ಶನಿವಾರ, ಡಿಸೆಂಬರ್ 7, 2019
25 °C

ಕೆಂಪಯ್ಯ, ಎಂ.ಎನ್‌.ರೆಡ್ಡಿ ಕಾರ್ಯ ವೈಖರಿ: ಮುಖ್ಯಮಂತ್ರಿ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಪಯ್ಯ, ಎಂ.ಎನ್‌.ರೆಡ್ಡಿ ಕಾರ್ಯ ವೈಖರಿ: ಮುಖ್ಯಮಂತ್ರಿ ಅಸಮಾಧಾನ

ಬೆಂಗಳೂರು: ದಕ್ಷಿಣ ಕನ್ನಡದ ಕೋಮುಗಲಭೆ ಮತ್ತು  ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿವಾದವನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು   ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಮತ್ತು ಗುಪ್ತಚರ ವಿಭಾಗದ ಡಿಜಿಪಿ ಎಂ.ಎನ್‌.ರೆಡ್ಡಿ  ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾನುವಾರ  ಮೈಸೂರಿನಿಂದ ನಗರಕ್ಕೆ ಬಂದ ಅವರು,  ಕೆಂಪಯ್ಯ ಮತ್ತು ರೆಡ್ಡಿ ಅವರನ್ನು  ತಮ್ಮ ಅಧಿಕೃತ ನಿವಾಸ ಕಾವೇರಿಗೆ ಕರೆಸಿಕೊಂಡು, ಎರಡೂ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸದೇ ಇರುವ  ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

‘ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಕಿತ್ತಾಟ ಇನ್ನೂ ಮುಂದುವರಿದಿದೆ. ಮಾಧ್ಯಮಗಳ ಮುಂದೆ ಹೋಗುವುದು ಸರಿಯಲ್ಲ ಎಂದು ತಾಕೀತು ಮಾಡಿದ ಬಳಿಕವೂ ತಾತ್ಸಾರ ತೋರಿರುವುದು ಅಕ್ಷಮ್ಯ. ಇದರಿಂದ ಗೃಹ ಇಲಾಖೆ ನಗೆಪಾಟಲಿಗೆ ಗುರಿಯಾಗಿದೆ. ಸೂಕ್ತ ಮುನ್ನೆಚ್ಚರಿಕೆ ಕೈಗೊಂಡಿದ್ದರೆ ಹೀಗಾಗುತ್ತಿರಲಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಕಾರಾಗೃಹ ಇಲಾಖೆಯ ಡಿಜಿಪಿ ಎಚ್‌.ಎನ್‌.ಸತ್ಯನಾರಾಯಣ ರಾವ್‌ ಮತ್ತು ಡಿಐಜಿ  ಡಿ.ರೂಪಾ ನಡುವಿನ ಕಿತ್ತಾಟ ರಾಷ್ಟ್ರೀಯ ಮಟ್ಟದ  ಸುದ್ದಿ ಆಗಿದೆ. ಆಡಳಿತವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬ ಸಂದೇಶ ರವಾನೆಯಾಗುತ್ತಿದೆ. ವಿರೋಧ ಪಕ್ಷಗಳು ಇದನ್ನೇ ಅಸ್ತ್ರವಾಗಿ ಬಳಸಿ ಸರ್ಕಾರವನ್ನು ಮುಜುಗರಕ್ಕೆ ಗುರಿ ಮಾಡುತ್ತವೆ.  ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಿದ್ದರಾಮಯ್ಯ ತಾಕೀತು ಮಾಡಿದರು.

‘ಚುನಾವಣಾ ವರ್ಷದಲ್ಲಿ ಕೋಮು ಗಲಭೆಗಳು ನಡೆದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಇವೆಲ್ಲದರ ಬಗ್ಗೆ ಗುಪ್ತಚರ ಮಾಹಿತಿ ಇರಲಿಲ್ಲವೇ. ಸರಿಯಾಗಿ ಕೆಲಸ ಮಾಡಿದ್ದರೆ, ಗಲಭೆಯನ್ನು ತಡೆಯಬಹುದಿತ್ತು. ಮಾಹಿತಿ ಕಲೆ ಹಾಕಲು ಸಾಧ್ಯವಾಗದಿದ್ದರೆ ಗುಪ್ತಚರ ಇಲಾಖೆ ಏಕಿರಬೇಕು’ ಎಂದು ಎಂ.ಎನ್‌. ರೆಡ್ಡಿ ಅವರನ್ನು ಮುಖ್ಯಮಂತ್ರಿ ಪ್ರಶ್ನಿಸಿದರು.

‘ಒಂದು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾನಾ ಕಾರಣ ಮುಂದಿಟ್ಟು ಸಂಘಪರಿವಾರಕ್ಕೆ ಸೇರಿದ ಸಂಘಟನೆಗಳು ಗಲಾಟೆ ನಡೆಸುತ್ತಿವೆ. ಕಾನೂನು ಮತ್ತು ಈ ಸಂಬಂಧ ಕಾಲಕಾಲಕ್ಕೆ ಗೃಹ ಇಲಾಖೆಗೆ ಮಾಹಿತಿ ನೀಡುವ ಕೆಲಸವನ್ನು ಗುಪ್ತಚರ ವಿಭಾಗ ಮಾಡಬೇಕಾಗಿತ್ತು. ದಕ್ಷಿಣ ಕನ್ನಡದ ಗಲಭೆಯನ್ನು  ಅಸ್ತ್ರವಾಗಿ ಬಳಸಿಕೊಂಡ ಬಿಜೆಪಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಬಿಂಬಿಸುವ ಕೆಲಸವನ್ನೂ ಮಾಡುತ್ತಿದೆ. ಗುಪ್ತಚರ ಇಲಾಖೆ ವೈಫಲ್ಯವೇ ಇದಕ್ಕೆ ಕಾರಣ ಎಂದು ಕಿಡಿಕಾರಿದರು’ ಎಂದು ಗೊತ್ತಾಗಿದೆ.

ಪ್ರತಿಕ್ರಿಯಿಸಿ (+)