ಶನಿವಾರ, ಡಿಸೆಂಬರ್ 7, 2019
25 °C

ಆಲಂಕಾರಿಕ ಹೂ, ಹಣ್ಣಿನ ಸಸಿಗಳಿಗೆ ಬೇಡಿಕೆ

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಆಲಂಕಾರಿಕ ಹೂ, ಹಣ್ಣಿನ ಸಸಿಗಳಿಗೆ ಬೇಡಿಕೆ

ವಿಜಯಪುರ: ನಗರದ ಸೈನಿಕ ಶಾಲೆ ಸನಿಹ, ಸೊಲ್ಲಾಪುರ ರಸ್ತೆಯ ಐಟಿಐ ಕಾಲೇಜು ಮುಂಭಾಗ, ಸ್ಟೇಷನ್‌ ರಸ್ತೆಯ ಜಿಲ್ಲಾ ಕ್ರೀಡಾಂಗಣದ ಮುಂಭಾಗ ಆಲಂಕಾರಿಕ, ಹೂವು, ಹಣ್ಣಿನ ಸಸಿಗಳ ವಹಿವಾಟು ಬಿರುಸುಗೊಂಡಿದೆ. ನಗರ ವಾಸಿಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಜನರು, ತಮ್ಮ ಪರಿಸರದಲ್ಲಿ ಮಳೆಯಾದ ಸಂದರ್ಭ ಇಲ್ಲಿಗೆ ದಾಂಗುಡಿಯಿಟ್ಟು ಸಸಿಗಳನ್ನು ಖರೀದಿಸುವ ದೃಶ್ಯಾವಳಿ ಗೋಚರಿಸುತ್ತದೆ.

ದಶಕಕ್ಕಿಂತ ಹೆಚ್ಚಿನ ಅವಧಿಯಿಂದ ಬಿಹಾರ, ಆಂಧ್ರಪ್ರದೇಶದ ವ್ಯಾಪಾರಿ ಗಳು ಸಸಿಗಳ ಮಾರಾಟಕ್ಕಾಗಿಯೇ ನಗರದಲ್ಲಿ ಬೀಡುಬಿಟ್ಟಿದ್ದು, ಮಹಾರಾಷ್ಟ್ರದ ಪುಣೆ, ಆಂಧ್ರಪ್ರದೇಶದ ರಾಜಮಂಡ್ರಿ ಸನಿಹದ ನರ್ಸರಿಗಳಿಂದ ತಿಂಗಳಿಗೊಮ್ಮೆ ಸಸಿಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಾರೆ.

‘ಜೂನ್‌ನಿಂದ ಸೆಪ್ಟೆಂಬರ್‌ವರೆಗೂ ಮಳೆಗಾಲ. ಈ ಅವಧಿ ಸೇರಿದಂತೆ ಅಕ್ಟೋಬರ್‌ನಲ್ಲೂ ವಹಿವಾಟು ಚಲೋ ಇರುತ್ತದೆ. ಗಿಡಗಳ ಮಾರಾಟದ ಪರ್ವ ಕಾಲವಿದು. ಹಣ್ಣಿನ ಗಿಡಗಳು, ತೆಂಗಿನ ಸಸಿ ಸೇರಿದಂತೆ ಇನ್ನಿತರೆ ಗಿಡಗಳು ಬಿರುಸಿನಿಂದ ಬಿಕರಿಯಾಗುವ ಸಮಯ.

ಗ್ರಾಮೀಣ ಜನತೆ ಮುಗಿಬಿದ್ದು ತಮಗಿಷ್ಟದ ಗಿಡಗಳನ್ನು ಖರೀದಿಸು ತ್ತಾರೆ. ಈ ಸಮಯ ಸಸಿಗಳನ್ನು ಭೂಮಿಗೆ ನೆಟ್ಟರೆ ನೈಸರ್ಗಿಕವಾಗಿಯೇ ಬೇರು ಬಿಟ್ಟು ಚಿಗುರುತ್ತವೆ. ಉತ್ತಮ ಬೆಳವಣಿಗೆಗೆ ಪೂರಕ ವಾತಾವರಣ ಸಿಗುತ್ತದೆ ಎಂಬ ಕಾರಣಕ್ಕಾಗಿಯೇ ಉಳಿದ ಅವಧಿಗಿಂತ ಹೆಚ್ಚಿನ ವಹಿವಾಟು ನಡೆಯುತ್ತದೆ’ ಎನ್ನುತ್ತಾರೆ ನಗರದ ಡಾ.ಬಿ.ಆರ್‌.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಮುಂಭಾಗ ಒಂದೂವರೆ ದಶಕದಿಂದಲೂ ವ್ಯಾಪಾರ ನಡೆಸುತ್ತಿರುವ ಆಂಧ್ರ ಪ್ರದೇಶದ ರಾಜಮಂಡ್ರಿಯ ನಾಗೇಶ್.

‘ಉಳಿದಂತೆ ಸಹಜವಾದ ವಹಿವಾಟು ನಡೆಯುತ್ತದೆ. ಮನೆಗಳ ಮುಂಭಾಗ, ಕೈತೋಟಗಳಲ್ಲಿ ಅಲಂಕಾರಿಕ ಸಸ್ಯ, ಹೂವಿನ ಗಿಡ ಗಳನ್ನು ಬೆಳೆಸುವ ಅಭಿರುಚಿಯುಳ್ಳವರು ಮಾತ್ರ ಬೇಸಿಗೆ–ಚಳಿಗಾಲದ ನಮ್ಮ ಗ್ರಾಹಕರು. ಇವರ ಖರೀದಿ ಪ್ರಕ್ರಿಯೆ ವರ್ಷವಿಡಿ ನಡೆಯುತ್ತದೆ. ಕಡು ಬೇಸಿಗೆಯಲ್ಲಿ ಮಾತ್ರ ವ್ಯಾಪಾರ ಡಲ್ ಇರುತ್ತದೆ’ ಎಂದು ಹೇಳಿದರು.

‘ಹದ ಮಳೆ ಸುರಿದ ಸಂದರ್ಭ ಗ್ರಾಹಕರ ಬೇಡಿಕೆ ಹೆಚ್ಚು. ನಿತ್ಯ ₹ 6000ದಿಂದ 10000 ಮೌಲ್ಯದ ಗಿಡ ಗಳ ಮಾರಾಟ ನಡೆಯುತ್ತದೆ. ಉಳಿ ದಂತೆ ನಿತ್ಯ ₹ 1000ದ ವಹಿವಾಟು ನಡೆದರೆ ಹೆಚ್ಚು’ ಎನ್ನುತ್ತಾರೆ ಬಿಹಾರದ ಸಸಿಗಳ ವ್ಯಾಪಾರಿ ಓಂಪ್ರಕಾಶ್‌ ಕುಮಾರ್‌.

ತರಹೇವಾರಿ ತಳಿಯ ಸಸ್ಯಗಳು: ತರಹೇವಾರಿ ತಳಿಯ ಸಸಿಗಳು ಲಭ್ಯ. ಕನಿಷ್ಠ 60ರಿಂದ 100 ಜಾತಿಯ ಸಸ್ಯಗಳು ಸಿಗಲಿವೆ. ಇವುಗಳಲ್ಲಿ ಆಆಲಂಕಾರಿಕ, ಹೂವು, ಹಣ್ಣಿನ ಸಸಿಗಳಿಗೆ ಗ್ರಾಹಕರ ಬೇಡಿಕೆ ಹೆಚ್ಚು. ಪಾಮ್‌, ಪೆಟ್ರಾ, ಬೋಗನ್‌ವಿಲ್ಲಾ, ಸೈಪ್ರಸ್‌, ಮೋಗ್ರಾ, ಪೂಜಾ, ಕ್ರಿಸ್‌ಮಸ್‌, ಫೈಕಾಸ್, ಕ್ರೋಟನ್ಸ್, ಡೈಸಿನಾ ಸೇರಿದಂತೆ ವಿವಿಧ ಜಾತಿಯ ಅಲಂಕಾರಿಕ ಗಿಡಗಳು, ನಿಂಬೆ, ಮಾವು, ಚಿಕ್ಕು, ಪೇರು, ನೇರಳೆ, ರಾಮಫಲ, ಸೀತಾಫಲ, ನೆಲ್ಲಿ, ಮೋಸಂಬಿ, ತಂತ್ರ, ಹಲಸು ಹಣ್ಣಿನ ಸಸಿಗಳು ಇಲ್ಲಿವೆ. ಗುಲಾಬಿ, ಪಾರಿಜಾತ, ಮಲ್ಲಿಗೆ, ದಾಸವಾಳ, ಕಣಗಲ, ಸಂಪಿಗೆ, ಹೆಗ್ಗನರ ಸೇರಿದಂತೆ ಇತರೆ ಪ್ರಮುಖ ಹೂವಿನ ಜಾತಿಯ ಸಸಿಗಳು ಲಭ್ಯವಿವೆ.

ಬೆಲೆ: ಕನಿಷ್ಠ ₹ 30, ಗರಿಷ್ಠ ₹ 150

ವಿಜಯಪುರ: ಅಲಂಕಾರಿಕ ಸಸಿಗಳ ಬೆಲೆ ₹ 30 ರಿಂದ 150 ರ ವರೆಗಿದ್ದರೆ, ಹಣ್ಣಿನ ಗಿಡಗಳ ಬೆಲೆ ₹ 50 ಆರಂಭವಾಗಿ ₹ 100ರ ವರೆಗಿದೆ. ಅದೇ ರೀತಿ ಹೂವಿನ ಸಸಿಗಳ ಬೆಲೆ ₹ 30– 60 ಇದ್ದರೆ, ಈ ವ್ಯಾಪಾರಿಗಳಲ್ಲಿ ಒಟ್ಟು 60ಕ್ಕೂ ಹೆಚ್ಚು ತಳಿಯ ಸಸ್ಯಗಳು ಈ ವ್ಯಾಪಾರಿಗಳಲ್ಲಿ ಲಭ್ಯ.

* * 

ನಗರದ ಜನರು ಅಲಂಕಾರಿಕ ಸಸಿಗಳನ್ನು ಖರೀದಿಸಿದರೆ, ಗ್ರಾಮೀಣ ಭಾಗದವರರಿಂದ ಹಣ್ಣಿನ ಸಸಿಗಳಿಗೆ ಹೆಚ್ಚಿನ ಬೇಡಿಕೆ. ಚೌಕಾಶಿ ವಹಿವಾಟು ನಡೆಯೋದೆ ಇದ್ದಿದ್ದೆ

ಓಂಪ್ರಕಾಶ್‌ ಕುಮಾರ್‌

ಬಿಹಾರ ಮೂಲದ ವ್ಯಾಪಾರಿ

 

ಪ್ರತಿಕ್ರಿಯಿಸಿ (+)