ಬುಧವಾರ, ಡಿಸೆಂಬರ್ 11, 2019
21 °C
ಉತ್ತಮ ಸ್ಥಿತಿಯಲ್ಲಿ ಜಿಂಬಾಬ್ವೆ; ಹೆರಾತ್‌ಗೆ ನಾಲ್ಕು ವಿಕೆಟ್

ಸಿಕಂದರ್ ರಾಜ ಆಟದ ರಂಗು

Published:
Updated:
ಸಿಕಂದರ್ ರಾಜ ಆಟದ ರಂಗು

ಕೊಲಂಬೊ: ಎಡಗೈ ಸ್ಪಿನ್ನರ್ ರಂಗನಾ ಹೇರಾತ್ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಗೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನಲುಗಿದರು. 

ಸಿಕಂದರ್‌ ರಾಜ ಮತ್ತು ಕೆಳ ಕ್ರಮಾಂಕದ ಮಾಲ್ಕಮ್‌ ವಾಲರ್‌ ಅವರು ಅಮೋಘ ಬ್ಯಾಟಿಂಗ್‌ ಮಾಡಿದರು.

ಶ್ರೀಲಂಕಾ ವಿರುದ್ಧ ಇಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆ ಮೇಲುಗೈ ಸಾಧಿಸಿದೆ. ಇನ್ನೂ ನಾಲ್ಕು ವಿಕೆಟ್‌ ಉಳಿದಿರುವಾಗಲೇ ತಂಡ 262 ರನ್‌ಗಳ ಮುನ್ನಡೆ ಸಾಧಿಸಿದೆ. 

ಜಿಂಬಾಬ್ವೆಯ ಮೊದಲ ಇನಿಂಗ್ಸ್ ಮೊತ್ತವಾದ 356 ರನ್‌ಗಳಿಗೆ ಉತ್ತರಿಸಿದ ಆತಿಥೇಯರು ಎರಡನೇ ದಿನವಾದ ಶನಿವಾರ ಏಳು ವಿಕೆಟ್‌ ಕಳೆದುಕೊಂಡು 293 ರನ್‌ ಗಳಿಸಿದ್ದರು.  ಭಾನುವಾರ ಬೆಳಿಗ್ಗೆ 53 ರನ್‌ ಸೇರಿಸಿ ತಂಡ ಆಲೌಟಾಯಿತು. ಈ ಮೂಲಕ 10 ರನ್‌ಗಳ ಹಿನ್ನಡೆ ಅನುಭವಿಸಿತು.

ಆತ್ಮವಿಶ್ವಾಸದಿಂದಲೇ ಎರಡನೇ ಇನಿಂಗ್ಸ್ ಆರಂಭಿಸಿದ ಜಿಂಬಾಬ್ವೆಗೆ ಬೌಲರ್‌ಗಳು ಆರಂಭದಲ್ಲೇ ಪೆಟ್ಟು ನೀಡಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಹ್ಯಾಮಿಲ್ಟನ್ ಮಸಕಜ, ರೇಗಿಸ್ ಚಕಬ್ವ ಮತ್ತು ಮೂರನೇ ಕ್ರಮಾಂಕದ ತರಿಸೈ ಮುಜಕಂಡ ಅವರ ವಿಕೆಟ್ ಕಬಳಿಸಿದ ರಂಗನಾ ಹೇರಾತ್‌ ಎದುರಾಳಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದರು.

7.2 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 17 ರನ್‌ ಗಳಿಸಿದ ಜಿಂಬಾಬ್ವೆಯ ಮೊತ್ತ 59 ಆಗುವಷ್ಟರಲ್ಲಿ ಮತ್ತೆ ಎರಡು ವಿಕೆಟ್‌ಗಳು ಉರುಳಿದವು.

ಈ ಸಂದರ್ಭದಲ್ಲಿ ಜೊತೆಗೂಡಿದ ಸಿಕಂದರ್ ರಾಜ ಮತ್ತು ಪೀಟರ್‌ ಮೂರ್‌ 86 ರನ್‌ ಜೋಡಿಸಿ ಇನಿಂಗ್ಸ್‌ಗೆ ಜೀವ ತುಂಬಿದರು.

40 ರನ್‌ ಗಳಿಸಿದ ಮೂರ್ ಔಟಾದ ನಂತರವೂ ಸಿಕಂದರ್ ರಾಜ ಅಮೋಘ ಬ್ಯಾಟಿಂಗ್ ಮುಂದುವರಿಸಿದರು. ಅವರಿಗೆ ಜೊತೆಯಾದ ವಾಲರ್‌ ಏಳನೇ ವಿಕೆಟ್‌ಗೆ 107 ರನ್ ಸೇರಿಸಿ ಲಂಕನ್ನರಿಗೆ ನಿರಾಸೆ ಉಂಟುಮಾಡಿದರು.

158 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಏಳು ಬೌಂಡರಿಗಳೊಂದಿಗೆ 97 ರನ್ ಗಳಿಸಿದ ಸಿಕಂದರ್‌ ಮತ್ತು 76 ಎಸೆತಗಳಲ್ಲಿ ಎಂಟು ಬೌಂಡರಿಗಳೊಂದಿಗೆ 57 ರನ್ ಗಳಿಸಿದ ವಾಲರ್‌ ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಜಿಂಬಾಬ್ವೆ, ಮೊದಲ ಇನಿಂಗ್ಸ್‌: 94.4 ಓವರ್‌ಗಳಲ್ಲಿ 356; ಶ್ರೀಲಂಕಾ, ಮೊದಲ ಇನಿಂಗ್ಸ್‌: 102.3 ಓವರ್‌ಗಳಲ್ಲಿ 346 (ಗ್ರೇಮ್‌ ಕ್ರೀಮರ್‌ 125ಕ್ಕೆ5, ಸೀನ್‌ ವಿಲಿಯಮ್ಸ್‌ 62ಕ್ಕೆ2); ಜಿಂಬಾಬ್ವೆ, ಎರಡನೇ ಇನಿಂಗ್ಸ್‌: 68 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 252 (ಸೀನ್‌ ವಿಲಿಯಮ್ಸ್‌ 22, ಸಿಕಂದರ್‌ ರಾಜ ಬ್ಯಾಟಿಂಗ್‌ 97, ಪೀಟರ್‌ ಮೂರ್‌ 40, ಮಾಲ್ಕಮ್‌ ವಾಲರ್‌ ಬ್ಯಾಟಿಂಗ್‌ 57; ರಂಗನಾ ಹೇರಾತ್‌ 85ಕ್ಕೆ4).

ಪ್ರತಿಕ್ರಿಯಿಸಿ (+)