ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಣದ ಅಶೋಕನ ಶಾಸನ ಸ್ಥಳ

Last Updated 16 ಜುಲೈ 2017, 10:59 IST
ಅಕ್ಷರ ಗಾತ್ರ

ಮಸ್ಕಿ: ಮೌರ್ಯ ಚಕ್ರವರ್ತಿ ಅಶೋಕನನ್ನು ‘ದೇವನಾಂಪ್ರಿಯ ಅಶೋಕ’ ಎಂದು ಗುರುತಿಸಿದ ಏಕೈಕ ಶಿಲಾ ಶಾಸನ ಮಸ್ಕಿಯಲ್ಲಿ ಪತ್ತೆಯಾಗಿ ನೂರು ವರ್ಷಗಳಾಗಿವೆ. ಆದರೆ, ಪ್ರಾಚ್ಯವಸ್ತು ಹಾಗೂ ಪ್ರವಾಸೋದ್ಯಮ ಇಲಾಖೆಗಳು ಶಾಸಕ ದೊರೆತ ಸ್ಥಳದ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ವಹಿಸಿವೆ. ಅಲ್ಲದೆ, ಶಾಸಕ ಸಿಕ್ಕು ನೂರು ವರ್ಷ ಪೂರೈಸಿದ ಅಂಗವಾಗಿ  ಶತಮಾ ನೋತ್ಸವ ಆಚರಣೆಯನ್ನೂ ಮಾಡಿಲ್ಲ.

ಅಶೋಕ ಪಾಟಲಿಪುತ್ರ (ಈಗಿನ ಪಟ್ನಾ) ದಿಂದ ತನ್ನ ರಾಜ್ಯವನ್ನು ವಿಸ್ತರಿಸುವ ಸಲುವಾಗಿ ದಂಡಯಾತ್ರೆ ಕೈಗೊಂಡಿದ್ದ ಸಂದರ್ಭದಲ್ಲಿ ಮಸ್ಕಿ ಆತನ ವಿಶ್ರಾಂತಿ ಸ್ಥಳವಾಗಿತ್ತು ಎಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ. ಕಳಿಂಗ ದೇಶದೊಂದಿಗೆ ನಡೆದ ಯುದ್ಧದ ಸಂದರ್ಭದಲ್ಲಿ ಉಂಟಾದ  ಸಾವು, ನೋವುಗಳನ್ನು ಕಂಡು ಅಶೋಕನಲ್ಲಿ ಮನಪರಿವರ್ತನೆ ಆಗು ತ್ತದೆ. ಆಗ ಅಶೋಕ  ಬೌದ್ಧ ಧರ್ಮವನ್ನು ಸ್ವೀಕರಿಸಿ ಶಾಂತಿಯಾತ್ರೆ ಆರಂಭಿಸುತ್ತಾನೆ.

ಯಾತ್ರೆ ಸಂದರ್ಭದಲ್ಲಿ ವಿಶ್ರಾಂತಿ ಗಾಗಿ ತಂಗುವ ಸ್ಥಳಗಳಲ್ಲಿ ಕಲ್ಲು ಬಂಡೆಗಳ ಮೇಲೆ ಬ್ರಾಹ್ಮಿ ಲಿಪಿಯಲ್ಲಿ ಶಾಂತಿ ಸಂದೇಶ ಸಾರುವ ಘೋಷಣೆಗಳನ್ನು ಬರೆಸಿದ್ದಾನೆ.
‘ದೇಶದ ವಿವಿಧ ಕಡೆ ಪತ್ತೆಯಾದ ಅಶೋಕನ ಶಾಸನಗಳಲ್ಲಿ ಎರಡು ಶಾಸನಗಳು ಮಾತ್ರ ಅಶೋಕ ಹೆಸರನ್ನು ಉಲ್ಲೇಖಿಸುತ್ತಿವೆ. ಅದರಲ್ಲಿ 1915 ದೊರೆತ ಮಸ್ಕಿಯ ಶಾಸನದಲ್ಲಿ ಅಶೋಕ  ದೇವರಿಗೆ ಪ್ರಿಯನಾದ ವ್ಯಕ್ತಿ ಎಂದು ಉಲ್ಲೇಖಿಸಲಾಗಿದೆ. ಇದರಿಂದ ಈ  ಶಾಸನ ಮಹತ್ವ ಪಡೆದುಕೊಂಡಿದೆ’ ಎಂದು ಇತಿಹಾಸ ಸಂಶೋಧಕ ಡಾ. ಚನ್ನಬಸಯ್ಯ ಹಿರೇಮಠ ಹೇಳುತ್ತಾರೆ.

‘ಅಶೋಕನ ಕಾಲದಲ್ಲಿ ಬಳಸಲಾಗುತ್ತಿತ್ತು ಎನ್ನಲಾದ ಆಯುಧ ಹಾಗೂ ಇನ್ನಿತರ ಕೆಲವು ವಸ್ತುಗಳು ಶಾಸನ ಸ್ಥಳದಲ್ಲಿ ಇವೆ. ಅಲ್ಲದೆ ಇನ್ನೂ ಹಲವು ವಸ್ತುಗಳು ಹೈದರಾಬಾದ್‌, ಬೀದರ್‌ನ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಯುವ ಸಂಶೋಧಕರಿಗೆ ಸಂಶೋಧನಾ ಕೇಂದ್ರವಾದ ಇಲ್ಲಿಯ ಶಾಸನ ಸ್ಥಳಕ್ಕೆ ಇಂದಿಗೂ ದೇಶ, ವಿದೇಶಗಳಿಂದ ಸಂಶೋಧನೆಗಾಗಿ ವಿದ್ಯಾರ್ಥಿಗಳು ಬರುತ್ತಾರೆ’ ಎಂದರು.

ಅಭಿವೃದ್ಧಿ ನಿರ್ಲಕ್ಷ್ಯ:  ಪ್ರಾಚ್ಯವಸ್ತು ಹಾಗೂ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದಿಂದಾಗಿ  ಶಾಸನ ಸಿಕ್ಕ ಸ್ಥಳದ ಅಭಿವೃದ್ಧಿಯಾಗಿಲ್ಲ. ಐದು ವರ್ಷಗಳ ಹಿಂದೆಯೇ ಸರ್ಕಾರ ಪ್ರವಾಸೋದ್ಯಮ ಇಲಾಖೆಗೆ ₹ 50 ಲಕ್ಷ ಅನುದಾನ ನೀಡಿದ್ದರೂ ಇದುವರೆಗೂ ಅಲ್ಲಿ ಅಭಿವೃದ್ದಿ ಕೆಲಸಗಳು ನಡೆದಿಲ್ಲ.  ಶಾಸನ ಸ್ಥಳದಲ್ಲಿ ಶೌಚಾಲಯ ಹಾಗೂ ವಸ್ತು ಸಂಗ್ರಹಾಲಯ ಕಟ್ಟಿದ್ದು ಬಿಟ್ಟರೆ ಬೇರೆ ಯಾವ ಅಭಿವೃದ್ಧಿಯೂ ಇಲಾಖೆಯಿಂದ ಆಗಿಲ್ಲ.

‘ಪ್ರಾಚ್ಯವಸ್ತು ಹಾಗೂ ಪ್ರವಾ ಸೋದ್ಯಮ ಇಲಾಖೆಯ ನಡುವೆ ಸಮ ನ್ವಯ ಇಲ್ಲದ ಕಾರಣ ಶಾಸನ ಸ್ಥಳ ಅಭಿವೃದ್ಧಿಯಿಂದ ವಂಚಿತಗೊಂಡಿದೆ’ ಎಂದು ಶಾಸನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸನಗೌಡ ಪೊಲೀಸ ಪಾಟೀಲ ಆರೋಪಿಸಿದ್ದಾರೆ. ಶಾಸನ ಪತ್ತೆಯಾಗಿ ನೂರು ವರ್ಷ ಆದ  ನೆನಪಿಗಾಗಿ ಜಿಲ್ಲಾಡಳಿತ ಶಾಸನ ಶತಮಾನೋತ್ಸವ  ನಡೆಸಬೇಕಾಗಿತ್ತು. ಜಿಲ್ಲಾಡಳಿತ ಇಲ್ಲಿಯ ಶಾಸನದ ಬಗ್ಗೆ ನಿರ್ಲಕ್ಷ್ಯ ತಾಳಿದೆ ಎಂದು ಸಾರ್ವಜನಿಕರು ದೂರುತ್ತಾರೆ. 

ಅಶೋಕ ಸ್ತಂಭ ನಿರ್ಮಾಣ: ಇಲ್ಲಿನ ಅಶೋಕ ವೃತ್ತದಲ್ಲಿ ಶಾಸಕ ಪ್ರತಾಪಗೌಡ ಪಾಟೀಲ ಹಾಗೂ ಪುರಸಭೆ ಆಡಳಿತ ಮಂಡಳಿ ನೆರವಿನಿಂದ ಏಕಶೀಲೆಯಲ್ಲಿ ಅಶೋಕ ಸ್ತಂಭ ಪ್ರತಿಷ್ಠಾಪನೆ ಮಾಡ ಲಾಗುವುದು ಎಂದು  ಬಸನಗೌಡ ಪೊಲೀಸ ಪಾಟೀಲ ತಿಳಿಸಿದ್ದಾರೆ.

* * 

ಶಾಸನ ಸ್ಥಳ  ಅಭಿವೃದ್ಧಿ ಪಡಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯಲಾಗಿದೆ. ಇದಕ್ಕೆ ಸಚಿವರು ಸ್ಪಂದಿಸಿದ್ದು, ಶೀಘ್ರ ನೀಲನಕ್ಷೆ ಸಿದ್ಧಪಡಿಸುವ  ಭರವಸೆ ನೀಡಿದ್ದಾರೆ
ಪ್ರತಾಪಗೌಡ ಪಾಟೀಲ, ಶಾಸಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT