ಬುಧವಾರ, ಡಿಸೆಂಬರ್ 11, 2019
24 °C
ಬೆಟ್ಟದಹಳ್ಳಿ ಕಾವಲ್‌: ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ

ಫಿಲ್ಟರ್ ಮರಳು ದಂಧೆಯಿಂದ ಕಾಡಿಗೆ ಕುತ್ತು?

ಪಿ. ವಿ. ಪ್ರವೀಣ್‌ಕುಮಾರ್‌ Updated:

ಅಕ್ಷರ ಗಾತ್ರ : | |

ಫಿಲ್ಟರ್ ಮರಳು ದಂಧೆಯಿಂದ ಕಾಡಿಗೆ ಕುತ್ತು?

ಬೆಂಗಳೂರು: ನಗರದ ಹೊರವಲಯದ ಬೆಟ್ಟದಹಳ್ಳಿ ಕಾವಲ್‌ನ ನೈಸರ್ಗಿಕ ಕಾಡು ಪ್ರದೇಶದಲ್ಲಿ ಫಿಲ್ಟರ್‌ ಮರಳು ತೆಗೆಯುವ ಜಾಲ ಸಕ್ರಿಯವಾಗಿದೆ.

ಮರಳು ಮಿಶ್ರಿತ ಮಣ್ಣು  ಸಾಗಿಸಲು ಇಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ  ಜೆಸಿಬಿ ಬಳಸಿ ಅಕ್ರಮವಾಗಿ 70 ಮೀಟರ್ ಉದ್ದದ ರಸ್ತೆ ನಿರ್ಮಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಇಲ್ಲಿನ ಗುಡ್ಡ ಪ್ರದೇಶದ ಮಣ್ಣಿನಲ್ಲಿ ಮರಳಿನ ಅಂಶ ಹೇರಳವಾಗಿದೆ. ಈ ಮಣ್ಣನ್ನು ಸಾಗಿಸಿ, ಅದನ್ನು ನೀರಿನಿಂದ ತೊಳೆದು ಮರಳಿನ ಅಂಶವನ್ನು ಬೇರ್ಪಡಿಸುತ್ತಾರೆ. ಈ ಫಿಲ್ಟರ್‌ ಮರಳಿಗೆ ಉತ್ತಮ ಬೇಡಿಕೆ ಇದೆ. ಇಲ್ಲಿ  ಖಾಸಗಿ ಜಮೀನುಗಳಲ್ಲಿ  ಫಿಲ್ಟರ್‌ ಮರಳು ತೆಗೆಯುವುದು ಸಾಮಾನ್ಯ. ಈ ದಂಧೆಯಲ್ಲಿ ತೊಡಗಿರುವವರು ಈಗ ಅರಣ್ಯ ಪ್ರದೇಶಕ್ಕೂ ಕಣ್ಣು ಹಾಕಿದ್ದಾರೆ’ ಎಂದು ತುರಹಳ್ಳಿ ಆ್ಯಕ್ಷನ್‌ ಫೋರಂನ ನರಸಿಂಹಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಇಲ್ಲಿನ ಗುಡ್ಡ ಪ್ರದೇಶದಲ್ಲಿ ಶುಕ್ರವಾರ ರಸ್ತೆ ನಿರ್ಮಿಸಲಾಗಿದೆ. ಅನೇಕ ಕಡೆ ಗುಂಡಿ ತೆಗೆದು ಮಣ್ಣಿನ ಪರೀಕ್ಷೆ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಲು ಸ್ಥಳೀಯ ವಲಯ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದೇವೆ. ಅವರು ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ಅವರು ತಿಳಿಸಿದರು.

‘ನಾವು ಸ್ಥಳಕ್ಕೆ ಭೇಟಿ ನೀಡಿದ ಬಳಿಕ  ರಸ್ತೆ ನಿರ್ಮಿಸುವುದನ್ನು ನಿಲ್ಲಿಸಿದ್ದಾರೆ.  ಅವರು ಇನ್ನು ಮುಂದೆಯೂ ಇಲ್ಲಿಂದ ಅಕ್ರಮವಾಗಿ ಮಣ್ಣು ಸಾಗಿಸುವ ಸಾಧ್ಯತೆ ಇದೆ’ ಎಂದರು.

‘ಈ ಪ್ರದೇಶದಲ್ಲಿ ಜಿಂಕೆ, ಕಾಡುಹಂದಿ, ನರಿ, ಉಡ, ಮೊಲ, ಮುಂಗುಸಿ, ವಿವಿಧ ಜಾತಿಯ ಹಾವುಗಳು ಕಾಣಸಿಗುತ್ತವೆ. ಆನೆಗಳೂ ಅಡ್ಡಾಡುತ್ತವೆ. ಇಲ್ಲಿನ ಕುರುಚಲು ಕಾಡುಗಳಲ್ಲಿ ಚಿರತೆಯನ್ನೂ ನೋಡಿದವರಿದ್ದಾರೆ. ನಮ್ಮ ಮನೆಯ ಎರಡು ನಾಯಿಗಳನ್ನು ಚಿರತೆ ಕೊಂಡೊಯ್ದಿದೆ. ನವಿಲು, ಕಾಡುಕೋಳಿ ಸೇರಿದಂತೆ ಹತ್ತಾರು ಜಾತಿಯ ಪಕ್ಷಿಗಳು ಇಲ್ಲಿವೆ. ಇದಕ್ಕೆ ಹೊಂದಿಕೊಂಡಂತೆ ಹಾರೊಹಳ್ಳಿ ವನ್ಯಜೀವಿ ವಲಯವೂ ಬರುತ್ತದೆ’ ಎಂದರು.

ಮಾನವ–ವನ್ಯಜೀವಿ ಸಂಘರ್ಷ ಹೆಚ್ಚುವ ಆತಂಕ: ‘ಮಹಾನಗರಕ್ಕೆ ಹೊಂದಿಕೊಂಡಂತೆ ಇರುವ ಈ ನೈಸರ್ಗಿಕ  ಅರಣ್ಯ ಪ್ರದೇಶವನ್ನು ಹಾಗೆಯೇ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲ ಮೇಲಿದೆ. ಇಲ್ಲಿ ಫಿಲ್ಟರ್‌ ಮರಳು ತಯಾರಿಸಲು ಮಣ್ಣು ತೆಗೆಯಲು  ಅವಕಾಶ ಕಲ್ಪಿಸಿದರೆ ಕಾಡು ಸಂಪೂರ್ಣ ನಶಿಸಲಿದೆ. ವನ್ಯಜೀವಿಗಳೂ ಅಪಾಯಕ್ಕೆ ಸಿಲುಕಲಿವೆ. ಈ ಪ್ರದೇಶದಲ್ಲಿ ಮಾನವ –ವನ್ಯಜೀವಿ ಸಂಘರ್ಷ ಹೆಚ್ಚುವ ಸಾಧ್ಯತೆ ಇದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಈ ಕುರಿತು ಬೆಟ್ಟದಹಳ್ಳಿ ಕಾವಲ್‌ನ ವಲಯ ಅರಣ್ಯ ಅಧಿಕಾರಿ ಅವರನ್ನು ಸಂಪರ್ಕಿಸಿದಾಗ, ‘ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ಫಿಲ್ಟರ್‌ ಮರಳು ಕಟ್ಟಡಕ್ಕೂ ಅಪಾಯಕಾರಿ

‘ಹೊಳೆಯಲ್ಲಿ ಸಿಗುವ ಮರಳು ತುಂಬಾ ದುಬಾರಿ. ಕಟ್ಟಡ ನಿರ್ಮಾಣಕ್ಕೆ ಕೆಲವರು ಮರಳಿನ ಬದಲು ಫಿಲ್ಟರ್‌ ಮರಗಳನ್ನು ಬಳಸುತ್ತಾರೆ. ಇದರಲ್ಲಿ ಮಣ್ಣಿನ ಅಂಶ ಇರುವುದರಿಂದ  ಈ ಮರಳು ಕಟ್ಟಡ ನಿರ್ಮಾಣಕ್ಕೂ ಸೂಕ್ತವಲ್ಲ.  ಹಣದಾಸೆಗೆ ಈ ದಂಧೆ  ಬೆಟ್ಟದಹಳ್ಳಿ  ಕಾವಲ್‌ ಹಾಗೂ ಗೊಟ್ಟಿಗೆಹಳ್ಳಿ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ’ ಎನ್ನುತ್ತಾರೆ ನರಸಿಂಹಮೂರ್ತಿ.

‘ಒಂದು ಲೋಡ್‌ ಮರಳು ಮಿಶ್ರಿತ ಮಣ್ಣಿಗೆ ₹ 2000 ಸಿಗುತ್ತದೆ.  ದಿನಕ್ಕೆ ನಾಲ್ಕೈದು ಲೋಡ್‌ಗಳಷ್ಟು ಮಣ್ಣು ಸಾಗಿಸಿದರೂ ₹ 10,000 ಸಂಪಾದನೆಗೆ ಮೋಸವಿಲ್ಲ. ಹಾಗಾಗಿ ಅನೇಕರೂ ಇದನ್ನೊಂದು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ’ ಎಂದು ಅವರು ವಿವರಿಸಿದರು.

‘ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಈ ವಿಚಾರ ತಿಳಿದಿಲ್ಲ ಎಂದೇನಿಲ್ಲ. ನಗರೀಕರಣ ಚಟುವಟಿಕೆ ನಡುವೆಯೂ ಅಳಿದುಳಿದ ನೈಸರ್ಗಿಕ ಕಾಡುಗಳನ್ನು ಸಂರಕ್ಷಿಸಬೇಕಾದ ಅಗತ್ಯವಿದೆ. ಅರಣ್ಯ ಹಾಗೂ ಕಂದಾಯ ಇಲಾಖೆಗಳ ಜಮೀನುಗಳಲ್ಲಿ ಇಂತಹ ಚಟುವಟಿಕೆಗೆ ಆಸ್ಪದ ನೀಡಲೇಬಾರದು’ ಎಂದು ಅವರು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)