ಭಾನುವಾರ, ಡಿಸೆಂಬರ್ 8, 2019
25 °C

ಯಕ್ಷ ವೇದಿಕೆಯಲ್ಲಿ ಜನಜಾಗೃತಿ

Published:
Updated:
ಯಕ್ಷ ವೇದಿಕೆಯಲ್ಲಿ ಜನಜಾಗೃತಿ

ಪೌರಾಣಿಕ, ಸಾಮಾಜಿಕ ಪ್ರಸಂಗಗಳ ಪ್ರದರ್ಶನದೊಂದಿಗೆ ಜನಜಾಗೃತಿಗಾಗಿ ಯಕ್ಷಗಾನವನ್ನು ಬಳಸಿಕೊಳ್ಳುತ್ತಿರುವ ತಂಡ ಕರ್ನಾಟಕ ಕಲಾದರ್ಶಿನಿ. 20 ವರ್ಷಗಳಿಂದ ನಗರ ಹಾಗೂ ರಾಜ್ಯದ ಇತರ ಕಡೆಗಳಲ್ಲಿ ಪ್ರತಿವರ್ಷ ನೂರಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನಗಳನ್ನು ಈ ತಂಡ ನೀಡಿದೆ.

ಉಡುಪಿಯ ಶ್ರೀನಿವಾಸ್‌ ಸಾಸ್ತಾನ ಅವರು ಈ ತಂಡದ ಮುಖಂಡ. ತಮ್ಮ 13ನೇ ವಯಸ್ಸಿನಲ್ಲಿ ಯಕ್ಷಗಾನ ಕಲಿಕೆ ಆರಂಭಿಸಿದ ಶ್ರೀನಿವಾಸ್‌ ಅವರು ನಗರಕ್ಕೆ ಬಂದದ್ದು 1984ರಲ್ಲಿ. ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ ಕ್ಲರ್ಕ್‌ ಆಗಿದ್ದ ಅವರು ವೃತ್ತಿಯೊಂದಿಗೆ ಪ್ರವೃತ್ತಿಯಾಗಿ ಯಕ್ಷಗಾನವನ್ನೂ ಮುನ್ನಡೆಸಿಕೊಂಡು ಬಂದರು.

ಕರ್ನಾಟಕ ಕಲಾದರ್ಶಿನಿ ಕಳೆದ 15 ವರ್ಷಗಳಿಂದ ‘ಎ’ ಶ್ರೇಣಿಯಲ್ಲಿಯೇ ಗುರುತಿಸಿಕೊಂಡು ಬಂದಿದೆ. ಏಡ್ಸ್‌, ಸಾಕ್ಷರತೆ, ತಂಬಾಕು, ಮದ್ಯಪಾನ ನಿಷೇಧ, ಆರ್ಥಿಕ ಸಾಕ್ಷರತೆ, ಮಹಿಳಾ ಸಬಲೀಕರಣ, ನೋಟು ರದ್ದತಿ, ಸ್ವಚ್ಛ ಭಾರತ, ಆರೋಗ್ಯ ಮಾಹಿತಿ ಕುರಿತಂತೆ 30 ನಿಮಿಷದಿಂದ 2 ಗಂಟೆಯ ಯಕ್ಷಗಾನ ಪ್ರಸಂಗಗಳನ್ನು ನಿರ್ಮಿಸಿದೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಈ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಿ, ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ‘ಯಕ್ಷಗಾನದ ಚೌಕ್ಕಟ್ಟಿನಲ್ಲಿ ಪೌರಾಣಿಕ ಪಾತ್ರಗಳ ಮೂಲಕ ಹೊಸ ಕತೆಗಳನ್ನು ರಚಿಸಿಕೊಂಡು ಯಕ್ಷಗಾನ ಪ್ರಸಂಗ ಆಯೋಜಿಸುತ್ತೇವೆ’ ಎಂದು ಹೇಳುತ್ತಾರೆ ಶ್ರೀನಿವಾಸ್‌.

ಕರ್ನಾಟಕ ಕಲಾದರ್ಶಿನಿ ಸಾಂಪ್ರದಾಯಿಕ ಯಕ್ಷಗಾನ ಪ್ರದರ್ಶನಕ್ಕೆ ಹೆಚ್ಚು ಒತ್ತು ನೀಡಿದರೂ ನಗರದ ಬದಲಾದ ಜೀವನಶೈಲಿಗೆ ಅನುಗುಣವಾಗಿ 3 ಗಂಟೆಯ ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸುತ್ತದೆ. ಈ ವರ್ಷ ‘ಮಕ್ಕಳತ್ತ ಯಕ್ಷಗಾನ– ಜನಜಾಗೃತಿಗಾಗಿ ಯಕ್ಷಗಾನ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದೆ.

ನಗರಕ್ಕೆ ಬಂದ ಆರಂಭದಲ್ಲಿ ಶ್ರೀನಿವಾಸ್‌ ಅವರು ಯಕ್ಷಗಾನ ಪ್ರದರ್ಶನ ನೀಡುತ್ತಿದ್ದರು. ನಂತರ ತಮ್ಮ ಬಿಡುವಿನ ವೇಳೆಯಲ್ಲಿ ಶಾಲೆ, ಸಂಘಗಳಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಲು ಆರಂಭಿಸಿದರು. ಆಗ ಇಲ್ಲಿ ಒಂದೆರಡು ಯಕ್ಷಗಾನ ತಂಡಗಳಷ್ಟೇ ಇದ್ದವು. 1980ರಲ್ಲಿ ಯಕ್ಷಗಾನ ತಂಡ ‘ಕರ್ನಾಟಕ ಕಲಾ ದರ್ಶಿನಿ’ ಆರಂಭಿಸಿದರು. ಅಲ್ಲಿಂದ ತಮ್ಮ ಚಟುವಟಿಕೆಗಳನ್ನು ವಿಸ್ತರಿಸುತ್ತಾ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದಾರೆ.

ನಗರದಲ್ಲಿ ಮಕ್ಕಳ ಯಕ್ಷಗಾನ ತಂಡವನ್ನು ಆರಂಭಿಸಿದ ಹೆಗ್ಗಳಿಕೆ ಅವರದು. ಈಗ ’ಕರ್ನಾಟಕ ಕಲಾ ದರ್ಶಿನಿ’ ತಂಡ ಮಕ್ಕಳಿಗೆ ಯಕ್ಷಶಿಕ್ಷಣ ನೀಡುತ್ತಾ ಅನೇಕ ಮಕ್ಕಳು ಹಾಗೂ ಮಹಿಳಾ ಕಲಾವಿದರನ್ನು ರಂಗಕ್ಕೆ ತಂದಿದೆ. ‘ಯಕ್ಷಗಾನಕ್ಕೆ ಮೊದಲ ಆದ್ಯತೆ’ ಎಂಬುದು ಶ್ರೀನಿವಾಸ್‌ ಬದ್ಧತೆ. ಈ ಕಾರಣಕ್ಕೆ ವೃತ್ತಿಯಲ್ಲಿ ಬಡ್ತಿಯನ್ನೇ ನಿರಾಕರಿಸಿದ್ದರು. ಯಕ್ಷಗಾನದಲ್ಲಿ 45 ವರ್ಷ ಅನುಭವ ಹೊಂದಿರುವ ಶ್ರೀನಿವಾಸ್‌ ಅವರು ಕರ್ನಾಟಕ ಯಕ್ಷಗಾನ ಹಾಗೂ ಬಯಲಾಟ ಅಕಾಡೆಮಿಯ ನಿರ್ದೇಶಕರೂ ಆಗಿದ್ದರು.

ಈ ತಂಡ ಅಮೆರಿಕದ ಕ್ಯಾಲಿಫೋರ್ನಿಯಾ, ನ್ಯೂಜೆರ್ಸಿ, ಜರ್ಮನಿಯ ಬರ್ಲಿನ್‌ನಲ್ಲಿ ಮೂರು ಬಾರಿ, ಕುವೈತ್‌, ಮಸ್ಕತ್‌, ಬಹರೈನ್‌, ಸಿಂಗಪುರ, ಚೀನಾದಲ್ಲಿ ನಾಲ್ಕು ಬಾರಿ ಯಕ್ಷಗಾನಗಳನ್ನು ಪ್ರದರ್ಶಿಸಿದೆ. ಈ ತಂಡದಲ್ಲಿ 16 ಸದಸ್ಯರಿದ್ದಾರೆ. ಸುಬ್ರಾಯ ಹೆಬ್ಬಾರ್‌, ಶ್ರೀಧರ್‌ ಕಾಂಚಾಣ್‌, ರಮೇಶ್‌ ಆಡುಕಟ್ಟೆ, ಸುರೇಶ್‌ ತಂತ್ರಾಡಿ, ಗಣೇಶ್‌ ನಾಯಕ್‌, ವಾಸುದೇವ ಹೆಗಡೆ, ರಾಜು ಪೂಜಾರಿ, ವಿಶ್ವನಾಥ ಶೆಟ್ಟಿ, ಗಂಗಾಧರ, ಶ್ರೀಧರ್‌ ತಂತ್ರಾಡಿ, ವಜ್ರಕುಮಾರ್‌ ಜೈನ್‌, ಸುಬ್ರಹ್ಮಣ್ಯ ನಾವುಡ, ನರಸಿಂಹ ಆಚಾರಿ, ಗೌತಮ್‌.

ವಿಳಾಸ: ಕರ್ನಾಟಕ ಕಲಾದರ್ಶಿನಿ, ನಂ.894, 10ನೇ ಎ ಅಡ್ಡರಸ್ತೆ, ಆರ್‌.ಬಿ.ಐ ಲೇಔಟ್‌, ಜೆ.ಪಿ. ನಗರ 7ನೇ ಹಂತ. ಮಾಹಿತಿಗೆ: 98440 32972. ಇ–ಮೇಲ್‌– kkdbangalore@gmail.com

ಪ್ರತಿಕ್ರಿಯಿಸಿ (+)