ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಐಜಿ ವಿರುದ್ಧ ಡಿಜಿಪಿ ವರದಿ: ತಿಕ್ಕಾಟಕ್ಕೆ ಕಾರಣವಾಯ್ತೇ ‘ಹೊಣೆಗಾರಿಕೆ ಆದೇಶ’ 

Last Updated 17 ಜುಲೈ 2017, 4:23 IST
ಅಕ್ಷರ ಗಾತ್ರ

ಬೆಂಗಳೂರು: ಕಾರಾಗೃಹಗಳ ಇಲಾಖೆಯ ಡಿಐಜಿ– ಡಿಜಿಪಿ ನಡುವಿನ ತಿಕ್ಕಾಟ ತೀವ್ರಗೊಂಡಿದ್ದು, ರೂಪಾ ವಿರುದ್ಧ ಇದೀಗ ಸತ್ಯನಾರಾಯಣರಾವ್‌ ಸಹ ವರದಿ ಸಿದ್ಧಪಡಿಸಿದ್ದಾರೆ.

ಲಂಚದ ಆರೋಪ ಹಾಗೂ ರೂಪಾ ಅವರು ಅಧಿಕಾರ ವಹಿಸಿಕೊಂಡ ದಿನನಿಂದ ನಡೆದ ಬೆಳವಣಿಗೆಗಳ ಬಗ್ಗೆ 16 ಪುಟಗಳ ವರದಿಯಲ್ಲಿ ದಾಖಲಿಸಿರುವ ಡಿಜಿಪಿ, ಅದನ್ನು ಗೃಹ ಇಲಾಖೆಯ ಉನ್ನತ ಅಧಿಕಾರಿಗೆ ಕಳುಹಿಸಿದ್ದಾರೆ ಎಂದು ಗೊತ್ತಾಗಿದೆ.

‘ಇಲಾಖೆಯ ನಿಯಮಾವಳಿಯಂತೆ  ಅಧಿಕಾರಿಗಳ ಹೊಣೆಗಾರಿಕೆಯನ್ನು (ಯಾವ ಅಧಿಕಾರಿಗೆ ಏನು ಕೆಲಸ) ನಿಗದಿಪಡಿಸಿ ಗೃಹ ಇಲಾಖೆಯು ಆದೇಶ ಹೊರಡಿಸಿದೆ. ಅದರಲ್ಲಿ ಡಿಜಿಪಿ, ಡಿಐಜಿ, ಎಐಜಿಪಿ, ಜೈಲು ಅಧೀಕ್ಷಕರು ಹಾಗೂ ಕೆಳಹಂತದ ಅಧಿಕಾರಿಗಳ ಕರ್ತವ್ಯದ ಬಗ್ಗೆ ಉಲ್ಲೇಖಿಸಲಾಗಿದೆ. ಇದುವೇ ಡಿಐಜಿ ಜತೆಗಿನ ಸಂಬಂಧ ಹದಗೆಡಲು ಮೂಲ ಕಾರಣ’ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

‘ಆದೇಶದಲ್ಲಿ ಡಿಐಜಿ ಹುದ್ದೆಗೆ ಬೆಂಗಳೂರು ಕೇಂದ್ರ ಕಾರಾಗೃಹ, ಬಯಲು ಬಂದಿಖಾನೆ ಹಾಗೂ ತುಮಕೂರು ಮಹಿಳಾ ಕಾರಾಗೃಹದ ಹೊಣೆಗಾರಿಕೆ ನಿಗದಿಪಡಿಸಲಾಗಿತ್ತು’

‘ಜೂನ್‌ 23ರಂದು ರೂಪಾ  ಅಧಿಕಾರ ವಹಿಸಿಕೊಂಡ ಬಳಿಕ, ಅವರಿಗೆ ಸರ್ಕಾರದ ಆದೇಶವನ್ನು ನೀಡಿದ್ದೆ. ಆ ಆದೇಶವನ್ನು ಪ್ರಶ್ನಿಸಿದ್ದ ರೂಪಾ, ಬೆಳಗಾವಿ, ಬಳ್ಳಾರಿ, ಕಲಬುರ್ಗಿ ಹಾಗೂ ಧಾರವಾಡ ಕೇಂದ್ರ ಕಾರಾಗೃಹಗಳ ನಿರ್ವಹಣೆಯ ಜವಾಬ್ದಾರಿಯನ್ನೂ ಕೊಟ್ಟರೆ, ಚೆನ್ನಾಗಿ ಕೆಲಸ ಮಾಡುತ್ತೇನೆ ಎಂದಿದ್ದರು.’

‘ಅದು ಗೃಹ ಇಲಾಖೆಯ ಆದೇಶವಾಗಿದ್ದರಿಂದ ಅದನ್ನು ಪ್ರಶ್ನಿಸಲು ಬರುವುದಿಲ್ಲ. ಸರ್ಕಾರದಿಂದ ಬಂದ ಆದೇಶವನ್ನು ನಿಮಗೆ ಕೊಟ್ಟಿದ್ದೇನೆ. ನೀವು ಬೇಕಾದರೆ ಗೃಹ ಇಲಾಖೆಗೆ ಮನವಿ ಸಲ್ಲಿಸಿ ಹೆಚ್ಚಿನ ಹೊಣೆಗಾರಿಕೆ ಪಡೆಯಿರಿ ಎಂದಿದ್ದೆ. ಆಗಲೇ ಕೊಠಡಿಯಲ್ಲಿ ನನ್ನ ಮೇಲೆಯೇ ಕೋಪ ಮಾಡಿಕೊಂಡು ಹೋಗಿದ್ದರು’ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಮೆಮೊಗೆ ವರದಿಯೇ ಉತ್ತರ: ‘ಹೊಣೆಗಾರಿಕೆ ಆದೇಶ ಕೈ ಸೇರಿದ್ದ ಬಳಿಕ ರೂಪಾ, ನನ್ನ ಮೇಲೆ ಅಸಮಾಧಾನ ಹೊಂದಿದ್ದರು. ಅದರ ನಡುವೆಯೇ ತುಮಕೂರಿನ ಮಹಿಳಾ ಕಾರಾಗೃಹದಲ್ಲಿ ರೂಪಾಂತರ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಾಧ್ಯಮದವರನ್ನು ಆಹ್ವಾನಿಸಬಾರದು. ಆಹ್ವಾನಿಸಿದರೂ ವಿಚಾರಣಾಧೀನ ಕೈದಿಗಳ ಗುರುತು ಬಹಿರಂಗಗೊಳ್ಳದಂತೆ  ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೆ. ಈ ಕುರಿತ ಸುಪ್ರೀಂಕೋರ್ಟ್‌ ಆದೇಶಗಳನ್ನು ನೆನಪಿಸಿದ್ದೆ.’

‘ಅದನ್ನು ಕಿವಿಗೆ ಹಾಕಿಕೊಳ್ಳದ ರೂಪಾ,  ಮಾಧ್ಯಮದವರನ್ನು ಕರೆದು ಕಾರ್ಯಕ್ರಮ ನಡೆಸಿದ್ದರು. ಆ ಬಗ್ಗೆ ಸ್ಪಷ್ಟನೆ ನೀಡುವಂತೆ ಮರುದಿನವೇ ಮೆಮೊ ಕೊಟ್ಟಿದ್ದೆ. ಅದಕ್ಕೂ ಆಕ್ರೋಶ ವ್ಯಕ್ತಪಡಿಸಿದ್ದರು. ನಾನೂ ಐಪಿಎಸ್‌ ಅಧಿಕಾರಿ; ನನಗೆ ಸ್ವಾತಂತ್ರ್ಯವಿಲ್ಲವೇ ಎಂದು ಪ್ರಶ್ನಿಸಿದ್ದರು. ಅದಾದ ನಂತರವೂ ಕೆಲ ಮಾಧ್ಯಮಗಳ ಸಂವಾದದಲ್ಲಿ ಪಾಲ್ಗೊಂಡಿದ್ದರು. ಜತೆಗೆ ಕಾರಾಗೃಹದೊಳಗಿನ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದರು. ಅದಕ್ಕೆ ಎರಡನೇ ಬಾರಿ ಮೆಮೊ ಕೊಟ್ಟಿದ್ದೆ.’

‘ಮೊದಲ ಮೆಮೊಗೆ ಉತ್ತರ  ಕೊಟ್ಟಿದ್ದರು. ಅದರ ಪರಿಶೀಲನೆ ನಡೆಯುತ್ತಿತ್ತು. ಇನ್ನೊಂದು ಮೆಮೊಗೆ ಉತ್ತರ ನೀಡಿರಲಿಲ್ಲ. ಜುಲೈ 10ರಂದು ಮುಖ್ಯಮಂತ್ರಿ ಅವರ ಸಭೆಗೆ ಹಾಜರಾಗಬೇಕಿತ್ತು. ಅದರ ಬದಲು ಕಾರಾಗೃಹಕ್ಕೆ ಹೋಗಿದ್ದ ರೂಪಾ, ಅಲ್ಲಿ ಪರಿಶೀಲನೆ ನಡೆಸಿದ್ದೇನೆ ಎಂದು ಜುಲೈ 13ರಂದು ವರದಿ ನೀಡಿದ್ದಾರೆ’ ಎಂದು ಡಿಜಿಪಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

‘ಇಲಾಖೆಯ ಪ್ರತಿಯೊಬ್ಬ ಅಧಿಕಾರಿ ನೀಡುವ ವರದಿಯನ್ನು ಗೋಪ್ಯವಾಗಿರಿಸಿ, ಅದರ ಮೇಲೆ ತನಿಖೆ ಕೈಗೊಂಡು ಕ್ರಮ ಜರುಗಿಸುತ್ತೇವೆ. ಆದರೆ, ಈ ವರದಿಯನ್ನು ರೂಪಾ ಅವರೇ ಮಾಧ್ಯಮಗಳಿಗೆ ಕೊಟ್ಟು ಇಲಾಖೆಗೆ ಕೆಟ್ಟ ಹೆಸರು ಬರುವಂತೆ ಮಾಡಿದ್ದಾರೆ. ನಿವೃತ್ತಿ ಸಮಯದಲ್ಲಿ ನನ್ನ ವಿರುದ್ಧವೂ ಇಲ್ಲಸಲ್ಲದ ಆರೋಪ ಮಾಡಿದ್ದು, ಇದು ಮನಸ್ಸಿಗೆ ನೋವುಂಟು ಮಾಡಿದೆ’ ಎಂದು ತಿಳಿಸಿದ್ದಾರೆ.

ಲಂಚ ಆರೋಪ ನಿರಾಧಾರ: ‘ಶಶಿಕಲಾ, ತೆಲಗಿಗೆ ಯಾವುದೇ ವಿಶೇಷ ಸೌಲಭ್ಯ ನೀಡಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ತೆಲಗಿಗೆ  ನ್ಯಾಯಾಲಯದ ನಿರ್ದೇಶನದಂತೆ ಸಹಾಯಕನನ್ನು ನಿಯೋಜಿಸಿದ್ದೇವೆ’ ಎಂದು ಡಿಜಿಪಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಗೃಹ ಇಲಾಖೆಗೆ ಮನವಿ ಸಲ್ಲಿಸಿರುವ ರೂಪಾ
ಹೊಣೆಗಾರಿಕೆ ಆದೇಶವನ್ನು ಪ್ರಶ್ನಿಸಿದ್ದ ರೂಪಾ, ಮೂರು ಜೈಲುಗಳ ಜತೆಗೆ ಬೆಳಗಾವಿ, ಬಳ್ಳಾರಿ, ಕಲಬುರ್ಗಿ ಹಾಗೂ ಧಾರವಾಡ ಜೈಲುಗಳ ಜವಾಬ್ದಾರಿ ನೀಡುವಂತೆ ಕೋರಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ   ಕಾರ್ಯದರ್ಶಿ  (ಎಸಿಎಸ್‌) ಅವರಿಗೆ ನೇರವಾಗಿ ಮನವಿ ಸಲ್ಲಿಸಿದ್ದರು.

ಮನವಿ ಸ್ವೀಕರಿಸಿದ್ದ ಎಸಿಎಸ್‌, ಡಿಜಿಪಿ ಮೇಲುರುಜುವಿನೊಂದಿಗೆ  ಮನವಿ ಕಳುಹಿಸಿ ಎಂದು ಹೇಳಿ ಹಿಂಬರಹ ನೀಡಿದ್ದರು.

ಬಳಿಕವೇ ಸತ್ಯನಾರಾಯಣರಾವ್ ಅವರ ಮೂಲಕ ಎರಡನೇ ಬಾರಿ ಗೃಹ ಇಲಾಖೆಗೆ ಮನವಿ ಕಳುಹಿಸಿದ್ದರು. ಈ ಬಗ್ಗೆಯೂ ಡಿಜಿಪಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

‘ರೂಪಾ ನೀಡಿರುವ ಮನವಿ ಪರಿಶೀಲನಾ ಹಂತದಲ್ಲಿದೆ’ ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿವೆ.

ಡಿಐಜಿ ಕಚೇರಿಗೆ ತನಿಖಾಧಿಕಾರಿ ಭೇಟಿ ಸಾಧ್ಯತೆ: ಜೈಲು ಅಕ್ರಮ ಹಾಗೂ ಭ್ರಷ್ಟಾಚಾರ  ಬಗ್ಗೆ ತನಿಖೆ ನಡೆಸುವ ಜವಾಬ್ದಾರಿ ವಹಿಸಿಕೊಂಡಿರುವ ನಿವೃತ್ತ ಐಎಎಸ್‌ ಅಧಿಕಾರಿ ವಿನಯ ಕುಮಾರ್ ಅವರು ಸೋಮವಾರ (ಜುಲೈ 17) ಡಿಐಜಿ  ರೂಪಾ ಕಚೇರಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ಅಕ್ರಮದ ಬಗ್ಗೆ ವರದಿ ನೀಡಿರುವ ರೂಪಾ ಅವರಿಂದಲೇ ಮೊದಲು ಮಾಹಿತಿ ಪಡೆಯಲಿದ್ದಾರೆ. ಬಳಿಕ ಕಾರಾಗೃಹಕ್ಕೂ ಭೇಟಿ ನೀಡಲಿರುವ ತನಿಖಾಧಿಕಾರಿ, ಇದಾದ ನಂತರವೇ ಸತ್ಯಾನಾರಾಯಣರಾವ್‌ ಅವರಿಂದ ಮಾಹಿತಿ ಪಡೆಯಲಿದ್ದಾರೆ ಎಂದು ಗೊತ್ತಾಗಿದೆ.

ಎಲ್ಲ ಜೈಲುಗಳ ಸ್ಥಿತಿಯೂ ಕೆಟ್ಟಿದೆ: ಶೆಟ್ಟರ್
ಹುಬ್ಬಳ್ಳಿ: ‘ರಾಜ್ಯದ ಎಲ್ಲ ಜೈಲುಗಳ ಸ್ಥಿತಿಯೂ ಕೆಟ್ಟಿದೆ. ಆದರೆ, ಸದ್ಯ ಪರಪ್ಪನ ಅಗ್ರಹಾರದ ಕಾರಾಗೃಹದ ಅಕ್ರಮವಷ್ಟೇ ಹೊರಬಂದಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದರು.

ನಗರದ 27 ಮತ್ತು 44ನೇ ವಾರ್ಡ್‌ನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಜೈಲಿನಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಬ್ಬರು ಪರಸ್ಪರ ಆರೋಪ–ಪ್ರತ್ಯಾರೋಪ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?’ ಎಂದರು.

‘ಅಕ್ರಮಕ್ಕೆ ಸಂಬಂಧಿಸಿದ ಸಾಕ್ಷ್ಯ ನಾಶ ಪ್ರಯತ್ನ ನಡೆಯುತ್ತಿದ್ದರೂ ಇದುವರೆಗೆ ಒಬ್ಬ ಅಧಿಕಾರಿಯ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು’ ಎಂದು ಒತ್ತಾಯಿಸಿದರು.

