ಭಾನುವಾರ, ಡಿಸೆಂಬರ್ 15, 2019
21 °C
ಆನೇಕಲ್‌ನಲ್ಲಿ ಅಣ್ಣಮ್ಮ ದೇವಿ, ಗ್ರಾಮದೇವಿಯರಿಗೆ ಆರತಿ ದೀಪೋತ್ಸವ

ದೇವಿಯ ದರ್ಶನ, ಮಡಿಲಕ್ಕಿ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವಿಯ ದರ್ಶನ, ಮಡಿಲಕ್ಕಿ ಸೇವೆ

ಆನೇಕಲ್‌: ಪಟ್ಟಣದ ಸುಭಾಷ್‌ನಗರ ಬಡಾವಣೆಯಲ್ಲಿ ಅಣ್ಣಮ್ಮ ದೇವಿ, ಗಂಗಾಪರಮೇಶ್ವರಿ ದೇವಿ ಹಾಗೂ ಮಾರಮ್ಮ ದೇವಿಯರ ಆರನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಸಡಗರಗಳಿಂದ ಭಾನುವಾರ ನೆರವೇರಿತು.

ಬೆಂಗಳೂರು ನಗರ ದೇವತೆ ಅಣ್ಣಮ್ಮ ದೇವಿ ಹಾಗೂ ಗ್ರಾಮದೇವಿಯರಿಗೆ ವಿಶೇಷ ಪೂಜೆ, ಆರತಿ ದೀಪೋತ್ಸವ ಏರ್ಪಡಿಸಲಾಗಿತ್ತು. ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಮಹಿಳೆಯರು ದೇವಿಯ ದರ್ಶನ ಪಡೆದು ದೇವಿಯರಿಗೆ ಮಡಿಲಕ್ಕಿ ಸಲ್ಲಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಪಟ್ಟಣದ ಸುಭಾಷ್‌ನಗರ ಬಡಾವಣೆಯಲ್ಲಿ ನಿರ್ಮಿಸಿದ್ದ ವೈಭವದ ವೇದಿಕೆಯಲ್ಲಿ ಮೂರು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಅವರು ಉತ್ಸವದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ‘ಧಾರ್ಮಿಕ ಕಾರ್ಯಗಳು ಮನುಷ್ಯನ ಬದುಕಿಗೆ ನೆಮ್ಮದಿ ನೀಡುತ್ತವೆ. ಆಷಾಢ ಮಾಸದಲ್ಲಿ ದೇವಿಯರಿಗೆ ವಿಶೇಷ ಶಕ್ತಿ ಇರುತ್ತದೆ. ಹಾಗಾಗಿ ಈ ಮಾಸದಲ್ಲಿ ಚಾಮುಂಡೇಶ್ವರಿ, ಅಣ್ಣಮ್ಮ, ಮಾರಮ್ಮ, ತ್ರಿಪುರಸುಂದರಿ ಸೇರಿದಂತೆ ಎಲ್ಲಾ ಶಕ್ತಿದೇವತೆಗಳ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಆಚರಣೆ ಗಳು ನಡೆಯುತ್ತವೆ’ ಎಂದರು.

ಜೀ ಕನ್ನಡ ವಾಹಿನಿಯ ಲಿಟ್ಲ್‌ ಚಾಮ್‌್ಸ ಪುಟಾಣಿ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶನಿವಾರ ರಾತ್ರಿ ಮಿಮಿಕ್ರಿ ಗೋಪಿ ಮತ್ತು ತಂಡದವರಿಂದ ಹಾಸ್ಯಸಂಜೆ ಕಾರ್ಯಕ್ರಮ  ನಡೆಯಿತು. 

ಅಣ್ಣಮ್ಮ ದೇವಿ ಹಾಗೂ ಮಾರಮ್ಮ ದೇವಿಯರ ಉತ್ಸವ ಮೂರ್ತಿಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಮಹಿಳೆಯರು ನಿಂಬೆಹಣ್ಣು ಹಾಗೂ ದೀಪಾರತಿಗಳೊಂದಿಗೆ ಭಾಗಿಗಳಾಗಿದ್ದರು. ಪುರಸಭಾ ಸದಸ್ಯರಾದ ಎನ್.ಎಸ್. ಅಶ್ವಥ್‌ನಾರಾಯಣ ಹಾಗೂ ಪದ್ಮನಾಭ್‌ ಅವರ ನೇತೃತ್ವದಲ್ಲಿ ಉತ್ಸವ ಆಯೋಜಿಸ ಲಾಗಿತ್ತು. ರಸ್ತೆಯುದ್ದಕ್ಕೂ ಭಕ್ತರು ದೇವಿಯ ಉತ್ಸವ ಮೂರ್ತಿಗೆ ಪುಷ್ಪವೃಷ್ಟಿ ಮಾಡಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಾಂಪ್ರದಾಯಿಕ ಆಚರಣೆಗಳೊಂದಿಗೆ ಅಣ್ಣಮ್ಮ ದೇವಿಯನ್ನು ಬೀಳ್ಕೊಟ್ಟರು.

**

ಆನೇಕಲ್‌ ಪಟ್ಟಣದಲ್ಲಿ ಮೂರು ದಿನಗಳಿಂದ ವೈಭವದ ಅಣ್ಣಮ್ಮ ದೇವಿ ಧಾರ್ಮಿಕ ಉತ್ಸವ ಆಯೋಜನೆಗೊಂಡಿರುವುದು ಅರ್ಥಪೂರ್ಣವಾಗಿದೆ

–ನರೇಂದ್ರ ಬಾಬು ಶರ್ಮಾ,

ಬ್ರಹ್ಮಾಂಡ ಗುರೂಜಿ

ಪ್ರತಿಕ್ರಿಯಿಸಿ (+)