ಶುಕ್ರವಾರ, ಡಿಸೆಂಬರ್ 13, 2019
21 °C

ಪುಟಾಣಿಗೂ ಸಲಾಕೆಯ ಸಾಂಗತ್ಯ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಟಾಣಿಗೂ ಸಲಾಕೆಯ ಸಾಂಗತ್ಯ...

ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ಬೆಂಗಳೂರಿಗೆ ಸಂಸಾರ ಸಮೇತ ಬಂದು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುವುದು ಹೊಸದೇನಲ್ಲ. ನಿರ್ಮಾಣ ಹಂತದ ಕಟ್ಟಡಗಳ ಸಂದಿ, ಮೂಲೆಗಳಲ್ಲಿ ಬಿಡಾರ ಹೂಡಿ ಜೀವನ ಸಾಗಿಸುವ ನೋಟವೂ ಸಾಮಾನ್ಯವೇ. ಶಾಲೆಯ ಮುಖ ಕಾಣದ ಪುಟ್ಟ ಕಂದಮ್ಮಗಳಿಗೆ ಅಲ್ಲಿನ ಸಿಮೆಂಟ್ ತುಂಡು, ಇಟ್ಟಿಗೆ, ಕಲ್ಲು, ಸಲಾಕೆಗಳೇ ಆಟಿಕೆಗಳು. ಅಂತಹದ್ದೊಂದು ಬದುಕಿನ ಮನಕರಗುವ ದೃಶ್ಯವನ್ನು ಬನಶಂಕರಿಯ ನಂದನ್ ಹೆಗಡೆ ಸೆರೆಹಿಡಿದಿದ್ದಾರೆ.

ಬನಶಂಕರಿ ಮೂರನೇ ಹಂತದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರ ಬುಡದಲ್ಲಿ ಕಂಡ ದೃಶ್ಯವನ್ನು ರಸ್ತೆಯಾಚೆಯಿಂದ ಅವರು ಕ್ಲಿಕ್ಕಿಸಿದ್ದಾರೆ.  ಸ್ನೈಡರ್ ಎಲೆಕ್ಟ್ರಿಕ್ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿರುವ ಅವರು ಎರಡು ವರ್ಷಗಳಿಂದ ಛಾಯಾಚಿತ್ರ ಹವ್ಯಾಸದಲ್ಲಿ ತೊಡಗಿದ್ದಾರೆ.

ಮೂಲತಃ ಸಹ್ಯಾದ್ರಿ ಶ್ರೇಣಿಯಲ್ಲಿನ ಮಾವಿನಗುಂಡಿ ಬಳಿಯ ನಂದನ್ ವನ್ಯಜೀವಿ, ನೈಸರ್ಗಿಕ ಸೂಕ್ಷ್ಮಜೀವಿ, ಪಕ್ಷಿ ಪ್ರಾಣಿಗಳು ಮತ್ತು ಜೀವನ ದೃಶ್ಯಗಳ ಛಾಯಾಗ್ರಹಣದಲ್ಲಿ ಆಸಕ್ತರು. ಕೆನಾನ್ ಇ.ಒ.ಎಸ್. 77 ಡಿ ಕ್ಯಾಮೆರಾವನ್ನು ಅವರು ಬಳಸುತ್ತಾರೆ.

ಚಿತ್ರದ ಎಕ್ಸ್‌ಪೋಷರ್ ವಿವರಗಳು ಇಂತಿವೆ: 18-270 ಎಂ.ಎಂ. ಟೆಮರಾನ್ ಜೂಂ ಲೆನ್ಸ್‌ನಲ್ಲಿ 142 ಎಂ.ಎಂ ಫೋಕಲ್ ಲೆಂಗ್ತ್ ಹೊಂದಿಸಿದ್ದು, ಅಪರ್ಚರ್ ಎಫ್. 6.3, ಷಟರ್ ವೇಗ 1/160 ಸೆಕೆಂಡ್, ಐ.ಎಸ್.ಒ 400 , ಆಟೊ ವೈಟ್ ಬ್ಯಾಲೆನ್ಸ್ ಅಳವಡಿಸಿದ್ದಾರೆ. ಟ್ರೈಪಾಡ್ ಉಪಯೋಗಿಸಿಲ್ಲ.

ಈ ಛಾಯಾಚಿತ್ರದೊಂದಿಗೆ ಅವಲೋಕಿಸಬಹುದಾದ ತಾಂತ್ರಿಕ ಮತ್ತು ಕಲಾತ್ಮಕ ವಿಶ್ಲೇಷಣೆ ಇಂತಿವೆ:

ಮುಂಜಾನೆಯ ತಿಳಿ ಬೆಳಕಿನಲ್ಲಿ ದೂರದಿಂದ ಹೆಚ್ಚಿನ ಫೋಕಲ್ ಲೆಂಗ್ತ್ ಇರುವ ಲೆನ್ಸ್ ಬಳಸಿ ಚಲನಶೀಲ ವಸ್ತುಗಳನ್ನು (ಇಲ್ಲಿ ತಾಯಿ- ಮಗು) ಸೆರೆಹಿಡಿಯುವಲ್ಲಿ ಷಟರ್ ವೇಗ ಕನಿಷ್ಠ 1/250 ಸೆಕೆಂಡ್ ಇದ್ದಿದ್ದರೆ (ಅದಕ್ಕೆ ಅನುಗುಣವಾಗಿ ಈ ಸಂದರ್ಭದಲ್ಲಿ ಐ.ಎಸ್.ಒ. 500 ಬೇಕಿತ್ತು) ವಸ್ತುಗಳ ‘ಶೇಕ್’ ಮತ್ತು ಕ್ಯಾಮರಾದ ‘ಶೇಕ್’ ತಪ್ಪಿಸಬಹುದು. 1/160 ಸೆಕೆಂಡ್ ಅಥವಾ 1/125 ಸೆಕೆಂಡ್‌ನಲ್ಲಿ ಅನುಭವಿಗಳು ಟ್ರೈಪಾಡ್ ಇಲ್ಲದೆಯೇ ಕ್ಯಾಮೆರಾ ‘ಶೇಕ್’ನ್ನು ಕೈ ಹಿಡಿತದಲ್ಲಿ ಸಾಧಿಸಬಹುದು. ಆದರೆ ವಸ್ತುಗಳ ಸೂಕ್ಷ್ಮವಾದ ಮಿಸುಕಾಟವನ್ನು ತಪ್ಪಿಸಲು ಕಷ್ಟವೇ. ಈ ಚಿತ್ರದಲ್ಲಿ ಮಗುವಿಗೇ ಫೋಕಸ್ ಮಾಡಿದ್ದರೂ ಸ್ವಲ್ಪ ಅಸ್ಪಷ್ಟತೆ ಗೋಚರಿಸುತ್ತಿದೆ.

ತ್ವರಿತವಾಗಿ ಕ್ಲಿಕ್ಕಿಸಬೇಕಾಗಿ ಬರುವ ಇಂತಹ ಸನ್ನಿವೇಶದಲ್ಲಿ ಮೇಲಿನ ಅಂಶ ಅತಿಮುಖ್ಯವೆಂದೆನಿಸದು. ಯಾಕೆಂದರೆ, ಸೆರೆಹಿಡಿದ ಭಾವಪೂರಿತ ದೃಶ್ಯ ಆ ಕ್ಷಣಕ್ಕೆ ಮನತಟ್ಟುವ ಅನನ್ಯತೆ. ಇಲ್ಲಿ, ಆ ಕಾರಣದಿಂದ ತಾಂತ್ರಿಕವಾಗಿಯೂ ಚಿತ್ರ ತಕ್ಕಮಟ್ಟಿಗೆ ಚೆನ್ನಾಗಿಯೇ ಮೂಡಿದೆ ಎನ್ನಬಹುದು.

ಕಲಾತ್ಮಕವಾಗಿ ಈ ಚಿತ್ರ ಐದು ವಿಧದಲ್ಲಿ ವೈಶಿಷ್ಟ್ಯತೆ ಹೊಂದಿದೆ. ಮೊದಲನೆಯದಾಗಿ ನೋಡುಗನ ಕಣ್ಣನ್ನು ಒಮ್ಮೆಲೇ ಗಾಡವಾಗಿ ತನ್ನೆಡೆ ಸೆಳೆಯುವ ಗುಣ. ಇದಕ್ಕೆ ‘ಪರಿಣಾಮ’ (ಇಂಪ್ಯಾಕ್ಟ್) ಎನ್ನಬಹುದು. ಮತ್ತೊಂದು, ಕತೆ ಹೇಳುವ ಅಂಶ (ಇಂಟರೆಸ್ಟಿಂಗ್ ಇನ್ಫಾರ್ಮೆಶನ್). ಮೂರನೆಯದು, ಚೈತನ್ಯಶೀಲ ಜೀವಂತಿಕೆ (ವೈಟ್ಯಾಲಿಟಿ), ನಂತರ ಅಖಂಡತೆಯ ಸಾಮರಸ್ಯ (ಅನವಶ್ಯಕ ವಸ್ತುಗಳು ಚೌಕಟ್ಟಿನಲ್ಲಿಲ್ಲದಿರುವುದು) ಹಾಗೂ ಐದನೆಯದಾಗಿ ವಸ್ತು-ವಿನ್ಯಾಸದ ಸಮತೋಲನ (ಬ್ಯಾಲೆನ್ಸ್).

ವಿನ್ಯಾಸ ಮತ್ತು ಸಮತೋಲನದ ಬಗ್ಗೆ ಒಂದೆರಡು ಅಂಶಗಳು ಇಲ್ಲಿ ಗಮನಾರ್ಹ.

ಈ ಚೌಕಟ್ಟಿನಲ್ಲಿ ತ್ರಿಕೋನಾಕೃತಿಯ ರೂಪಕ ಎದ್ದು ಕಾಣುತ್ತದೆ. ಮುನ್ನೆಲೆಯಲ್ಲಿರುವ (ಫೋರ್ ಗ್ರೌಂಡ್) ತನ್ನದೇ ಪ್ರಪಂಚದಲ್ಲಿ ಮುಳುಗಿರುವ ಮುದ್ದಾದ ಮಗು, ಬಲದಂಚಿನಲ್ಲಿ ಉರಿಯುವ ಒಲೆಯ ಝಳ ಮತ್ತು ಹಿನ್ನೆಲೆಯ ಮೇಲ್ಭಾಗದಲ್ಲಿ (ಬ್ಯಾಕ್‌ಗ್ರೌಂಡ್) ಬಣ್ಣದ ಸೀರೆಯುಟ್ಟು ಬರುತ್ತಿರುವ ತಾಯಿ. ನೋಡುಗನ ಕಣ್ಣು ಎದುರು ಅಂಚಿನ ಗ್ರಾನೈಟ್ ಕಲ್ಲುಗಳನ್ನು ದಾಟಿ (ಲೀಡಿಂಗ್ ಲೈನ್ಸ್) ಮುಖ್ಯ ವಸ್ತುವಾದ (ಎಂಟ್ರಿ ಪಾಯಿಂಟ್) ಮಗುವಿನ ಕೈ, ಮೈ ಮಾಟವನ್ನು ಸವರಿ ಬಲ ಬದಿಯಲ್ಲಿ, ಊಟದ ತಯಾರಿಗಾಗಿ ಹೊತ್ತಿ ಉರಿಯುವ ಒಲೆಯ ಬೆಂಕಿಯ ಆಕರ್ಷಕ ಕೆಂಬಣ್ಣಗಳನ್ನು ನೋಡಿ, ಹಾಗೆಯೇ ಕೆಂಚು ಬಣ್ಣದ ಸೀರೆಯುಟ್ಟು ಬರುತ್ತಿರುವ ತಾಯಿಯನ್ನು ಸಂಧಿಸಿದೆ. ಅಲ್ಲಿಂದ, ಜೋಡಿಸಿಟ್ಟ ಅಮೃತಶಿಲೆಯ ಶೀಟ್‌ಗಳ ರೇಖಾ ವಿನ್ಯಾಸದೊಂದಿಗೆ ನೋಟ ಚೌಕಟ್ಟಿನ ಕೆಳಗೆ ಜಾರಿ, ಪುನಃ ಆ ಮಗುವಿನೆಡೆ ಸಾಗುವ ಮತ್ತು ಅದೇ ಬಗೆಯ ನೋಟದ ಜೊತೆ ಮನಸ್ಸನ್ನೂ ಪುನರಾವರ್ತಿಸುವ ಗುಣವೇ ಒಂದು ಅಪೂರ್ವ ಅನುಭವ ನೀಡುತ್ತದೆ.ಈ ಚಿತ್ರ ಸಂಯೋಜನೆಗಾಗಿ ನಂದನ್ ಹೆಗಡೆ ಅಭಿನಂದನಾರ್ಹರು.

ವಿಶ್ಲೇಷಣೆ: ಕೆ.ಎಸ್.ರಾಜಾರಾಮ್⇒ksrajaram173@gmail.com

ಪ್ರತಿಕ್ರಿಯಿಸಿ (+)