ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತೀಕಾರದ ಹಿಂಸೆಗೆ ನಲುಗಿದೆ ಕರಾವಳಿ

ಕೊಲೆಗೆ ಕೊಲೆಯ ಉತ್ತರಕ್ಕೆ ಮತೀಯವಾದಿಗಳ ಹವಣಿಕೆ
Last Updated 16 ಜುಲೈ 2017, 20:14 IST
ಅಕ್ಷರ ಗಾತ್ರ

ಮಂಗಳೂರು: ಬಹುಭಾಷೆ ಮತ್ತು ಬಹು ಸಂಸ್ಕೃತಿಗಳ ಸೌಹಾರ್ದದ ತಾಣವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಮತೀಯ ದ್ವೇಷದ ಬೆಂಕಿಯಲ್ಲಿ ಬೇಯತೊಡಗಿದೆ. ಮತೀಯವಾದಿ ಸಂಘಟನೆಗಳು ಕೊಲೆಗೆ ಕೊಲೆಯೇ ಉತ್ತರ ಎಂಬ ಹಾದಿ ಹಿಡಿದಿವೆ. ರಾಜ್ಯದ ಯಾವ ಭಾಗದಲ್ಲೂ ಬೆಳೆಯದಂತಹ ಮತೀಯವಾದಿ ದ್ವೇಷ ದಕ್ಷಿಣ ಕನ್ನಡ ಜಿಲ್ಲೆಯಲ್ಲೇಕೆ ಬೆಳೆಯುತ್ತಿದೆ ಎಂಬ ಪ್ರಶ್ನೆ ಈಗ ಬಲವಾಗಿ ಎದ್ದು ನಿಂತಿದೆ. ದ್ವೇಷ ಬಿತ್ತುವವರಿಂದ ಹಿಂಸೆಗೆ ಬಲಿಯಾಗುವವರವರೆಗೆ ಎಲ್ಲರ ಬಳಿಯೂ ಉತ್ತರ ಅಸ್ಪಷ್ಟ!

ಬಂಟ್ವಾಳ ತಾಲ್ಲೂಕಿನಲ್ಲಿ ಮೇ 26ರಿಂದಲೂ ನಿಷೇಧಾಜ್ಞೆ ಜಾರಿಯಲ್ಲಿದೆ. ಜೂನ್‌ 14ರಿಂದ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲ್ಲೂಕುಗಳಿಗೂ ನಿಷೇಧಾಜ್ಞೆ ವಿಸ್ತರಿಸಲಾಗಿತ್ತು.

ಜೂನ್‌ 22ರಿಂದ ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಕೆಲವು ದಿನಗಳ ಹಿಂದೆ ನಿಷೇಧಾಜ್ಞೆಯನ್ನು ಹಿಂದಕ್ಕೆ ಪಡೆದಿದ್ದ ಪೊಲೀಸರು, ಈಗ ಕರ್ನಾಟಕ ಪೊಲೀಸ್‌ ಕಾಯ್ದೆಯಡಿ ನಿರ್ಬಂಧಕಾಜ್ಞೆ ಜಾರಿ ಮಾಡಿದ್ದಾರೆ.

ಸಾರ್ವಜನಿಕ ಸಭೆ, ಪ್ರತಿಭಟನೆ, ಮೆರವಣಿಗೆಗಳೂ ಪ್ರತೀಕಾರದ ಕೃತ್ಯಗಳಿಗೆ ಎಡೆ ಮಾಡಬಹುದು ಎಂಬ ಆತಂಕವೇ ಇಲ್ಲಿನ ಜನರ ನೆಮ್ಮದಿಯ ನಾಳೆಗಳಿಗೆ ಕಂಟಕವಾಗುತ್ತಿದೆ.

1971ರಲ್ಲಿ ಚುನಾವಣೆಯ ಸಮಯದಲ್ಲೇ ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಪಟ್ಟಣದಲ್ಲಿ ಕಾಂಗ್ರೆಸ್‌ ಮುಖಂಡ ಕಲ್ಲಡ್ಕ ಇಸ್ಮಾಯಿಲ್‌ ಕೊಲೆಗೀಡಾಗಿದ್ದರು. ಆಗ ಸಂಘ ಪರಿವಾರದ ಕೆಲವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬಹುಪಾಲು ಜಿಲ್ಲೆಯಲ್ಲಿ ಮತೀಯವಾದಿಗಳಿಂದ ನಡೆದ ಮೊದಲ ಹತ್ಯೆ ಇದು ಎಂದು ಜಿಲ್ಲೆಯ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಅಂದಿನಿಂದ ಚದುರಿದಂತೆ ನಡೆಯುತ್ತಿದ್ದ ಮತೀಯ ದ್ವೇಷದ ಘಟನೆಗಳು 1998ರ ಸುರತ್ಕಲ್‌ ಗಲಭೆಯ ಬಳಿಕ ತೀವ್ರ ಸ್ವರೂಪ ಪಡೆದುಕೊಂಡಿವೆ.

ಸುರತ್ಕಲ್‌ ಗಲಭೆಯಲ್ಲಿ ಆರು ಮುಸ್ಲಿಮರು ಮತ್ತು ಇಬ್ಬರು ಹಿಂದೂಗಳ ಹತ್ಯೆಯಾಗಿತ್ತು. ಆ ದಿನದಿಂದ ಈವರೆಗೆ ಎರಡೂ ಧರ್ಮದ ಹಲವಾರು ಮಂದಿ ಮತೀಯ ದ್ವೇಷದ ಹಿಂಸೆಗೆ ಬಲಿಯಾಗಿದ್ದಾರೆ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷ ಹತ್ತಾರು ಸಂಖ್ಯೆಯಲ್ಲಿ ಮತೀಯ ಹಿಂಸಾಚಾರದ ಘಟನೆಗಳು ನಡೆಯುತ್ತಿವೆ. ಇದರಿಂದಾಗಿ ದೇಶದಲ್ಲಿ ಅತ್ಯಧಿಕ ಮತೀಯ ಹಿಂಸೆಯ ಘಟನೆಗಳು ನಡೆಯುವ ಜಿಲ್ಲೆಗಳ ಪಟ್ಟಿಯಲ್ಲಿ ಈ ಜಿಲ್ಲೆಯೂ ಸೇರಿದೆ.

ದ್ವೇಷ ಬಿತ್ತುವವರ ಪೈಪೋಟಿ: ‘1970ರ ದಶಕದಿಂದಲೂ ಆರ್‌ಎಸ್‌್ಎಸ್‌ ಮತ್ತು ಸಂಘ ಪರಿವಾರದ ಇತರೆ ಸಂಘಟನೆಗಳು ಜಿಲ್ಲೆಯಲ್ಲಿ ಮತೀಯ ದ್ವೇಷದ ಹಿಂಸೆಗೆ ಇಳಿದಿರುವುದಕ್ಕೆ ಸಾಕ್ಷಿ ಇದೆ. ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ, ನಂತರ ನಡೆದ ಅಯೋಧ್ಯೆ ಚಳವಳಿ ಈ ಹಿಂಸಾ ಕೃತ್ಯಗಳ ವಿಸ್ತರಣೆಗೆ ಬಳಕೆಯಾಯಿತು. ಜಿಲ್ಲೆಯಲ್ಲಿ ಅದರ ಕರಾಳ ನೆನಪುಗಳು ಈಗಲೂ ಉಳಿದಿವೆ. ಬಿಜೆಪಿಯನ್ನು ಬಲಪಡಿಸುವ ರಾಜಕೀಯ ಕಾರ್ಯಸೂಚಿಯ ಜಾರಿಗಾಗಿ ಸಂಘ ಪರಿವಾರವು ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಹಿಂದೂ ಜಾಗರಣ ವೇದಿಕೆಯಂತಹ ಸಂಘಟನೆಗಳ ಜಾಲವನ್ನು ವಿಸ್ತರಿಸಿ ಯುವಕರನ್ನು ತನ್ನತ್ತ ಸೆಳೆದುಕೊಂಡಿತು. ದ್ವೇಷ ಬಿತ್ತುವ ಅಸ್ತ್ರಗಳಾದ ಯುವಕರು ನೆತ್ತರು ಹರಿಸಿದರು. ಅದರ ರಾಜಕೀಯ ಲಾಭವನ್ನು ಬಿಜೆಪಿ ಪಡೆದುಕೊಂಡಿತು’ ಎನ್ನುತ್ತಾರೆ ಮಂಗಳೂರಿನವರೇ ಆಗಿರುವ ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ.

‘2001ರಲ್ಲಿ ಕರ್ನಾಟಕ ಫೋರಂ ಫಾರ್‌ ಡಿಗ್ನಿಟಿ (ಕೆಎಫ್‌ಡಿ) ಸಂಘಟನೆ ಅಸ್ತಿತ್ವಕ್ಕೆ ಬಂದ ಬಳಿಕ ಸಂಘ ಪರಿವಾರದ ಸಂಘಟನೆಗಳಿಗೆ ಮುಸ್ಲಿಮರ ಕಡೆಯಿಂದಲೂ ಪ್ರತಿರೋಧ ಎದುರಾಯಿತು. 2006ರಲ್ಲಿ ಅದು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದಲ್ಲಿ ವಿಲೀನವಾದ ಬಳಿಕ ಮುಸ್ಲಿಮರಲ್ಲಿನ ಮತೀಯವಾದಿ ಗುಂಪು ಮತ್ತಷ್ಟು ಬಲವಾಗಿ ಬೆಳೆಯಿತು. ಆ ಬಳಿಕವೇ ಜಿಲ್ಲೆಯಲ್ಲಿ ಮತೀಯವಾದಿಗಳ ನಡುವೆ ಪ್ರತೀಕಾರದ ಘಟನೆಗಳು ಆರಂಭವಾದವು’ ಎಂದು ಅವರು ಹೇಳುತ್ತಾರೆ.

‘ಜಿಲ್ಲೆಯ ಬಹುಭಾಗ ಮೊದಲು ಎಡಪಕ್ಷಗಳ ಹಿಡಿತದಲ್ಲಿ ಇತ್ತು. ಹೆಂಚಿನ ಕಾರ್ಖಾನೆಗಳು, ಗೋಡಂಬಿ ಉದ್ದಿಮೆಗಳು ನೆಲಕಚ್ಚಿದ ಬಳಿಕ ಎಡಪಕ್ಷಗಳ ಕಾರ್ಮಿಕ ಸಂಘಟನೆಗಳ ಬಲ ಕುಗ್ಗಿತು. ಆಗ ಎರಡೂ ಬಗೆಯ ಮತೀಯವಾದಿ ಸಂಘಟನೆಗಳು ದುಡಿಯುವ ವರ್ಗದ ಜನರನ್ನೂ ವ್ಯಾಪಿಸಿಕೊಂಡವು. ಕೆಲವು ವರ್ಷಗಳವರೆಗೂ ಕಾಂಗ್ರೆಸ್‌ನಲ್ಲಿನ ಹಿಂದೂಗಳಲ್ಲಿ ಹಲವರು ಹಿಂದೂ ಮತೀಯವಾದಿಗಳನ್ನು ಬೆಂಬಲಿಸುತ್ತಿದ್ದರು. ಅದೇ ರೀತಿ ಕಾಂಗ್ರೆಸ್‌ ಪಕ್ಷದಲ್ಲಿರುವ ಮುಸ್ಲಿಮರಲ್ಲಿ ಹಲವರು ಮುಸ್ಲಿಂ ಮತೀಯವಾದಿಗಳನ್ನು ಬೆಂಬಲಿಸಿದರು. ಈ ಎಲ್ಲ ಬೆಳವಣಿಗೆಗಳೂ ಈಗ ದಕ್ಷಿಣ ಕನ್ನಡ ಜಿಲ್ಲೆಯನ್ನು ದ್ವೇಷ ಬಿತ್ತುವವರ ನಡುವಿನ ಸ್ಪರ್ಧೆಯ ಅಖಾಡವಾಗಿ ಮಾಡಿವೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಚುನಾವಣೆಯೇ ಗುರಿ

‘ಜಿಲ್ಲೆಯಲ್ಲಿ ಮತೀಯ ದ್ವೇಷದ ಕಾರಣಕ್ಕೆ ನಡೆಯುವ ಎಲ್ಲ ಕೊಲೆ, ಹಲ್ಲೆಗಳ ಹಿಂದೆ ಪ್ರಬಲವಾದ ರಾಜಕೀಯ ಕಾರಣ ಇದ್ದೇ ಇರುತ್ತದೆ. ಯಾವಾಗಲೂ ಇಲ್ಲಿ ಚುನಾವಣೆ ಸಮೀಪಿಸುವಾಗ ಇಂತಹ ಹಿಂಸಾ ಕೃತ್ಯಗಳು ಹೆಚ್ಚುತ್ತವೆ. ಕಲ್ಲಡ್ಕದಲ್ಲಿ ನಡೆದ ಸಣ್ಣ ಘಟನೆಯೊಂದು ನಿರಂತರ ಹಿಂಸಾ ಕೃತ್ಯಗಳಿಗೆ ನಾಂದಿಯಾಗಲು ರಾಜಕೀಯ ಲಾಭ ಪಡೆಯುವ ಪ್ರಯತ್ನವೇ ಕಾರಣ. ಒಂದು ಪಕ್ಷದವರಿಗೆ ಅನಾಯಾಸವಾಗಿ ಮುಸ್ಲಿಮರ ಮತ ಬೇಕು. ಮತ್ತೊಂದು ಪಕ್ಷದವರು ಮುಸ್ಲಿಮರನ್ನು ದ್ವೇಷಿಸಿ ಮತ ಪಡೆಯಬೇಕು. ಈ ಬಗೆಯ ರಾಜಕೀಯ ಲಾಭಕೋರತನವೇ ಜಿಲ್ಲೆಯಲ್ಲಿ ಮತೀಯ ಸಂಘರ್ಷಕ್ಕೆ ಕಾರಣ’ ಎನ್ನುತ್ತಾರೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ರಾಜಕೀಯ ಮುಖವೂ ಆಗಿರುವ ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಹನೀಫ್‌ ಖಾನ್‌ ಕೊಡಾಜೆ.

‘ಐದಾರು ವರ್ಷಗಳಿಂದ ಪ್ರತೀಕಾರದ ಘಟನೆಗಳು ಹೆಚ್ಚಾಗಿರುವುದು ಕಾಣುತ್ತಿದೆ. 40 ವರ್ಷಗಳಿಂದ ಸಂಘ ಪರಿವಾರದ ಸಂಘಟನೆಗಳಿಂದ ಹಿಂಸೆಯಲ್ಲಿ ನಲುಗಿದವರು ಈಗ ಪ್ರತೀಕಾರಕ್ಕೆ ಮುಂದಾಗಿದ್ದಾರೆ. ಇದಕ್ಕೆ ಸಂಘ ಪರಿವಾರವೇ ಹೊಣೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

‘ನಮ್ಮದು ಪ್ರತಿಕ್ರಿಯೆ ಮಾತ್ರ’: ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ  ವಿಶ್ವ ಹಿಂದೂ ಪರಿಷತ್‌ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ ಶೇಣವ, ‘1998ರ ಸುರತ್ಕಲ್‌ ಗಲಭೆ ಬಳಿಕವೇ ಜಿಲ್ಲೆಯಲ್ಲಿ ಕೋಮು ಘರ್ಷಣೆಗಳು ಹೆಚ್ಚಾಗಿವೆ. ಇಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಿರುವುದೇ ಇದಕ್ಕೆ ಕಾರಣ. ಕೇರಳದಲ್ಲಿ ಮುಸ್ಲಿಂ ಮತೀಯವಾದಿಗಳ ಆಟಾಟೋಪ ತಾರಕಕ್ಕೇರಿದೆ. ಆ ರಾಜ್ಯಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನೂ ಇಸ್ಲಾಮೀಕರಣದ ಮಾಡಲು ಯತ್ನಿಸುತ್ತಿರುವುದೇ ಜಿಲ್ಲೆಯಲ್ಲಿ ಹಿಂಸೆ ಹೆಚ್ಚಲು ಕಾರಣ’ ಎಂದು ಆಪಾದಿಸಿದರು.

‘ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಸಂಘ ಪರಿವಾರ ಇಷ್ಟು ಬಲವಾಗಿಲ್ಲ. ಅಲ್ಲಿ ಇಸ್ಲಾಂ ಮತೀಯವಾದಿಗಳ ಉಪಟಳವೂ ಹೆಚ್ಚಿಲ್ಲ. ಇಲ್ಲಿ ಬಲವಾಗಿರುವ ಸಂಘ ಪ್ರತಿರೋಧ ಒಡ್ಡುತ್ತಿದೆ.

ಸಂಘ ಪರಿವಾರದ ಸಂಘಟನೆಗಳು ಮೊದಲು ಹಿಂಸೆಗೆ ಇಳಿದ ಉದಾಹರಣೆಗಳೇ ಇಲ್ಲ. ನಮ್ಮದೇನಿದ್ದರೂ ಕ್ರಿಯೆಗೆ ಪ್ರತಿಕ್ರಿಯೆ ಮಾತ್ರ. ಸದ್ಯದ ಸ್ಥಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೆಲ್ಲದಕ್ಕೂ ಬಹುಬೇಗ ಪೂರ್ಣವಿರಾಮ ಬೀಳುತ್ತದೆ ಎಂದು ಊಹಿಸುವುದು ಕಷ್ಟ’ ಎಂದು ಹೇಳಿದರು.

* ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ, ನಂತರ ನಡೆದ ಚಳವಳಿ ಈ ಹಿಂಸಾ ಕೃತ್ಯಗಳ ವಿಸ್ತರಣೆಗೆ ಬಳಕೆ ಯಾಯಿತು. ಅದರ ಕರಾಳ ನೆನಪುಗಳು ಈಗಲೂ ಉಳಿದಿವೆ

–ಮುನೀರ್‌ ಕಾಟಿಪಳ್ಳ, ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ

* ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನೂ ಇಸ್ಲಾಮೀಕರಣದ ಮಾಡಲು ಯತ್ನಿಸುತ್ತಿರುವುದೇ ಜಿಲ್ಲೆಯಲ್ಲಿ ಹಿಂಸೆ ಹೆಚ್ಚಲು ಕಾರಣ

–ಜಗದೀಶ್ ಶೇಣವ, ವಿಎಚ್‌ಪಿ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ

ಮುಖ್ಯಾಂಶಗಳು

* 1971ರಲ್ಲಿ ಇಸ್ಮಾಯಿಲ್‌ ಕೊಲೆಯ ಮೂಲಕ ಆರಂಭವಾದ ದ್ವೇಷ

* 1998ರ ಸುರತ್ಕಲ್‌ ಗಲಭೆಯಿಂದ ತಾರಕಕ್ಕೆ

* ದ್ವೇಷವನ್ನು ಮತವಾಗಿ ಬದಲಾಯಿಸುವ ಹುನ್ನಾರ

(ನಾಳೆ: ಆಗಾಗ ಕಿಡಿ ಹೊತ್ತಿಸುವ ಕಲ್ಲಡ್ಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT