ಶನಿವಾರ, ಡಿಸೆಂಬರ್ 7, 2019
16 °C

ಪಾಕ್ ಗಡಿ ಬಳಿ ಹೊಸ ಫಿರಂಗಿಗಳ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಕ್ ಗಡಿ ಬಳಿ ಹೊಸ ಫಿರಂಗಿಗಳ ಪರೀಕ್ಷೆ

ನವದೆಹಲಿ: ‘ಅಮೆರಿಕದಿಂದ ಈಚೆಗಷ್ಟೇ ಖರೀದಿಸಲಾಗಿರುವ ಅತ್ಯಂತ ಹಗುರ ಫಿರಂಗಿಗಳ ಪರೀಕ್ಷೆಯನ್ನು ಪಾಕಿಸ್ತಾನದ ಗಡಿಗೆ ಸಮೀಪವಿರುವ ಪೋಖ್ರಾನ್‌ನಲ್ಲಿ ನಡೆಸಲಾಗುತ್ತಿದೆ’ ಎಂದು ಸೇನಾ ಮೂಲಗಳು ತಿಳಿಸಿವೆ.

ಬೊಫೋರ್ಸ್ ಹಗರಣ ಬೆಳಕಿಗೆ ಬಂದು, ಬರೋಬ್ಬರಿ 30 ವರ್ಷಗಳ ನಂತರ ಸೇನಾ ಬಳಕೆಗಾಗಿ ಹೊಸ ಫಿರಂಗಿಗಳನ್ನು ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಅಮೆರಿಕದಿಂದ 145, ಇಂತಹ ಫಿರಂಗಿಗಳನ್ನು ಖರೀದಿಸಲು ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಇದರ ಅಂಗವಾಗಿ ಎರಡು ಫಿರಂಗಿಗಳು ಮೇ 18ರಂದು ಭಾರತಕ್ಕೆ ಬಂದಿದ್ದವು. ಅವನ್ನು ರಾಜಸ್ಥಾನದ ಪೋಖ್ರಾನ್‌ಗೆ ಸಾಗಿಸಲಾಗಿತ್ತು. ಫಿರಂಗಿಗಳ ಪರೀಕ್ಷೆ ನಡೆಯುತ್ತಿರುವ ಸ್ಥಳವು ಪಾಕಿಸ್ತಾನದ ಗಡಿಯಿಂದ ಕೇವಲ 100 ಕಿ.ಮೀ ದೂರದಲ್ಲಿದೆ.

‘ಫಿರಂಗಿ ಗುಂಡುಗಳು ಚಲಿಸುವ ಪಥ, ವೇಗ ಮತ್ತು ಒಂದೇ ಫಿರಂಗಿಯಿಂದ 2 ಗುಂಡುಗಳನ್ನು ಹಾರಿಸಲು ಬೇಕಿರುವ ಸಮಯ, ಮೊದಲಾದ ವಿವರಗಳನ್ನು ಕಲೆ ಹಾಕುವ ಸಲುವಾಗಿ ಈ ಪರೀಕ್ಷೆ ನಡೆಸಲಾಗುತ್ತಿದೆ. ಸೆಪ್ಟೆಂಬರ್‌ವರೆಗೂ ಈ ಪರೀಕ್ಷೆ ನಡೆಯುತ್ತದೆ.

ಈ ತಾಂತ್ರಿಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು, ಈ ಫಿರಂಗಿಗಳನ್ನು ಯುದ್ಧದಲ್ಲಿ ಹೇಗೆ ಬಳಸಬಹುದು ಎಂಬುದನ್ನು ಯೋಜಿಸಲಾಗುತ್ತದೆ. ಪರೀಕ್ಷೆ ಅಂದುಕೊಂಡಂತೆಯೇ ನಡೆಯುತ್ತಿದೆ. ಈಗಾಗಲೇ ಹಲವು ದತ್ತಾಂಶಗಳನ್ನು ಕಲೆ ಹಾಕಲಾಗಿದೆ. ಸೆಪ್ಟೆಂಬರ್‌ ವೇಳೆಗೆ ಇನ್ನೂ ಮೂರು ಫಿರಂಗಿಗಳು ಬರಲಿವೆ. ಆಗ ಪರೀಕ್ಷೆ ಇನ್ನಷ್ಟು ಚುರುಕಾಗಲಿದೆ’ ಎಂದು ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಅಮೆರಿಕದ ಬಿಎಇ ಸಿಸ್ಟಮ್ಸ್‌ ತಯಾರಿಸಲಿರುವ 25 ಫಿರಂಗಿಗಳು ಭಾರತಕ್ಕೆ ಬರಲಿವೆ. ಪರೀಕ್ಷೆಯಲ್ಲಿ, ಬಿಎಇ ಸಿಸ್ಟಮ್ಸ್‌ನ ಪರಿಣಿತರೂ ಸಹ ಪಾಲ್ಗೊಂಡಿದ್ದಾರೆ. 2019ರ ಮಾರ್ಚ್ ನಂತರ ಪ್ರತಿ ತಿಂಗಳು ಐದು ಫಿರಂಗಿಗಳಂತೆ, 2021ರ ಜುಲೈ ವೇಳೆಗೆ ಎಲ್ಲಾ ಫಿರಂಗಿಗಳು ಸೇನೆಗೆ ಹಸ್ತಾಂತರವಾಗಲಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಹತ್ವ ಪಡೆದ ಪರೀಕ್ಷೆ

‘ಎಂ–777 ಎ–2 ಫಿರಂಗಿಗಳನ್ನು ಚೀನಾ ಗಡಿಯಲ್ಲಿ ನಿಯೋಜಿಸಲಾಗುತ್ತದೆ’ ಎಂದು ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಗಡಿ ವಿಚಾರವಾಗಿ ಭಾರತ ಮತ್ತು ಚೀನಾ ನಡುವೆ ಬಿಕ್ಕಟ್ಟು ಹೆಚ್ಚಿರುವ ಕಾರಣ ಈ ಫಿರಂಗಿಗಳ ಖರೀದಿ ಮತ್ತು ಕ್ಷಿಪ್ರಗತಿಯಲ್ಲಿ ನಡೆಯುತ್ತಿರುವ ಪರೀಕ್ಷೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಚೀನಾ ಸಹ ತಾನು ಈಚೆಗಷ್ಟೇ ಸೇನೆಗೆ ನಿಯೋಜಿಸಿದ ಅತ್ಯಂತ ಹಗುರ ಯುದ್ಧ ಟ್ಯಾಂಕ್‌ಗಳನ್ನು ಭಾರತದ ಗಡಿಯಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಜತೆಗೆ, ಪರ್ವತಗಳ ತಪ್ಪಲಿನಲ್ಲಿ ಈ ಟ್ಯಾಂಕ್‌ಗಳನ್ನು ನಿಲ್ಲಿಸಿ, ಪರ್ವತಗಳ ತುದಿಗಳಲ್ಲಿನ ಗುರಿಗಳನ್ನು ನಾಶ ಮಾಡುವ ತರಬೇತಿಯನ್ನು ತನ್ನ ಸೈನಿಕರಿಗೆ ನೀಡಿತ್ತು.

‘ಭಾರತದಲ್ಲಿ ಅತ್ಯಾಧುನಿಕ ಫಿರಂಗಿಗಳೇ ಇಲ್ಲದ ಕಾರಣ, ಎಂ–777 ಎ–2ಗಳು ಸೇನೆಗೆ ಬಲ ತರಲಿವೆ. ನಮ್ಮ ಸೇನೆ ಯುದ್ಧ ಸನ್ನದ್ಧವಾಗಿರಲು ಇಂತಹ ಫಿರಂಗಿಗಳ ಅವಶ್ಯಕತೆ ಇದ್ದೇ ಇದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಸೇನೆ ಸಹ, ಶಸ್ತ್ರಾಸ್ತ್ರಗಳ ಆಧುನೀಕರಣಕ್ಕೆ ಸರ್ಕಾರವನ್ನು ಒತ್ತಾಯಿಸುತ್ತಲೇ ಇದೆ. ಕೆಲವು ಪ್ರಮುಖ ಶಸ್ತ್ರಾಸ್ತ್ರ ಮತ್ತು ಅತ್ಯಗತ್ಯ ಬಿಡಿಭಾಗಗಳನ್ನು ಸೇನೆಯೇ ನೇರವಾಗಿ ಖರೀದಿಸಲು ಅನುಮತಿ ನೀಡಿ ಕೇಂದ್ರ ಸರ್ಕಾರ ಕಳೆದ ವಾರವಷ್ಟೇ ಆದೇಶ ನೀಡಿತ್ತು.

ಹೆಗ್ಗಳಿಕೆಗಳು

* ತನ್ನ ವರ್ಗದ ಎಲ್ಲಾ ಫಿರಂಗಿಗಳಿಗಿಂತ ಅರ್ಧದಷ್ಟು ಕಡಿಮೆ ತೂಕ.

* ಹಗುರವಾದ ಫಿರಂಗಿಯಾದ್ದರಿಂದ ಪರ್ವತ ಪ್ರದೇಶಗಳಿಗೂ ಸಾಗಿಸಬಹುದು.

* ಬಿಡಿಭಾಗಗಳಾಗಿ ಬಿಡಿಸಿಟ್ಟು, ನಂತರ ಸುಲಭವಾಗಿ ಜೋಡಿಸಿಡುವ ಸವಲತ್ತು ಇದೆ. ಹೀಗಾಗಿ ದೇಶದ ಯಾವುದೇ ಭಾಗಕ್ಕೂ ಸುಲಭವಾಗಿ ಸಾಗಿಸಬಹುದು.

* ಸಣ್ಣ ಟ್ರಕ್‌ಗಳಲ್ಲಿ ಸಾಗಿಸಬಹುದು.

‘ಭಾರತದಲ್ಲೇ ತಯಾರಿಸಿ’

*145 ಅಮೆರಿಕದಿಂದ ಭಾರತ ಖರೀದಿಸಲಿರುವ ಫಿರಂಗಿಗಳ ಸಂಖ್ಯೆ.

* 25ಅಮೆರಿಕದಲ್ಲೇ ತಯಾರಾಗಲಿರುವ ಫಿರಂಗಿಗಳು.

ಜಂಟಿ ನಿರ್ಮಾಣ

ಉಳಿದ 120 ಫಿರಂಗಿಗಳನ್ನು ಅಮೆರಿಕದ ಬಿಎಇ ಸಿಸ್ಟಮ್ಸ್ –ಭಾರತದ ಮಹೀಂದ್ರಾ ಡಿಫೆನ್ಸ್‌ ಜಂಟಿಯಾಗಿ, ಭಾರತದಲ್ಲೇ ತಯಾರಿಸಲಿವೆ.

ಹಗುರ

ಟೈಟಾನಿಯಂ ಲೋಹ ಬಳಸಿರುವುದರಿಂದ ಇದು ಅತ್ಯಂತ ಹಗುರ

* ₹5,000ಕೋಟಿ ಖರೀದಿ ಒಪ್ಪಂದದ ಮೊತ್ತ.

* 4.2 ಟನ್ ಫಿರಂಗಿ ತೂಕ.

* 30ಕಿ.ಮೀ ದಾಳಿ ವ್ಯಾಪ್ತಿ.

* 155ಎಂ.ಎಂ ಫಿರಂಗಿ ಗುಂಡುಗಳ ಸುತ್ತಳತೆ.

* 5ಸುತ್ತು (ಪ್ರತಿನಿಮಿಷ) ದಾಳಿ ಸಾಮರ್ಥ್ಯ.

ರಾಜಸ್ಥಾನದ ಪೋಖ್ರಾನ್‌ನಲ್ಲಿ ಎಂ–777 ಎ–2ಗಳ  ಸಾಮರ್ಥ್ಯ ಒರೆಗೆ

* ಬರೋಬ್ಬರಿ 30 ವರ್ಷಗಳ ನಂತರ ಭಾರತೀಯ ಸೇನೆಯ ಬತ್ತಳಿಕೆಗೆ ಹೊಸ ಫಿರಂಗಿಗಳು.

* ಚೀನಾ ಗಡಿಯಲ್ಲಿ ನಿಯೋಜನೆ; ಸೇನಾ ಮೂಲಗಳ ಮಾಹಿತಿ.

ಪ್ರತಿಕ್ರಿಯಿಸಿ (+)