ಣ ಮೇಲೆ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಯಿತು. ಲೋಕನಾಥ ಅವರನ್ನು ಧೃತಿಗೆಡಿಸಲು ಮಾಡಿದ ಪೊಲೀಸರ ಈ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಯಿತು. ನಂತರ ಜಿಲ್ಲಾ ನ್ಯಾಯಾಲಯ ಹರಿಕೃಷ್ಣಗೆ ಜಾಮೀನು ನೀಡಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿತು.

ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತವು ನೂರಾರು ದಿನಗಳವರೆಗೆ ಹೋರಾಟಗಾರರ ಆಡುಂಬೊಲ­ವಾಗಿತ್ತು. ಹುಬ್ಬಳ್ಳಿಯಲ್ಲಿ ಹೋರಾಟದ ಕಾವು ಕಡಿಮೆಯಾಗಿದ್ದನ್ನು ಗಮನಿಸಿದ ಪೊಲೀಸರು ವೇದಿಕೆಯನ್ನು ತೆರವುಗೊಳಿಸಿದರು. ಆದಾಗ್ಯೂ, ನವಲಗುಂದ ಹಾಗೂ ನರಗುಂದದ ವೇದಿಕೆಯಲ್ಲಿ ನಿತ್ಯ ಧರಣಿ, ಸತ್ಯಾಗ್ರಹಗಳು ದೇದೀಪ್ಯಮಾನ ಜ್ವಾಲೆಯಂತೆ ಉರಿಯುತ್ತಲೇ ಇವೆ.

ಏನಿದು ಮಹದಾಯಿ ವಿವಾದ?
ಮಹದಾಯಿ ನದಿಯ ಒಟ್ಟು ಉದ್ದ 115 ಕಿ.ಮೀ. ಇದ್ದು, ಮಹಾರಾಷ್ಟ್ರ, ಕರ್ನಾಟಕದಲ್ಲಿ ಹರಿದು ಗೋವಾ ಮೂಲಕ ಸಮುದ್ರ ಸೇರುತ್ತದೆ. ಗೋವಾದಲ್ಲಿ ಮಹದಾಯಿ ನದಿಗೆ ಮಾಂಡೋವಿ ಎಂದು ಕರೆಯುತ್ತಾರೆ. ಗೋವಾದಲ್ಲಿ 1580 ಚ.ಕಿ.ಮೀ. ಜಲಾನಯನ ಪ್ರದೇಶವನ್ನು ಹೊಂದಿರುವ ಈ ನದಿಯು ಕರ್ನಾಟಕದಲ್ಲಿ 375 ಚ.ಕಿ.ಮೀ. ಹಾಗೂ ಮಹಾರಾಷ್ಟ್ರದಲ್ಲಿ 77 ಚ.ಕಿ.ಮೀ. ಜಲಾನಯನ ಪ್ರದೇಶ ಹೊಂದಿದೆ.

ಕರ್ನಾಟಕದಲ್ಲಿ 52.60 ಟಿಎಂಸಿ ಅಡಿ, ಮಹಾರಾಷ್ಟ್ರದಲ್ಲಿ 8.33 ಟಿಎಂಸಿ ಅಡಿ ಹಾಗೂ ಗೋವಾದಲ್ಲಿ 159.07 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ. ಕುಡಿಯುವ ನೀರಿನ ಯೋಜನೆಗಾಗಿ ಒಟ್ಟು 7.56 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಬಹುದಾಗಿದ್ದು, ನದಿಯ ನಾಲೆಗಳಾದ ಕಳಸಾದಿಂದ 3.56 ಟಿಎಂಸಿ ಅಡಿ ಮತ್ತು ಬಂಡೂರಿಯಿಂದ 4 ಟಿಎಂಸಿ ಅಡಿ ನೀರು ಪಡೆಯಬಹುದು. 2006ರಲ್ಲಿ ಕಳಸಾ ಬಂಡೂರಿ ನಾಲಾ ಯೋಜನೆ ಆರಂಭವಾಗಿದ್ದು, ವಿವಾದ ಮಹದಾಯಿ ನ್ಯಾಯಮಂಡಳಿ ಎದುರು ಇರುವುದರಿಂದ ನಾಲೆಗಳ ನೀರು ಮಲಪ್ರಭೆಯನ್ನು ಸೇರಿಕೊಳ್ಳದಂತೆ ತಡೆಗೋಡೆ ನಿರ್ಮಿಸಲಾಗಿದೆ. ಗೋವಾ ನಡೆ ವಿರೋಧಿಸಿ, ಮಹದಾಯಿ ನದಿಯಿಂದ ನಮ್ಮ ಪಾಲಿನ ನೀರನ್ನು ಪಡೆಯಲೇಬೇಕು ಎಂಬ ಉದ್ದೇಶದಿಂದ ಈ ಹೋರಾಟ ಆರಂಭವಾಗಿದೆ. ಪ್ರತಿಫಲಕ್ಕೆ ರೈತರು  ಕಾಯುತ್ತಿದ್ದಾರೆ.

‘ಕಾಂಗ್ರೆಸ್‌ ನಾಯಕರಿಗೂ ಪತ್ರ ಬರೆಯಲಿ’
ಕಳಸಾ–ಬಂಡೂರಿ ನಾಲಾ ಜೋಡಣೆ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಪತ್ರ ಬರೆದಿದ್ದಾರೆ. ಆದರೆ, ಅದರ ಜೊತೆಗೇ ಪ್ರಧಾನಿ ಮೋದಿ ಅವರು ಆಯಾ ರಾಜ್ಯಗಳ ವಿರೋಧ ಪಕ್ಷದ ನಾಯಕರನ್ನೂ ಒಪ್ಪಿಸುವಂತೆ ಸೂಚಿಸಿದ್ದರು. ಹೀಗಾಗಿ, ಎರಡೂ ರಾಜ್ಯಗಳ ವಿರೋಧ ಪಕ್ಷದ ನಾಯ­ಕರಿಗೆ ಪತ್ರ ಬರೆಯಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಸಲಹೆ ನೀಡಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು, ‘ಈ ವಿವಾದ ಬಗೆಹರಿಸುವಲ್ಲಿ ಯಾರೂ ರಾಜಕೀಯ ಮಾಡಬಾರದು. ಆದರೆ, ಕಾಂಗ್ರೆಸ್‌್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗೋವಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಹದಾಯಿ ನದಿಯಿಂದ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಕೊಡುವುದಿಲ್ಲ ಎಂದಿದ್ದರು. ಹೀಗಾಗಿ, ಕಾಂಗ್ರೆಸ್‌್ ನಾಯಕರ ನಿಲುವು ಮುಖ್ಯವಾಗಿದೆ’ ಎಂದರು.

‘ಪ್ರಧಾನಿ ಮಧ್ಯಸ್ಥಿಕೆಯೊಂದೇ ಪರಿಹಾರ’
ಅಂತರರಾಜ್ಯ ನದಿ ವಿವಾದಗಳನ್ನು ನ್ಯಾಯಮಂಡಳಿಯ ಆಚೆ ಬಗೆಹರಿಸುವ ಪರಮಾಧಿಕಾರ ಇರುವುದು ಪ್ರಧಾನಿಗೆ. ಇಂದಿರಾಗಾಂಧಿ, ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಎಚ್‌.ಡಿ. ದೇವೇಗೌಡ ಅವರು ಇಂತಹ ವಿವಾದಗಳನ್ನು ಬಗೆಹರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ರಾಜಕೀಯ ಮಾಡದೇ ಮಹದಾಯಿ ವಿವಾದವನ್ನೂ ಬಗೆಹರಿಸುವ ಇಚ್ಛಾಶಕ್ತಿ ಪ್ರದರ್ಶಿಸಬೇಕು’ ಎಂದು ಚಳವಳಿಯ ಮುಂಚೂಣಿಯಲ್ಲಿರುವ ಶಾಸಕ ಎನ್‌.ಎಚ್‌. ಕೋನರಡ್ಡಿ ಆಗ್ರಹಿಸಿದರು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಮಹದಾಯಿ ನ್ಯಾಯಮಂಡಳಿಯ ಮುಖ್ಯಸ್ಥರಾದ ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್‌ ಅವರು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಮೂರೂ ರಾಜ್ಯಗಳಿಗೆ ಹೇಳಿದ್ದಾರೆ. ಇದು ಸಾಧ್ಯವಾಗುವುದು ಪ್ರಧಾನಿ ಮಧ್ಯಸ್ಥಿಕೆಯಿಂದ ಮಾತ್ರ. ಹಾಗಾಗಿ, ಬಿಜೆಪಿ ನಾಯಕರು ನೆಪ ಹೇಳುವುದು ಬಿಟ್ಟು ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT