ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಂತ್ರಣ ಕೊಠಡಿ ಉದ್ಘಾಟನೆ

21ರಿಂದ ಅಂಬೇಡ್ಕರ್‌ ಚಿಂತನೆಗಳ ಪುನರ್‌ ಅವಲೋಕನ ಸಮ್ಮೇಳನ
Last Updated 16 ಜುಲೈ 2017, 19:38 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಇದೇ  21ರಿಂದ 23ರವರೆಗೆ ನಡೆಯುವ ‘ಸಾಮಾಜಿಕ ನ್ಯಾಯ ಮರುಸ್ಥಾಪನೆ– ಅಂಬೇಡ್ಕರ್‌ ಚಿಂತನೆಗಳ ಪುನರ್‌ ಅವಲೋಕನ’ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದ ನಿಯಂತ್ರಣ ಕೊಠಡಿಯನ್ನು ಭಾನುವಾರ  ಉದ್ಘಾಟಿಸಲಾಯಿತು.

ಬಳಿಕ ಮಾತನಾಡಿದ ಸಮ್ಮೇಳನದ ಸಂಚಾಲಕರಾದ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ‘ಡಾ. ಬಿ.ಆರ್‌.ಅಂಬೇಡ್ಕರ್ ಅವರ 126ನೇ ಜನ್ಮ ವರ್ಷಾಚರಣೆ ಅಂಗವಾಗಿ ಈ ಸಮ್ಮೇಳನ ಹಮ್ಮಿಕೊಂಡಿದ್ದೇವೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದರು.

‘ಸಭಾಂಗಣದ ಹೊರ ಭಾಗದಲ್ಲಿ ವಿವಿಧ ಗೋಷ್ಠಿಗಳನ್ನು ನಡೆಸಲು 12 ಸಭಾಂಗಣಗಳನ್ನು ಸ್ಥಾಪಿಸಲಾಗುತ್ತಿದೆ. ಇಲ್ಲಿ ದುಂಡುಮೇಜಿನ ಸಭೆಗಳೂ ನಡೆಯಲಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ಎಲ್‌.ಇ.ಡಿ ಪರದೆಗಳನ್ನು ಅಳವಡಿಸಲಾಗುತ್ತದೆ. ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ. 3,000 ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ಸಮ್ಮೇಳನದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ರಾಜ್ಯದ 13 ವಿಶ್ವವಿದ್ಯಾಲಯದಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ’ ಎಂದರು.

‘ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸುಮಾರು 300 ತಜ್ಞರು ವಿಚಾರ ಮಂಡಿಸಲಿದ್ದಾರೆ. 2,000 ಆಹ್ವಾನಿತರು ಪಾಲ್ಗೊಳ್ಳಲಿದ್ದಾರೆ. ಮಾನವ ಹಕ್ಕುಗಳ ಕಾರ್ಯಕರ್ತ ಮಾರ್ಟಿನ್‌ ಲೂಥರ್‌ ಕಿಂಗ್‌–3, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹ್ವಾನ ಪತ್ರಿಕೆ ನೀಡಿದ್ದಾರೆ. ಆದರೆ, ಅವರು ಈ ಬಗ್ಗೆ ಇನ್ನೂ ಖಚಿತ ಪಡಿಸಿಲ್ಲ’ ಎಂದು ತಿಳಿಸಿದರು.

‘ತಜ್ಞರಾದ ಪ್ರೊ.ಕಾರ್ನಲ್‌ ವೆಸ್ಟ್‌,  ಲಾರ್ಡ್‌ ಬೀಕು ಪರೇಕ್‌, ಪ್ರೊ.ಜೇಮ್ಸ್‌ ಮ್ಯಾನರ್‌, ಪ್ರೊ.ಥಾಮಸ್‌ ವೈಸ್ಕೋಪ್ಸ್‌, ಪ್ರೊ.ಉಪೇಂದ್ರ ಭಕ್ಷಿ, ಪ್ರೊ.ಲಾರೆನ್ಸ್‌ ಸೈಮನ್‌, ಪ್ರೊ.ಸ್ಯಾಮ್ಯುಯಲ್‌ ಮೈಲ್ಸ್‌, ಪ್ರೊ.ಸುಖದೇವ್‌ ತೋರಟ್‌, ಅರುಣ ರಾಯ್‌, ನಿಖಿಲ್‌ ಡೇ, ಪ್ರೊ.ಶಿವ ವಿಶ್ವನಾಥನ್‌, ಶಶಿ ತರೂರ್‌, ಕೆ.ರಾಜು, ಸಲ್ಮಾನ್‌ ಖುರ್ಷಿದ್‌, ಪ್ರಕಾಶ್‌ ಅಂಬೇಡ್ಕರ್‌, ಪ್ರೊ.ರಾಜೀವ್‌ ಗೌಡ, ವಿಲ್ಸನ್‌ ಬೆಜವಾಡ ಪಾಲ್ಗೊಳ್ಳಲಿದ್ದಾರೆ’ ಎಂದರು.

ಸಮ್ಮೇಳನದಲ್ಲಿ ಭಾಗವಹಿಸುವ ಆಸಕ್ತರು ವೆಬ್‌ಸೈಟ್‌ನಲ್ಲಿ (www.questforequity.org) ಜುಲೈ 17ರವರೆಗೆ ನೋಂದಣಿ ಮಾಡಿಕೊಳ್ಳಬಹುದು.

ಅಂಕಿ–ಅಂಶ
* ₹ 20ಕೋಟಿ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಆಗುವ ಅಂದಾಜು ವೆಚ್ಚ.
*4,500 ಈವರೆಗೆ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT