ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ನಾಯಕ ಆಡಿಸಿದ ಆಟ

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ಭಾರತೀಯ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ನಡೆದ ಆಯ್ಕೆ ಪ್ರಕ್ರಿಯೆ ಕುರಿತು ಒಂದು ಸಿನಿಮಾ ಮಾಡಿದರೆ ಹೇಗಿರುತ್ತದೆ? ಹಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ಅಲ್ಫ್ರೆಡ್‌ ಹಿಚ್‌ಕಾಕ್‌ ಅವರ ಸಸ್ಪೆನ್ಸ್‌ ಚಿತ್ರದ ಕ್ಲೈಮಾಕ್ಸ್‌ನಲ್ಲಿ ಚಾರ್ಲಿ ಚಾಪ್ಲಿನ್‌ ಅವರ ಮೋಜಿನ ಪ್ರಸಂಗವನ್ನು ಸೇರಿಸಿದಂತೆ ಅದು ಗೋಚರಿಸುತ್ತದೆ!

ಕೋಚ್‌ ಹುದ್ದೆಗಾಗಿ ನಿರ್ದಿಷ್ಟ ವ್ಯಕ್ತಿಗೆ ಅವಕಾಶ ಕಲ್ಪಿಸಿಕೊಡಲು ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸುವುದು, ಐವರು ಅರ್ಹರ ಅಂತಿಮ ಪಟ್ಟಿ ತಯಾರಿಸಿ ಸಂದರ್ಶನದ ಶಾಸ್ತ್ರ ಮುಗಿಸುವುದು, ಆಯ್ಕೆ ಪ್ರಕ್ರಿಯೆ ಪೂರೈಸಿದ ಬಳಿಕವೂ ತಂಡದ ನಾಯಕನ ಅಭಿಪ್ರಾಯ ಕೇಳುವ ನೆಪದಲ್ಲಿ ನೇಮಕದ ನಿರ್ಧಾರವನ್ನೇ ತಡೆ ಹಿಡಿಯುವುದು, ಹೊಸ ಕೋಚ್‌ ಹೆಸರು ಮಾಧ್ಯಮಗಳಿಗೆ ಹೇಗೋ ಸೋರಿಕೆ ಆಗುವುದು, ಈ ಸುದ್ದಿಯನ್ನು ಸಂಜೆ ಅಲ್ಲಗಳೆವ ಬಿಸಿಸಿಐ ಅಧಿಕಾರಿಯೇ ರಾತ್ರಿ ಪುನಃ ಲಾಗಹಾಕಿ ‘ಆ ನೇಮಕ ನಿಜ’ ಎಂದು ದೃಢಪಡಿಸುವುದು... ಅಬ್ಬಬ್ಬಾ, ನಾಟಕದಲ್ಲಿ ಎಷ್ಟೊಂದು ತಿರುವುಗಳು!

ಎಂತಹ ದೊಡ್ಡ ನಾಟಕವೂ ರಾತ್ರಿ ಬೆಳಗಾಗುವಷ್ಟರಲ್ಲಿ ಮುಗಿದುಹೋಗುತ್ತದೆ. ಆದರೆ, ಈ ಪ್ರಹಸನ ನಡೆದದ್ದು ಎರಡು ದಿನಗಳವರೆಗೆ. ಕೊನೆಗೂ ತಂಡದ ಮುಖ್ಯ ಕೋಚ್‌ ಆಗಿ ರವಿಶಂಕರ್‌ ಜಯದ್ರಥ್‌ ಶಾಸ್ತ್ರಿ (ರವಿ ಶಾಸ್ತ್ರಿ) ಅವರನ್ನು ನೇಮಕ ಮಾಡಿದ ಮಾಹಿತಿ ಎರಡನೇ ದಿನದ ರಾತ್ರಿ 10.58ಕ್ಕೆ ಅಧಿಕೃತವಾಗಿ ಹೊರಬಿದ್ದು, ನಾಟಕಕ್ಕೆ ತೆರೆಬೀಳುತ್ತದೆ.

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಜನ್ಮಸ್ಥಳ ಎನಿಸಿರುವ ದೆಹಲಿಯ ರೋಷನಾರಾ ಕ್ಲಬ್‌ನ ಆ ಪುಟ್ಟ ಅಗ್ಗಿಸ್ಟಿಕೆಯ ಪೆವಿಲಿಯನ್‌ ಆಗ (ಹೆಚ್ಚು–ಕಡಿಮೆ ನೂರು ವರ್ಷಗಳ ಹಿಂದೆ) ಹೇಗಿತ್ತೋ ಈಗಲೂ ಹಾಗೇ ಇದೆ. ಆದರೆ, ದೇಶದ ಕ್ರಿಕೆಟ್‌ ವ್ಯವಸ್ಥೆಯೊಳಗೆ ಈ ಅವಧಿಯಲ್ಲಿ ಅದೆಷ್ಟೊಂದು ಪರಿವರ್ತನೆ ಆಗಿಬಿಟ್ಟಿದೆಯಲ್ಲ.

ಲಾರ್ಡ್ಸ್‌ನಲ್ಲಿ ಮೊದಲ ಟೆಸ್ಟ್‌ ಆಡಿದಾಗ (1932) ಅಥವಾ ಅದೇ ಲಾರ್ಡ್ಸ್‌ನ ಬಾಲ್ಕನಿಯಲ್ಲಿ ನಿಂತು ಕಪಿಲ್‌ ದೇವ್‌ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿದಾಗ (1983) ತಂಡದಲ್ಲಿ ಕೋಚ್‌ ಎನ್ನುವ ಹುದ್ದೆಯೇ ಇರಲಿಲ್ಲ. ನಾಯಕ ಸೇರಿದಂತೆ ತಂಡದಲ್ಲಿದ್ದ ಹಿರಿಯ ಆಟಗಾರರೇ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಆಟ ವೃತ್ತಿಪರವಾಗಿ ಬೆಳೆಯುತ್ತಾ ಬಂದಂತೆ, ಅದರಲ್ಲಿ ಹಣದ ಹೊಳೆ ಹರಿಯುತ್ತಾ ಹೋದಂತೆ ಕೋಚ್‌ಗಳು ತಂಡದ ಅವಿಭಾಜ್ಯ ಅಂಗವಾಗಿಬಿಟ್ಟರು. ಅವರೊಂದಿಗೆ ಬ್ಯಾಟಿಂಗ್‌ ಕೋಚ್‌, ಬೌಲಿಂಗ್‌ ಕೋಚ್‌, ಫಿಸಿಯೊ, ವೀಡಿಯೊ ಆ್ಯನಲಿಸ್ಟ್‌ ಎಂದೆಲ್ಲಾ ಆಟಗಾರರ ಸಂಖ್ಯೆಯಷ್ಟೇ ಸಹಾಯಕ ಸಿಬ್ಬಂದಿ ಬೇರೆ.

ಬಿಷನ್‌ ಸಿಂಗ್‌ ಬೇಡಿ ಅವರಿಂದ ಕುಂಬ್ಳೆವರೆಗೆ ಘಟಾನುಘಟಿಗಳನ್ನೇ ಭಾರತೀಯ ಕ್ರಿಕೆಟ್‌ ತಂಡ ಕೋಚ್‌ಗಳನ್ನಾಗಿ ಪಡೆದಿದೆ. ಗಂಭೀರ ವ್ಯಕ್ತಿತ್ವದ, ಪಟ್ಟು ಸಡಿಲಿಸದ, ಕಠಿಣ ಪರಿಶ್ರಮ ಹಾಕಿಸದೇ ಬಿಡದ ಕುಂಬ್ಳೆ ಅವರ ಬಗೆಗೆ ತಂಡದಲ್ಲಿದ್ದ ಅಸಮಾಧಾನವೇ ನಾಯಕ ಕೊಹ್ಲಿ ಅವರಿಗೆ, ತಮಗಿಷ್ಟವಿಲ್ಲದ ಆ ಕೋಚ್‌ನನ್ನು ದೂರ ಸರಿಸುವ ಹಾದಿಯನ್ನು ಸುಲಭಗೊಳಿಸಿದ್ದು. ಮಾಂತ್ರಿಕ ಲೆಗ್‌ ಸ್ಪಿನ್ನರ್‌ ಎನಿಸಿದ ಕುಂಬ್ಳೆ ಪ್ರತಿಪಾದಿಸಿದ್ದ ವಿವಿಧ ಹಂತದ ಸುಧಾರಣೆಗಳು, ವೇತನ ಹಾಗೂ ಸಂಭಾವನೆ ಹಂಚಿಕೆ ವಿಧಾನದಲ್ಲಿ ಬಯಸಿದ್ದ ಬದಲಾವಣೆಗಳು ಅವರಿಗೇ ಗೂಗ್ಲಿಯಾಗಿ ಕಾಡಿದವು.

ಕ್ರಿಕೆಟ್‌ ರಾಜಕೀಯದ ಒಳಸುಳಿಗಳೇ ಹಾಗೆ. ಯಾವ ಸುಳಿ, ಎಲ್ಲಿ, ಹೇಗೆ ತಿರುಗಿಸಿ ಒಗೆಯುವುದೋ ಗೊತ್ತೇ ಆಗುವುದಿಲ್ಲ. ಆದರೆ, ಮೇಲ್ನೋಟಕ್ಕೆ ಮಾತ್ರ ಪ್ರಶಾಂತವಾಗಿ ಹರಿಯುತ್ತಿರುವಂತೆ ಭಾಸವಾಗುತ್ತದೆ. ಅಂತಹ ಒಳಸುಳಿಗಳ ಆಳದಲ್ಲಿ ಸಿಕ್ಕಿ ಹಾಕಿಕೊಳ್ಳದಂತೆ ಎಚ್ಚರ ವಹಿಸಿದ ಕುಂಬ್ಳೆ, ಕ್ರಿಕೆಟ್‌ ಮಂಡಳಿಗೆ ನೇರವಾಗಿ ರಾಜೀನಾಮೆ ಕಳುಹಿಸಿ, ಹೊಣೆಯಿಂದ ಕಳಚಿಕೊಂಡರು.

ಕುಂಬ್ಳೆ ನಿರ್ಗಮನದ ಬಳಿಕ ಬಿಸಿಸಿಐ ಹೊಸ ಕೋಚ್‌ನ ಹುಡುಕಾಟ ಆರಂಭಿಸಿದಾಗ ಕೊಹ್ಲಿ ತಮ್ಮ ದಾಳ ಉರುಳಿಸಿದರು. ತಮಗೆ ಬೇಕಾದ ಮನುಷ್ಯ ರವಿ ಶಾಸ್ತ್ರಿಯೇ ಮುಂದಿನ ಕೋಚ್‌ ಆಗಬೇಕು ಎನ್ನುವ ಸಂದೇಶವನ್ನು ಸ್ಪಷ್ಟವಾಗಿಯೇ ರವಾನಿಸಿದರು. ಡ್ರೆಸ್ಸಿಂಗ್‌ ರೂಮ್‌ನಲ್ಲಿ ತಮಾಷೆಯಿಂದ ಕಾಲ ಕಳೆಯವ ಶಾಸ್ತ್ರಿ ಅವರ ಆಯ್ಕೆಗೆ ಆಟಗಾರರ ಬೆಂಬಲ ಕೂಡ ಇತ್ತು. ಕ್ರಿಕೆಟ್‌ ಆಡಳಿತಗಾರರಾಗಿ, ತಂಡದ ನಿರ್ದೇಶಕರಾಗಿ, ವೀಕ್ಷಕ ವಿವರಣೆಕಾರರಾಗಿ ವ್ಯಾಪಕ ಅನುಭವ ಹೊಂದಿರುವ ಶಾಸ್ತ್ರಿ ತಮ್ಮ ಹಿತಾಸಕ್ತಿ ಕಾಪಾಡಬಲ್ಲರು, ಆಟಗಾರರ ಮನದಾಳವನ್ನೂ ಅರ್ಥ ಮಾಡಿಕೊಳ್ಳಬಲ್ಲರು ಎನ್ನುವುದು ಅವರ ಲೆಕ್ಕಾಚಾರವಾಗಿತ್ತು. ಹೀಗಾಗಿ ಶಾಸ್ತ್ರಿ ಅವರ ಆಯ್ಕೆಗೆ ಬೇಕಾದ ರಂಗಭೂಮಿಕೆ ಸಜ್ಜಾಯಿತು. ಹೌದು, ಮುಂದಿನ ಬೆಳವಣಿಗೆಗಳೆಲ್ಲ ಕೊಹ್ಲಿ ನಿರ್ಧಾರವನ್ನು ಜಾರಿಗೊಳಿಸುವ ನಾಟಕದ ಭಾಗಗಳಷ್ಟೆ.

ಸುಪ್ರೀಂ ಕೋರ್ಟ್‌ ಉಸ್ತುವಾರಿಯಲ್ಲಿ ಬಿಸಿಸಿಐಯ ಸುಧಾರಣಾ ಪರ್ವ ಶುರುವಾದ ಮೇಲೆ ಕ್ರಿಕೆಟ್‌ ಸಲಹಾ ಸಮಿತಿಯೊಂದನ್ನು (ಸಿಎಸಿ) ರಚಿಸಲಾಗಿದೆ. ಮೊದಲು ಈ ಸಮಿತಿಗೆ ಯಾವುದೇ ನಿರ್ದಿಷ್ಟ ಹೊಣೆ ಇರಲಿಲ್ಲ. ನಂತರದ ದಿನಗಳಲ್ಲಿ ಕೋಚ್‌ ನೇಮಕದ ಜವಾಬ್ದಾರಿಯನ್ನು ಸಿಎಸಿಗೆ ವಹಿಸಿಕೊಡಲಾಗಿದೆ. ಭಾರತೀಯ ಕ್ರಿಕೆಟ್‌ ಜಗತ್ತು ಕಂಡಿರುವ ಸಾರ್ವಕಾಲಿಕ ಮಹಾನ್‌ ತಾರೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ ಮತ್ತು ವಿವಿಎಸ್‌ ಲಕ್ಷ್ಮಣ್‌ ಅವರೇ ಸಿಎಸಿ ಸದಸ್ಯರು.

ತಾವೇ ಸರ್ವಾನುಮತದಿಂದ ಕೋಚ್‌ ಆಗಿ ಆಯ್ಕೆಮಾಡಿದ್ದ ಕುಂಬ್ಳೆ ಅವರನ್ನು ಈ ಮೂವರಿಗೂ ಉಳಿಸಿಕೊಳ್ಳಲು ಆಗಲಿಲ್ಲ. ಕೊಹ್ಲಿ ಹಿಡಿದ ಪಟ್ಟು ಅಷ್ಟೊಂದು ಗಟ್ಟಿಯಾಗಿತ್ತು, ಉಡದ ಹಿಡಿತದಂತೆ! ತಾರಾಮೌಲ್ಯದ ಹಾಲಿ ಆಟಗಾರನ ಮುಂದೆ ಸಿಎಸಿ ಮಂಡಿಯೂರಿ ಕೂರಬೇಕಾಯಿತು. ಕ್ರಿಕೆಟ್‌ ಆಟದ ನಿರಂತರ ಯಶಸ್ಸು ಒಬ್ಬ ಆಟಗಾರನನ್ನು ವ್ಯವಸ್ಥೆಯನ್ನೇ ಮೀರಿ ಹೇಗೆ ಬೆಳೆಸುತ್ತದೆ ಎನ್ನುವುದಕ್ಕೆ ಇದೊಂದು ದೊಡ್ಡ ಉದಾಹರಣೆ, ಅಲ್ಲವೆ?

