ಭಾನುವಾರ, ಡಿಸೆಂಬರ್ 15, 2019
18 °C

ಮಳೆ ಸುರಿತದ ಹಿಂದಿನ ಸತ್ಯ

ಬಿಂಡಿಗನವಿಲೆ ಭಗವಾನ್ Updated:

ಅಕ್ಷರ ಗಾತ್ರ : | |

ಮಳೆ ಸುರಿತದ ಹಿಂದಿನ ಸತ್ಯ

ಹವಾಮಾನ ಇಲಾಖೆ ಅಧಿಕಾರಿಗಳು ಮಳೆಯಾಗುತ್ತದೆಂದು ತಪ್ಪು ಮುನ್ಸೂಚನೆ ನೀಡುವ ಮೂಲಕ ತಮಗೆ ನಷ್ಟ ಉಂಟುಮಾಡಿದ್ದಾರೆ ಎಂದು ಪೊಲೀಸರಿಗೆ ಮಹಾರಾಷ್ಟ್ರದ ಭೀಡ್ ಜಿಲ್ಲೆಯ ಹಳ್ಳಿಯೊಂದರ ರೈತರು ದೂರು ನೀಡಿದ್ದಾರೆ (ಪ್ರ.ವಾ., ಜುಲೈ 15). ಇದು ಮೇಲ್ನೋಟಕ್ಕೆ ವಿಲಕ್ಷಣವೆನ್ನಿಸಿದರೂ ಮಳೆ ಕುರಿತ ವಾಸ್ತವವನ್ನು ಅರಿಯಲು ಪೂರಕವಾಗಿದೆ.

ಬಾಲಕನೊಬ್ಬ ಫುಟ್‌ಬಾಲನ್ನು ದರ್ಜಿಯ ಬಳಿ ತಂದು ಅದಕ್ಕೆ ಒಂದು ಚೂರೂ ಬಟ್ಟೆ ವ್ಯರ್ಥವಾಗದಂತೆ ಹೊದಿಕೆ ಹೊಲಿಯಲು ಹೇಳಿದರೆ ಅದೆಷ್ಟು ಬಾಲಿಶ!  ಅದರಂತೆ ಮೋಡದ ರಚನೆ, ಅದರಿಂದ ಬೀಳುವ ಮಳೆ ಇದಮಿತ್ಥಂ ಎನ್ನಲು ಬಾರದು.  ನಿಜವೇ, ಚಂದ್ರನಲ್ಲೋ ನೆರೆಯ ಗ್ರಹದಲ್ಲೋ ಗಗನ ನೌಕೆಯನ್ನು ಇಂತಿಷ್ಟೇ ಸಮಯಕ್ಕೆ, ಇಂಥದ್ದೇ  ಕ್ಷೇತ್ರದಲ್ಲಿ ಇಳಿಸಬಹುದು. ಆದರೆ ನಾಳೆ ಮಳೆ ಸುರಿಯುವುದೋ ಇಲ್ಲವೋ ಹೇಳಲಾಗದು. ಇದಕ್ಕೆ ಉತ್ತರ ಸ್ಪಷ್ಟ ಇದೆ.

ಇಡೀ ವಾತಾವರಣ ಒಂದು ಗೊಂದಲದ ಗೂಡು. ಅನಿಶ್ಚಯ, ಅಸ್ತವ್ಯಸ್ತದ ಕಾರುಬಾರು. ಭಾರತದಲ್ಲಿ ಕೋಟ್ಯಂತರ  ರೈತರು  ವಾಡಿಕೆಯಂತೆ ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಬೀಳುವ ಮುಂಗಾರು ಮಳೆ ಎದುರು ನೋಡುವುದರಿಂದ ಅವರ ಕಾತರ ಸಹಜವೇ. ಆದರೆ ಮಳೆಯಾಗುವುದೋ ಇಲ್ಲವೋ  ಎಂಬುದನ್ನು ನಿಖರವಾಗಿ ಏಕೆ ನಿಷ್ಕರ್ಷಿಸಲಾಗದು, ನಿಜಾಂಶವೇನು ಎಂಬುದನ್ನು ತಿಳಿಯುವ ಅಗತ್ಯವಿದೆ.

