ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಭಿಡೆ ನಡೆಯ ತಾಪ್ಸಿ

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ಅಧ್ಯಾಯದ ಹೆಸರು ‘ಹ್ಯೂಮನ್ಸ್ ಆಫ್ ಬಾಂಬೆ’. ಬರೆದವರು: ತಾಪಸಿ ಪನ್ನು. ವೃತ್ತಿ: ಚಲನಚಿತ್ರ ಅಭಿನಯ. ಪೂರ್ವಾಶ್ರಮ: ಮಾಡೆಲಿಂಗ್. ಅಧ್ಯಾಯ ಪ್ರಕಟವಾದ ವೇದಿಕೆ: ಫೇಸ್ ಬುಕ್.

ಮುಂಬೈಗೆ ನಟಿಯಾಗಿ ಕಾಲಿಟ್ಟ ಮೇಲೆ ಅನುಭವಿಸಿದ ಸಮಸ್ಯೆಗಳನ್ನಷ್ಟೇ ತಾಪಸಿ ಆ ವೆಬ್ ಪುಟದಲ್ಲಿ ಬರೆದುಕೊಳ್ಳಲಿಲ್ಲ. ಚಿತ್ರರಂಗದಲ್ಲಿನ ಮೌಢ್ಯ, ಅನುಕೂಲಸಿಂಧುಗಳು, ನಟಿಯರಿಗೆ ಸಂಭಾವನೆ ಕೊಡುವಲ್ಲಿನ ತಾರತಮ್ಯ ಎಲ್ಲವನ್ನೂ ಸೂಕ್ಷ್ಮವಾಗಿಯೂ ಸಂಕ್ಷಿಪ್ತವಾಗಿಯೂ ಬರೆದರು.

ತಾಪಸಿ ಅರ್ಥಾತ್ ತಾಪ್ಸಿ (ಆಪ್ತೇಷ್ಟರು ಹೀಗೆಯೇ ಕರೆಯುವುದು) ಕಂಪ್ಯೂಟರ್ ಸೈನ್ಸ್ ಓದಿಕೊಂಡು ಹಾಯಾಗಿದ್ದವರು. ದೆಹಲಿಯ ಗುರು ತೇಘ್ ಬಹಾದುರ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ ಮೇಲೆ ಎಂಬಿಎ ಓದಬೇಕು ಎಂದುಕೊಂಡಿದ್ದರು. ಜಾಟ್ ಸಿಖ್ ಕುಟುಂಬದ ಹೆಣ್ಣುಮಗಳಾದರೂ ಒಂದಿಷ್ಟು ಪಾಕೆಟ್ ಮನಿ ಗಳಿಸಬಹುದು ಎಂದು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು.

ಬೆಕ್ಕಿನ ನಡಿಗೆಯ ಏಕತಾನತೆಯಿಂದ ರೋಸಿಹೋದರು. ಅಷ್ಟರಲ್ಲಿ ಚಾನೆಲ್ ‘ವಿ’ಯ ‘ಗೆಟ್ ಗಾರ್ಜಿಯಸ್’ ಕಾರ್ಯಕ್ರಮ ಆಹ್ವಾನವಿತ್ತಿತು. ಎಂಬಿಎ ಕನಸನ್ನು ಮರೆತು ತಾಪಸಿ ಪರದೆಯ ಮಾಯಾಲೋಕಕ್ಕೆ ಒಡ್ಡಿಕೊಂಡರು. ಆಗ ಕೆ. ರಾಘವೇಂದ್ರ ರಾವ್ ತಮ್ಮ ನಿರ್ದೇಶನದ ತೆಲುಗು ಚಿತ್ರ 'ಜುಮ್ಮಂದಿ ನಾದಂ'ನಲ್ಲಿ ಅವಕಾಶ ಕೊಟ್ಟರು.

ಶ್ರೀದೇವಿ, ಜಯಸುಧಾ ತರಹದ ನಟಿಯರನ್ನು ಪರಿಚಯಿಸಿದ್ದ ರಾಘವೇಂದ್ರ ರಾವ್ ಅವರ 105ನೇ ಚಿತ್ರದ ನಾಯಕಿ ತಾನು ಎನ್ನುವುದು ತಾಪಸಿಗೆ ಮೊದಲು ರೋಚಕ ಅನುಭವವೇ ಆಗಿತ್ತು. ಆದರೆ, ಸಿನಿಮಾ ಬಿಡುಗಡೆಯಾದ ಮೇಲೆ ಬಂಧು-ಮಿತ್ರರನ್ನು ಕರೆದುಕೊಂಡು ಹೋಗಿ, ‘ನನ್ನನ್ನು ನೋಡಿ ನಗಬೇಡಿ...ಪ್ಲೀಸ್’ ಎಂದು ನಿರೀಕ್ಷಣಾ ಜಾಮೀನು ಪಡೆದುಕೊಂಡವರಂತೆ ಮಾತಾಡಿದರು.

ನಾಯಕಿಯರ ಹೊಕ್ಕುಳ ಮೇಲೆ ಹಣ್ಣು ಸುರಿಯುವುದಕ್ಕೆ ರಾಘವೇಂದ್ರ ರಾವ್ ಹೆಸರುವಾಸಿ. ತಾಪಸಿಯ ಹೊಟ್ಟೆ ಮೇಲೆ ಅವರು ತೆಂಗಿನಕಾಯಿ ಹೋಳನ್ನೇ ಇಟ್ಟಿದ್ದರು! ಅದಕ್ಕೇ ಹೊಸ ನಟಿ ಬಂಧು-ಮಿತ್ರರ ಎದುರು ಮುಜುಗರ ಪಟ್ಟಿದ್ದು.