ಕೋಚ್‌ ಹುದ್ದೆಗೆ ಅಭ್ಯರ್ಥಿಗಳ ಸಂದರ್ಶನ ನಡೆಸಿದ ದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಗಂಗೂಲಿ, ‘ತಂಡದ ನಾಯಕನಿಂದ ಯಾವ ಪ್ರಸ್ತಾವವೂ ಬಂದಿಲ್ಲ’ ಎಂದು ಹೇಳುತ್ತಿದ್ದಾಗ ಕ್ರಿಕೆಟ್‌ ಬರಹಗಾರರೆಲ್ಲ ದೊಡ್ಡದಾಗಿ ನಕ್ಕಿದ್ದರು. ‘ಕೊಹ್ಲಿ ಜತೆ ಯಾವುದೇ ರೀತಿಯಲ್ಲೂ ಚರ್ಚಿಸಿಲ್ಲ. ಅವರ ಅಭಿಪ್ರಾಯ ಪಡೆದ ಬಳಿಕ ಕೋಚ್‌ ಹೆಸರನ್ನು ಪ್ರಕಟಿಸುತ್ತೇವೆ’ ಎನ್ನುವ ಅವರ ಹೇಳಿಕೆ ಮತ್ತಷ್ಟು ನಗೆ ಉಕ್ಕುವಂತೆ ಮಾಡಿತ್ತು. ಸಾಮಾಜಿಕ ಜಾಲತಾಣಗಳು ಜಗತ್ತಿನ ಪ್ರತೀ ವಿದ್ಯಮಾನವನ್ನು ಕಣ್ಣಗಲಿಸಿ ನೋಡುತ್ತಿರುವ ಈ ಸನ್ನಿವೇಶದಲ್ಲಿ ಮುಚ್ಚಿದ ಕೋಣೆಗಳಲ್ಲಿ ನಡೆಯುವಂತಹ ಚರ್ಚೆಗಳು ಸಹ ಅರೆಕ್ಷಣದಲ್ಲಿ ಬಟಾಬಯಲು ಆಗುತ್ತಿವೆ. ಹಾಗಿರುವಾಗ ಯಾರಿಗಾಗಿ ಹಾಗೂ ಏತಕ್ಕಾಗಿ ಈ ನಾಟಕ?

ಕ್ರಿಕೆಟ್‌ ಆಡಳಿತದಲ್ಲಿ ಸುಧಾರಣೆ ತರಲು ನಡೆಸಿರುವ ಯತ್ನಗಳು ಸಹ ದಿಕ್ಕು ತಪ್ಪುತ್ತಿರುವಂತೆ ಭಾಸವಾಗುತ್ತಿವೆ. ಒಂದೆಡೆ ಬಿಸಿಸಿಐ, ಇನ್ನೊಂದೆಡೆ ಕ್ರಿಕೆಟ್‌ ಆಡಳಿತಗಾರರ ಸಮಿತಿ (ಸಿಒಎ), ಮತ್ತೊಂದೆಡೆ ಸಿಎಸಿ –ಹೀಗೆ ಮೂರು ಶಕ್ತಿಕೇಂದ್ರಗಳು ಈಗ ಸೃಷ್ಟಿಯಾಗಿವೆ. ಕೋಚ್‌ ಹೆಸರು ಪ್ರಕಟಿಸಲು ಒಂದು ಸಮಿತಿ ಹಿಂದೇಟು ಹಾಕಿದರೆ, ಮತ್ತೊಂದು ಪ್ರಕಟಿಸಲೇಬೇಕು ಎಂದು ಪಟ್ಟು ಹಿಡಿಯುತ್ತದೆ. ಮಂಡಳಿ ಸಭೆಯಲ್ಲಿ ಇನ್ನೇನೋ ಚರ್ಚೆ ಆಗುತ್ತದೆ. ಅಂತೂ ಸುಧಾರಣೆ ಹಾದಿಯನ್ನು ಈ ಸಮಿತಿಗಳು ಮತ್ತಷ್ಟು ಜಟಿಲಗೊಳಿಸಿವೆ.

ಕ್ರಿಕೆಟ್‌ ಅಂದರೆ ಈಗ ಕ್ರೀಡೆಯಷ್ಟೇ ಅಲ್ಲ. ಅದೊಂದು ಮನರಂಜನಾ ಉದ್ಯಮವಾಗಿಯೂ ಬೆಳೆದಿದೆ. ಜಾಹೀರಾತುಗಳು, ಅದರಲ್ಲಿ ಕಾಣಿಸಿಕೊಳ್ಳಲು ಆಗುವ ಒಪ್ಪಂದಗಳು... ಅಭ್ಯಾಸ ನಡೆಸುವುದಕ್ಕಿಂತಲೂ ಆಟಗಾರರಿಗೆ ಇಂತಹ ಹತ್ತಾರು ಹಿತಾಸಕ್ತಿಗಳು. ಶಾಸ್ತ್ರಿ ಅವರ ಹೆಸರನ್ನು ಬಲವಾಗಿ ಪ್ರತಿಪಾದಿಸಲು ಆಟಗಾರರ ಈ ಹಿತಾಸಕ್ತಿ ಸಂಘರ್ಷದಲ್ಲಿ ಬೆಂಬಲ ಸಿಗಬಹುದು ಎನ್ನುವುದೂ ಕಾರಣವಾಗಿರಬಹುದೇ?

ನೇಮಕಾತಿ ನಾಟಕ ಈಗ ಮುಗಿದ ಅಧ್ಯಾಯ. ನೇಮಕಾತಿ ಪ್ರಕ್ರಿಯೆ ನಡೆದ ರೀತಿಗೆ ದೇಶದಾದ್ಯಂತ ಟೀಕೆಗಳು ಕೇಳಿಬಂದಿವೆಯೇ ಹೊರತು ಶಾಸ್ತ್ರಿಯವರ ಸಾಮರ್ಥ್ಯದ ಕುರಿತಲ್ಲ. ತಂಡದ ನಿರ್ದೇಶಕರಾಗಿ ಈ ಹಿಂದೆ ಆಟಗಾರರ ಮನ ಗೆದ್ದವರು ಅವರು. ಅವರೀಗ 2019ರ ವಿಶ್ವಕಪ್‌ ಟೂರ್ನಿವರೆಗೂ ಮುಖ್ಯ ಕೋಚ್‌. ಕೊಹ್ಲಿ ಅವರಿಗೂ ತಮಗೆ ಬೇಕಾದ ಮನುಷ್ಯ ಕೋಚ್‌ ಆಗಿ ಸಿಕ್ಕಿರುವುದರಿಂದ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನವನ್ನು ಸಂಪೂರ್ಣವಾಗಿ ಇಲ್ಲವಾಗಿಸಿ ತಮ್ಮ ಗಮನವನ್ನು ಆಟದ ಅಂಗಳದಲ್ಲೇ ಕೇಂದ್ರೀಕರಿಸುವ ಹೊಣೆ ಅವರ ಮೇಲಿದೆ. ಸ್ವಹಿತ, ತಂಡದ ಹಿತ, ದೇಶದ ಕ್ರಿಕೆಟ್‌ ಹಿತ ಎಲ್ಲವೂ ಅವರ ಇಂತಹ ನಡೆಯಲ್ಲೇ ಅಡಗಿದೆ.

