ಮಂಗಳವಾರ, ಡಿಸೆಂಬರ್ 10, 2019
17 °C

ಜಿಎಸ್‌ಟಿ: ಪ್ರಯಾಣಿಕರ ವಾಹನ ಮಾರಾಟ ಇಳಿಕೆ

Published:
Updated:
ಜಿಎಸ್‌ಟಿ: ಪ್ರಯಾಣಿಕರ ವಾಹನ ಮಾರಾಟ ಇಳಿಕೆ

ನವದೆಹಲಿ : ಜಿಎಸ್‌ಟಿ ಪ್ರಭಾವಕ್ಕೆ ಒಳಗಾಗಿ ವಾಹನ ಮಾರಾಟ ಜೂನ್‌ ತಿಂಗಳಿನಲ್ಲಿ ಇಳಿಕೆ ಕಂಡಿದೆ. ಆರು ತಿಂಗಳ ಬಳಿಕ ಜೂನ್‌ನಲ್ಲಿ ಪ್ರಯಾಣಿಕ ವಾಹನ ಮಾರಾಟ ಶೇ 11 ರಷ್ಟು ಇಳಿಕೆಯಾಗಿದೆ.

ಹೊಸ ವ್ಯವಸ್ಥೆಗೆ ವಲಸೆ ಬರುವುದರಿಂದ ಆಗಬಹುದಾದ ನಷ್ಟ ತಪ್ಪಿಸಲು ವಿತರಕರು ಕಂಪೆನಿಗಳಿಂದ ಹೊಸದಾಗಿ ವಾಹನಗಳನ್ನು ದಾಸ್ತಾನು ಮಾಡದೇ ಇರಲು ನಿರ್ಧರಿಸಿದ್ದರು. ಇದರಿಂದ ಮಾರಾಟ ಇಳಿಕೆ ಕಾಣುವಂತಾಯಿತು ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಂ) ತಿಳಿಸಿದೆ.

ನೋಟು ರದ್ದತಿ ಬಳಿಕ ಜನವರಿಯಿಂದ ಪ್ರಯಾಣಿಕ ವಾಹನ ಮಾರಾಟ ಚೇತರಿಕೆ ಹಾದಿಗೆ ಮರಳಿತ್ತು. ಆದರೆ ಜಿಎಸ್‌ಟಿ ಪ್ರಭಾವಕ್ಕೆ ಒಳಗಾಗಿ ಜೂನ್ ತಿಂಗಳಿನಲ್ಲಿ ಮತ್ತೆ ಇಳಿಕೆ ಕಂಡಿದೆ.  

2016ರ ಜೂನ್‌ನಲ್ಲಿ 2.23 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದವು. 2017ರ ಜೂನ್‌ನಲ್ಲಿ 1.98 ಲಕ್ಷ ವಾಹನಗಳು ಮಾರಾಟವಾಗಿವೆ. ಅಂದರೆ ಮಾರಾಟದಲ್ಲಿ ಶೇ 11 ರಷ್ಟು ಇಳಿಕೆ ಕಂಡುಬಂದಿದೆ.

2013ರ ನಂತರ ಪ್ರಯಾಣಿಕ ವಾಹನ ಮಾರಾಟದ ಗರಿಷ್ಠ ಕುಸಿತ ಇದಾಗಿದೆ. 2013 ರಂದು ಶೇ 13 ರಷ್ಟು ಇಳಿಕೆಯಾಗಿತ್ತು.

ಕಾರು ಮಾರಾಟ 1.54 ಲಕ್ಷದಿಂದ 1.37 ಲಕ್ಷಕ್ಕೆ ಶೇ 11.24 ರಷ್ಟು ಇಳಿಕೆಯಾಗಿದೆ. ಇದೂ ಸಹ 2013ರ ನಂತರದ ಗರಿಷ್ಠ ಇಳಿಕೆಯಾಗಿದೆ.

ಜನವರಿ–ಏಪ್ರಿಲ್‌ ಅವಧಿಯಲ್ಲಿ ಪ್ರಯಾಣಿಕ ವಾಹನ ಮಾರಾಟಶೇ 4.38ರಷ್ಟು ಏರಿಕೆ ಕಂಡಿತ್ತು.

ನೋಟು ರದ್ದತಿ ಬಳಿಕ ಜಿಎಸ್‌ಟಿಯು ಉದ್ಯಮದ ಮೇಲೆ ಪರಿಣಾಮ ಬೀರಿದೆ. ಜನರಿಗೆ ತೆರಿಗೆ ಪ್ರಮಾಣದ ಬಗ್ಗೆ ಅರಿವು ಮೂಡುತ್ತಿದ್ದಂತೆಯೇ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವ ನಿರೀಕ್ಷೆ ಇದೆ ಎಂದು ಎಸ್‌ಐಎಂ ಪ್ರಧಾನ ನಿರ್ದೇಶಕ ವಿಷ್ಣು ಮಾಥೂರ್‌ ಹೇಳಿದ್ದಾರೆ.

ಉತ್ತಮ ಪ್ರಗತಿ ನಿರೀಕ್ಷೆ: ಪ್ರಸ್ತಕ ಆರ್ಥಿಕ ವರ್ಷದಲ್ಲಿ ಪ್ರಯಾಣಿಕ ವಾಹನ ಮಾರಾಟವು ಶೇ 7 ರಿಂದ ಶೇ 9 ರಷ್ಟು ಪ್ರಗತಿ ಕಾಣುವ ನಿರೀಕ್ಷೆ ಇದೆ ಎಂದು ಒಕ್ಕೂಟ ಹೇಳಿದೆ.

ಪ್ರತಿಕ್ರಿಯಿಸಿ (+)