ಮಳೆ, ಮಾರುತದ ಕಳೆದ 130 ವರ್ಷಗಳ ಇತಿಹಾಸವನ್ನು ಪರಾಮರ್ಶಿಸಿ ಮುಂದೊದಗುವ ಸನ್ನಿವೇಶಗಳನ್ನು ತರ್ಕಿಸುವ ಪರಂಪರಾಗತ ವಿಧಾನವೂ ಉಂಟು. ಮತ್ತೆ ಅದೇ ಯಕ್ಷಪ್ರಶ್ನೆ- ವಿಜ್ಞಾನ ಯುಗದಲ್ಲೂ ಹವಾಮಾನ ಮುನ್ನೋಟಕ್ಕೆ ಏಕಾದರೂ ಗ್ರಹಣ ಹಿಡಿಯಬೇಕು?

ಕಳೆದ ಇಪ್ಪತ್ತು ವರ್ಷಗಳಿಗೆ ಹೋಲಿಸಿದರೆ  ಈಗ ಮಳೆ, ಮಾರುತದ ಮುನ್ಸೂಚನೆ ತಕ್ಕಮಟ್ಟಿಗೆ ನಿಖರವಾಗಿ ನೀಡಬಹುದಾದಷ್ಟು ವಿಜ್ಞಾನದ ಪ್ರಗತಿಯಾಗಿದೆ. ‘ಇದೋ ಭೀಕರ ಪ್ರವಾಹ,  ಸುನಾಮಿ ಅಟ್ಟಿಸಿಕೊಂಡು ಬರುತ್ತಿದೆ, ಅತಿ ವೇಗದಲ್ಲಿ ಗಾಳಿ ಬೀಸಲಿದೆ’ ಮುಂತಾಗಿ ವಿಜ್ಞಾನಿಗಳು ಎಚ್ಚರಿಸಬಲ್ಲರು.

ಸುರಕ್ಷಿತ ಪ್ರದೇಶಗಳಿಗೆ ಹೋಗುವಂತೆ  ನಲವತ್ತು ನಿಮಿಷಗಳ ಮುಂಚಿತವಾಗಿಯೇ ಸೂಚಿಸಬಲ್ಲರು. ಜಗತ್ತಿನಾದ್ಯಂತ 11 ಸಾವಿರದಷ್ಟು ಹವಾಮಾನ ಅವಲೋಕನ ಘಟಕಗಳು ತಾಪಮಾನ, ಗಾಳಿಯ ವೇಗ ಮತ್ತು ದಿಕ್ಕು, ಆರ್ದ್ರತೆ ಮೇಲೆ ಹದ್ದಿನ ಕಣ್ಣಿಟ್ಟಿವೆ. ಸಮೀಪದ ಸಂಶೋಧನಾ ಕೇಂದ್ರಗಳಿಗೆ ಆಗಿಂದಾಗ್ಗೆ ಮಾಹಿತಿ ರವಾನಿಸುತ್ತವೆ.

ಕರಾರುವಾಕ್ಕಾದ ಮಳೆ ಮುನ್ಸೂಚನೆಗೆ ಅಡ್ಡಿಯಾಗುವ ಅಂಶಗಳು ಹಲವು. ವಾತಾವರಣ ವಿಶಾಲ. ಕಂಪ್ಯೂಟರ್ ಮಾದರಿಗಳು ಕೇವಲ ಅಂದಾಜು. ಮೋಡದ  ಎಷ್ಟು ಪ್ರಮಾಣ ತೇವಾಂಶದಿಂದ ಕೂಡಿದೆ, ಮಳೆಯ ತೀವ್ರತೆ ಎಷ್ಟು ಎಂಬುದರ ಕುರಿತು ಬಿಂಬಿಸುವ ಮಾದರಿಯ ನಿಖರತೆಯೇ ಪ್ರಶ್ನಾರ್ಹ.

ವಾತಾವರಣದಲ್ಲಾಗುವ ವ್ಯತ್ಯಯದ ನಿಯಮಗಳು ತಿಳಿದಿದ್ದರೂ ಹವಾಮಾನ ಮುನ್ಸೂಚನೆ ಹುಸಿಯಾಗಬಹುದು. ಸೂಪರ್ ಕಂಪ್ಯೂಟರ್‌ಗಳಿಗೂ  ನಿಖರತೆ ಅಲಭ್ಯ. ಅಡಿ ಅಡಿಗೂ ವಾತಾವರಣ ಭಿನ್ನ ಭಿನ್ನ. ಸಣ್ಣ ಪುಟ್ಟ ಏರುಪೇರುಗಳೇ ಗಮನಾರ್ಹ ಅಸ್ಪಷ್ಟತೆಗೆ ಕಾರಣವಾಗುತ್ತವೆ.

ಉಷ್ಣತೆ, ಗಾಳಿಯ ಏರುಪೇರು ನಿಖರವಾಗಿ ಅಳೆಯುವ  ಯಾವುದೇ ಸಂಕೀರ್ಣ ಉಪಕರಣವನ್ನು ಈ ತನಕ ಸಿದ್ಧಪಡಿಸಲಾಗಿಲ್ಲ. ಈ ನಿಟ್ಟಿನಲ್ಲಿ ‘ಪತಂಗ ಪರಿಣಾಮ’ ಎನ್ನುವ ವಿದ್ಯಮಾನ ಸ್ವಾರಸ್ಯಕರವಾಗಿದೆ. ಬ್ರೆಜಿಲ್‌ನಲ್ಲಿ ಒಂದು ಚಿಟ್ಟೆ ತನ್ನ ರೆಕ್ಕೆ ಬಡಿದರೆ ಗಲ್ಫ್ ಅಫ್ ಮೆಕ್ಸಿಕೊದಲ್ಲಿ ಬಿರುಗಾಳಿ ಪರಿಣಮಿಸಬಹುದು! ಚಿಟ್ಟೆ ಬಿರುಗಾಳಿಯೆಬ್ಬಿಸುವುದೆಂದಲ್ಲ. ಅದಕ್ಕೆ ಅದರ ಕೊಡುಗೆಯುಂಟು ಎಂದು ಈ ಹೆಸರು.

ಪ್ರತೀ ದಿನ ಒಂದು ಪ್ರದೇಶದ ಗಾಳಿ ಬಿಸಿಯೇರುವಿಕೆ ಮತ್ತು ತಂಪಾಗುವಿಕೆ  ಒಂದು  ಆವರ್ತಕ್ಕೊಳಪಟ್ಟಿದೆ. ಸೂರ್ಯೋದಯದಿಂದ ಸೂರ್ಯ ನೆತ್ತಿ ಮೇಲೆ ಬರುವವರೆಗೆ ಬಿಸಿಯೇರಿ ತದನಂತರ ಸೂರ್ಯಾಸ್ತದವರೆಗೆ ಗಾಳಿ ತಣ್ಣಗಾಗುತ್ತ ತೊಡಗುವುದು. ಗಾಳಿ ಎಷ್ಟು ತಾಪವೇರಿಸಿಕೊಂಡಿತು ಎನ್ನುವುದು ಸೂರ್ಯನಿಂದ ಎಷ್ಟು ಪ್ರಮಾಣದಲ್ಲಿ ವಿಕಿರಣಗಳು ಭೂಮಿಗೆ ತಲುಪಿದವು ಎನ್ನುವುದನ್ನು ಅವಲಂಬಿಸಿದೆ.

ಇದರ ಜೊತೆಗೆ ಸಾಗರ ಮಟ್ಟಕ್ಕೆ ಹೋಲಿಕೆಯಾಗಿ ಆಯಾ ಪ್ರದೇಶದ ಎತ್ತರ, ಆಸುಪಾಸಿನ ನೆಲ, ನೀರು, ಹಸಿರು ಪ್ರಮುಖ ಪಾತ್ರ ವಹಿಸುತ್ತವೆ. ಸೂರ್ಯನಿಂದ ಬರುವ ವಿಕಿರಣಗಳ ತೀವ್ರತೆಯನ್ನು ಖಚಿತವಾಗಿ ಅಳೆಯುವುದಕ್ಕೆ ಪೂರ್ತಿ ಸಾಧ್ಯವಾಗಿಲ್ಲ. ಇದೇ ಮಳೆಯ ಮುನ್ಸೂಚನೆಗೆ ಮಹತ್ವದ ತೊಡಕು. ಸೂರ್ಯ  ಒಂದೇ ತೆರನಾಗಿ ತನ್ನ ರಶ್ಮಿಗಳನ್ನು ಬಿಡುಗಡೆಗೊಳಿಸುವುದಿಲ್ಲ.

ಸೌರ ಕಲೆಗಳೆಂಬ ಸೂರ್ಯನಲ್ಲಿನ ಕಡಿಮೆ ತಾಪದ ವಲಯಗಳು ಹನ್ನೊಂದು ವರ್ಷಗಳ ಆವರ್ತದಲ್ಲಿ ತಮ್ಮ ಚಿತ್ತಾರ ಬದಲಿಸಿಕೊಳ್ಳುತ್ತವೆ. ಹೀಗಿರುವಾಗ ಮಳೆ ಇಂತಿಷ್ಟೇ ಪ್ರಮಾಣದಲ್ಲಿ ಇಷ್ಟು ದಿನಗಳವರೆಗೆ ಸುರಿಯುವುದೆಂದು ಹೇಗೆ ಹೇಳಲಾದೀತು? ಹಾಗೆಂದು ತಜ್ಞರು ಕೈ ಚೆಲ್ಲುತ್ತಿಲ್ಲ.

ಸೂರ್ಯನ ವಿಕಿರಣಗಳ ತೀವ್ರತೆಯನ್ನು ಅಳೆಯುವ ಉಪಗ್ರಹಗಳು ಧಾರಾಳವಾಗಿಯೇ ಸ್ಥಾಪಿತವಾಗಿವೆ. ಹಾಗಾಗಿಯೇ ಹವಾಮಾನ ಭವಿಷ್ಯ ನಿಖರತೆಯತ್ತ ಮುಖ ಮಾಡಿದೆ. ತನ್ನ ಇತಿ ಮಿತಿ ಮೀರುತ್ತಲೇ ಪರಿಶ್ರಮಿಸಿ ದಾಪುಗಾಲಿಡುವುದು ವಿಜ್ಞಾನದ ಜಾಯಮಾನ.

ಮಳೆ ಮುನ್ಸೂಚನೆ ನಿಖರತೆಯ ಮಾತಿರಲಿ; ಮನುಷ್ಯ ಕೈಯಾರೆ ಹೊಣೆಗೇಡಿತನದಿಂದ ಮಾಡಿಕೊಂಡಿರುವ ಅವಾಂತರವೇನು ಕಡಿಮೆಯೇ? ಹಸಿರು ಬೋಳಿಸುವ, ಜಲಮೂಲಗಳನ್ನು ಕಲುಷಿತಗೊಳಿಸುವ, ನಿಧಿ ನಿಕ್ಷೇಪಗಳಿಗೆ ಭೂಮಿ, ಬೆಟ್ಟ, ಗುಡ್ಡ ಬಗೆಯುವ ಅವನ ಪ್ರಹಾರ ಎಗ್ಗಿಲ್ಲದೆ ಸಾಗಿದೆ. ವನ್ಯ ಮೃಗಗಳು ಅತ್ತ ಕಾಡಿಲ್ಲದೆ, ಇತ್ತ ನಾಡಿಗೂ ಬರಲಾಗದೆ ಅಬ್ಬೇಪಾರಿಗಳಾಗಿವೆ.

ಅಂದಹಾಗೆ ನಾಳೆಯಿಂದ ಇಂತಿಷ್ಟು ದಿನ ವರ್ಷಧಾರೆಯೋ, ತುಂತುರೋ ಇಲ್ಲವೇ ಒಣಹವೆಯೋ ಎನ್ನುವುದರ ನಿಖರತೆ ನಮ್ಮನ್ನು ತೀವ್ರವಾಗಿ ಬಾಧಿಸುವ ಅಗತ್ಯವಾದರೂ ಏಕೆ? ಅಷ್ಟಕ್ಕೂ ಮೋಡ ಮೂಡಿದ ಮಾತ್ರಕ್ಕೆ ವರ್ಷಧಾರೆ ಎನ್ನುವಂತಿಲ್ಲ. ಮೋಡವೆಂದರೆ ಕಣ್ಣಿಗೆ ಕಾಣುವ ಜಲಬಾಷ್ಪ. ಮೋಡದಿಂದ ನಮಗೆ ಸಂದಾಯವಾಗಬಹುದಾದುದು ಮಳೆಯೆಂಬ ಸುರಿಯುವ ನೀರು.

ಮೋಡದಲ್ಲಿನ ನೀರ ಹನಿಗಳು ಭಾರವಿರುವುದರಿಂದ  ಗುರುತ್ವದಿಂದಾಗಿ ಕ್ರಮೇಣ ಅದರ ಕೆಳಭಾಗಕ್ಕೆ ಸರಿಯುತ್ತವೆ. ಕೆಲವು ಮಳೆಯಾದರೆ, ಮತ್ತೆ ಕೆಲವು ಗಾಳಿಯ ಬಿಸಿ ತಟ್ಟಿ ಆವಿಯಾಗುತ್ತವೆ. ಆದ್ದರಿಂದ  ಮೋಡಗಳು ನಾಲ್ಕು ಹನಿಗಳನ್ನೂ ಸಹ ಚೆಲ್ಲುತ್ತವೆಂಬ ಖಾತರಿಯಿಲ್ಲ. ಮಳೆ ಭವಿಷ್ಯ ನಿಖರವಾಗಿರದು, ನಿಖರತೆಗೆ ಹತ್ತಿರವಷ್ಟೇ. ನೈಸರ್ಗಿಕ ಆಗುಹೋಗುಗಳಿಗೆ ಅದರದೇ ಆದ ಸೂತ್ರಗಳಿವೆ.

ನಿಸರ್ಗಕ್ಕೆ ನಿಗೂಢತೆಯೇ ಭೂಷಣ. ಮೋಡ ಬಿತ್ತನೆ ಬೀರಬಹುದಾದ ಮಾರಕ ಪರಿಣಾಮಗಳನ್ನು ವಿವರವಾಗಿ ಅಧ್ಯಯನ ಮಾಡಲು ನಮಗೆ ಪುರಸತ್ತು ಇಲ್ಲ.  ‘ಎತ್ತು ಈತು, ಕೊಟ್ಟಿಗೆಗೆ ಕಟ್ಟು’ ಎನ್ನುವಷ್ಟು ಅವಸರದ್ದಾಗಿದೆ. ತ್ವರಿತವಾಗಿ ಮರಿ ಹೊರಬರಲೆಂದು ತತ್ತಿಯಲ್ಲಿ ಬಿರುಕು ಮೂಡಿಸಿದರೆ ಎಂಥ ಘೋರ ಅಪಾಯ?

ಪ್ರತಿಕ್ರಿಯಿಸಿ (+)