***

ನೆಚ್ಚಿನ ಸಲಹೆಗಾರರು

ಮುಖ್ಯ ಕೋಚ್‌ ಆಯ್ಕೆಗೆ ಸಂಬಂಧಿಸಿದ ವಿವಾದ ಏನೇ ಇದ್ದರೂ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಸಲಹೆಗಾರರಾಗಿ ಕ್ರಮವಾಗಿ ರಾಹುಲ್‌ ದ್ರಾವಿಡ್‌ ಹಾಗೂ ಜಹೀರ್‌ ಖಾನ್‌ ನೇಮಕ ಆಗಿರುವುದು ಆಟಗಾರರಿಗೆ ಖುಷಿ ತಂದಿದೆ. ಟೆಸ್ಟ್‌ ಕ್ರಿಕೆಟ್‌ನ ಅಸಾಮಾನ್ಯ ಬ್ಯಾಟ್ಸ್‌ಮನ್‌ ಎನಿಸಿರುವ ದ್ರಾವಿಡ್‌ ಅವರ ಸಹಾಯ ತಂಡಕ್ಕೆ ದೊಡ್ಡ ಲಾಭ ತಂದುಕೊಡಲಿದೆ. ‘ಮಹಾಗೋಡೆ’ ಎಂದೇ ಹೆಸರಾಗಿದ್ದ ಈ ಆಟಗಾರನ ಮೇಲೆ ಭಾರತ ‘ಎ’ ಹಾಗೂ 19 ವರ್ಷದೊಳಗಿನವರ ತಂಡಗಳ ಕೋಚಿಂಗ್‌ ಹೊಣೆಯೂ ಇದೆ. ಈಗ ಹಿರಿಯರ ತಂಡಕ್ಕೂ ಸಹಾಯಕ್ಕಾಗಿ ಬುಲಾವ್‌ ಬಂದಿದೆ. ‘ಮಹಾಗೋಡೆ’ ಈ ಎಲ್ಲ ಒತ್ತಡವನ್ನು ತಾಳಬಲ್ಲುದೇ ಎಂಬ ಪ್ರಶ್ನೆ ಕಾಡುತ್ತಿದೆ.

ಹೆಚ್ಚು–ಕಡಿಮೆ ಹತ್ತು ವರ್ಷಗಳಿಂದ ಜಹೀರ್‌ ಖಾನ್‌ ತಂಡದ ಆಟಗಾರರಿಗೆ ಮಾರ್ಗದರ್ಶನ ಮಾಡುತ್ತಲೇ ಬಂದಿದ್ದಾರೆ. ತಂಡದ ಹಿರಿ–ಕಿರಿಯ ಬೌಲರ್‌ಗಳ ಗೌರವ ಗಿಟ್ಟಿಸಿದ್ದಾರೆ. 2010ರಲ್ಲಿ ತಂಡಕ್ಕೆ ಎರಿಕ್‌ ಸಿಮೋನ್ಸ್‌ ಬೌಲಿಂಗ್‌ ಕೋಚ್‌ ಆಗಿ ನೇಮಕವಾಗಿದ್ದರು. ಆದರೆ, ತಂಡದ ನೆಟ್ಸ್‌ ಪ್ರಾಕ್ಟೀಸ್‌ ನೋಡಿದವರಿಗೆ ಯಾರು ನಿಜವಾದ ಕೋಚ್‌ ಎನ್ನುವುದು ಚೆನ್ನಾಗಿ ಗೊತ್ತಿತ್ತು. ಆಗಿನಿಂದಲೂ ತಂಡದ ಹಿತಾಸಕ್ತಿಗೆ ಕಾಣಿಕೆ ನೀಡುತ್ತಾ ಬಂದವರು ಈ ಎಡಗೈ ವೇಗಿ. ರವಿ ಶಾಸ್ತ್ರಿಯವರ ಏಕಸ್ವಾಮ್ಯಕ್ಕೆ ಕಡಿವಾಣ ಹಾಕಲೆಂದೇ ದ್ರಾವಿಡ್‌ ಹಾಗೂ ಜಹೀರ್‌ ಅವರನ್ನು ಸಿಒಎ ನೇಮಕ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT