ಶುಕ್ರವಾರ, ಡಿಸೆಂಬರ್ 6, 2019
17 °C

ಇತಿಹಾಸ ನಿರ್ಮಿಸಿದ ಸುದೀರ್ಘ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತಿಹಾಸ ನಿರ್ಮಿಸಿದ ಸುದೀರ್ಘ ಹೋರಾಟ

ನರಗುಂದ: ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಇಲ್ಲಿ ನಡೆಯುತ್ತಿರುವ ನಿರಂತರ ಧರಣಿ ಸತ್ಯಾಗ್ರಹ ಭಾನುವಾರ 732ನೇ ದಿನಕ್ಕೆ ಕಾಲಿಡುವ ಮೂಲಕ ಎರಡು ವರ್ಷ ಪೂರೈಸಿತು. ನೀರಿಗಾಗಿ ನಡೆಯುತ್ತಿರುವ ಸುದೀರ್ಘ ಹೋರಾಟ ಇತಿಹಾಸದ ಪುಟ ಸೇರಿತು.

ಬೆಳಿಗ್ಗೆಯಿಂದ ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಿಂದ ರೈತರು ಧರಣಿ ವೇದಿಕೆಗೆ ತಂಡತಂಡ ವಾಗಿ ಬರತೊಡಗಿದರು. ರೈತ ಸೇನೆ ಬಂದ್‌ಗೆ ಕರೆ ನೀಡಿರಲಿಲ್ಲವಾದರೂ, ಪಟ್ಟದಲ್ಲಿ ಅಘೋಷಿತ ಬಂದ್‌ ವಾತಾ ವರಣ ನಿರ್ಮಾಣವಾಗಿತ್ತು.

ಬೆಳಿಗ್ಗೆ 11ರವರೆಗೆ ಬಸ್‌ ಸಂಚಾರ ಇತ್ತು. ನಂತರ ನರಗುಂದ ಘಟಕದ ಬಸ್‌ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು. ಸಂಜೆ 5ರವರೆಗೆ ಪಟ್ಟಣ ವ್ಯಾಪ್ತಿಯಲ್ಲಿ ಬಸ್‌ ಸಂಚಾರ ಇರಲಿಲ್ಲ. ಹುಬ್ಬಳ್ಳಿ– ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 5 ಗಂಟೆಗಳ ಕಾಲ ವಾಹನ ಸಂಚಾರ ವಿರಳವಾಗಿತ್ತು. ಪಟ್ಟಣದ ಒಳಗಿನಿಂದ ಹಾದು ಹೋಗಿ ರುವ ಹೆದ್ದಾರಿ ಮೂಲಕ ಹುಬ್ಬಳ್ಳಿಗೆ ಹೋಗಬೇಕಾಗಿದ್ದ ಬಸ್‌ಗಳು ಮಾರ್ಗ ಬದಲಿಸಿ ಸಂಚರಿಸಿದವು.

ಇದರಿಂದ ನರಗುಂದ ನಿಲ್ದಾಣಕ್ಕೆ ಬಂದಿಳಿಯಬೇಕಾಗಿದ್ದ ಪ್ರಯಾಣಿಕರು ಮತ್ತು ಇಲ್ಲಿಂದ ಬೇರೆ ಊರುಗಳಿಗೆ ಹೋಗಬೇಕಾಗಿದ್ದವರು  ತೊಂದರೆ ಅನು ಭವಿಸಿದರು. ರೈತರು ರಸ್ತೆ ತಡೆ ಮಾಡ ದಿದ್ದರೂ, ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರ ನಿಯಂತ್ರಣಕ್ಕೆ ಅಗತ್ಯ ಕ್ರಮ  ಕೈಗೊಂಡಿದ್ದರು.

ಬೃಹತ್‌ ಮರವಣಿಗೆ: ಮಧ್ಯಾಹ್ನ 12 ಗಂಟೆ ಸುಮಾರಿಗೆ ಪುರಸಭೆ ಆವರಣದಿಂದ  ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ನೇತೃತ್ವದಲ್ಲಿ  ಸಾವಿರಾರು ರೈತರು,  ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಧರಣಿ ವೇದಿಕೆಗೆ ಬಂದರು.

ಮೆರವಣಿಗೆಯುದ್ದಕ್ಕೂ, ಮಹದಾಯಿ ಯೋಜನೆ ಜಾರಿಗೆ ನಿರ್ಲಕ್ಷ್ಯ ವಹಿಸಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆಯಲ್ಲಿ ರಂಟೆ ಹೊತ್ತು ಸಾಗಿದ ಸೊಬರದಮಠ ಅವರಿಗೆ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ, ಶಂಕ್ರಣ್ಣ ಅಂಬಲಿ ಸಾಥ್‌ ನೀಡಿರು. ಸುಮಾರು ಅರ್ಧ ಕಿ.ಮೀ. ಉದ್ದದವರೆಗೆ ರೈತರ ದಂಡು ಕಾಣುತ್ತಿತ್ತು. 

ಇದು ರೈತರ ಶಕ್ತಿ ಪ್ರದರ್ಶನದಂತೆ ಕಾಣುತ್ತಿತ್ತು. ಬೀದರ್‌, ವಿಜಯಪುರ, ಮುಧೋಳ, ಸವದತ್ತಿ, ಹಾವೇರಿ, ಕೊಪ್ಪಳ, ತಿರ್ಲಾಪುರ, ಯಾವಗಲ್‌, ರಾಮದುರ್ಗ, ಬದಾಮಿಯಿಂದ ರೈತರು ಬೈಕ್‌, ಟಂಟಂ, ಟ್ರ್ಯಾಕ್ಟರ್‌, ಚಕ್ಕಡಿಗಳಲ್ಲಿ ಮಹದಾಯಿ ಧರಣಿ ವೇದಿಕೆಗೆ ಬಂದಿದ್ದರು. ಮಹ ದಾಯಿ ನದಿಯನ್ನು ಮಲಪ್ರಭಾ ನದಿಗೆ ಜೋಡಿಸುವ ತನಕ ಹೋರಾಟ ನಿಲ್ಲುವು ದಿಲ್ಲ ಎಂದು ರೈತರು ಘೋಷಿಸಿದರು.

‘ರೈತರ ಆತ್ಮಹತ್ಯೆ ತಡೆಯಲು ಪ್ರಧಾನಿ ಮುಂದಾಗಲಿ’

ನರಗುಂದ: ‘ಪ್ರಧಾನಿ ನರೇಂದ್ರ ಮೋದಿ ರೈತರ ವಿಚಾರದಲ್ಲಿ ಕಾಳಜಿ ತೋರುತ್ತಿಲ್ಲ. ವಿದೇಶಗಳನ್ನು ಸುತ್ತಿದ್ದು ಬಿಟ್ಟರೆ ಅವರಿಂದ ರೈತರಿಗೆ ಪ್ರಯೋಜನ ಆಗಿಲ್ಲ. ಗೋಹತ್ಯೆ ತಡೆಯಲು ಮುಂದಾದ ಅವರು ರೈತರ ಆತ್ಮಹತ್ಯೆ ತಡೆಯಲು ಮುಂದಾಗಲಿ’ ಎಂದು ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು. ನರಗುಂದದಲ್ಲಿ ಭಾನುವಾರ ನಡೆದ ಮಹದಾಯಿ  ರೈತ ಜಾಗೃತಿ ಸಮಾವೇಶ ದಲ್ಲಿ ಅವರು ಮಾತನಾಡಿದರು.

‘ಹಿಂದಿಯಲ್ಲಿ ಪ್ರಧಾನಿ ವಿರುದ್ಧ ಹರಿ ಹಾಯ್ದ ಪುಟ್ಟಣ್ಣಯ್ಯ, ಮೊದಲು ರೈತರ ಸಾಲ ಮನ್ನಾ ಮಾಡಲಿ ಎಂದು ಆಗ್ರಹಿಸಿ ದರು. ಆರ್‌ಬಿಐ ಗವರ್ನರ್‌ ರೈತರ ಸಾಲ ಮನ್ನಾ ಬಗ್ಗೆ ಕೇವಲವಾಗಿ ಮಾತನಾ ಡಿದ್ದು ಸರಿಯಲ್ಲ. ಅವರಿಗೆ ರೈತರ ಕಷ್ಟ ಅರ್ಥ ಆಗುವುದಿಲ್ಲ’ ಎಂದರು.

‘ಮಹದಾಯಿ ಯೋಜನೆ ಅನುಷ್ಠಾನ ಗೊಳ್ಳಬೇಕು. ಇದಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ರೈತ ಸಂಘದ ಸಂಪೂರ್ಣ ಬೆಂಬಲವಿದೆ. ಸೋಮವಾರವೇ ರೈತ ಸಂಘದ ರಾಜ್ಯ ಸಮಿತಿ  ಸಭೆ ಕರೆದು  ಇದರ ಬಗ್ಗೆ ಸುದೀರ್ಘ ಚರ್ಚೆ ನಡೆಸ ಲಾಗುವುದು. ಪ್ರಧಾನಿಗೂ ಪತ್ರ ಬರೆಯಲಾಗುವುದು’ ಎಂದರು. 

ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ‘ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮಹದಾಯಿ ಹೋರಾಟ ನಡೆಯು ತ್ತಿದ್ದರೂ, ಸರ್ಕಾರ ಸ್ಪಂದಿಸಿಲ್ಲ. ಮಹ ದಾಯಿ ಜಾರಿಯಾಗುವ ತನಕ  ರೈತರು ಸರ್ಕಾರದ ಯಾವುದೇ ಕರವನ್ನು ಕಟ್ಟ ಬಾರದು’ ಎಂದರು. ಹಾವೇರಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ರಮೇಶ ಕೆಂಚಳ್ಳಿ, ರೈತ ಸಂಘದ ಬಸವರಾಜ ಸಾಬಳೆ, ವಿಠ್ಠಲ ಜಾಧವ, ಶ್ರೀಶೈಲ ಮೇಟಿ, ಮದುಸೂಧನ್‌ ತಿವಾರಿ, ವೀರಣ್ಣ ಸೊಪ್ಪಿನ, ಮುತ್ತಪ್ಪ ಕೋಮಾರ ಸಮಾವೇಶದಲ್ಲಿ ಇದ್ದರು.

ಎಲ್ಲೆಡೆ ಹಸಿರು ಶಾಲು; ಧ್ವಜ

ಪಟ್ಟಣದಲ್ಲಿ ಎಲ್ಲಿ ನೋಡಿದರೂ ಹಸಿರು ಧ್ವಜ, ಹಸಿರು ಶಾಲು ಕಾಣಿಸುತ್ತಿತ್ತು. ಭೂಮಿಗೆ ನೀರು ಬಂದು, ನೆಲ ಹಸಿರು ಆಗುವವರೆಗೂ ನಾವು ಶಾಲ ಬೀಸಾವ್ರ ಎಂದು ರೈತರ ತಮ್ಮ ನೋವು ಹೊರಹಾಕಿದರು.

ಗಮನ ಸೆಳೆದ ಗಾಂಧಿ ವೇಷಧಾರಿ: ಸಮಾವೇಶದಲ್ಲಿ ತಾಲ್ಲೂಕಿನ ಕರ್ಕಿ ಕಟ್ಟಿಯ ಮುತ್ತಣ್ಣ ತೀರ್ಲಾಪುರ ಅವರು ಗಾಂಧಿ ವೇಷಧಾರಿಯಾಗಿ ಗಮನ ಸೆಳೆದರು. ಮೆರವಣಿಗೆ ಯಲ್ಲಿ ಭಾಗವಹಿಸಿದ ಅವರು ಆಕರ್ಷಣೆಯ ಕೇಂದ್ರಬಿಂದು ಆಗಿದ್ದರು. ಧರಣಿ ವೇದಿಕೆಯಲ್ಲೂ ಕಾರ್ಯಕ್ರಮ ಮುಗಿಯುವರೆಗೆ ಅವರು ನಿಂತುಕೊಂಡೇ ಇದ್ದರು.

ಪ್ರತಿಕ್ರಿಯಿಸಿ (+)