ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ಕೊರತೆ: ತಪ್ಪದ ಜನರ ಅಲೆದಾಟ

Last Updated 17 ಜುಲೈ 2017, 5:11 IST
ಅಕ್ಷರ ಗಾತ್ರ

ರಾಯಚೂರು: ನಗರಕ್ಕೆ ವಿವಿಧ ವ್ಯವಹಾರಕ್ಕಾಗಿ ಬರುವ ಜನರು ‘ಒಂದು... ಎರಡು...’ ಕ್ರಿಯೆಗಳನ್ನು ಮುಗಿಸಿಕೊಳ್ಳಲು ಸಾರ್ವಜನಿಕ ಮೂತ್ರಾಲಯ ಹಾಗೂ ಶೌಚಾಲಯಕ್ಕಾಗಿ ಅಲೆದಾಡಿ ಸುಸ್ತಾಗುವ ಪರಿಸ್ಥಿತಿ ಇದೆ. ನಗರದಲ್ಲಿ ಎಲ್ಲಿಯೂ ಮೂತ್ರಾಲಯಗಳಿಲ್ಲ. ಹೀಗಾಗಿ ಅನಿವಾರ್ಯವಾಗಿ ಜನಸಂಚಾರವಿಲ್ಲದ ಸಂದಿಗಳು ಅಥವಾ ವಾಹನಗಳ ಮರೆಯಲ್ಲಿ ಮಲ, ಮೂತ್ರ ಕ್ರಿಯೆ ಪೂರೈಸುವುದು ಸಾಮಾನ್ಯವಾಗಿ ಬಿಟ್ಟಿದೆ. ಮಾರ್ಕೆಟ್‌ ಸಂದಿಗಳು ಮೂತ್ರಾಲಯವಿಲ್ಲದ ಸಮಸ್ಯೆಗೆ ಪರಿಹಾರ ಆಗಿವೆ.

ಶುಚಿತ್ವದ ಬಗ್ಗೆ ಕಾಳಜಿ ಇದ್ದವರು ಶೌಚ ಕ್ರಿಯೆಗಾಗಿ ಆಟೊ ಏರಿಕೊಂಡು ಹೋಗಬೇಕಾಗುತ್ತದೆ. ರೈಲ್ವೆ ನಿಲ್ದಾಣ ಅಥವಾ ಬಸ್‌ ನಿಲ್ದಾಣಗಳಲ್ಲಿ ಇರುವ ಶೌಚಾಲಯಗಳು ನೆಮ್ಮದಿ ತಂದುಕೊಳ್ಳಲು ನೆರವಾಗಿವೆ. ಆದರೆ ಮಾರ್ಕೆಟ್‌ನಿಂದ ನಿಲ್ದಾಣಗಳು ದೂರದಲ್ಲಿವೆ.

ಕೆಲವು ಕಡೆಗಳಲ್ಲಿ ‘ಪೇ ಅ್ಯಂಡ್‌ ಯುಸ್‌’ ಶೌಚಾಲಗಳಿವೆ. ಇವುಗಳನ್ನು ನಗರದ ವಾರ್ಡ್‌ಗಳಲ್ಲಿ ನಿರ್ಮಿಸಲಾಗಿದೆ. ಆದರೆ ಜನನಿಬಿಡ ಪ್ರದೇಶಗಳಲ್ಲಿ ಯಾವ ಶೌಚಾಲಯಗಳೂ ಇಲ್ಲ. ಪ್ರಮುಖವಾಗಿ ವ್ಯಾಪಾರು, ವಹಿವಾಟು ನಡೆಯುವ ಯಾವುದೇ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯ ಅಥವಾ ಮೂತ್ರಾಲಯಗಳನ್ನು ನಿರ್ಮಿಸಿಲ್ಲ.

ಸೂಪರ್‌ ಮಾರ್ಕೆಟ್‌, ತೀನ್‌ಕಂದಿಲ್‌, ಮಹಾವೀರ ಚೌಕ್‌, ಸ್ಟೇಷನ್‌ ರಸ್ತೆ, ಬಸವೇಶ್ವರವೃತ್ತ, ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿ ಕಚೇರಿ ಆವರಣಗಳು, ಗಂಜ್‌ ಪ್ರದೇಶ, ಪಟೇಲ್‌ ವೃತ್ತದಲ್ಲಿ ಸಾಮಾನ್ಯವಾಗಿ ಜನಜಂಗುಳಿ ಸದಾ ಇರುತ್ತದೆ. ಇಂಥ ಕಡೆಗಳಲ್ಲಿ ಶಿಥಿಲ ಕಟ್ಟಡಗಳು ಹಾಗೂ ಸಂದಿಗಳು ಮೂತ್ರಾಲಯಗಳಾಗಿ ಪರಿವರ್ತನೆಯಾಗಿವೆ. ಇದರಿಂದ ದುರ್ನಾತ ಹರಡಿ, ಶುಚಿತ್ವ ಪರಿಸರವನ್ನು ಹಾಳು ಮಾಡಿದೆ.

ಮಲೀನ ಭರ್ತಿಯಾದ ಚರಂಡಿಗಳು, ಸಕಾಲಕ್ಕೆ ವಿಲೇವಾರಿಯಾಗದ ತ್ಯಾಜ್ಯ ರಾಶಿ, ಹಂದಿ ಹಾಗೂ ನಾಯಿಗಳ ನೆಲೆಬೀಡುಗಳು ಶೌಚ ಕ್ರಿಯೆಯ ತಾಣಗಳಾಗಿ ಮಾರ್ಪಟ್ಟಿವೆ. ರಸ್ತೆಗಳಿಂದ ಸದಾ ಹೊಮ್ಮುವ ದೂಳು ಹಾಗೂ ಶೌಚಾಲಯವಿಲ್ಲದ ಸಮಸ್ಯೆಗಳಿಂದಾಗಿ ನಗರದಲ್ಲಿ ನೈರ್ಮಲ್ಯ ವಾತಾವರಣ ಸಂಪೂರ್ಣ ಹದಗೆಟ್ಟಿದೆ.

‘ಮೂತ್ರಾಲಯ ನಿರ್ಮಾಣಕ್ಕೆ ಕ್ರಮ’
ಮೂತ್ರಾಲಯಗಳದ್ದು ಬಹಳ ದೊಡ್ಡ ಸಮಸ್ಯೆ ಇದೆ. ಮಾರ್ಕೆಟ್‌ನಲ್ಲಿ ಕೆಲವು ಕಡೆಗಳಲ್ಲಿ ನಿರ್ಮಿಸಿದ್ದ ಮೂತ್ರಾಲಯಗಳಿಂದ ದೊಡ್ಡ ಸಮಸ್ಯೆಯೆ ಆಗಿತ್ತು. ಸಮಸ್ಯೆ ಸೃಷ್ಟಿಸಿದ್ದರಿಂದ ಒಡೆದು ಹಾಕಲಾಗಿದೆ. ಹೊರಗಿನಿಂದ ಬರುವ ಜನರು ಮೂತ್ರ ಹಾಗೂ ಶೌಚ ಮಾಡಲು ತಾಪತ್ರಯ ಅನುಭವಿಸುತ್ತಿರುವ ಸಮಸ್ಯೆ ಅರಿವಿಗೆ ಬಂದಿದೆ.

ಇದಕ್ಕಾಗಿ ಪರಿಹಾರ ಯೋಚಿಸುತ್ತಿದ್ದೇವೆ. ನಗರಸಭೆಯಿಂದ ಆದಷ್ಟು ಬೇಗನೆ ಮೂತ್ರಾಲಯಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ನಗರಸಭೆ ಉಪಾಧ್ಯಕ್ಷ ಜಯಣ್ಣ ಅವರು ಹೇಳುವ ಮಾತಿದು.

‘ಸುಲಭ’ ಶೌಚಾಲಯ...
ಬಡಾವಣೆಗಳಲ್ಲಿ ಸುಲಭ ಶೌಚಾಲಯಗಳಿವೆ. ಆದರೆ ಮಾರ್ಕೆಟ್‌ ಹಾಗೂ ಮುಖ್ಯರಸ್ತೆಗಳಲ್ಲಿ ಜನರು ಈಗಲೂ ಶೌಚಾಲಯ ಹುಡುಕಿಕೊಂಡು ಅಲೆದಾಡುವ ಸಮಸ್ಯೆ ಪರಿಹಾರವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT