ಸೋಮವಾರ, ಡಿಸೆಂಬರ್ 16, 2019
18 °C

ಪೌರಕಾರ್ಮಿಕರಿಗೆ ಇಲ್ಲ ಸುರಕ್ಷಾ ಪರಿಕರ

ಮಲ್ಲೇಶ್ ನಾಯಕನಹಟ್ಟಿ . Updated:

ಅಕ್ಷರ ಗಾತ್ರ : | |

ಪೌರಕಾರ್ಮಿಕರಿಗೆ ಇಲ್ಲ ಸುರಕ್ಷಾ ಪರಿಕರ

ಯಾದಗಿರಿ: ತಮ್ಮ ಆರೋಗ್ಯವನ್ನೇ ಪಣಕ್ಕೊಡ್ಡಿ ನಗರದ ಜನರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಪ್ರಮುಖವಾದುದು. ಅಂತಹ ಪೌರಕಾರ್ಮಿಕರಿಗೆ ನಗರಸಭೆ ಸುರಕ್ಷತಾ ಪರಿಕರಗಳನ್ನು ಒದಗಿಸಿಲ್ಲ. ಇದರಿಂದ ಹಲವು ಪೌರಕಾರ್ಮಿಕರು ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಲೇ ಇದ್ದಾರೆ.

ನಗರಸಭೆ ಅಂಕಿಅಂಶಗಳ ಪ್ರಕಾರ, ನಗರದ ಸ್ವಚ್ಛತೆಗೆಂದೇ 71 ಪೌರಕಾರ್ಮಿಕರು ಇದ್ದಾರೆ. ಅವರಲ್ಲಿ 20ಕ್ಕೂ ಹೆಚ್ಚು ಕಾಯಂ ಪೌರಕಾರ್ಮಿಕರು ಅನ್ಯ ಜಿಲ್ಲೆಗಳಿಗೆ ಕರ್ತವ್ಯಕ್ಕೆ ನಿಯೋಜನೆ ಗೊಂಡಿದ್ದಾರೆ. ಉಳಿದವರು ನಿತ್ಯ ನಗರ ಸ್ವಚ್ಛತೆಗೊಳಿಸುತ್ತಾರೆ.

‘ಸ್ವಚ್ಛತೆಗೆ ಬೆರಳೆಣಿಕೆಯಷ್ಟು ಇರುವ ಪೌರಕಾರ್ಮಿಕರೇ ಶ್ರಮಿಸಬೇಕು. ಅಪಾಯಕಾರಿ ಚರಂಡಿಗಳಲ್ಲೂ ಬರಿಗಾಲಿನಲ್ಲೇ ಇಳಿಯಬೇಕು. ಒಮ್ಮೊಮ್ಮೆ ದಿಢೀರ್‌ ಜ್ವರ ಕಾಣಿಸಿಕೊಳ್ಳುತ್ತದೆ. ಮೂರು ನಾಲ್ಕು ತಿಂಗಳಿಗಾದ್ರೂ ಪಗಾರ ಬರುತ್ತಲ್ರಿ, ಅದರಲ್ಲೇ ಬದುಕು ಸಾಗಿಸ್ಬೇಕಲ್ರಿ’ ಎನ್ನುತ್ತಾರೆ ಪೌರಕಾರ್ಮಿಕರು ನಗರಸಭೆಯು ಪೌರಕಾರ್ಮಿಕರ ಆರೋಗ್ಯವನ್ನು ನಿತ್ಯ ತಪಾಸಣೆ ಮಾಡಿಸಬೇಕು.

ಬೆಳಗಿನ ಸಮಯದಲ್ಲಿ ಗುಣಮಟ್ಟದ ಉಪಾಹಾರ ನೀಡಬೇಕು. ಅವರ ಉಸಿರಾಟ, ಚರ್ಮ ರೋಗ, ವೃತ್ತಿ ಸಂಬಂಧಿ ರೋಗಗಳನ್ನು ಪತ್ತೆ ಮಾಡಿ ಚಿಕಿತ್ಸೆ ಕೊಡಿಸಬೇಕು. ಪೌರಕಾರ್ಮಿಕರ ಆರೋಗ್ಯ ವಿಮೆ ಮಾಡಿಸಬೇಕೆಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಹೇಳಿದೆ. ಆದರೆ ನಗರಸಭೆಯು ಆರೋಗ್ಯ ವಿಮೆ ಹೊರತುಪಡಿಸಿ ಬೇರೆಯದ್ದು ಪಾಲಿಸಿಲ್ಲ.

‘ಪೌರಕಾರ್ಮಿಕರಿಗಾಗಿ ಸರ್ಕಾರ ‘ಗೃಹಭಾಗ್ಯ ಯೋಜನೆ’ ಜಾರಿಗೊಳಿಸಿದರೂ ಸದ್ಬಳಕೆ ಆಗುತ್ತಿಲ್ಲ. ಕಾರಣ, ಇಲ್ಲಿನ ಶೇ 95 ಪೌರಕಾರ್ಮಿಕರಿಗೆ ನಿವೇಶನವೇ ಇಲ್ಲ’ ಎಂದು ಕಾರ್ಮಿಕ ಮುಖಂಡರು ಹೇಳುತ್ತಾರೆ.

‘ಯಾದಗಿರಿ ಪೌರಕಾರ್ಮಿಕರ ಸ್ಥಿತಿ ನಿಜಕ್ಕೂ ಹೀನಾಯ ವಾಗಿದೆ. ಅವರ ಜೀವನ ಸುಧಾರಣೆ ಕಾಣದಿರುವುದು ಬೇಸರದ ಸಂಗತಿ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲು ಆಯೋಗ ಸಿದ್ಧತೆ ನಡೆಸಿದೆ’ ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸ್ವಚ್ಛತಾ ಕಾರ್ಯ ಸ್ಥಿತಿಗತಿ

ಬೇಕಿರುವ ಪರಿಕರಗಳು

ನಗರಸಭೆಯು ಪೌರಕಾರ್ಮಿಕರಿಗೆ ಹ್ಯಾಂಡ್‌ ಗ್ಲೌವ್ಸ್, ರಬ್ಬರ್‌ ಗಮ್‌ ಬೂಟ್ಸ್, ಚಪ್ಪಲಿ, ಮಾಸ್ಕ್, ಸಮವಸ್ತ್ರ, ಟೋಪಿ ಇತ್ಯಾದಿ ಪರಿಕರ ಒದಗಿಸಬೇಕು. ಆದರೆ, ಪೌರಕಾರ್ಮಿಕರು ಬಳಸುವುದು ಕಾಣಸಿಗುವುದಿಲ್ಲ. ಬರಿಗಾಲಲ್ಲಿ ಕೊಳಚೆ ನೀರಿನಲ್ಲಿ ಇಳಿಯುವ ಅವರಿಗೆ ಆಮಶಂಕೆ ರೋಗ ಕಾಡುತ್ತದೆ.

ಜಾಗೃತಿ ಕಾರ್ಯಾಗಾರ ಆಗಿಲ್ಲ

‘ಬಹುತೇಕ ಪೌರಕಾರ್ಮಿಕರು ಆರೋಗ್ಯದತ್ತ ಹೆಚ್ಚಿನ ಕಾಳಜಿ ತೋರುವುದಿಲ್ಲ. ಪರಿಕರ ಬಳ ಸದೇ ಸ್ವಚ್ಛತೆ ಕಾರ್ಯಕ್ಕೆ ಇಳಿದರೆ ಆಗುವ ಅಪಾಯ ಅವರಿಗೆ ಗೊತ್ತಿಲ್ಲ. ಅವರಲ್ಲಿ  ಜಾಗೃತಿ ಮೂಡಿಸಲು ನಗರಸಭೆ ಕಾರ್ಯಾಗಾರ ನಡೆಸಿಲ್ಲ’ ಎಂದು ಕಾರ್ಮಿಕ ಮುಖಂಡ ಸೈದಪ್ಪ ಆರೋಪಿಸಿದರು.

ನಿವೇಶನ ಸೌಲಭ್ಯಕ್ಕೆ ಕ್ರಮ

‘ಪೌರಕಾರ್ಮಿಕರಿಗೆ ಪರಿಕರಗಳ ಜತೆಗೆ ಅವರ ಜೀವನ ಸುಧಾರಣೆ ಕುರಿತು ನಗರಸಭೆ ಚಿಂತನೆ ನಡೆಸಿದೆ. ಸದಸ್ಯರ ಸಭೆಯಲ್ಲಿ ಚರ್ಚಿಸಲಾಗಿದೆ. ಖಾಸಗಿ ಕಂಪೆನಿಗಳ ಜೊತೆಗೆ ಮಾತುಕತೆ ನಡೆಸಿ ನಿವೇಶನ ವ್ಯವಸ್ಥೆ ಮಾಡಲಾಗುವುದು’ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ತಿಳಿಸಿದರು.

ಪ್ರತಿಕ್ರಿಯಿಸಿ (+)