ಮಂಗಳವಾರ, ಡಿಸೆಂಬರ್ 10, 2019
18 °C
ಗಿರಿಜನರಿಗೆ ಮರೀಚಿಕೆಯಾದ ಮೂಲಸೌಲಭ್ಯಗಳು

ಕತ್ತಲಲ್ಲೆ ಉಳಿದ ಕಾರೆಕಂಡಿ ಹಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕತ್ತಲಲ್ಲೆ ಉಳಿದ ಕಾರೆಕಂಡಿ ಹಾಡಿ

ಗೋಣಿಕೊಪ್ಪಲು: ಸ್ವಾತಂತ್ರ್ಯ ಬಂದಾಗಿ ನಿಂದಲೂ, ಸರ್ಕಾರಗಳು ಬದಲಾದರೂ ಕೊಡಗಿನ ಅನೇಕ ಗಿರಿಜನರ ಬದಕು ಮಾತ್ರ ಬದಲಾವಣೆಯಾಗಿಲ್ಲ.

ಗುಡಿಸಲಿನ ಚಾವಣಿಗೆ ಬಳಸುತ್ತಿದ್ದ ತರಗೆಲೆಗಳ ಬದಲಾಗಿ ಪ್ಲಾಸ್ಟಿಕ್‌ ಹೊದಿಕೆ ಬಂದಿರುವುದು ಹೊರತು ಮತ್ತೇನು ಪ್ರಗತಿಯಾಗಿಲ್ಲ. ಇಂತಹ ಪರಿಸ್ಥಿತಿ ಇರುವ ಜಿಲ್ಲೆಯ ಹಾಡಿಗಳಲ್ಲಿ ತಿತಿಮತಿ ಸಮೀಪದ ಕಾರೆಕಂಡಿ ಹಾಡಿಯೂ ಒಂದು.

ನಾಗರಹೊಳೆ ಅರಣ್ಯದಂಚಿನಲ್ಲಿ ರುವ ಹಾಡಿಯಲ್ಲಿ ಯರವ, ಕುರುಬರಿಗೆ ಸೇರಿದ  ಸುಮಾರು 45 ಕುಟುಂಬಗಳಿವೆ. ಈ ಎಲ್ಲ ಗುಡಿಸಲುಗಳು ಶಿಥಿಲ ಗೊಂಡಿದ್ದು, ಕುಸಿಯುವ  ಸ್ಥಿತಿಯಲ್ಲಿವೆ. ಅವರಿಗೆ ಗ್ರಾಮ ಪಂಚಾಯಿತಿ ನೀಡಿದ ಪ್ಲಾಸ್ಟಿಕ್‌ ಹೊದಿಕೆಗಳನ್ನೇ ಚಾವಣಿಯಾಗಿ ಬಳಸಿ, ನೀರು ಒಳಸೋರದಂತೆ ಮಾಡಿಕೊಂಡಿದ್ದಾರೆ.

ಕೆಲವರು ಮಣ್ಣಿನ ಗೋಡೆಕಟ್ಟಿ ಕೊಂಡಿದ್ದಾರೆ. ಇನ್ನೂ ಕೆಲವರು ಬಿದಿರಿನ ನೆರಿಕೆಗಳಿಂದ ತಡೆಗಳನ್ನು ನಿರ್ಮಿಸಿ ಅದನ್ನೇ ಗೋಡೆಯನ್ನಾಗಿಸಿಕೊಂಡಿ ದ್ದಾರೆ. ಗುಡಿಸಿಲಿನೊಳಗೆ ನೆಲವೂ ಮಣ್ಣೇ ಆಗಿರುವುದರಿಂದ ಶೀತವು ಹೆಚ್ಚಾಗಿದೆ. ಜತೆಗೆ ಮಲಗಲೂ ಆಗದೆ, ನಿಲ್ಲಲೂ ಆಗದೆ ಪರದಾಡುತ್ತಿದ್ದಾರೆ.

ಇಲ್ಲಿನ ಅನೇಕ ಗಿರಿಜನರು ಆಸ್ತಮಾದಿಂದ ನರಳುತ್ತಿದ್ದರೆ, ಮಕ್ಕಳು ಹಾಗೂ ಮಹಿಳೆಯರನ್ನು ಪೌಷ್ಟಿಕ ಆಹಾರದ ಕೊರತೆ ಕಾಡುತ್ತಿದೆ.

ಗುಡಿಸಲುಗಳಿಗೆ ಇನ್ನೂ ಹಕ್ಕು ಪತ್ರ ಸಿಕ್ಕಿಲ್ಲವಾದ್ದರಿಂದ ಸರ್ಕಾರದ ಸೌಲಭ್ಯಗಳು ಕೇವಲ ಕಾಗಗದಲ್ಲೇ ಉಳಿದಿವೆ. ಅವರು ವಾಸಿಸುವ ಸ್ಥಳ ಅರಣ್ಯ ಇಲಾಖೆಗೆ ಸೇರಿದೆ ಎಂದು ನಿತ್ಯ ತಗಾದೆ ತೆಗೆಯುವ ಅರಣ್ಯಾಧಿಕಾರಿಗಳು ಹಾಡಿಗೆ ಯಾವುದೇ ಸೌಲಭ್ಯ ನೀಡಲು ಬಿಡುತ್ತಿಲ್ಲ ಎಂಬುದು ಹಾಡಿ ವಾಸಿಗಳ ದೂರು.

ಹಾಡಿಗಳಿಗೆ ಹೋಗುವ ದಾರಿ ಯಂತೂ ಕೆಸರಿನ ಹೊಂಡವಾಗಿದ್ದು, ಆಟೊ ರಿಕ್ಷಾಗಳೂ ಓಡಾಡಲು ಸಾಧ್ಯವಾಗುತ್ತಿಲ್ಲ.  ಸಂಜೆಯಾದರೆ ಆನೆಗಳ ಕಾಟ ಇರುವುದರಿಂದ ಜನರು ನಡೆದುಕೊಂಡು ಹೋಗಲು ಸಾಧ್ಯವಿಲ್ಲ.  ವೃದ್ಧರನ್ನು, ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸ ಪಡಬೇಕಾಗಿದೆ ಎಂದು ಹೇಳುತ್ತಾರೆ ಹಾಡಿ ನಿವಾಸಿ ರಮೇಶ.

ಪ್ರತಿವರ್ಷವೂ ರಸ್ತೆ ದುರಸ್ತಿಗೆ ಸರ್ಕಾರಕ್ಕೆ ಮನವಿ ಸಲ್ಲಿಸುವುದೇ ಆಗಿದೆ ಹೊರತು ಯಾರೂ ಇತ್ತ ಗಮನಹರಿಸುವುದಿಲ್ಲ. ಮಳೆಗಾಲ  ಬಂದರೆ ನಮ್ಮ  ಗೊಳು ಆ ದೇವರಿಗೆಮಾತ್ರ ಗೊತ್ತು ಎಂದು ಅಲವತ್ತುಕೊಳ್ಳುತ್ತಾರೆ ರಮೇಶ್‌.

ಅದರೆ, ಹಾಡಿಯ ಅಭಿವೃದ್ಧಿಗೆ ಕೆಲವು ಅರಣ್ಯ ಇಲಾಖೆಯ ನಿಯಮಗಳು ಅಡ್ಡಿಯಾಗುತ್ತಿವೆ ಎಂದು  ಐಟಿಡಿಪಿ ಅಧಿಕಾರಿಗಳು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಇನ್ನಾದರೂ ಸರ್ಕಾರ ಇತ್ತಗಮನ ಹರಿಸಿ ಮೂಲಸೌಲಭ್ಯಗಳನ್ನು ನೀಡಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)