ಶನಿವಾರ, ಡಿಸೆಂಬರ್ 7, 2019
25 °C
ಬೆಚ್ಚಗಿರಲು ಏಡಿ, ಕಣಿಲೆ ಖಾದ್ಯದ ಮೊರೆ ಹೋದ ಮಂಜಿನ ನಗರಿ ಜನತೆ

ನಗರಕ್ಕೆ ಮಳೆಗಾಲದ ಅಥಿತಿಗಳ ಆಗಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರಕ್ಕೆ ಮಳೆಗಾಲದ ಅಥಿತಿಗಳ ಆಗಮನ

ಮಡಿಕೇರಿ: ಮಳೆಗಾಲದಲ್ಲಿ ನಗರಕ್ಕೆ ಹೊಸ ಅಥಿತಿಗಳ ಆಗಮನವಾಗಿದೆ. ಮಳೆಗಾಲದಲ್ಲಿ ಹೆಚ್ಚಾಗಿ ಸಿಗುವ ಏಡಿಗಳು ನಗರದ ರಸ್ತೆಗಳಲ್ಲಿ ಮಾರಾಟಕ್ಕೆ ಇಡಲಾಗಿದೆ. ಇನ್ನೂ ಬಿದಿರಿನ ಕಣಿಲೆ ವಿಶೇಷವಾಗಿ ರಸ್ತೆ ಬದಿಯಲ್ಲಿ ಸಿಗುತ್ತಿದೆ. ಮಳೆಯ ಜೊತೆಗೆ ಮಂಜಿನ ವಾತಾವರಣವಿದ್ದು ಜನರು ಬೆಚ್ಚಗಿರಲು ಏಡಿ, ಕಣಿಲೆ ಖರೀದಿಗೆ ಮುಂದಾಗಿದ್ದಾರೆ.

ಚಳಿ ಹೆಚ್ಚಾಗಿರುವ ಮಡಿಕೇರಿ ನಗರದಲ್ಲಿ ಬೆಚ್ಚಗಿರಲು ಹಾಗೂ ಮಳೆಗಾಲಕ್ಕೆ ಹೊಂದಿಕೊಳ್ಳಲು ಜನರು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸಾಮಾನ್ಯ. ವ್ಯಾಪಾರಿಗಳು ಮಳೆಯ ನಡುವೆ ಮಾರಾಟ ನಡೆಸುತ್ತಿದ್ದರೆ, ಗ್ರಾಹಕರು ಚೌಕಾಸಿ ಮಾಡಿ ಒಂದೆರಡು ಕೆ.ಜಿ. ಏಡಿ ಖರೀದಿ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.   

ಹಿಂದೆ ಮಳೆಗಾಲದಲ್ಲಿ ಭತ್ತದ ಗದ್ದೆ, ಹಳ್ಳ ಕೊಳ್ಳದಲ್ಲಿ ಏಡಿಗಳು ಸಿಗುತ್ತಿದ್ದವು. ಖಾದ್ಯ ಪ್ರಿಯರೂ ಮುಗಿಬಿದ್ದು ಖರೀಸುತ್ತಿದ್ದರು. ಈಗ ಬೇಡಿಕೆ ಹೆಚ್ಚಿದ್ದರೂ ಏಡಿ ಮಾರಾಟಗಾರರ ಸಂಖ್ಯೆ ಕಡಿಮೆಯಿದೆ. ಜತೆಗೆ, ಮಳೆಯ ಪ್ರಮಾಣ ಕಡಿಮೆ ಇದ್ದು ಏಡಿ ಲಭ್ಯತೆಯೂ ಹಿಂದಿನಷ್ಟು ಇಲ್ಲ. ಗದ್ದೆಗಳಲ್ಲಿ ಅವುಗಳು ಕಾಣಿಸುತ್ತಲೇ ಇಲ್ಲ.

‘ಔಷಧೀಯ ಗುಣ ಇರುವುದರಿಂದ ಆಷಾಢ ಮಾಸದಲ್ಲಿ ಏಡಿಗೆ ಬೇಡಿಕೆ ಹೆಚ್ಚು. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭತ್ತದ ಗದ್ದೆಗಳು ಕಣ್ಮರೆಯಾಗಿದ್ದು, ಹೋಂಸ್ಟೇಗಳಾಗಿ ಬದಲಾಗಿವೆ. ಇದೇ ಕಾರಣಕ್ಕೆ ಕುಶಾಲನಗರದ ಹಾರಂಗಿ ಜಲಾಶಯ, ಪಿರಿಯಾಪಟ್ಟಣ, ಎಚ್‌.ಡಿ. ಕೋಟೆ, ಬೀಮನಹಳ್ಳಿಯಿಂದ ಏಡಿ ತಂದು ಮಾರಾಟ ಮಾಡಲಾಗುತ್ತಿದೆ. ಕೆ.ಜಿಗೆ ₨ 200 ಹಾಗೂ ಕಟ್ಟಿಗೆ (12 ಏಡಿ) ₨250 ದರವಿದೆ; ಕಣಿಲೆಗೆ ಕಟ್ಟಿಗೆ ₨50 ಬೆಲೆಯಿದೆ’ ಎಂದು ಮಾರಾಟಗಾರ ಇಂದಿರಾ ನಗರದ ನಿವಾಸಿ ಎಚ್‌.ಎಲ್‌. ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದೆ ಜಿಲ್ಲೆಯ ಪ್ರತಿಸಂತೆಯಲ್ಲೂ ಏಡಿಗಳು ಸಿಗುತ್ತಿದ್ದವು. ಗದ್ದೆ, ಹಳ್ಳದ ಕಡೆ ಒಂದು ಸುತ್ತು ಹಾಕಿ ಬರುವಷ್ಟರಲ್ಲಿ ಒಂದು ಹತ್ತಾರು ಏಡಿಗಳು ಸಿಗುತ್ತಿದ್ದವು. ಈಗ ಅಂತಹ ಪರಿಸ್ಥಿತಿ ಇಲ್ಲ. ಗದ್ದೆಗಳಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ ಸಿಂಪಡಣೆಯ ಪರಿಣಾಮ ಏಡಿಗಳ ಸಂಖ್ಯೆ ಇಳಿಮುಖವಾಗಿದೆ. ಏಡಿಗಳನ್ನು ಸಾರು ಮಾಡುವ ಬದಲಿಗೆ ಪ್ರೈ ಅಥವಾ ಸುಟ್ಟು ತಿನ್ನುವ ಮಜವೇ ಬೇರೆ’ ಎಂದು ಬಾಯಿ ಚಪ್ಪರಿಸುತ್ತಾರೆ ಗ್ರಾಹಕ ವೇಣು.

–ಬಿ. ವಿಕಾಸ್‌

ಪ್ರತಿಕ್ರಿಯಿಸಿ (+)