ಶನಿವಾರ, ಡಿಸೆಂಬರ್ 7, 2019
16 °C

ಆಗಿನ ಬೆಂಗಳೂರು ಸ್ವರ್ಗವೋ...ಸ್ವರ್ಗ

Published:
Updated:
ಆಗಿನ ಬೆಂಗಳೂರು ಸ್ವರ್ಗವೋ...ಸ್ವರ್ಗ

ನಾನು ಹುಟ್ಟಿದ್ದು ಹಾಸನ ಜಿಲ್ಲೆ ಅರಸೀಕೆರೆಯಲ್ಲಿ. ಬಾಲ್ಯದ ವಿದ್ಯಾಭ್ಯಾಸ ಅಲ್ಲಿಯೇ ಆಗಿದ್ದು. ನನ್ನ ಮೇಲೆ ಪ್ರಭಾವ ಬೀರಿದ ಪ್ರಾಥಮಿಕ ಶಾಲೆಯ ಗುರುಗಳೆಂದರೆ ಮಹಮದ್‌ ಅಲಿ. ಅವರು ವಂದೇ ಮಾತರಂ ಹೇಳಿಕೊಡುತ್ತಿದ್ದ ರೀತಿ ನಮಗೆ ಮೆಚ್ಚುಗೆಯಾಗಿತ್ತು. ನಾವೆಲ್ಲಾ ಪ್ರಾರ್ಥನೆ ಹೇಳುವುದಕ್ಕಾಗಿಯೇ ಅವರ ಜತೆ ಹೋಗುತ್ತಿದ್ದೆವು. ಅವರಿಗೆ ಅತ್ಯುತ್ತಮ ಶಿಕ್ಷಕ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ನಮಗೆ ಖುಷಿ ತಂದಿತ್ತು. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಸಿದ ಎಚ್‌.ಸಿ. ಸುಬ್ಬರಾವ್‌, ಸೂರ್ಯ ನಾರಾಯಣರಾವ್‌, ದೊಡ್ಡತಿಮ್ಮೇಗೌಡ, ಗೋಪಾಲಸ್ವಾಮಿ ಅವರನ್ನು ಮರೆಯಲು ಸಾಧ್ಯವಿಲ್ಲ.

ಅಣ್ಣನ ಆಸರೆಯಲ್ಲಿದ್ದ ನಮ್ಮ ಕುಟುಂಬ ಹಾಸನಕ್ಕೆ ಸ್ಥಳಾಂತರವಾಯಿತು. ಪ್ರೌಢಶಾಲೆ ಅಲ್ಲಿಯೇ ಓದಿದ್ದು. ಮುಖ್ಯಶಿಕ್ಷಕ ಸಿದ್ಧಲಿಂಗಮೂರ್ತಿ ಶಿಸ್ತಿನ ಮೇಷ್ಟ್ರಾಗಿದ್ದರು. ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಬೇಕಿತ್ತು. ಅಷ್ಟು ಸ್ಟ್ರಿಕ್ಟ್‌. ಮತ್ತೊಬ್ಬ ಶಿಕ್ಷಕ ಡಿ.ಎನ್‌. ಸೇತುರಾಂ ಅವರು ಪುಸ್ತಕದ ವಿಷಯವನ್ನಷ್ಟೇ ಹೇಳದೇ ಜೀವನದ ರಸವತ್ತಾದ ಕ್ಷಣಗಳನ್ನು ಹೇಳುತ್ತಿದ್ದರು, ಎಲ್ಲರನ್ನೂ  ನಗೆಗಡಲಲ್ಲಿ ಮುಳುಗಿಸುತ್ತಿದ್ದರು.

ನಂತರ ಒಂದು ವರ್ಷದ ಐಟಿಐ (ವೆಲ್ಡಿಂಗ್‌) ಕೋರ್ಸ್‌ ಮಾಡಿದೆ. ಎಂಪ್ಲಾಯ್‌ಮೆಂಟ್‌ ಕಾರ್ಡ್‌ ಮಾಡಿಸಿದೆ. ನಮ್ಮ ಬ್ಯಾಚ್‌ನ ಬಹುತೇಕ ವಿದ್ಯಾರ್ಥಿಗಳಿಗೆ ಭದ್ರಾವತಿ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಸಿಕ್ಕಿತು. ಅಲ್ಲಿನ ವಿಘ್ನೇಶ್ವರ ಕಲಾ ಸಂಘದಲ್ಲಿ ನಾಟಕಗಳನ್ನು ಆಡಿಸುತ್ತಿದ್ದರು. ನನಗೂ ಅಭಿನಯಕ್ಕೆ ಅವಕಾಶ ಸಿಕ್ಕಿತು. ನಂತರ ಸಮಾನ ಮನಸ್ಕರೆಲ್ಲ ಸೇರಿ ‘ಗಂಧರ್ವ ರಂಗ ತಂಡ’ ಕಟ್ಟಿಕೊಂಡು ನಾಟಕ ಮಾಡುತ್ತಿದ್ದೆವು. ಆ ಕಾಲದಲ್ಲಿ ಗಿರೀಶ್‌ ಕಾರ್ನಾಡ್‌, ಬಿ.ವಿ ಕಾರಂತರ ನಿರ್ದೇಶನದ ನಾಟಕೋತ್ಸವಗಳು ಹೆಚ್ಚು ಜನಪ್ರಿಯವಾಗಿದ್ದವು.

ಬೆಂಗಳೂರಿನಲ್ಲಿ ರಂಗೋತ್ಸವ ಇರುವ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದ ನಮ್ಮ ತಂಡದವರು ನಾಟಕ ನೋಡಲು ಬೆಂಗಳೂರಿಗೆ ವಾಣಿ, ಡಬಲ್‌ ಸವರನ್‌ ಬಸ್ಸಿನಲ್ಲಿ ಬರುತ್ತಿದ್ದೆವು. ಆನಂದರಾವ್‌ ಸರ್ಕಲ್‌ನಲ್ಲಿ ಇಳಿದು ಸಮೀಪದಲ್ಲಿದ್ದ ಟೂರಿಸ್ಟ್‌ ಹೋಟೆಲ್‌ಗೆ ಹೋಗಿ, ಬ್ಯಾಗ್‌ ಎಸೆದು, ರವೀಂದ್ರ ಕಲಾಕ್ಷೇತ್ರಕ್ಕೆ ಓಡುತ್ತಿದ್ದೆವು. ಕಲಾಕ್ಷೇತ್ರ ಭರ್ತಿಯಾಗಿದ್ದರೆ, ‘ಭದ್ರಾವತಿಯಿಂದ ಬಂದಿದ್ದೇವೆ’ ಎಂದು ಹೇಳಿ ಒಳಹೋಗಿ ನೆಲದ ಮೇಲಾದರೂ ಕುಳಿತುಕೊಂಡು ನೋಡುತ್ತಿದ್ದೆವು. 1975ರವರೆಗೂ ಬೆಂಗಳೂರಿನ ನಂಟು ಹೀಗೇ ಇತ್ತು.

ರಂಗಭೂಮಿ ನನ್ನ ಮೊದಲ ತಾಯಿ. ಒಳ್ಳೊಳ್ಳೆ ನಾಟಕಗಳನ್ನು ನೋಡಬೇಕೆಂಬ ಬಯಕೆ ನನ್ನನ್ನು ಅಷ್ಟು ದೂರ ಕರೆದುಕೊಂಡು ಬರುತ್ತಿತ್ತು. ನಾಟಕ ಮುಗಿದ ಮೇಲೆ ಆನಂದರಾವ್‌ ಸರ್ಕಲ್‌ಗೆ ಬಂದು ತಳ್ಳೊ ಗಾಡಿಯ ಚಿತ್ರಾನ್ನ, ಇಡ್ಲಿ ತಿನ್ನುತ್ತಿದ್ದೆ. ನಂತರ ಬಸ್‌ ಹತ್ತಿ ಭದ್ರಾವತಿಗೆ ಹೊರಡುತ್ತಿದ್ದೆ. ಕೆಲಸದ ನಿಮಿತ್ತ ಜೆ.ಸಿ. ರಸ್ತೆಗೆ ಬಂದಾಗ ಸಿಂಪೋನಿ, ಲಿಡೊ ಥಿಯೇಟರ್‌ಗಳಿಗೆ ಹೋಗುತ್ತಿದ್ದೆ. ಆಗ ಮಧ್ಯಾಹ್ನ 11 ಗಂಟೆಯಾದರೂ ಚಳಿ ಇರುತ್ತಿತ್ತು. ಈಗ ಫ್ಯಾನ್‌ ಇಲ್ಲದೆ ಮನೆಯೊಳಗೆ ಇರುವುದೇ ಕಷ್ಟ ಎಂಬಂತಾಗಿದೆ. ಸಂಚಾರದಟ್ಟಣೆ ನಗರದ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಅವರ ‘ಕಲಿಯುಗ’(1984) ಸಿನಿಮಾದಲ್ಲಿ ಆರತಿ ಅವರ ತಂದೆಯ ಪಾತ್ರದ ಅವಕಾಶ ಸಿಕ್ಕಾಗ ವಿಮಾನದಲ್ಲಿ ಚೆನ್ನೈಗೆ ಹೋಗುವ ಭಾಗ್ಯ ನನ್ನದಾಯಿತು. ಮೊದಲ ಸಲ ವಿಮಾನ ಹತ್ತಿದ್ದು ಆಗಲೇ. ಚಿತ್ರೀಕರಣ ಮುಗಿಸಿ ವಾಪಸ್‌ ಬೆಂಗಳೂರಿಗೆ ಬರುವಾಗ ವಿಮಾನ ಲ್ಯಾಂಡ್‌ ಆಗಬೇಕಾದರೆ ಕೆಳಗೆ ನೋಡಿದರೆ ಕಾಡಿನೊಳಗೆ ಇಳಿಸುತ್ತಿದ್ದಾರಲ್ಲ ಅನ್ನಿಸೋದು. ಅಷ್ಟು ಹಸಿರಿನಿಂದ ಕಂಗೊಳಿಸುತ್ತಿತ್ತು ನಮ್ಮ ನಗರ.

ಈ ಮಹಾನಗರಕ್ಕೆ ಹೊರಗಿನಿಂದ ಜನ ಬರಲು ಶುರುವಾದ ನಂತರ ಬದಲಾದ ಬಗೆಯೇ ವಿಸ್ಮಯ ಮೂಡಿಸಿದೆ. ನಗರದಲ್ಲಿ ಒಳ್ಳೆಯ ಊಟ ಮಾಡಬೇಕು ಅಂದ್ರೆ ವಿ.ವಿ.ಪುರಕ್ಕೆ ಹೋಗುತ್ತಿದ್ದೆ. ಮನೆಯಲ್ಲಿ ಮಾಡದ ಎಲ್ಲ ತಿನಿಸುಗಳು ಅಲ್ಲಿ ಸಿಗುತ್ತಿದ್ದವು. ಚಿಕ್ಕಪೇಟೆಯಲ್ಲಿ ಬಟ್ಟೆ ಖರೀದಿಸಿ ಊರಿಗೆ ಹೋಗುವ ಸಡಗರ ಮರೆಯಲು ಸಾಧ್ಯವೇ ಇಲ್ಲ.

ನಾನು ಸಿನಿಮಾ ನಟನಾಗುತ್ತೇನೆ ಎಂದುಕೊಂಡಿರಲೇ ಇಲ್ಲ. ಜನಮೆಚ್ಚುವಂಥ ನಾಟಕಗಳಲ್ಲಿ ಅಭಿನಯಿಸಬೇಕು ಎಂಬುದೇ ನನ್ನ ಗುರಿಯಾಗಿತ್ತು. ‘ಜೋಕುಮಾರಸ್ವಾಮಿ’ ನಾಟಕ ಮಾಡಿದಾಗ ಟಿಕೆಟ್‌ ಕೊಂಡು ನೋಡುವವರು ಇರಲಿಲ್ಲ. ಆಗ ‘ನಾಟಕ ನಿಮಗೆ ಇಷ್ಟವಾಗದಿದ್ದರೆ ನಿಮ್ಮ ಹಣ ವಾಪಸ್‌ ಕೊಡುತ್ತೇವೆ’ ಎಂದು ನಂಬಿಸಿ ಟಿಕೆಟ್‌ ಮಾರುತ್ತಿದ್ದೆವು. ಮೊದಲ ಪ್ರದರ್ಶನ ಮಾಡಿದೆವು. ಆಗ ಎಷ್ಟು ಜನಪ್ರಿಯವಾಯಿತೆಂದರೆ, ಭದ್ರಾವತಿಯ ವೈದ್ಯರ ಸಂಘ, ರೋಟರಿ ಕ್ಲಬ್‌ನವರು ನಮ್ಮ ತಂಡವನ್ನು ಕರೆಸಿ ನಾಟಕ ಪ್ರದರ್ಶನ ಮಾಡಿಸಿದರು. ಹೀಗೆ ನಮ್ಮ ತಂಡ ಹೆಸರಾಯಿತು.

ಬೆಂಗಳೂರಿನಲ್ಲಿ ಚಿತ್ರೀಕರಣವಿದ್ದರೆ ರಾತ್ರಿ 10ಕ್ಕೆ ರೈಲಿಗೆ ಹೊರಟು ಬೆಳಿಗ್ಗೆ 5ಕ್ಕೆ ನಗರ ತಲುಪುತ್ತಿದ್ದೆ. ರೈಲ್ವೆ ನಿಲ್ದಾಣದಿಂದ ಕಪಿಲ ಹೋಟೆಲ್‌ಗೆ ನಡೆದುಕೊಂಡು ಹೋಗುತ್ತಿದ್ದೆ. ಆಟೊದಲ್ಲಿ ಹೋದರೆ ಎರಡು ರೂಪಾಯಿ ಕೊಡಬೇಕಾಗಿತ್ತು. ಆ ಎರಡು ರೂಪಾಯಿ ಇದ್ರೆ ಮನೆ ಖರ್ಚಿಗೆ ಆಗುತ್ತದೆ ಎಂಬುದು ನನ್ನ ಲೆಕ್ಕಾಚಾರ.

ಮದುವೆಯಾದ ಮೇಲೆ ಬೆಂಗಳೂರಿಗೆ ಬಂದೆವು. ಇಂದಿರಾನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆವು. ಮನೆಗೆ ಕರೆಂಟ್‌ ಬಿಲ್‌ ಸೇರಿ ₹380 ಕೊಡುತ್ತಿದ್ದೆವು. 1986ರಲ್ಲಿ ಇಂದಿರಾನಗರದಲ್ಲಿ ನನ್ನ ಸ್ನೇಹಿತನ ಜೊತೆಗೂಡಿ ₹ 7ಸಾವಿರ ಕೊಟ್ಟು 35X50 ಅಡಿ ನಿವೇಶನ ಖರೀದಿಸಿದೆ. ಮತ್ತೆ ಅವನಿಗೇ ಹತ್ತು ಸಾವಿರಕ್ಕೆ ಮಾರಿದೆ. ಈಗ ಇಂದಿರಾನಗರದ ನಿವೇಶನ ಬೆಲೆ ಕೇಳಿದರೆ ಹುಬ್ಬೇರಿಸುವಂತಾಗುತ್ತದೆ.

ನನ್ನ ಮೆಚ್ಚಿನ ಬಡಾವಣೆಯೆಂದರೆ ಚಾಮರಾಜಪೇಟೆ. ಸಾಹಿತ್ಯ ಪರಿಷತ್ತಿನಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿದ್ದೆ. ಪತ್ರಾಗಾರದಲ್ಲಿದ್ದ ಕಾಮತ್‌ ಎಂಬುವವರ ಬಳಿ ಪುಸ್ತಕಗಳು, ಇತಿಹಾಸದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದೆ. ಚಾಮರಾಜಪೇಟೆಯಲ್ಲಿ ದೊಡ್ಡ ದೊಡ್ಡ ಮನೆಗಳು ಈಗಲೂ ಕಾಣಸಿಗುತ್ತವೆ. ಅದು ನಿವೃತ್ತರ ಸ್ವರ್ಗವಾಗಿತ್ತು. ಈಗ ಅಲ್ಲಿ 20X30 ನಿವೇಶನ ಸಿಕ್ಕರೆ ಸಾಕು ಎನ್ನುವಂತಾಗಿದೆ.

1987ರಲ್ಲಿ ತುಮಕೂರು ರಸ್ತೆಯ ಚನ್ನನಾಯ್ಕನಪಾಳ್ಯದಲ್ಲಿ ಒಂದು ನಿವೇಶನ ಕೊಂಡೆ. ಆಗ ಅಲ್ಲಿ ಬರೀ ಬಯಲು, ಬೇಲಿ, ಗಿಡಮರಗಳಿದ್ದವು. ಮುಖ್ಯರಸ್ತೆಯಿಂದ ಅಲ್ಲಿಗೆ ಹೋಗುವಷ್ಟರಲ್ಲಿ ಕಡಿಮೆ ಅಂದ್ರೆ ನಾಲ್ಕೈದು ದೊಡ್ಡ ದೊಡ್ಡ ಹಾವುಗಳು ಕಾಣಿಸುತ್ತಿದ್ದವು. ಪಾರ್ಲೆ ಬಿಸ್ಕತ್ತು ಕಾರ್ಖಾನೆ ಇರಲಿಲ್ಲ, ಮೇಲ್ಸೇತುವೆ ಆಗಿರಲಿಲ್ಲ. ‘ಜಿಂದಾಲ್‌’ವರೆಗೂ ಬಯಲು ಪ್ರದೇಶವಾಗಿತ್ತು.

1989ರಲ್ಲಿ ಮನೆ ಕಟ್ಟಲು ತೀರ್ಮಾನಿಸಿದಾಗ ನನ್ನ ಬಳಿ ಇದ್ದದ್ದು ಬರೀ 300 ರೂಪಾಯಿ. ನೀವು ನಂಬೋದಿಲ್ಲ. ಪಾಯದ ಕೆಲಸಕ್ಕೆ ಮೇಸ್ತ್ರಿಗೆ 650 ರೂಪಾಯಿ ಕೊಟ್ಟಿದ್ದೆವು. ಗಾರೆ ಕೆಲಸಗಾರರು ‘ಸರ್‌ ನೀವು ಸಿನಿಮಾದಲ್ಲಿ ಮಾಡ್ತೀರಾ, ನಿಧಾನವಾಗಿ ಕೊಡುವಿರಂತೆ’ ಎಂದು ಹೇಳಿ ಮುಂಗಡ ಪಡೆಯದೇ ಮನೆ ಕಟ್ಟಲು ಮುಂದಾದರು. ಆಗ ಒಂದು ಲಾರಿ ಮರಳಿಗೆ 650 ರೂಪಾಯಿ ಇತ್ತು. ಮೂರು ಬೆಡ್‌ರೂಂ ಮನೆಯನ್ನು ನಾಲ್ಕು ಲಕ್ಷದಲ್ಲಿ ಕಟ್ಟಿಸಿದೆ. ಆದರೆ ಅದಕ್ಕೆ ವಿದ್ಯುತ್‌ ಸಂಪರ್ಕ ಸಿಕ್ಕಿದ್ದು 9 ತಿಂಗಳ ನಂತರ.

ಆಗಿನ ಬೆಂಗಳೂರು ಸ್ವರ್ಗವೋ ಸ್ವರ್ಗ. ಭೂಮಿಗೆ ಇಷ್ಟು ಬೆಲೆ ಬರುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ಆ ಸಮಯದಲ್ಲಿ ಅಂಬರೀಷ್‌, ಶಂಕರನಾಗ್‌ ಹಣದ ನೆರವು ನೀಡಿದರು. 1988ರಲ್ಲಿ ಶಂಕರನಾಗ್‌ ಒಂದು ಬುದ್ಧಿವಂತಿಕೆಯ ಮಾತು ಹೇಳಿದ್ದರು. ‘ವಿಧಾನಸೌಧದಿಂದ 50 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಎಲ್ಲಿಯೇ ಜಮೀನು ಖರೀದಿಸಿದರೆ, ಮುಂದೆ ಬಂಗಾರದ ಬೆಲೆ ಬರುತ್ತದೆ’ ಎಂದು. ಆ ಮಾತು ಈಗ ಸತ್ಯವಾಗಿದೆ.

ಚಾಮುಂಡೇಶ್ವರಿ ಸ್ಟುಡಿಯೊ ಹಾಗೂ ಶಂಕರನಾಗ್‌ ಅವರ ಕಂಟ್ರಿ ಕ್ಲಬ್‌ನಲ್ಲಿ ಸಿನಿಮಾ ಸ್ನೇಹಿತರೆಲ್ಲಾ ಭೇಟಿಯಾಗುತ್ತಿದ್ದೆವು. ಚಿತ್ರೀಕರಣವೇ ಸಂಭ್ರಮವಾಗಿರುತ್ತಿತ್ತು. ಚಿಕ್ಕಮಗಳೂರು, ಸಕಲೇಶಪುರ, ಗೋವಾ ಹೀಗೆ ಹೋಗುವಾಗ ಎಲ್ಲರೂ ಒಟ್ಟಿಗೇ ಇರುತ್ತಿದ್ದೆವು. ಎಷ್ಟೇ ತಡವಾಗಿ ಮಲಗಿದರೂ ‘ಬೆಳಿಗ್ಗೆ 6ಕ್ಕೆ ಚಿತ್ರೀಕರಣಕ್ಕೆ ಸಿದ್ಧರಾಗಿ’ ಅಂದ್ರೆ ಸಿದ್ಧರಾಗಿರುತ್ತಿದ್ದೆವು. ಈಗಿನ ನಟರು ಡೈಲಾಗ್‌ ಹೇಳಲು ಬಾರದಿದ್ದರೂ ಕ್ಯಾರಾವ್ಯಾನ್ (ಮೇಕಪ್‌ ವಾಹನ) ಕೇಳುತ್ತಾರೆ, ಕೋಟಿ, ಕೋಟಿ ಸಂಭಾವನೆ ಬೇಕು ಅನ್ನುತ್ತಾರೆ.

1980ರಲ್ಲಿ ಗಾಂಧಿನಗರ ಇಷ್ಟೊಂದು ಬ್ಯುಸಿ ಆಗಿರಲಿಲ್ಲ. ಥಿಯೇಟರ್‌ಗಳಲ್ಲಿ ಸಿನಿಮಾ ಮುಗಿದ ಸಮಯದಲ್ಲಿ ಜನಸಂದಣಿ ಕಾಣುತ್ತಿತ್ತು. ಮೋತಿ ಮಹಲ್‌ಗೆ ಹೋಗುತ್ತಿದ್ದೆವು. ಆನಂತರ ಕಾನಿಷ್ಕದಲ್ಲಿ ಸೇರುತ್ತಿದ್ದೆವು. ಹೈಲ್ಯಾಂಡ್ಸ್‌ ಹೋಟೆಲ್‌ಗೆ ಹೋಗುತ್ತಿರಲಿಲ್ಲ, ಯಾಕೆಂದ್ರೆ ಅಲ್ಲಿಗೆ ಅಣ್ಣಾವ್ರು (ರಾಜಕುಮಾರ್‌) ಬರುತ್ತಿದ್ದರು.
ಸ್ನೇಹಿತರ ಮನೆಯಲ್ಲಿ ಊಟಕ್ಕೆ ಸೇರುತ್ತಿದ್ದೆವು. ಒಮ್ಮೆ ಶ್ರೀನಿವಾಸಮೂರ್ತಿ ಮನೆಗೆ, ಇನ್ನೊಮ್ಮೆ ರಮೇಶ ಭಟ್‌ ಮನೆಗೆ ಹೋಗುತ್ತಿದ್ದೆವು. ಅಷ್ಟು ಖುಷಿಯ ದಿನಗಳವು. ಬೆಂಗಳೂರು ನನಗೆ ಎಲ್ಲವನ್ನೂ ಕೊಟ್ಟ ನಗರ.

***

ದೊಡ್ಡಣ್ಣ ಕುರಿತು
ಜನನ: 12–11–1949
ಪತ್ನಿ: ಶಾಂತಾ
ಮಕ್ಕಳು: ಉಷಾರಾಣಿ, ಚೈತ್ರಾ, ಸೂಗೂರೇಶ

ಮದುವೆಯ ವರ್ಷ: 1975
ಮೊದಲ ಚಿತ್ರ: ಕೂಡಿ ಬಾಳಿದರೆ ಸ್ವರ್ಗ ಸುಖ (1981)
ಅಭಿನಯಿಸಿದ ಚಿತ್ರಗಳ ಸಂಖ್ಯೆ: 600ಕ್ಕೂ ಹೆಚ್ಚು

ಪ್ರತಿಕ್ರಿಯಿಸಿ (+)