ಶುಕ್ರವಾರ, ಡಿಸೆಂಬರ್ 13, 2019
20 °C

ಮಳೆಗಾಗಿ ಕಪ್ಪೆಗಳ ಮೆರವಣಿಗೆ; ಮತ್ತೊಂದು ಬರದ ಮುನ್ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆಗಾಗಿ ಕಪ್ಪೆಗಳ ಮೆರವಣಿಗೆ; ಮತ್ತೊಂದು ಬರದ ಮುನ್ಸೂಚನೆ

ಹಂಪಾಪುರ: ಎಚ್.ಡಿ.ಕೋಟೆ ತಾಲ್ಲೂಕಿ ನಲ್ಲಿ ಮುಂಗಾರು ಕೊರತೆಯಿಂದ ಬಿತ್ತನೆ ಮಾಡಿದ್ದ ಬೆಳೆಗಳು ಒಣಗಲು ಆರಂಭಿಸಿದ್ದು, ರೈತರು ಆತಂಕದಲ್ಲಿದ್ದಾರೆ.

ವಿವಿಧೆಡೆ ಹೆಸರು, ಹತ್ತಿ, ಎಳ್ಳು, ಜೋಳ, ಮೆಕ್ಕೆಜೋಳ, ತೊಗರಿ ಬಿತ್ತನೆ ಮಾಡಿದ್ದಾರೆ. ಚಿಗುರೆಲೆ ಬಿಟ್ಟಿರುವ ಬೆಳೆಗಳು ತೇವಾಂಶದ ಕೊರತೆಯಿಂದ ಬಾಡುತ್ತಿವೆ.

ಹಂಪಾಪುರ ಸೇರಿದಂತೆ ಸುತ್ತಮು ತ್ತಲಿನ ಹೊಮ್ಮರಗಳ್ಳಿ, ಮಾದಾಪುರ, ದಾರಿಪುರ, ಚಕ್ಕೂರು, ಕಂಚಮಳ್ಳಿ, ಕೋಳಗಾಲ, ದೇಗ್ಗಲಹುಂಡಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಬರದ ಮುನ್ಸೂಚನೆ ಕಂಡುಬರುತ್ತಿದೆ. ಈ ಮೊದಲು ಮುಂಗಾರು ಮಳೆ ಕಂಡು ಜನರು ಖುಷಿ ಪಟ್ಟಿದ್ದರು. ಅದರಂತೆ ಮೃಗಶಿರಾ ಮಳೆ (ಜೂನ್ 7) ಬೀಳುತ್ತಿದ್ದಂತೆಯೇ ರೈತರು ಶೇ 90ರಷ್ಟು ಬಿತ್ತನೆ ಪೂರ್ಣ ಗೊಳಿಸಿದರು.

ರೈತರು ಬೆಳೆಗಳಿಗೆ ಎರಡು ಸಲ ಎಡಿ, ಕುಂಟಿ ಹೊಡೆದಿದ್ದಾರೆ. ಅಲ್ಲದೆ, ಕಳೆ ಕೂಡ ತೆಗೆಸಿದ್ದಾರೆ. ಹೆಸರು, ಉದ್ದು, ತೊಗರಿ, ಮೆಕ್ಕೆಜೋಳ, ಎಳ್ಳು ಇತರೆ ಬೆಳೆಗಳು ಸಾಲುಸಾಲಾಗಿ ಕಾಣುತ್ತಿವೆ. ಆದರೆ, ಮಳೆಯೇ ಇಲ್ಲವಾಗಿದೆ.

ಬೀಸುತ್ತಿರುವ ಗಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಳೆ ಸುರಿಸು ವಂತೆ ಮೋಡಗಳು ಕಂಡುಬಂದರೂ ನಂತರ ಮಾಯವಾಗುತ್ತಿವೆ. ಇನ್ನೇನು ಮಳೆ ಬಂದೇ ಬಿಟ್ಟಿತು ಎನ್ನುವಾಗ ವಾತಾವರಣ ತಿಳಿಯಾಗುತ್ತಿದೆ’ ಎಂದು ಬೆಳಗನಹಳ್ಳಿ ಗ್ರಾಮದ ರೈತ ರಾಮಾರಾಧ್ಯ ಮುಗಿಲು ಕಡೆ ನೋಡಿ ನಿರಾಸೆ ವ್ಯಕ್ತಪಡಿಸುತ್ತಾರೆ.

ಕಳೆದ ಮೃಗಶಿರಾ, ಆರಿದ್ರಾ ಮಳೆ ಹಾಗೂ ಈಗ ಹುಟ್ಟಿರುವ ಪುನರ್ವಸು ಮಳೆ ವಾರ್ಷಿಕ ಅಂದಾಜಿನ ಪ್ರಕಾರ ಉತ್ತಮ ಮಳೆಗಳು. ಅದರಂತೆ ಮೂರು– ನಾಲ್ಕು ಚರಣಗಳಲ್ಲಿ ಸುರಿಯ ಬೇಕಾದವು. ಆದರೆ, ಮಳೆ ಬರುವಿಕೆ ಪ್ರಮಾಣ ಹುಸಿಯಾಗಿ ಭೂಮಿ ತೇವಾಂಶ ಕಳೆದುಕೊಳ್ಳುತ್ತಿದೆ. ಇದ ರಿಂದ ಬೆಳೆಗಳು ಹಸಿರು ಕಳೆದುಕೊಂಡು ಅರಿಸಿನ ಬಣ್ಣಕ್ಕೆ ತಿರುಗುತ್ತಿವೆ.

‘ಬಿತ್ತನೆ ಅವಧಿ ಮುಗಿಯುತ್ತದೆ ಎಂಬ ಧಾವಂತದಲ್ಲಿ ಅರೆ ತೇವಾಂಶ ದಲ್ಲಿಯೇ ಬಿತ್ತನೆ ಮಾಡಿದ್ದೇವೆ. ಆದರೆ, ಜುಲೈ ಬಂದರೂ ಮಳೆ ಆಗುತ್ತಿಲ್ಲ. ಇಲ್ಲಿಯವರೆಗೆ ಹಳ್ಳ– ಕೊಳ್ಳದಲ್ಲಿ ನೀರು ಹರಿಯುವಷ್ಟು ಒಂದು ಮಳೆಯೂ ಸುರಿದಿಲ್ಲ. ಕೇವಲ ಮೋಡ ನೋಡುವುದಷ್ಟೆ ನಮ್ಮ ಕೆಲಸವಾಗಿದೆ’ ಎಂದು ಹಂಪಾಪುರ ರೈತ ರಾಜೇಶ್ ಅಳಲು ತೋಡಿಕೊಂಡರು.

‘ಮೂರು ವರ್ಷಗಳಿಂದಲೂ ಬರದ ಛಾಯೆಯಲ್ಲಿಯೇ ಇರುವ ನಮ್ಮ ಪಾಲಿಗೆ ಮತ್ತೊಂದು ಭೀಕರ ಬರ ಆವರಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ’ ಎಂದು ರೈತ ಮಲ್ಲಿಕಾರ್ಜುನ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನಾದ್ಯಂತ ಮಳೆ ಇಲ್ಲ. ಕೆಲಸ ಅರಸಿ ಪಟ್ಟಣಗಳಿಗೆ ಹೋಗುವ ಪರಿಸ್ಥಿತಿ ಎದುರಾಗಿದೆ, ಮಳೆರಾಯ ಚೆನ್ನಾಗಿ ಬಂದರೆ ಚಿನ್ನದಂತ ಬೆಳೆ ತೆಗೆಯುವ ನಿರೀಕ್ಷೆಯಲ್ಲಿದ್ದ ರೈತರು ಈಗ ಎಲ್ಲೆಡೆ ದೇವರ ಮೊರೆ ಹೋಗುತ್ತಿದ್ದಾರೆ. ಅಲ್ಲಲ್ಲಿ ಕಪ್ಪೆಗಳ ಮೆರವಣಿಗೆ ಮಾಡುತ್ತಿದ್ದಾರೆ.

**

ಈ ವರ್ಷ ಅಷ್ಟೊಂದು ಪ್ರಮಾಣ ದಲ್ಲಿ ಉತ್ತಮವಾಗಿ ಮಳೆ ಬಂದಿಲ್ಲ. ಇಲ್ಲಿಯವರೆಗೆ  ತಾಲ್ಲೂಕಿನಲ್ಲಿ ಕೇವಲ 265.8 ಮಿ.ಮೀ ಮಳೆ ಸುರಿದಿದೆ

–ಗುರುಪ್ರಸಾದ್, ಕೃಷಿ ತಾಂತ್ರಿಕ ಅಧಿಕಾರಿ

ಪ್ರತಿಕ್ರಿಯಿಸಿ (+)