ಸೋಮವಾರ, ಡಿಸೆಂಬರ್ 16, 2019
23 °C

ನಾಲ್ವರು ಕಾರ್ಮಿಕರ ಜೀತಮುಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಲ್ವರು ಕಾರ್ಮಿಕರ ಜೀತಮುಕ್ತಿ

ಚನ್ನಪಟ್ಟಣ: ತಾಲ್ಲೂಕಿನ ತೂಬಿನಕೆರೆ ಗ್ರಾಮದಲ್ಲಿ ಶನಿವಾರ ತಾಲ್ಲೂಕು ಆಡಳಿತ ಹಾಗೂ ಪೊಲೀಸರು ದಾಳಿ ನಡೆಸಿ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದ ನಾಲ್ವರು ಕೂಲಿ ಕಾರ್ಮಿಕರನ್ನು ವಿಮುಕ್ತಿಗೊಳಿಸಿದೆ.

ಒಡಿಶಾ ಮೂಲದ ದಿಲೀಪ್ (30), ರಶ್ಮಿತ್ ದೀಪ್ (25), ಮಿಲೆಲ್ಲಾ ಬೊರಿಹಾ (35) ಸುರೇಶ್ ಬೊಹಿರಾ (40) ಅವರು ಜೀತದಿಂದ ವಿಮುಕ್ತರಾದವರು. ಗ್ರಾಮದ ಇಟ್ಟಿಗೆ ಕಾರ್ಖಾನೆಯ ಮಾಲೀಕ ಸಿದ್ದರಾಜು ಹಾಗೂ ಆತನ ಸಂಬಂಧಿ ರಂಜಿತ್ ಎಂಬುವರು ಒಂದು ವರ್ಷದಿಂದ ಈ ನಾಲ್ವರನ್ನು ಗೃಹ ಬಂಧನದಲ್ಲಿರಿಸಿ ಜೀತ ಮಾಡಿಸಿಕೊಳ್ಳುತ್ತಿರುವ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ.

ರಂಜಿತ್ ಮಧ್ಯವರ್ತಿಯಾಗಿ ಕೆಲಸ ಮಾಡಿ ಇವರನ್ನು ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಸಿದ್ದರು. ಆರಂಭದಲ್ಲಿ ವಸತಿ ಹಾಗೂ ವೇತನ ನೀಡಿ ಆನಂತರ ಗೃಹ ಬಂಧನದಲ್ಲಿಟ್ಟುಕೊಂಡು ಜೀತ ಮಾಡಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ದೌರ್ಜನ್ಯಕ್ಕೆ ಒಳಗಾಗಿದ್ದ ನಾಲ್ವರಲ್ಲಿ ಸುರೇಶ್ ಬೊರಿಹಾ ಅಲ್ಲಿಂದ ತಪ್ಪಿಸಿಕೊಂಡು ಕೆಲವರ ಸಹಾಯ ಪಡೆದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ತಾಲ್ಲೂಕು ಆಡಳಿತ ಹಾಗೂ ಅಕ್ಕೂರು ಪೊಲೀಸರು ಕಾರ್ಖಾನೆ ಮೇಲೆ ದಾಳಿ ಮಾಡಿ ಉಳಿದ ಮೂರು ಮಂದಿ ಕಾರ್ಮಿಕರನ್ನು ರಕ್ಷಿಸಿದರು.

ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ದೆಹಲಿ ಮೂಲದ ಇಂಟರ್ ನ್ಯಾಷನಲ್ ಜಸ್ಟಿಸ್ ಮಿಷನ್ ಸಂಸ್ಥೆ ಜೀತದಾಳುಗಳ ಬಿಡುಗಡೆ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದೆ. ತಹಶೀಲ್ದಾರ್ ಕೆ. ರಮೇಶ್ ಸಮ್ಮುಖದಲ್ಲಿ ನಾಲ್ಕೈದು ಗಂಟೆಗಳ ಕಾಲ ತನಿಖೆ ನಡೆಸಿ ನಂತರ ಜೀತ ವಿಮುಕ್ತರಿಗೆ ಪುನರ್ವಸತಿ ಕಲ್ಪಿಸಲಾಯಿತು.

ಇಟ್ಟಿಗೆ ಕಾರ್ಖಾನೆ ಮಾಲೀಕ ಸಿದ್ದರಾಜು, ಮಧ್ಯವರ್ತಿ ರಂಜಿತ್ ವಿರುದ್ಧ ಅಕ್ಕೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಿಬ್ಬರೂ ನಾಪತ್ತೆಯಾಗಿದ್ದಾರೆ ಎಂದು ಸಬ್‌ ಇನ್‌ಸ್ಪೆಕ್ಟರ್‌ ಸದಾನಂದ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)