ಇದೇ ದೃಶ್ಯವನ್ನು ವ್ಯಂಗ್ಯವಾಗಿ ವಿವರಿಸಿ, ಅವರು ಯೂಟ್ಯೂಬ್ ನಲ್ಲಿ ವಿಡಿಯೊ ಒಂದನ್ನು ಅಪ್ ಲೋಡ್ ಮಾಡಿದರು. ಆಗ ತೆಲುಗು ಸಿನಿಮಾ ಅಭಿಮಾನಿಗಳೆಲ್ಲ ಜಾಡಿಸಿದರು. ‘ಇಷ್ಟವಿಲ್ಲದಿದ್ದರೆ ಮೊದಲೇ ಅಭಿನಯಿಸುವುದಿಲ್ಲ ಎಂದು ಹೇಳಬೇಕಿತ್ತು’ ಎಂದೆಲ್ಲ ಟೀಕಿಸಿದರು. ತಾಪಸಿ ಸುಮ್ಮನೆ ನಕ್ಕರು.

ತೆಲುಗು ಚಿತ್ರರಂಗದಲ್ಲಿ ಅವರು ಅಭಿನಯಿಸಿದ ಮೊದಲ ಮೂರು ಚಿತ್ರಗಳು ತೋಪಾದವು. ಅದಕ್ಕೇ 'ಐರನ್ ಲೆಗ್' ಎಂಬ ಹಣೆಪಟ್ಟಿ ಅಂಟಿಕೊಂಡಿತು. 'ಸ್ಟಾರ್ ನಟರಿದ್ದೂ ಸಿನಿಮಾಗಳು ಸೋತವು. ಆದರೂ ಅವರೆಲ್ಲ ಅದೃಷ್ಟವಂತರಾಗಿಯೇ ಉಳಿದರು. ನಾನು ಕಂಟಕ ತರುವ ನಟಿಯಾಗಿಬಿಟ್ಟೆ. ನಮ್ಮ ಸಮಾಜ ಎಲ್ಲಿದೆ ಎಂದು ಆಗ ಪದೇ ಪದೇ ಯೋಚಿಸಿ ನಾನು ಖಿನ್ನಳಾದೆ' ಎಂದು ‘ಹ್ಯೂಮನ್ಸ್ ಆಫ್ ಬಾಂಬೆ’ ಅಧ್ಯಾಯದಲ್ಲಿ ಬರೆದಾಗ ಅನೇಕರು ಈ ನಟಿಯನ್ನು ಬೆರಗುಗಣ್ಣಿನಿಂದ ನೋಡಿದರು.

ಅಂಥ ಹಣೆಪಟ್ಟಿ ಅಂಟಿಕೊಂಡಿದ್ದರಿಂದಲೇ ಮುಂಗಡ ಹಣ ಕೊಟ್ಟು, ಕಾಲ್ ಷೀಟ್ ಪಡೆದಿದ್ದ ಕೆಲವು ನಿರ್ಮಾಪಕರು ಸಿನಿಮಾದಿಂದ ಈ ನಟಿಯನ್ನು ಹೊರಹಾಕಿದ್ದೂ ಇದೆ. ಯಾವುದೂ ಅಂದುಕೊಂಡಂತೆ ಆಗದೇ ಇದ್ದಾಗ ತಾಪಸಿಗೆ ಚಿತ್ರರಂಗದ ಸಹವಾಸವೇ ಸಾಕು ಅಂತಲೂ ಅನ್ನಿಸಿತು. ಆದರೆ ನಟಿಯಾಗಿ ಛಾಪುಮೂಡಿಸಲೇಬೇಕು ಎಂಬ ಹಟ ಮಾತ್ರ ಹೋಗಲಿಲ್ಲ. ಮತ್ತೆ ಪುಟಿದೇಳಲು ಕಾರಣವಾದುದೇ ಅದು.

‘ಬೇಬಿ’ ಹಾಗೂ ‘ಪಿಂಕ್’ ಹಿಂದಿ ಚಿತ್ರಗಳ ಅವಕಾಶ ಕಳೆದುಹೋಗಿದ್ದ ಆತ್ಮವಿಶ್ವಾಸವನ್ನು ಸ್ವಲ್ಪ ಮಟ್ಟಿಗೆ ಮರಳಿ ಕೊಟ್ಟಿತು. ‘ನಾಮ್ ಶಬಾನಾ’ ಭರವಸೆಯ ಸ್ಫೂರ್ತಿ ದಕ್ಕಿಸಿಕೊಟ್ಟ ಹಿಂದಿ ಚಿತ್ರ.

ನಿರ್ಭಿಡೆಯಿಂದ ಟೀಕಿಸುವ ತಾಪಸಿ ತಾನು ರೂಪವತಿಯೇನೂ ಅಲ್ಲ ಎಂದು ಆತ್ಮವಿಮರ್ಶೆಯನ್ನೂ ಮಾಡಿಕೊಳ್ಳಬಲ್ಲರು. ಅವರು ಬರೆಯಬೇಕಿರುವ ಯಶೋ ಅಧ್ಯಾಯಗಳು ಇನ್ನೂ ಬಾಕಿ ಇವೆ ಎನಿಸಲು ಇವಿಷ್ಟು ಉದಾಹರಣೆಗಳು ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT