ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೀನ್‌ ಎಡಿಟಿಂಗ್‌’ ಭಾರತಕ್ಕೆ ಅಮೆರಿಕ ನೆರವು

ಮನುಕುಲವನ್ನು ಕಾಡುತ್ತಿರುವ ಮಾರಣಾಂತಿಕ ಕಾಯಿಲೆಗಳಿಗೆ ಈ ತಂತ್ರಜ್ಞಾನದಿಂದ ಪರಿಹಾರ ಸಾಧ್ಯ
Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ಮತ್ತು ಕೃಷಿಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಬಹುದಾದ ‘ವಂಶವಾಹಿ ಮಾರ್ಪಾಟು’ (ಜೀನ್‌ ಎಡಿಟಿಂಗ್‌) ತಂತ್ರಜ್ಞಾನದಲ್ಲಿ ಭಾರತೀಯ ವಿಜ್ಞಾನಿಗಳಿಗೆ ತರಬೇತಿ ನೀಡಲು ಭಾರತ ಸರ್ಕಾರ ಅಮೆರಿಕದ ಜತೆ ಕೈಜೋಡಿಸಿದೆ.

ಮನುಕುಲವನ್ನು ಕಾಡುತ್ತಿರುವ ಹಲವು ಮಾರಣಾಂತಿಕ ಕಾಯಿಲೆಗಳಿಗೆ ವಂಶವಾಹಿ ಮಾರ್ಪಾಟು ಪರಿಹಾರ ಒದಗಿಸಲಿದೆ. ಕೃಷಿ ಕ್ಷೇತ್ರದಲ್ಲೂ ಈ ತಂತ್ರಜ್ಞಾನದ ಬಳಕೆಯಿಂದ ರೈತರಿಗೆ ವರವಾಗಬಹುದಾದ ತಳಿಗಳನ್ನು ಅಭಿವೃದ್ಧಿಪಡಿಸಬಹುದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ವಿಜ್ಞಾನಿಗಳನ್ನು ಈ ಕ್ಷೇತ್ರದಲ್ಲಿ ಸಶಕ್ತಗೊಳಿಸಲು ಮುಂದಾಗಿದೆ.

ವಂಶವಾಹಿಗೆ ಸಂಬಂಧಿಸಿದ ಕಾಯಿಲೆಗಳು ಮಾತ್ರವಲ್ಲದೆ, ತಂದೆ–ತಾಯಿಯ ಕನಸಿಗನುಗುಣವಾಗಿ ಬುದ್ಧಿ ಮತ್ತೆ, ಅಂದ- ಚೆಂದ, ಶಕ್ತಿ, ಸಾಮರ್ಥ್ಯ, ರೋಗ ಮುಕ್ತ ಮಗುವನ್ನು ಪಡೆಯಬಹುದಾದ ಪ್ರಯೋಗವೂ ಅಮೆರಿಕ ಮತ್ತು ಚೀನಾದಲ್ಲಿ ನಡೆದಿದೆ.  ಇಂತಹ ಪ್ರಯತ್ನಗಳು ನಿಸರ್ಗಕ್ಕೆ ವಿರುದ್ಧ ಎಂದು ಸಾಕಷ್ಟು ಟೀಕೆಗಳೂ ಜಾಗತಿಕ ಮಟ್ಟದಲ್ಲಿ ಕೇಳಿ ಬಂದಿವೆ.

ಭಾರತದಲ್ಲೂ ಸಣ್ಣ  ಪ್ರಮಾಣದಲ್ಲಿ ಈ ಪ್ರಯತ್ನಗಳು ನಡೆದಿವೆ. ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು, ಜೀವ ವಿಜ್ಞಾನ ಸಂಸ್ಥೆಗಳು ಮತ್ತು ಪ್ರಯೋಗಾಲಯಗಳಲ್ಲಿಯೇ ತರಬೇತಿ ಪಡೆಯಲು ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದ್ದು, ಇದಕ್ಕೆ ಅಮೆರಿಕದ ‘ಯುಎಸ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ’ ಜತೆ ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆ ಒಪ್ಪಂದ ಮಾಡಿಕೊಂಡಿದೆ.

‘ಭಾರತ ಆರೋಗ್ಯ ಮತ್ತು ಕೃಷಿ ಕ್ಷೇತ್ರಕ್ಕೆ ಸೀಮಿತವಾಗಿ ವಂಶವಾಹಿ ಮಾರ್ಪಾಟು ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಅಪೇಕ್ಷೆ ಹೊಂದಿದೆ’ ಎಂದು ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ದೇಶದಲ್ಲಿ ಈಗಾಗಲೇ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳಿಗೆ ಅಮೆರಿಕ ಸಂಸ್ಥೆಗಳಲ್ಲಿ ಮೂರು ತಿಂಗಳಿಂದ ಒಂದು ವರ್ಷದವರೆಗೆ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ.

ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕೃಷಿ, ಆರೋಗ್ಯ ವಿಜ್ಞಾನ, ಬಯೊ ಎಂಜಿನಿಯರಿಂಗ್‌, ‘ಫಂಡಮೆಂಟಲ್‌ ಬಯಾಲಜಿ’ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುತ್ತಿರುವವರಿಗೆ ಆದ್ಯತೆ ನೀಡಲಾಗುವುದು ಎಂದು ಮೂಲಗಳು ಹೇಳಿವೆ.

ಜೀನ್‌ ಎಡಿಟಿಂಗ್‌ ಎಂದರೇನು?

ಯಾವುದೇ ಜೀವಿಯಲ್ಲಿರುವ ವಂಶವಾಹಿಯ ಡಿಎನ್‌ಎಯನ್ನು ತಮಗೆ ಬೇಕಾದಂತೆ ಮಾರ್ಪಡಿಸುವುದು ಅಥವಾ ತಿದ್ದುವುದನ್ನು ‘ಜೀನ್‌ ಎಡಿಟಿಂಗ್’ ಎನ್ನಲಾಗುತ್ತದೆ. ಈ ಕ್ರಿಯೆಯನ್ನು ಸರಳವಾಗಿ ಹೇಳಬಹುದಾದರೆ, ಒಂದು ಲೇಖನ ಅಥವಾ ಸುದ್ದಿ ಬರೆದಾಗ ಮೊದಲ ಬರಹದ ಕರಡು ಪ್ರತಿಯಲ್ಲಿ ಸಾಕಷ್ಟು ತಪ್ಪುಗಳಿರುತ್ತವೆ.  ಆ ತಪ್ಪುಗಳನ್ನು ತಿದ್ದಿ  ಸರಿಪಡಿಸುವುದಕ್ಕೆ ‘ಎಡಿಟಿಂಗ್’ ಎಂದು ಕರೆಯಲಾಗುತ್ತದೆ. ಅದೇ ರೀತಿ ಜೀನ್‌ನಲ್ಲಿ ಇರಬಹುದಾದ ದೋಷಗಳನ್ನು  ಸರಿಪಡಿಸುವ ಅಥವಾ ಅಲ್ಲಿ ದೋಷ ಮುಕ್ತ ಜೀನ್ ಸೇರಿಸುವ ಕ್ರಿಯೆ ಇದಾಗಿದೆ.

ಒಂದು ಕುಟುಂಬದಲ್ಲಿ ವಂಶಪಾರಂಪರ್ಯವಾಗಿ ಮಧುಮೇಹ, ಕ್ಯಾನ್ಸರ್, ಅಂಧತ್ವದಂತಹ ಕಾಯಿಲೆಗಳು ಹರಿದು ಬರುತ್ತವೆ. ಇದನ್ನು ತಡೆಯಲು ಆ ಕುಟುಂಬದ ಮಹಿಳೆಯ ಅಂಡಾಣುವಿನಲ್ಲಿರುವ ಜೀನ್ ತೆಗೆದು ಬದಲಿ ಆರೋಗ್ಯವಂತ ಜೀನ್ ಅಳವಡಿಸಬಹುದು ಇಲ್ಲವೆ, ಜೀನ್‌ನಲ್ಲಿ ರೋಗ ತರುವ ಅಂಶವನ್ನು ತೆಗೆದು ಹಾಕಬಹುದು ಎಂಬುದು ವಿಜ್ಞಾನಿಗಳ ವಾದ.

ಉದ್ದೇಶಗಳೇನು?

* ವಂಶವಾಹಿ ಮಾರ್ಪಾಟು ಸಂಶೋಧನೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವುದು
* ಹೆಚ್ಚಿನ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದಲ್ಲದೇ, ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ
* ಅಮೆರಿಕ ಮತ್ತು ಇತರ ದೇಶಗಳ ಸಂಶೋಧಕರನ್ನು ಭಾರತಕ್ಕೆ ಆಹ್ವಾನಿಸಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT