ಭಾನುವಾರ, ಡಿಸೆಂಬರ್ 8, 2019
21 °C

ಕನ್ನಡ ‘ಕ್ರಾಸ್‌ವರ್ಡ್‌’

Published:
Updated:
ಕನ್ನಡ ‘ಕ್ರಾಸ್‌ವರ್ಡ್‌’

ಮೆದುಳಿಗೆ ಕೆಲಸ ನೀಡುವ ಆ್ಯಪ್‌ಗಳಿಗೆ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಭಾರಿ ಬೇಡಿಕೆ. ಅದರಲ್ಲೂ ಪದಬಂಧದಂತಹ ಆಟಗಳು ಸಮಯ ಕಳೆಯುವ ಜೊತೆಗೆ ನಮ್ಮ ಶಬ್ದಭಂಡಾರವನ್ನೂ ಹೆಚ್ಚಿಸುತ್ತವೆ. ಆದ್ದರಿಂದ ಈ ರೀತಿಯ ಆ್ಯಪ್‌ಗಳು ಹೆಚ್ಚು ಡೌನ್‌ಲೋಡ್ ಆಗುತ್ತವೆ. ಇಂತಹ ಪದಗಳ ಜೊತೆಗೆ ಆಟ ಆಡಿಸುವ ಆ್ಯಪ್‌ಗಳು ಕನ್ನಡದಲ್ಲಿ ಕಡಿಮೆ. ಜಿಲೇಬಿ ಆ್ಯಪ್ ಇದರಲ್ಲಿ ಪ್ರಮುಖವಾದುದು. ಜಿಲೇಬಿಯ ನಂತರದ ಸ್ಥಾನ ‘ಕನ್ನಡ ಪದಗಳ ಆಟ’ (kannada word Game) ಆ್ಯಪ್‌ನದ್ದು.

ಗೂಗಲ್ ಪ್ಲೇಸ್ಟೋರ್‌ನಲ್ಲಿ ಉಚಿತವಾಗಿ ದೊರಕುವ ‘ಕನ್ನಡ ಪದಗಳ ಆಟ’ ಆ್ಯಪ್ ಕಾರ್ಯವಿಧಾನದಲ್ಲಿ ‘ಜಿಲೇಬಿ’ ಆ್ಯಪ್‌ ಅನ್ನೇ ಹೋಲುತ್ತದೆ. ಪದವೊಂದನ್ನು ತೋರಿಸಿ ಅದಕ್ಕೆ ಸಂಬಂಧಿಸಿದ ಮತ್ತೊಂದು ಪದವನ್ನು ಬಿಟ್ಟ ಸ್ಥಳಗಳಲ್ಲಿ ತುಂಬುವಂತೆ ಕೇಳುತ್ತದೆ ಈ ಆ್ಯಪ್. ಸಹಾಯಕ್ಕೆ ನಾಲ್ಕು ಆಯ್ಕೆಗಳನ್ನೂ ನೀಡುತ್ತದೆ. ಸರಿಯಾದ ಪದ ಆಯ್ಕೆ ಮಾಡಿದಲ್ಲಿ ಆಟಗಾರ ನಿಗದಿತ ಅಂಕ ಮತ್ತು ಸ್ಟಾರ್ ಪಡೆದು ಮುಂದಿನ ಹಂತಕ್ಕೆ ಹೋಗುತ್ತಾನೆ.

ಆಟಗಾರ ಪ್ರತಿಹೊಂದು ಹಂತವನ್ನು ದಾಟುತ್ತಾ ಹೋದಂತೆ ಪ್ರಶ್ನೆಗಳು ಕಠಿಣವಾಗುತ್ತಾ ಹೋಗುತ್ತವೆ. ಒಟ್ಟು 5000 ಸಾವಿರಕ್ಕೂ ಹೆಚ್ಚು ಪ್ರಶ್ನೆಗಳು ಆ್ಯಪ್‌ಗೆ ಸೇರಿಸಲಾಗಿದೆ. ಕನ್ನಡದ ಮೊದಲುಗಳ ಬಗ್ಗೆ ಪ್ರಶ್ನೆಗಳು, ಸಾಮಾನ್ಯ ಜ್ಞಾನ, ಸಿನಿಮಾ, ಗಾದೆಗಳು, ಒಗಟುಗಳು, ರಾಜ್ಯದ ಪ್ರಮುಖ ಸ್ಥಳಗಳು, ರಾಜಕೀಯ, ಸಾಹಿತ್ಯ ಸಂಬಂಧಿತ ಪ್ರಶ್ನೆಗಳು ಇದರಲ್ಲಿ ಸೇರಿವೆ.

ಆ್ಯಪ್‌ ಬಳಕೆದಾರರ ಸ್ನೇಹಿಯಾಗಿರುವಂತೆ ರೂಪಿಸಲಾಗಿದೆ. ಆಟದ ಮಧ್ಯೆ ಬರುವ ಸಂಗೀತ, ಮುದ್ರಿತ ಧ್ವನಿಗಳು ಆಟಕ್ಕೆ ಉತ್ತೇಜನ ನೀಡುತ್ತವೆ. ಬಳಸಿರುವ ಗ್ರಾಫಿಕ್ಸ್ ಕೂಡ ಉತ್ತಮವಾಗಿದೆ. ಅಂತರ್ಜಾಲ ಸಂಪರ್ಕ ಇಲ್ಲದಿದ್ದರೂ ಆಟ ಆಡಬಹುದು.

ಪ್ರಶ್ನೆಗಳಿಗೆ ಉತ್ತರ ತಿಳಿಯದಿದ್ದಲ್ಲಿ ಮುಂದಕ್ಕೆ ಹೋಗುವ, ಉತ್ತರಕ್ಕೆ ಸುಳಿವು ಪಡೆಯುವ ಅವಕಾಶ ಆ್ಯಪ್ ಕಲ್ಪಿಸಿದೆ. ಆ್ಯಪ್ ಅನ್ನು ಇತರರೊಂದಿಗೆ ಹಂಚಿಕೊಳ್ಳುವ ಆಯ್ಕೆಯನ್ನು ಆ್ಯಪ್‌ನಲ್ಲಿ ನೀಡಲಾಗಿದೆ.

‘ಸೈಬರ್ ಅಡ್ವೇಂಚರ್’ ಅವರು ಅಭಿವೃದ್ಧಿಪಡಿಸಿರುವ ಈ ಆ್ಯಪ್ ಇಲ್ಲಿಯವರೆಗೆ 10000ಕ್ಕೂ ಅಧಿಕ ಡೌನ್‌ಲೋಡ್‌ಗಳನ್ನು ಕಂಡಿದೆ. ಹಲವು ಬಳಕೆದಾರರು ಆ್ಯಪ್ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)