ಭಾನುವಾರ, ಡಿಸೆಂಬರ್ 8, 2019
21 °C

ಶಾಂತಿ ಸಂದೇಶ ಸಾರುವುದಕ್ಕಾಗಿ ಗೋವು ದತ್ತು ಪಡೆದ ಸಿನಿಮಾ ನಿರ್ಮಾಪಕ ಸರೋಶ್ ಖಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಂತಿ ಸಂದೇಶ ಸಾರುವುದಕ್ಕಾಗಿ ಗೋವು ದತ್ತು ಪಡೆದ ಸಿನಿಮಾ ನಿರ್ಮಾಪಕ ಸರೋಶ್ ಖಾನ್

ಮುಂಬೈ: ಗೋರಕ್ಷಣೆ ಹೆಸರಿನಲ್ಲಿ ದೇಶದಲ್ಲಿ ಹಿಂಸಾಚಾರ ನಡೆಯುತ್ತಿರುವ ಹೊತ್ತಲ್ಲೇ ಶಾಂತಿ ಸಂದೇಶ ಸಾರುವುದಕ್ಕಾಗಿ ಸಿನಿಮಾ ನಿರ್ಮಾಪಕರೊಬ್ಬರು ಗೋವುಗಳನ್ನು ದತ್ತು ಪಡೆದಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಮುಂಬೈನಲ್ಲಿ ವಾಸವಿರುವ ಕೋಟಾ ನಿವಾಸಿ ಸರೋಶ್ ಖಾನ್ ಭಾನುವಾರ ಹಸು ಮತ್ತು ಕರುವೊಂದನ್ನು ದತ್ತು ಪಡೆದು, ಗೃಹ ಪ್ರವೇಶ ಕಾರ್ಯ ನೆರವೇರಿಸಿದ್ದಾರೆ.

ವಿಗ್ಯಾನ್ ನಗರದಲ್ಲಿರುವ ತಮ್ಮ ಮನೆಗೆ ಹಸುಗಳನ್ನು ಕರೆತಂದ ಸರೋಶ್ ಖಾನ್, ಹಸುಗಳಿಗೆ ಕುಂಕುಮ ಹಚ್ಚಿ ಸ್ವಾಗತಿಸಿದ್ದಾರೆ. ಗೋರಕ್ಷಣೆ ಹೆಸರಿನಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಹಿಂಸಾಚಾರಗಳನ್ನು ಕೊನೆಗೊಳಿಸಿ ಶಾಂತಿ ಸಮಾಧಾನದ ಸಂದೇಶ ಸಾರುವುದು ನನ್ನ ಉದ್ದೇಶ. ಇಸ್ಲಾಂ ಧರ್ಮ ಹಿಂದೂ ಧರ್ಮ ಅಥವಾ ಇನ್ನಿತರ ಧರ್ಮವನ್ನು ದ್ವೇಷಿಸುವುದಿಲ್ಲ. ಪ್ರತಿಯೊಬ್ಬರೂ ಪರಸ್ಪರ ಗೌರವಿಸುವುದನ್ನು ಕಲಿಯಬೇಕು ಮತ್ತು ಗೋವುಗಳ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗೊಳಿಸಬೇಕು ಎಂದು ಖಾನ್ ಹೇಳಿದ್ದಾರೆ.

ಪೇ ಬ್ಯಾಕ್, ಕೋಟಾ ಜಂಕ್ಷನ್, ಭನ್ವಾರಿ ಸೇರಿದಂತೆ ಹಲವಾರು ಹಿಂದಿ ಮತ್ತು ರಾಜಸ್ಥಾನಿ ಸಿನಿಮಾಗಳ ನಿರ್ಮಾಪಕರಾಗಿದ್ದಾರೆ ಖಾನ್.

ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ನಡೆಯುತ್ತಿದೆ. ಆದ್ದರಿಂದ ನಾನು ಗೋವುಗಳನ್ನು ದತ್ತು ಪಡೆದು, ಮುಸ್ಲಿಮರು ಕೂಡಾ ಗೋವುಗಳನ್ನು ಪ್ರೀತಿಸುತ್ತಿದ್ದಾರೆ ಎಂಬ ಸಂದೇಶವನ್ನು ನೀಡುತ್ತಿದ್ದೇನೆ. ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹಿಂಸಾಚಾರವನ್ನು ತಡೆಯಲು ನಾನು ಈ ಕಾರ್ಯ ಕೈಗೊಂಡಿದ್ದೇನೆ, ನಾನು ಇದರಲ್ಲಿ ತೃಪ್ತನಾಗಿದ್ದೇನೆ. ಗೋರಕ್ಷಕರು ಹಸುಗಳನ್ನು 'ತಾಯಿ' ಎಂದು ಗೌರವಿಸುವುದಾದರೆ ಬೀದಿಯಲ್ಲಿ  ಅಲೆಯುವ ಬೀಡಾಡಿ ದನಗಳನ್ನು ದತ್ತು ಪಡೆಯಲಿ ಎಂದು ಖಾನ್ ಹೇಳಿದ್ದಾರೆ.

ಜಗದ್ಗುರು ರಮಾನಂದಾಚಾರ್ಯ ರಾಜಸ್ಥಾನ್ ಸಂಸ್ಕೃತ ವಿಶ್ವವಿದ್ಯಾನಿಲಯದ ಅಸಿಸ್ಟೆಂಟ್ ಪ್ರೊಫೆಸರ್ ಶಾಸ್ತ್ರಿ ಕೋಸಲೇಂದ್ರದಾಸ್ ಅವರು ಖಾನ್ ಅವರ ಮನೆಯಲ್ಲಿ ಗೃಹ ಪ್ರವೇಶ ಪೂಜೆ ನೆರವೇರಿಸಿದ್ದಾರೆ. ಹಿಂದೂಗಳ ಮನೆಯಲ್ಲಿ ಹಸುವನ್ನು ಕರೆ ತಂದು ಪೂಜೆ ನೆರವೇರಿಸಿದ್ದುಂಟು. ಆದರೆ ಮುಸ್ಲಿಮರ ಮನೆಯಲ್ಲಿ ಇದೇ ಮೊದಲು ಎಂದು ಕೋಸಲೇಂದ್ರ ದಾಸ್ ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)