ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಮುದ್ರಣ ಆಗಿಲ್ಲ ಪದವಿ ಕನ್ನಡ ಪುಸ್ತಕ

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಯ ಕನ್ನಡ ಪುಸ್ತಕ ಮುದ್ರಣ ಇನ್ನೂ ಪೂರ್ಣಗೊಂಡಿಲ್ಲ. ಪಠ್ಯ ಪುಸ್ತಕ ಸಿಗದೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಮಸ್ಯೆ ಎದುರಿಸುತ್ತಿದ್ದಾರೆ.

ಜುಲೈ 10ರಿಂದ ತರಗತಿಗಳು ಆರಂಭವಾಗಿವೆ. ಪಠ್ಯಕ್ರಮವೂ ಸಿದ್ಧವಾಗಿದೆ. ಆದರೆ, ಇನ್ನೂ ಪುಸ್ತಕಗಳು ಲಭ್ಯವಾಗಿಲ್ಲ. ಪಠ್ಯಕ್ರಮ ಇಟ್ಟುಕೊಂಡು ಪಾಠ ಮಾಡುವುದು ಹೇಗೆಂದು ತಿಳಿಯದೆ ಉಪನ್ಯಾಸಕರು ಪೇಚಾಡುತ್ತಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಅಡಿ 683 ಕಾಲೇಜುಗಳಿವೆ. ಕಲಾ, ವಾಣಿಜ್ಯ, ವಿಜ್ಞಾನ... ಹೀಗೆ ಎಲ್ಲಾ ವಿಭಾಗದ ವಿದ್ಯಾರ್ಥಿಗಳನ್ನು ಪರಿಗಣಿಸಿದರೆ ಸುಮಾರು 50 ಸಾವಿರ ಪುಸ್ತಕಗಳನ್ನು ಮುದ್ರಿಸಬೇಕಾಗುತ್ತದೆ.

‘ಜೂನ್‌ 20ರಿಂದ ತರಗತಿಗಳು ಪ್ರಾರಂಭವಾಗಬೇಕಿತ್ತು. ಮೌಲ್ಯಮಾಪನ ತಡವಾಗಿದ್ದರಿಂದ ಪದವಿ ತರಗತಿ ಪ್ರಾರಂಭದ ದಿನಾಂಕವನ್ನು ಎರಡು ಬಾರಿ ಮುಂದೂಡಿದರು. ಒಂದು ತಿಂಗಳು ತಡವಾಗಿ ಕಾಲೇಜು ಪ್ರಾರಂಭವಾಗಿದ್ದರೂ ಪುಸ್ತಕಗಳು ಮಾತ್ರ ಸಿದ್ಧಗೊಂಡಿಲ್ಲ’ ಎಂದು ಪ್ರಾಧ್ಯಾಪಕರು ದೂರಿದ್ದಾರೆ.

ವಿಜಯ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಗುರುಮೂರ್ತಿ, ‘ಭಾಷೆ, ಸಾಹಿತ್ಯದ ಬಗ್ಗೆ ಒಂದೆರಡು ದಿನ ಹೇಳಬಹುದು. ಪಠ್ಯಕ್ರಮ ಈಗಾಗಲೇ ಸಿಕ್ಕಿದೆ. ಕೇವಲ ಅದನ್ನಷ್ಟೇ ಇಟ್ಟುಕೊಂಡು ಪಾಠ ಮಾಡಲು ಆಗುವುದಿಲ್ಲ’ ಎಂದರು.

‘ರನ್ನನ ಗದಾಯುದ್ಧದಿಂದ 20 ಬಿಡಿ ಪದ್ಯಗಳನ್ನು ಆಯ್ಕೆ ಮಾಡಿ ಅದಕ್ಕೆ ರನ್ನ ಎಂದು ಹೆಸರಿಟ್ಟಿದ್ದಾರೆ. ಅದರಲ್ಲಿ ಯಾವ ಪದ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿಯದೆ ಪಾಠ ಮಾಡುವುದು ಸರಿಯಲ್ಲ’ ಎಂದರು.

ಮುದ್ರಣಕ್ಕೆ ಹೊರಗಡೆ ಟೆಂಡರ್‌: ವಿಶ್ವವಿದ್ಯಾಲಯದ ಪಠ್ಯ ಪುಸ್ತಕಗಳ ಮುದ್ರಣದ ಹೊಣೆಯನ್ನು ಸಾಮಾನ್ಯವಾಗಿ ಪ್ರಸಾರಾಂಗಕ್ಕೆ ವಹಿಸಲಾಗುತ್ತದೆ. ಆದರೆ, ಈ ಬಾರಿ ಕನ್ನಡ ಅಧ್ಯಯನ ಕೇಂದ್ರವು ಪುಸ್ತಕಗಳ ಮುದ್ರಣದ ಜವಾಬ್ದಾರಿಯನ್ನು ಖಾಸಗಿ ಮುದ್ರಣಾಲಯಕ್ಕೆ ನೀಡಿದೆ.

‘ಕಾಲೇಜುಗಳು ಪ್ರಾರಂಭವಾಗುವ ಎರಡು ತಿಂಗಳ ಮುನ್ನ ನಮಗೆ ಮುದ್ರಣ ಸಾಮಗ್ರಿಗಳು ನೀಡಬೇಕು. ಆದರೆ, ಮೇ 25ಕ್ಕೆ ಪಠ್ಯ ಪರಿಷ್ಕರಣೆಗೊಳ್ಳುತ್ತಿದೆ ಎಂದು ಕೇಂದ್ರದಿಂದ ಪತ್ರ ಬಂದಿದೆ. ಆಗಲೇ ಮುದ್ರಣ ಸಾಮಾಗ್ರಿಗಳನ್ನು ನೀಡಿದ್ದರೆ, ಇಷ್ಟರಲ್ಲಿ ಪುಸ್ತಕಗಳು ಮಾರಾಟ ಮಳಿಗೆಗಳಲ್ಲಿ ಲಭ್ಯವಿರುತ್ತಿದ್ದವು’ ಎಂದು ಪ್ರಸಾರಾಂಗದ ನಿರ್ದೇಶಕ ಬಿ. ಗಂಗಾಧರ್‌ ತಿಳಿಸಿದರು.

‘ಬಿ.ಕಾಂ ವಿದ್ಯಾರ್ಥಿಗಳಿಗಾಗಿಯೇ 20 ಸಾವಿರ ಪುಸ್ತಕಗಳನ್ನು ಮುದ್ರಿಸಬೇಕಾಗುತ್ತದೆ. ದಿನಕ್ಕೆ 1,500 ಪುಸ್ತಕಗಳನ್ನು ಸಿದ್ಧಪಡಿಸಬಹುದು. ಹೀಗಾಗಿ ಎರಡು ತಿಂಗಳ ಕಾಲಾವಕಾಶ ಕೋರುತ್ತೇವೆ’ ಎಂದು ಮಾಹಿತಿ ನೀಡಿದರು.

‘ಜೂನ್‌ 15ವರೆಗೂ ಪ್ರಸಾರಾಂಗಕ್ಕೆ ಮುದ್ರಣ ಸಾಮಗ್ರಿಗಳನ್ನು ಕೇಂದ್ರ ಒದಗಿಸಿರಲಿಲ್ಲ. ಪದವಿ ತರಗತಿಗಳು ಪ್ರಾರಂಭವಾದ ಬಳಿಕ ಸಂಪಾದನೆಯ ಕೆಲಸ ಆರಂಭಿಸಿದೆ. ಹಾಗಾಗಿ ಪುಸ್ತಕ ಲಭ್ಯವಾಗುವುದು ತಡವಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ವಿಶ್ವವಿದ್ಯಾಲಯದೊಳಗಿನ ರಾಜಕೀಯದಿಂದ ನಮ್ಮ ಭವಿಷ್ಯ ಹಾಳಾಗುತ್ತಿದೆ. ಒಂದು ತಿಂಗಳು ತಡವಾಗಿ ಕಾಲೇಜು ಪ್ರಾರಂಭವಾಗಿದೆ. ಪುಸ್ತಕ ನೀಡಲು ಇನ್ನೂ ತಡಮಾಡಿದರೆ, ಸೆಮಿಸ್ಟರ್‌ ಪರೀಕ್ಷೆಗಳೇ ಬಂದು ಬಿಡುತ್ತವೆ’ ಎಂದು ವಿದ್ಯಾರ್ಥಿ ನಾಗರಾಜ್‌ ಅಳಲು ತೋಡಿಕೊಂಡರು.

* ಪ್ರಸಾರಾಂಗದಲ್ಲಿ ಪುಸ್ತಕಗಳನ್ನು ಮುದ್ರಿಸಲು ಹಾಳೆಗಳಿಲ್ಲ. ಹಾಗಾಗಿ ಹೊರಗಡೆ ಟೆಂಡರ್‌ ನೀಡಿದ್ದೇವೆ. ನಾಲ್ಕೈದು ದಿನಗಳಲ್ಲಿ ಪುಸ್ತಕಗಳು ಲಭ್ಯವಾಗಲಿವೆ

–ಪ್ರೊ. ಎಂ. ಮುನಿರಾಜು, ಹಂಗಾಮಿ ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯ

* ಪ್ರಸಾರಾಂಗವನ್ನು ಬಿಟ್ಟು ಹೊರಗಡೆ ಮುದ್ರಣಕ್ಕೆ ನೀಡುವ ನಿರ್ಧಾರವನ್ನು ವಿ.ವಿ ಅಧಿಕಾರಿಗಳು ತೆಗೆದುಕೊಂಡಿದ್ದಾರೆ. ಆಂತರಿಕ ವಿಷಯ ಹಂಚಿಕೊಳ್ಳಲು ಸಾಧ್ಯವಿಲ್ಲ

–ಡಾ. ಎಂ. ಸುಮಿತ್ರಾ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT