ಶುಕ್ರವಾರ, ಡಿಸೆಂಬರ್ 6, 2019
18 °C

ಅಂಗೈಯಲ್ಲೇ ಬಡಾವಣೆಯ ಕಾವಲು

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

ಅಂಗೈಯಲ್ಲೇ ಬಡಾವಣೆಯ ಕಾವಲು

ಬೀದರ್‌: ನ್ಯೂಟೌನ್‌ ಠಾಣೆಯ ಕಾರ್ಯವ್ಯಾಪ್ತಿ ವಿಶಾಲವಾಗಿದೆ. ಠಾಣೆಯಲ್ಲಿ ಅಗತ್ಯವಿರುವಷ್ಟು ಸಿಬ್ಬಂದಿಯೂ ಇಲ್ಲ. ಸರಗಳ್ಳತನ ಹಾಗೂ ದರೋಡೆ ನಡೆದರೂ ಪೊಲೀಸರು ತಕ್ಷಣ ಸ್ಥಳಕ್ಕೆ ಬರುವ ಸ್ಥಿತಿಯಲ್ಲಿ ಇಲ್ಲ. ಪೊಲೀಸರನ್ನು ದೂರುವುದಕ್ಕಿಂತ ನಮ್ಮ ಸುರಕ್ಷತೆಗೆ ನಾವೇ ಒಂದು ವ್ಯವಸ್ಥೆ ಮಾಡಿಕೊಂಡರೆ ನೆಮ್ಮದಿಯಿಂದ ಇರಬಹುದು; ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಪೊಲೀಸರಿಗೂ ನೆರವಾಗಬಹುದು ಎನ್ನುವ ನಿರ್ಧಾರಕ್ಕೆ ಬಂದು ನಗರದ ಶಿವನಗರ(ದಕ್ಷಿಣ)ದ ಐದನೇ ಕ್ರಾಸ್‌ ನಿವಾಸಿಗಳು ಆಯ್ದ 12 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ.

ಕಾಲೊನಿಯ ನಿವಾಸಿಗಳು ಕನ್ನಡಾಂಬೆ ಗೆಳೆಯರ ಬಳಗ ರಚಿಸಿಕೊಂಡು ಬಡಾವಣೆಯ ಸುರಕ್ಷತೆಗಾಗಿಯೇ ಹೊಸ ಹೆಜ್ಜೆಯನ್ನು ಇಟ್ಟಿದ್ದಾರೆ. ಬಡಾವಣೆಯಲ್ಲಿ 44 ಮನೆಗಳಿದ್ದು, ಸುಮಾರು 200 ಜನರು ವಾಸವಾಗಿದ್ದಾರೆ. ಈ ಬಡಾವಣೆಯಲ್ಲಿ ಸರಗಳ್ಳತನ, ಮನೆಗಳ್ಳತನ, ಮನೆಯಂಗಳಲ್ಲಿ ನಿಲ್ಲಿಸಿದ ಬೈಕ್, ಕಾರುಗಳ ವ್ಹೀಲ್ ಕ್ಯಾಪ್‌ ಕಳವು ಹೀಗೆ ಒಂದಿಲ್ಲೊಂದು ಪ್ರಕರಣಗಳು ನಡೆಯುತ್ತಲೇ ಇದ್ದವು. ಪೊಲೀಸರಿಗೆ ದೂರು ಕೊಟ್ಟರೂ ಕಳ್ಳರನ್ನು ಪತ್ತೆ ಮಾಡುವುದು ಸವಾಲಾಗಿತ್ತು. ಇದರಿಂದ ಬೇಸತ್ತ ಶಿವನಗರ(ದಕ್ಷಿಣ)ದ ನಿವಾಸಿಗಳು ಒಂದೆಡೆ ಸಭೆ ಸೇರಿ ಚರ್ಚಿಸಿದರು.

ಸಭೆಯಲ್ಲಿ ಕೆಲವರು ಸಿಸಿಟಿಟಿವಿ ಕ್ಯಾಮೆರಾ ಅಳವಡಿಸುವ ವಿಷಯ ಪ್ರಸ್ತಾಪಿಸಿದಾಗ ಬಡಾವಣೆಯ ನಿವಾಸಿಗಳು ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸಿದರು. ಮೊದಲ ಹಂತದಲ್ಲಿ ಪ್ರತಿ ಮನೆಯವರು ₹ 2 ಸಾವಿರ ಕೊಟ್ಟರು. ಅಗತ್ಯವಿರುವ ಹಣವನ್ನೂ ಸಂಗ್ರಹಿಸಿಕೊಟ್ಟರು.

10 ಮೆಗಾ ಪಿಕ್ಸೆಲ್‌ಗಳ 12 ಸಿಸಿ ಟಿವಿ ಕ್ಯಾಮೆರಾಗಳನ್ನು ರಸ್ತೆಯ ಎರಡೂ ಬದಿಗೆ ಅಳವಡಿಸಿದರು. ಬಡಾವಣೆಯಲ್ಲಿರುವ ಬಳಗದ ಸದಸ್ಯರು ಸ್ವಪ್ರೇರಣೆಯಿಂದ ಕೊಠಡಿಯೊಂದನ್ನು ಕೊಡಲು ಮುಂದೆ ಬಂದರು. ಈ ಕೊಠಡಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಿದರು. ಬಡಾವಣೆಯ ರಸ್ತೆಗಳ ಮೇಲೆ ನಿಗಾ ಇಡಲು ಮೊಬೈಲ್‌ ಆ್ಯಪ್‌ ಬಳಸಿದರು. ಬಡಾವಣೆಯ ನಿವಾಸಿಗಳು ಊರಿಗೆ ಹೋದರೂ ಮೊಬೈಲ್‌ ಮೂಲಕ ದೃಶ್ಯವನ್ನು ವೀಕ್ಷಿಸಲು ಸಾಧ್ಯವಾಗುವಂತೆ ಮಾಡಿದರು.

ಜಿಲ್ಲಾಧಿಕಾರಿ ಡಾ.ಎಚ್‌.ಆರ್.ಮಹಾದೇವ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಆರ್.ಸೆಲ್ವಮಣಿ ಅವರು ಜಂಟಿಯಾಗಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿ ಎರಡೂವರೆ ತಿಂಗಳಾಗಿವೆ. ಶಿವನಗರ(ದಕ್ಷಿಣ)ದಲ್ಲಿ ಒಂದೂ ಅಪರಾಧ ಕೃತ್ಯ ನಡೆದ ಬಗೆಗೆ ವರದಿಯಾಗಿಲ್ಲ. ರಾತ್ರಿ ಸಮಯದಲ್ಲಿ ಭಯವಿಲ್ಲದೆ ಸಂಚರಿಸಬಹುದು, ಬೆಳಗಿನ ಜಾವ ಮಹಿಳೆಯರು ನಿರ್ಭೀತಿಯಿಂದ ವಾಯುವಿಹಾರಕ್ಕೂ ಹೋಗಬಹುದು’ ಎಂದು ಕನ್ನಡಾಂಬೆ ಬಳಗದ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಹೇಳುತ್ತಾರೆ.

ಸುರಕ್ಷತೆಗೆ ಆದ್ಯತೆ

ರಾಜ್ಯ ಸರ್ಕಾರ ಪೊಲೀಸ್‌ ಠಾಣೆಗಳಲ್ಲಿ ಖಾಲಿ ಇರುವ ಕಾನ್‌ಸ್ಟೆಬಲ್‌ಗಳ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿಲ್ಲ. ಈಗಿರುವ ಕಾನ್‌ಸ್ಟೆಬಲ್‌ಗಳ ಮೇಲೆ ಕೆಲಸದ ಒತ್ತಡ ಹೆಚ್ಚಿದೆ. ಕಾನ್‌ಸ್ಟೆಬಲ್‌ಗಳು ಗಸ್ತು ತಿರುಗುವ ಪ್ರದೇಶದ ವ್ಯಾಪ್ತಿ ಹೆಚ್ಚಾಗಿರುವ ಕಾರಣ ಅವರು ಒಂದು ಬಾರಿ ಮಾತ್ರ ಗಸ್ತು ನಡೆಸಿ ಹೋಗುತ್ತಾರೆ.

ಪ್ರತಿಯೊಂದಕ್ಕೂ ಪೊಲೀಸರನ್ನೇ ಅವಲಂಬಿಸಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಕಷ್ಟವಾಗಲಿದೆ. ಹೀಗಾಗಿ ಬಡಾವಣೆಯಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದೇವು ಎನ್ನುತ್ತಾರೆ  ನೀರಜಾ ಖಂಡ್ರೆ.

ಪರಿಸರ ಜಾಗೃತಿ

ತಮ್ಮ ಸುರಕ್ಷತೆಗಾಗಿಯೇ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿದ ನಂತರ ಬಡಾವಣೆಯ ನಿವಾಸಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿಯೊಂದು ಮನೆಯ ಮುಂದೆ ಕನಿಷ್ಠ ಎರಡು ಸಸಿಗಳನ್ನು ನೆಟ್ಟು ಬೆಳೆಸಲು ನಿರ್ಧರಿಸಿದ್ದಾರೆ. ಬಡಾವಣೆಯಲ್ಲಿ ಹಸಿರು ಬೆಳೆಸಿ ನೈರ್ಮಲ್ಯ ಕಾಪಾಡುವ ಮೂಲಕ ಮಾದರಿ ಬಡಾವಣೆ ಮಾಡುವುದು ನಮ್ಮ ಮುಂದಿನ ಗುರಿ ಎಂದು ಹೆಮ್ಮೆಯಿಂದ ಹೇಳುತ್ತಾರೆ ಬಳಗದ ಅಧ್ಯಕ್ಷ ಮಾಣಿಕಪ್ಪ ಗೊರನಾಳೆ.

ಸಿ.ಸಿ.ಟಿವಿ ಖರ್ಚಿನ ವಿವರ

86 ಸಾವಿರ ಸಿಸಿಟಿವಿ ಅಳವಡಿಕೆಗೆ ವೆಚ್ಚ ಮಾಡಿದ ಕನ್ನಡಾಂಬೆ ಬಳಗ

ಸಾರ್ವಜನಿಕರ ನೆರವು ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಕೆಗೆ ಪ್ರತಿ ಮನೆಯಿಂದ ₹ 2 ಸಾವಿರ ನೆರವು ನೀಡಲಾಗಿದೆ.

12 ಬಡಾವಣೆಯಲ್ಲಿ ಅಳ ವಡಿಸಲಾದ ಸಿ.ಸಿ.ಟಿವಿ

* * 

ಶಿವನಗರ(ದಕ್ಷಿಣ) ನಿವಾಸಿಗಳು ಸ್ವಯಂ ಪ್ರೇರಣೆಯಿಂದ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಸುರಕ್ಷತೆಗೆ ಮಹತ್ವ ನೀಡಿದ್ದು,  ಪೊಲೀಸರಿಗೂ ನೆರವಾಗಿದ್ದಾರೆ.

ಪ್ರಕಾಶ ನಿಕಮ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರತಿಕ್ರಿಯಿಸಿ (+)