ಬುಧವಾರ, ಡಿಸೆಂಬರ್ 11, 2019
20 °C
ಅಂತಿಮ ಹಣಾಹಣಿಯಲ್ಲಿ ಮರಿನ್ ಸಿಲಿಕ್‌ಗೆ ಸೋಲು

ರೋಜರ್‌ ಫೆಡರರ್‌ಗೆ ದಾಖಲೆಯ ಪ್ರಶಸ್ತಿ

Published:
Updated:
ರೋಜರ್‌ ಫೆಡರರ್‌ಗೆ ದಾಖಲೆಯ ಪ್ರಶಸ್ತಿ

ಲಂಡನ್‌: ಆರಂಭದಿಂದ ಅಜೇಯ ಓಟ ಮುಂದುವರಿಸಿದ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ ವಿಂಬಲ್ಡನ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿದರು.

ಭಾನುವಾರ ರಾತ್ರಿ ಇಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಕ್ರೊವೇಷಿಯಾದ ಮರಿನ್ ಸಿಲಿಕ್ ಅವರನ್ನು 6–3, 6–1, 6–4ರಲ್ಲಿ ಮಣಿಸಿದ ಫೆಡರರ್‌ ಎಂಟು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡರು.

ಈ ಜಯದೊಂದಿಗೆ ಫೆಡರರ್‌ ಒಟ್ಟು 19 ಗ್ರ್ಯಾನ್‌ಸ್ಲ್ಯಾಮ್‌ ಪ್ರಶಸ್ತಿಗಳನ್ನು ಗೆದ್ದ ಆಟಗಾರ ಎಂದೆನಿಸಿಕೊಂಡರು. 35ನೇ ವಯಸ್ಸಿನಲ್ಲಿ ವಿಂಬಲ್ಡನ್ ಗೆಲ್ಲುವುದರೊಂದಿಗೆ ಈ ಪ್ರಶಸ್ತಿ ಗೆದ್ದ ಅತಿ ಹಿರಿಯ ಆಟಗಾರ ಎಂಬ ದಾಖಲೆಯೂ ರೋಜರ್ ಫೆಡರರ್‌ ಅವರ ಹೆಸರಿಗೆ ಸೇರಿತು.

ಫೈನಲ್‌ ಪಂದ್ಯದಲ್ಲಿ ಫೆಡರರ್ ಮುಂದೆ ಮರಿನ್ ಸಿಲಿಕ್‌ ಅವರ ಯಾವ ತಂತ್ರವೂ ಫಲಿಸಲಿಲ್ಲ. ಆರಂಭದಿಂದಲೇ ಮುನ್ನಡೆ ಸಾಧಿಸಿದ ಫೆಡರರ್‌ ಮೊದಲ ಸೆಟ್‌ನಲ್ಲಿ 6–3ರಿಂದ ಎದುರಾಳಿಯನ್ನು ಹಿಂದಿಕ್ಕಿದರು. 28 ವರ್ಷದ ಸಿಲಿಕ್ ಎರಡನೇ ಸೆಟ್‌ನಲ್ಲಿ 3–0 ಅಂತರದಲ್ಲಿ ಹಿಂದುಳಿದಾಗ ಕಣ್ಣೀರು ಹಾಕಿದರು.

ಫೆಡರರ್‌ಗೆ ಉತ್ತರ ನೀಡಲು ಸಾಧ್ಯವಾಗದ ಸಿಲಿಕ್ ಈ ಸೆಟ್‌ನಲ್ಲಿ 1–6ರಿಂದ ನಿರಾಸೆ ಅನುಭವಿಸಿದರು. ನಿರ್ಣಾಯಕ ಸೆಟ್‌ನಲ್ಲಿ ಸಿಲಿಕ್‌ ಸ್ವಲ್ಪ ಪ್ರತಿರೋಧ ಒಡ್ಡಿದರೂ ಜಯದತ್ತ ನಾಗಾಲೋಟ ಮುಂದುವರಿಸಿದ ಫೆಡರರ್‌ಗೆ ಲಗಾಮು ಸಾಧ್ಯವಾಗಲಿಲ್ಲ.

2014ರಲ್ಲಿ ಅಮೆರಿಕ ಓಪನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಸಿಲಿಕ್‌ಗೆ ಇಲ್ಲಿ ಏಳನೇ ಶ್ರೇಯಾಂಕ ನೀಡಲಾಗಿತ್ತು. ಸೆಮಿಫೈನಲ್‌ನಲ್ಲಿ ಅಮೆರಿಕದ ಸ್ಯಾಮ್ ಕ್ವೆರಿ ಅವರನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದ ಸಿಲಿಕ್‌ ಭರವಸೆಯಿಂದಲೇ ಅಂಗಳಕ್ಕೆ ಇಳಿದಿದ್ದರು.

ರಾಜಕುಮಾರ ವಿಲಿಯಮ್ಸ್‌ ದಂಪತಿ ಮತ್ತು ಚಿತ್ರ ತಾರೆಯರು ಸಾಕ್ಷಿಯಾದ ಪಂದ್ಯದಲ್ಲಿ ಸಿಲಿಕ್‌ಗೆ ಮೊದಲ ಬ್ರೇಕ್‌ ಪಾಯಿಂಟ್‌ ಲಭಿಸಿದ್ದು ನಾಲ್ಕನೇ ಗೇಮ್‌ನಲ್ಲಿ. ಈ ಸಂದರ್ಭದಲ್ಲಿ ಅವರ ನಿರೀಕ್ಷೆ ಗರಿಗೆದರಿತು. ಆದರೆ ಮುಂದಿನ ಗೇಮ್‌ನಲ್ಲಿ ಚೇತರಿಸಿಕೊಂಡ ಫೆಡರರ್‌ ಎದುರಾಳಿಯನ್ನು ನಿರಾಸೆಯ ಕೂಪಕ್ಕೆ ತಳ್ಳಿದರು.ರನ್ನರ್ ಅಪ್‌ ಸ್ಥಾನ ಪಡೆದ ಮರಿನ್ ಸಿಲಿಕ್

ಸಿಲಿಕ್‌ ಅವರ ಡಬಲ್‌ ಫಾಲ್ಟ್‌ನ ಲಾಭ ಪಡೆದ ಫೆಡರರ್‌ ಮೊದಲ ಸೆಟ್‌ ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನಲ್ಲಿ ಫೆಡರರ್‌  3–0ಯಿಂದ  ಮುನ್ನುಗ್ಗಿದರು. ಈ ಸಂದರ್ಭದಲ್ಲಿ ನೋವಿನಿಂದ ಬಳಲಿದ ಸಿಲಿಕ್‌ ಸಮೀಪದ ಕುರ್ಚಿಗೆ ಒರಗಿ ಕಣ್ಣೀರು ಹಾಕಿದರು.

ವೈದ್ಯರ ನೆರವು ಪಡೆದ ನಂತರ ಅಂಗಳಕ್ಕೆ ಮರಳಿದ ಅವರಿಗೆ ಪಂದ್ಯದಲ್ಲಿ ಹಿಡಿತ ಸಾಧಿಸಲು ಆಗಲಿಲ್ಲ. ಹೀಗಾಗಿ 6–1ರಿಂದ ಸೆಟ್‌ ಬಿಟ್ಟುಕೊಟ್ಟರು. ಮೂರನೇ ಸೆಟ್‌ನಲ್ಲಿ 4–3ರಿಂದ ಮುನ್ನಡೆದ ಫೆಡರರ್‌ ನಂತರ ಹಿಂದಿರುಗಿ ನೋಡಲಿಲ್ಲ. ಒಂದು ತಾಸು 41 ನಿಮಿಷಗಳ ಪಂದ್ಯವನ್ನು ಗೆದ್ದು ಬೀಗಿದರು.

ಕುಬೋಟ್‌, ಮೆಲೊಗೆ ಪ್ರಶಸ್ತಿ

ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ  ಪೋಲೆಂಡ್‌ನ ಲೂಕಾಸ್‌ ಕುಬೋಟ್‌ ಮತ್ತು ಬ್ರೆಜಿಲ್‌ನ ಮಾರ್ಸೆಲೊ ಮೆಲೊ ಪ್ರಶಸ್ತಿ ಗೆದ್ದರು. ಓ ಮರಾಕ್ ಮತ್ತು ಮೇಟ್‌ ಪೆವಿಕ್‌ ಜೋಡಿಯನ್ನುಇವರು 5–7, 7–5, 7–6(2), 3–6, 13–11ರಿಂದ ಮಣಿಸಿದರು.

ನಾಲ್ಕು ತಾಸು ಮತ್ತು 39 ನಿಮಿಷ ನಡೆದ ಪಂದ್ಯದಲ್ಲಿ ಎರಡೂ ಜೋಡಿ ಅಮೋಘ ಆಟವಾಡಿದರು. ಐದು ಸೆಟ್‌ಗಳ ವರೆಗೆ ಸಾಗಿದ ಪಂದ್ಯದ ನಂತರ ಕುಬೋಟ್ ಮತ್ತು ಮೆಲೊ ಸಂಭ್ರಮದ ಅಲೆಯಲ್ಲಿ ತೇಲಿದರು.

ಮಕರೊವಾ, ವೆಸ್ನಿನಾಗೆ ಡಬಲ್ಸ್ ಪ್ರಶಸ್ತಿ

ರಷ್ಯಾದ ಜೋಡಿ ಎಕಟೇರಿಯನ್‌ ಮಕರೋವಾ ಮತ್ತು ಎಲೆನಾ ವೆಸ್ನಿನಾ ಮಹಿಳೆಯರ ಡಬಲ್ಸ್‌ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. ಶನಿವಾಾರ ತಡರಾತ್ರಿ ನಡೆದ ಫೈನಲ್‌ ಪಂದ್ಯದಲ್ಲಿ ಅವರು ಥೈವಾನ್‌ನ ಹೋ ಚಿಂಗ್ ಚಾನ್‌ ಮತ್ತು ರೊಮೇನಿಯಾದ ಮೋನಿಕಾ ನಿಕುಲೆಸ್ಕು ಜೋಡಿಯನ್ನು 6–0, 6–0 ಸೆಟ್‌ಗಳಿಂದ ಮಣಿಸಿದರು.

55 ನಿಮಿಷಗಳಲ್ಲಿ ಮುಕ್ತಾಯಗೊಂಡ ಪಂದ್ಯದಲ್ಲಿ ಒಲಿಂಪಿಕ್ಸ್‌ ಚಾಂಪಿಯನ್ನರ ಮುಂದೆ ಚಾನ್‌ ಮತ್ತು ನಿಕುಲೆಸ್ಕು ಜೋಡಿ ಮಂಕಾದರು. ಎರಡನೇ ಶ್ರೇಯಾಂಕದ ರಷ್ಯಾ ಜೋಡಿ ಏಕಪಕ್ಷೀಯವಾಗಿ ಪಂದ್ಯ ಗೆದ್ದುಕೊಂಡರು.

ಈ ಮೂಲಕ ಮೂರು ಗ್ರ್ಯಾನ್‌ಸ್ಲ್ಯಾಮ್‌ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದರು. 2013ರ ಫ್ರೆಂಚ್ ಓಪನ್‌ ಮತ್ತು 2014ರ ಅಮೆರಿಕ ಓಪನ್‌ ಟೂರ್ನಿಯ ಪ್ರಶಸ್ತಿ ಇವರ ಪಾಲಾಗಿತ್ತು. ವಿಂಬಲ್ಡನ್‌ನಲ್ಲಿ ಇವರಿಗೆ ಇದು ಮೊದಲ ಪ್ರಶಸ್ತಿ.

ಆನಂದಬಾಷ್ಪ ಸುರಿಸಿದ ಫೆಡರರ್‌

ಎಂಟನೇ ವಿಂಬಲ್ಡನ್‌ ಪ್ರಶಸ್ತಿ ಗೆದ್ದು ಪೀಟ್ ಸಾಂಪ್ರಾಸ್‌ ಅವರ ದಾಖಲೆಯನ್ನು ಹಿಂದಿಕ್ಕಿದ ಫೆಡರರ್‌ ಟ್ರೋಫಿ ಸ್ವೀಕರಿಸುವ ಮುನ್ನ ಪತ್ನಿ ಮಿರ್ಕಾ ಮತ್ತು ನಾಲ್ವರು ಮಕ್ಕಳ ಕಡೆಗೆ ನೋಟ ಬೀರಿ ಆನಂದಬಾಷ್ಪ ಸುರಿಸಿದರು.

ನಂತರ ಮಾತನಾಡಿದ ಅವರು ‘ಒಂದೇ ಒಂದು ಸೆಟ್‌ನಲ್ಲಿ ಸೋಲದೆ ಫೈನಲ್‌ ತಲುಪಿದ್ದೆ. ಇಲ್ಲೂ ಅಮೋಘ ಜಯ ಸಾಧಿಸಿದೆ. ಇದು ನಿಜಕ್ಕೂ ಅದ್ಭುತ’ ಎಂದರು. ‘ಇಂಥ ಆನಂದದ ಗಳಿಗೆಯನ್ನು ಇಲ್ಲಿ ಅನುಭವಿಸುತ್ತೇನೆ ಎಂಬ ನಿರೀಕ್ಷೆಯೇ ಇರಲಿಲ್ಲ. ಸಂಕಷ್ಟದ ಕಾಲದ ನಂತರ ನನ್ನ ಬಾಳಿನಲ್ಲಿ ಮತ್ತೆ ಭರವಸೆ ಮೂಡಿದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)