ಶನಿವಾರ, ಡಿಸೆಂಬರ್ 14, 2019
22 °C

ವಶಕ್ಕೆ ಪಡೆಯಲು ಸೂಚನೆ: ‘ಸುಪ್ರೀಂ’ಗೆ ಸಿಇಸಿ ಶಿಫಾರಸು

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ವಶಕ್ಕೆ ಪಡೆಯಲು ಸೂಚನೆ: ‘ಸುಪ್ರೀಂ’ಗೆ ಸಿಇಸಿ ಶಿಫಾರಸು

ನವದೆಹಲಿ: ಗಣಿ ಪ್ರದೇಶದಲ್ಲಿ ಪುನರ್ವಸತಿ ಮತ್ತು ಪುನಶ್ಚೇತನ (ಆರ್ ಅಂಡ್ ಆರ್) ಕಾರ್ಯದ ಅನುಷ್ಠಾನವನ್ನು ಕಡ್ಡಾಯ ಮಾಡಿದ್ದರೂ

ಅದನ್ನು ನಿರ್ಲಕ್ಷಿಸಿರುವ ರಾಜ್ಯದ ‘ಬಿ’ ಕೆಟಗರಿಯ 20 ಗಣಿಗಳ ಗುತ್ತಿಗೆ ರದ್ದುಪಡಿಸಿ ವಶಕ್ಕೆ ಪಡೆಯುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಸುಪ್ರೀಂ ಕೋರ್ಟ್‌ಗೆ ಶಿಫಾರಸು ಮಾಡಿದೆ.

ಕೋರ್ಟ್‌ ನಿರ್ದೇಶನದ ಮೇರೆಗೆ ಜುಲೈ 1ರಂದು ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿರುವ ‘ಬಿ’ ವರ್ಗದ ಗಣಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಸಿಇಸಿ ತಂಡ, ಈ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿದೆ.

ಆರ್‌ ಅಂಡ್‌ ಆರ್‌ ಅನುಷ್ಠಾನದತ್ತ ಆಸಕ್ತಿಯನ್ನೇ ತಾಳದ 20 ಗಣಿಗಳ ಪೈಕಿ, ಅಗತ್ಯ ಮಾಹಿತಿಯನ್ನೇ ಒದಗಿಸದ 4 ಗಣಿಗಳನ್ನು ವಶಕ್ಕೆ ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಇನ್ನುಳಿದ 16 ಗಣಿಗಳ ಗುತ್ತಿಗೆ ಪಡೆದವರು ಖಾತರಿ ಹಣ (ಗ್ಯಾರಂಟಿ ಮನಿ) ಪಾವತಿಸಿ ಅನುಷ್ಠಾನ ಕಾರ್ಯ ಆರಂಭಿಸಲು ಒಂದು ತಿಂಗಳ ಗುಡುವು ನೀಡಬಹುದು. ಅದಕ್ಕೆ ತಪ್ಪಿದಲ್ಲಿ ಆ ಗಣಿಗಳನ್ನು ವಶಕ್ಕೆ ಪಡೆಯುವಂತೆ ಸೂಚಿಸಬೇಕು ಎಂದು ಸಿಇಸಿ ವರದಿ ಹೇಳಿದೆ.

‘ಬಿ’ ಕೆಟಗರಿ ಅಡಿ ಗುರುತಿಸಲಾಗಿರುವ ಒಟ್ಟು 62 ಗಣಿಗಳಲ್ಲಿ 58 ಗಣಿ ಕಂಪೆನಿಗಳಿಗೆ ಆರ್‌ ಅಂಡ್‌ ಆರ್‌ ಯೋಜನೆಯ ಅನುಷ್ಠಾನಕ್ಕೆ ಭಾರತೀಯ ಅರಣ್ಯ ಸಂಶೋಧನಾ ಶಿಕ್ಷಣ ಮಂಡಳಿ (ಐಸಿಎಫ್‌ಆರ್‌ಇ)ಯ ಮೇಲುಸ್ತುವಾರಿ ಸಮಿತಿಯು ಐದು ವರ್ಷಗಳ ಹಿಂದೆಯೇ ಅನುಮತಿ ನೀಡಿದೆ. ಆದರೆ, ನಿಯಮಾನುಸಾರ 41 ಗಣಿ ಕಂಪೆನಿಗಳು ಮಾತ್ರ ₹ 103.12 ಕೋಟಿ ಖಾತರಿ ಹಣವನ್ನು ಠೇವಣಿ ರೂಪದಲ್ಲಿ ಇರಿಸಿ ಅನುಷ್ಠಾನ ಕಾರ್ಯ ಆರಂಭಿಸಿವೆ.ಈ 41 ಗಣಿಗಳಲ್ಲಿ ಆರ್‌ ಅಂಡ್‌ ಆರ್‌ ಅನುಷ್ಠಾನ ಕಾರ್ಯ ಶೇ 85ರಷ್ಟಾಗಿದ್ದು, ಮುಕ್ತಾಯದ ಹಂತದಲ್ಲಿದೆ. ಅಲ್ಲಿ ಶೇ 90ರಷ್ಟು ಕೆಲಸ ಪೂರ್ಣಗೊಂಡ ಕೂಡಲೇ ಆ ಕಂಪೆನಿಗಳು ಇರಿಸಿರುವ ಖಾತರಿ ಹಣದಲ್ಲಿ ಶೇ 90ರಷ್ಟನ್ನು ಮರಳಿ ನೀಡಬಹುದು. ಮಿಕ್ಕ ಶೇ 10ರಷ್ಟು ಹಣವನ್ನು ಅನುಷ್ಠಾನ ಕಾರ್ಯ ಪೂರ್ಣಗೊಂಡ ಮೇಲೆ ಮರಳಿಸಬೇಕು. ಈ ಕುರಿತು ಪರಿಶೀಲನೆ ನಡೆಸಲು ಮೇಲುಸ್ತುವಾರಿ ಸಮಿತಿಗೆ ಸೂಚಿಸಲಾಗಿದೆ ಎಂದು ಸಿಇಸಿ ಸದಸ್ಯ ಕಾರ್ಯದರ್ಶಿ ಅಮರನಾಥ ಶೆಟ್ಟಿ ತಿಳಿಸಿದ್ದಾರೆ.

ಆರ್‌ ಅಂಡ್‌ ಆರ್‌ ಅನುಷ್ಠಾನ ಕಾರ್ಯವನ್ನು ಕೇವಲ ಶೇ 40ರಷ್ಟು ಪೂರ್ಣಗೊಳಿಸಿರುವ ಆರು ಗಣಿಗಳನ್ನು ಗುರುತಿಸಲಾಗಿದ್ದು, ಈ ಗಣಿಗಳ ಗುತ್ತಿಗೆ ಪಡೆದವರಿಗೆ ಕಾಲಮಿತಿ ನಿಗದಿಪಡಿಸಿ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಬಹುದು ಎಂದು ವರದಿ ಹೇಳಿದೆ. ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್‌ಗೆ 2014ರಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಫೆಡರೇಷನ್‌ ಆಫ್‌ ಇಂಡಿಯನ್‌ ಮೈನಿಂಗ್‌ ಇಂಡಸ್ಟ್ರೀಸ್‌ (ಫೆಮಿ) ಸಂಸ್ಥೆ, ಆರ್ ಅಂಡ್ ಆರ್ ಅನುಷ್ಠಾನಕ್ಕಾಗಿ ‘ಬಿ’ ಕೆಟಗರಿಯ ಗಣಿ ಕಂಪೆನಿಗಳು ಠೇವಣಿ ಇರಿಸಿರುವ ಖಾತರಿ ಹಣ ಹಿಂದಿರುಗಿಸುವಂತೆ ಕೋರಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಸಿಇಸಿಗೆ ಕೋರ್ಟ್‌ ನಿರ್ದೇಶನ ನೀಡಿದ್ದರಿಂದ ಈಗ ವರದಿ ಸಲ್ಲಿಸಲಾಗಿದೆ.

ಗಣಿ– ಗಡಿ ನಿರ್ಣಯ

ಬಳ್ಳಾರಿ ಮೀಸಲು ಅರಣ್ಯ ಪ್ರದೇಶದ ಅಂಚಿನಲ್ಲಿರುವ ಕರ್ನಾಟಕ– ತೆಲಂಗಾಣದ (ಪ್ರಕರಣ ದಾಖಲಾದಾಗ ಇದು ಆಂಧ್ರ) ಅಂತರ್‌ರಾಜ್ಯ ಗಣಿ ಗಡಿಯಲ್ಲಿರುವ ‘ಬಿ–1’ ಕೆಟಗರಿಯ 7 ಗಣಿಗಳ ಗುತ್ತಿಗೆದಾರರಿಗೆ ಗಣಿಯ ಗಡಿ ನಿರ್ಧರಿಸಿ ನಕ್ಷೆಯನ್ನು ಒದಗಿಸದೇ ಇರುವುದರಿಂದ ಅಲ್ಲಿ ಆರ್‌ ಅಂಡ್‌ ಆರ್‌ ಯೋಜನೆ ರೂಪಿಸಲಾಗಿಲ್ಲ. ಈ ಕುರಿತು ಸರ್ವೆ ನಡೆಸಿ ನಕ್ಷೆ ರೂಪಿಸಿದ್ದಲ್ಲಿ ಕೂಡಲೇ ಒದಗಿಸುವಂತೆ ಸೂಚಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸರ್ವೆ ಆಫ್‌ ಇಂಡಿಯಾದ ನೇತೃತ್ವದಲ್ಲಿ ಗಣಿ– ಗಡಿಯನ್ನು ನಿರ್ಧರಿಸುವಂತೆ ಎರಡೂ ರಾಜ್ಯ ಸರ್ಕಾರಗಳಿಗೆ 2013ರ ಏಪ್ರಿಲ್‌ 18ರಂದು ಕೋರ್ಟ್‌ ಆದೇಶಿಸಿದ್ದು, ಆ ಆದೇಶವನ್ನು ಪಾಲಿಸಲಾಗಿದೆಯೇ, ಪಾಲಿಸಿದ್ದಲ್ಲಿ ಈಗಿನ  ಸ್ಥಿತಿಗತಿಯ ವರದಿ ಸಲ್ಲಿಸಲು ಸೂಚಿಸಬೇಕು ಎಂದು ಸಿಇಸಿ ಕೋರಿದೆ.

ಪ್ರತಿಕ್ರಿಯಿಸಿ (+)