ಚುನಾವಣೆಗಾಗಿ ಹಿಂದೂ ಜಪ: ‘ಚುನಾವಣೆ ಹತ್ತಿರ ಬರುತ್ತಿರುವುದರಿಂದ ಸಿದ್ದರಾಮಯ್ಯ ಅವರು ಹಿಂದೂ ಧರ್ಮದ ಜಪ ಮಾಡುತ್ತಿದ್ದಾರೆ. ಬಸವಣ್ಣ ಮತ್ತು ಅಕ್ಕ ಮಹಾದೇವಿಯ ಹೆಸರು ಹೇಳುತ್ತಿದ್ದಾರೆ. ಅವರ ಆಡಳಿತ ವೈಖರಿಗೆ ಸ್ವತಃ ಅಹಿಂದ ಮತ್ತು ಅಲ್ಪಸಂಖ್ಯಾತರೂ ರೋಸಿ ಹೋಗಿದ್ದಾರೆ’ ಎಂದು ಶೆಟ್ಟರ್ ಟೀಕಿಸಿದರು.

* ಜೈಲು ಅಕ್ರಮ, ಸಾಕ್ಷ್ಯನಾಶ ಆರೋಪ ಕುರಿತು ತನಿಖೆಗೆ ಸೂಚಿಸಲಾಗಿದೆ. ಅಶಿಸ್ತಿನ ವರ್ತನೆ ತೋರುವ ಯಾವುದೇ ಅಧಿಕಾರಿಗಳನ್ನು ಸರ್ಕಾರ ಸಹಿಸುವುದಿಲ್ಲ.

–ಸಿದ್ದರಾಮಯ್ಯ, ಮುಖ್ಯಮಂತ್ರಿ

ರಾತ್ರೋರಾತ್ರಿ 18 ಕೈದಿಗಳ ಸ್ಥಳಾಂತರ

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಅಧೀಕ್ಷಕ ಕೃಷ್ಣಕುಮಾರ್‌ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿದ್ದ 18 ಕೈದಿಗಳನ್ನು ರಾತ್ರೋರಾತ್ರಿ ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ.

‘ಬೆಳಗಾವಿ, ಕಲಬುರ್ಗಿ ಕೇಂದ್ರ ಕಾರಾಗೃಹಕ್ಕೆ ತಲಾ ಮೂವರು, ಧಾರವಾಡ,  ವಿಜಯಪುರ ಹಾಗೂ ಬಳ್ಳಾರಿ ಕೇಂದ್ರ ಕಾರಾಗೃಹಗಳಿಗೆ ತಲಾ ನಾಲ್ವರು ಕೈದಿಗಳನ್ನು ಸ್ಥಳಾಂತರಿಸಲಾಗಿದೆ. ಆ ಕೈದಿಗಳ ಬಗ್ಗೆ  ಆಯಾ ಕಾರಾಗೃಹದ ಜೈಲು ಅಧೀಕ್ಷಕರಿಗೂ ಮಾಹಿತಿ ಕಳುಹಿಸಿದ್ದೇವೆ’ ಎಂದು ಕಾರಾಗೃಹಗಳ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಶನಿವಾರ ಎಚ್‌.ಎನ್‌. ಸತ್ಯನಾರಾಯಣರಾವ್‌ ಹಾಗೂ  ಡಿ.ರೂಪಾ ಪ್ರತ್ಯೇಕವಾಗಿ ಜೈಲಿಗೆ ಭೇಟಿ ನೀಡಿದ್ದರು.

ರೂಪಾ ಭೇಟಿ ನೀಡಿದ್ದ ವೇಳೆ ಅವರ ಪರ ಘೋಷಣೆ ಕೂಗಿದ್ದ ಹಲವು ಕೈದಿಗಳು, ಕೃಷ್ಣಕುಮಾರ್‌ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ್ದರು. ಜೈಲು ಅಧೀಕ್ಷಕರು ಅಕ್ರಮಗಳಿಗೆ ಕುಮ್ಮಕ್ಕು ನೀಡುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಈ ಸಂಬಂಧ ಕೈದಿಗಳ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿತ್ತು. ಹೀಗಾಗಿ ಜೈಲಿನ ಮೈದಾನದಲ್ಲೇ ಕುಳಿತು ಎರಡೂ ಗುಂಪುಗಳು ಪ್ರತಿಭಟನೆ ನಡೆಸಿದ್ದವು.

ಆಗ ರೂಪಾ, ಎರಡು ಗುಂಪಿನ ನಡುವೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವಂತೆ ಕೃಷ್ಣಕುಮಾರ್‌ ಅವರಿಗೆ ಸೂಚನೆ ನೀಡಿ ಜೈಲಿನಿಂದ ಹೊರಬಂದಿದ್ದರು.

ಇದಾದ ಬಳಿಕವೇ ಕೈದಿಗಳನ್ನು ಕೃಷ್ಣಕುಮಾರ್‌ ತರಾಟೆಗೆ ತೆಗೆದುಕೊಂಡು ಮೈದಾನದಿಂದ ಬ್ಯಾರಕ್‌ಗೆ ಹೋಗುವಂತೆ ಹೇಳಿದ್ದರು. ಕೆಲವರನ್ನು ಒತ್ತಾಯದಿಂದಲೇ ಬ್ಯಾರಕ್‌ಗೆ ಕಳುಹಿಸಿದ್ದರು. ಆದರೆ, 18 ಕೈದಿಗಳು   ತಡರಾತ್ರಿಯಾದರೂ ಪ್ರತಿಭಟನೆ ಜಾಗದಿಂದ ಹೋಗಿರಲಿಲ್ಲ. ಅದೇ ಕಾರಣಕ್ಕೆ ಕೈದಿಗಳನ್ನು ಕೃಷ್ಣಕುಮಾರ್ ಸ್ಥಳಾಂತರಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಲು ಕೃಷ್ಣಕುಮಾರ್‌ ನಿರಾಕರಿಸಿದರು.

ಜೈಲಿನ ಎದುರು ಪ್ರತಿಭಟನೆ ಎಚ್ಚರಿಕೆ: ಕೈದಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸಿದ ಸುದ್ದಿ ತಿಳಿದ ಅವರ ಸಂಬಂಧಿಕರು ಕಾರಾಗೃಹದ ಎದುರು ಸೇರಿ ಜೈಲು ಅಧೀಕ್ಷಕರ ಕ್ರಮವನ್ನು ಖಂಡಿಸಿದರು. 

‘ರೂಪಾ ಅವರು ಜೈಲಿಗೆ ಭೇಟಿ  ನೀಡಿದ್ದಾಗ, ಅವರ ಬಳಿ ಹಲವು ಕೈದಿಗಳು ಸಮಸ್ಯೆ ಹೇಳಿಕೊಳ್ಳುತ್ತಿದ್ದರು. ಅದಕ್ಕೆ ಅಡ್ಡಿಪಡಿಸಿದ್ದ ಕೃಷ್ಣಕುಮಾರ್‌, ಕೆಲ ಕೈದಿಗಳನ್ನು ಬಿಟ್ಟು ಘೋಷಣೆ ಕೂಗಿಸಿದ್ದರು. ಅವಾಗ ರೂಪಾ ಸಹ ಜೈಲಿನಿಂದ ಹೊರಹೋದರು. ಈ ವೇಳೆ ರೂಪಾ ಅವರನ್ನು ವಾಪಸ್‌ ಕರೆಸುವಂತೆ ಕೈದಿಗಳು ಪ್ರತಿಭಟಿಸಿದ್ದರು’ ಎಂದು ಸಂಬಂಧಿಕರು ಹೇಳಿದರು.  ‘ಜೈಲು ಸಿಬ್ಬಂದಿ ಕೈದಿಗಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ.  ಅವರನ್ನು ಭೇಟಿಯಾಗಲೂ ಸಹ ಲಂಚ ಪಡೆಯುತ್ತಿದ್ದಾರೆ. ಇದನ್ನು ಖಂಡಿಸಿ ಕಾರಾಗೃಹದ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದರು.

ಮುಖ್ಯಾಂಶಗಳು

* ಡಿಐಜಿಗೆ ಬೆಂಗಳೂರು, ತುಮ ಕೂರು ಜೈಲಿನ ಜವಾಬ್ದಾರಿ ನಿಗದಿಪಡಿಸಿದ್ದ ಇಲಾಖೆ 
* ಬೆಳಗಾವಿ, ಬಳ್ಳಾರಿ, ಧಾರವಾಡ, ಕಲಬುರ್ಗಿ  ಕಾರಾಗೃಹದ ಉಸ್ತುವಾರಿ ಬಯಸಿದ್ದ ರೂಪಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT