ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಷ್ಟಿ ರಹಸ್ಯ - ಅಧ್ಯಾತ್ಮ ಸ್ವರೂಪ

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ಸೂಕ್ಷ್ಮಾತಿಸೂಕ್ಷ್ಮ  ದುರ್ಬೀನುಗಳನ್ನು ಬಳಸಿ ಗ್ರಹ, ಉಪಗ್ರಹ, ನಕ್ಷತ್ರ, ನಿಹಾರಿಕೆ, ಅಂಡಪಿಂಡ ಬ್ರಹ್ಮಾಂಡಗಳನ್ನು ಹುಡುಕುವ ತಡಕುವ ಶೋಧನಾ ಕಾರ್ಯ ವಿಜ್ಞಾನ ವಲಯದಲ್ಲಿ ಮುಂದುವರಿದಿರುವ ಬೆಳವಣಿಗೆ. ಇದರ ಜೊತೆಗೆ ಯಾವುದಾದರೂ ಗ್ರಹದಲ್ಲಿ ಜೀವಿಗಳಿದ್ದಾವೋ! ಹೇಗೆ? ಜೀವಿಗಳು ವಾಸಿಸಲು ಯೋಗ್ಯವಾದ ಗ್ರಹಗಳು ಯಾವಾದರೂ ಇವೆಯೇ? ಇದು ಇಂದಿನ ತುರ್ತು ಶೋಧ. ಇಷ್ಟೆಲ್ಲ ನಡೆದಿದ್ದಾಗ್ಯೂ ಈ ಸೃಷ್ಟಿ ರಹಸ್ಯದ ಹಿಂದಿನ ಶಕ್ತಿ ಯಾವುದು? ಸೃಷ್ಟಿ ರಹಸ್ಯದ ಹಿಂದಿರುವ ಉದ್ದೇಶವೇನು? ಇದರ ಆದಿ ಅಂತ್ಯಗಳೆಲ್ಲಿವೆ?  ಇದು ವಿಜ್ಞಾನವನ್ನು ಕಾಡುತ್ತಿರುವ ಪ್ರಶ್ನೆ. ಇಂಥ ವೈಜ್ಞಾನಿಕ ಮನೋಧರ್ಮದ ತರ್ಕಬದ್ಧ ಶೋಧಗಳು ನಡೆದ ಬೆಳವಣಿಗೆಗಳ ಬೆಳಕಿನಲ್ಲಿ ಮನುಷ್ಯನಿಗೆ ಕಂಡಿರುವುದು ಅಲ್ಪ, ಕಾಣದಿರುವುದು ಅಪಾರ. ಹೀಗಾಗಿಯೇ ಇಂದೂ ಮನುಷ್ಯನಲ್ಲಿರುವ ಸೃಷ್ಟಿರಹಸ್ಯದ ನಿಯಾಮಕದ ಬಗೆಗಿನ ಭಯ ಹೋಗಿಲ್ಲ. ಈ ಚರ್ಚೆಗಳು ಹುಟ್ಟು ಹಾಕಿರುವ ಕಲ್ಪನೆಗಳು ಅವರವರ ನಂಬಿಕೆಯ ಕಾಲನಿಗಳು. ನಾವು ವಾಸಿಸಲು ಕಟ್ಟಿಕೊಂಡಿರುವ ಬಡಾವಣೆಗಳಂತೆ ಅವುಗಳೂ ನಮ್ಮ ಕಲ್ಪನೆಯ ನಮ್ಮಿಷ್ಟದ ವಿನ್ಯಾಸದ ಗೂಡಂಗಡಿಗಳು, ಇಂಥ ಗೂಡಂಗಡಿಗಳನ್ನು ಕುರಿತು  ಅರಿವಿನ ಮಾರಿತಂದೆಗಳ ಒಂದು ರೂಪಕಾತ್ಮಕ ವಚನ ಇಂತಿದೆ :

ಶೈವಕ್ಕೆ ಕೈಲಾಸ ವೈಷ್ಣವಕ್ಕೆ ವೈಕುಂಠ
ಬೌದ್ಧಂಗೆ ಮೋಕ್ಷಗಾಮಿನಿಯೆಂಬ ಗೊತ್ತುಗಳು ಬೇರಾದಲ್ಲಿ
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಬೇರಾದುದಿಲ್ಲ
ಸುವರ್ಣ ಒಂದು ಆಭರಣ ಹಲವಾದಂತೆ
ಪರಬ್ರಹ್ಮವಸ್ತುವೊಂದೆಂಬುದಕ್ಕೆ ಇದೆ ದೃಷ್ಟಿ,
ಮತ್ತಿದಿರು ದೈವವುಂಟೆಂದು ಗದಿಯ ಬೇಡ.
ನೆರೆನಂಬಿ ಸದಾಶಿವ ಮೂರ್ತಿ ಲಿಂಗವಲ್ಲದಿಲ್ಲಾಯೆಂದೆ.

ಈ ವಚನ ದೈವದ ಕಲ್ಪನೆ ಜೀವನ ಗತಿಗಮನಿಕೆಯ ಬಗ್ಗೆ ಮೌಢ್ಯಕ್ಕೆ ಎಡೆ-ಕೊಡದಂತೆ ನುಡಿದಿದೆ. ಕೊನೆಯಲ್ಲಿ ದೈವವುಂಟೆಂದು ಗದಿಯ ಬೇಡ (ಬೊಗುಳಬೇಡ) ಎಂದು ಹೇಳುತ್ತಲೇ ನೆರೆನಂಬಿ ಸದಾಶಿವಮೂರ್ತಿ ಲಿಂಗವಲ್ಲದಿಲ್ಲಾ ಎನ್ನುತ್ತಿದೆ. ಇದು ಎಡಬಡ-ವೈರುಧ್ಯಗಳ ನಿಲುವು ಎಂದು ಕೆಲವರಿಗೆ ತೋರಬಹುದು. ಆದರೆ ನಿಜವಾದ ಲಿಂಗಾಯತವನ್ನು ಅನ್ವಯಿಸಿದರೆ ಅದು ಮಾತೆಂಬುದು ಜ್ಯೋತಿರ್ಲಿಂಗ ತತ್ವದಲ್ಲಿ ನೆಲೆ ಪಡೆಯುತ್ತದೆ. ಅಂತರಂಗ ಬಹಿರಂಗಗಳ ಆತ್ಮಸಂಗದ ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವೆಂಬ ಸತ್ಯಶುದ್ಧ ಕಾಯಕ ತತ್ವದೆಡೆಗೆ ನಡೆದೋರುತ್ತದೆ. ಇದುವೆ ಲಿಂಗಾಯತದ ಆಸ್ತೀಕ ಅಧ್ಯಾತ್ಮ ಜೀವನ ಸ್ವರೂಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT