ಭಾನುವಾರ, ಡಿಸೆಂಬರ್ 8, 2019
21 °C

ಬಡವರ ಸೇವೆಗೆ ಈ ಆರೋಗ್ಯ ಕೇಂದ್ರ

ಸಂಧ್ಯಾ ಹೆಗಡೆ ಆಲ್ಮನೆ Updated:

ಅಕ್ಷರ ಗಾತ್ರ : | |

ಬಡವರ ಸೇವೆಗೆ ಈ ಆರೋಗ್ಯ ಕೇಂದ್ರ

ಶಿರಸಿ: ನಗರ ಪ್ರದೇಶದ ಬಡ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಇಲ್ಲಿನ ನೆಹರೂ ನಗರದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯಾರಂಭಿಸಿದೆ. ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ ಅಡಿಯಲ್ಲಿ ಪ್ರತಿ 50ಸಾವಿರ ಜನಸಂಖ್ಯೆ ಇರುವ ಪ್ರದೇಶದಲ್ಲಿ ಆರೋಗ್ಯ ಇಲಾಖೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆದಿದೆ.

ನಗರದ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಭಿಕ್ಷುಕರು, ಬೀದಿ ಮಕ್ಕಳು, ಕಸ ಆರಿಸುವವರು. ವೃದ್ಧರು, ಕಟ್ಟಡ ಕಾರ್ಮಿಕರು, ಹಿಂದುಳಿದವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಆರೋಗ್ಯ ಸೇವೆ ಒದಗಿಸುವ ಹಾಗೂ ಪ್ರಾಥಮಿಕ ಹಂತದ ಆರೋಗ್ಯ ಸೇವೆ ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ.

ಆರೋಗ್ಯ ಕೇಂದ್ರಕ್ಕೆ ಒಟ್ಟು 13 ಹುದ್ದೆ ಮಂಜೂರುಗೊಳಿಸಲಾಗಿದೆ. ಇಬ್ಬರು ನರ್ಸ್, ಆರು ಜನ ಆರೋಗ್ಯ ಸಹಾಯಕರು, ತಲಾ ಒಂದು ಫಾರ್ಮಾ ಸಿಸ್ಟ್, ಗ್ರೂಪ್‌ ಡಿ, ಕ್ಲರ್ಕ್, ಪ್ರಯೋಗಾ ಲಯ ಸಿಬ್ಬಂದಿ ಹುದ್ದೆಗಳು ಭರ್ತಿಯಾಗಿವೆ. ವೈದ್ಯರ ಹುದ್ದೆ ಮಾತ್ರ ಖಾಲಿ ಇದೆ. ಕೇಂದ್ರದ ವ್ಯಾಪ್ತಿಯಲ್ಲಿರುವ ಕೊಳವೆ ಪ್ರದೇಶಗಳ ಮನೆಗಳಿಗೆ ಭೇಟಿ ನೀಡಲು ನಾಲ್ವರು ಆಶಾ ಕಾರ್ಯಕರ್ತೆಯರು ನೇಮಕಗೊಂಡಿದ್ದಾರೆ.

‘ವಾರದ ಹಿಂದಷ್ಟೇ ಆರೋಗ್ಯ ಕೇಂದ್ರ ಆರಂಭಿಸಿರುವುದರಿಂದ ಎಲ್ಲ ಜನರಿಗೆ ಇನ್ನೂ ಇದರ ಬಗ್ಗೆ ಗೊತ್ತಾಗಿಲ್ಲ. ಸುತ್ತಮುತ್ತಲಿನ ರೋಗಿಗಳು ಬರಲಾರಂಭಿಸಿದ್ದಾರೆ. ಸದ್ಯ ವೈದ್ಯರ ಹುದ್ದೆ ಖಾಲಿ ಇರುವುದರಿಂದ ಗ್ರಾಮೀಣ ಆರೋಗ್ಯ ಕೇಂದ್ರಗಳ ಇಬ್ಬರು ವೈದ್ಯ ರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿ ಕಾರಿ ಡಾ.ಅನ್ನಪೂರ್ಣಾ ವಸ್ತ್ರದ ಹೇಳಿದರು.

‘ಬೆಳಿಗ್ಗೆ 9.30ರಿಂದ ಸಂಜೆ 4.30ರ ವರೆಗೆ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸುತ್ತದೆ. ಪ್ರಯೋಗಾಲಯದಲ್ಲಿ ಉಚಿತ ತಪಾಸಣೆ, ರಕ್ತದೊತ್ತಡ, ಮಧುಮೇಹಿಗಳಿಗೆ ಉಚಿತ ಚಿಕಿತ್ಸೆ, ಲಸಿಕೆ, ಬಾಣಂತಿಯರ ತಪಾಸಣೆ ಸೌಲಭ್ಯಗಳು ದೊರೆಯುತ್ತವೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸಣ್ಣಪುಟ್ಟ ಕಾಯಿಲೆಗಳು ಬಂದಾಗ ಸಹ ದೂರದಲ್ಲಿರುವ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಹೋಗಬೇಕಾಗಿತ್ತು. ಬಡಜನರಿಗೆ ಆಟೊರಿಕ್ಷಾ ಮಾಡಿಸಿ ಕೊಂಡು ಅಲ್ಲಿಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಅಲ್ಲದೇ ಪಂಡಿತ ಆಸ್ಪತ್ರೆ ಸದಾ ರೋಗಿಗಳಿಂದ ತುಂಬಿರು ವುದರಿಂದ ತಾಸುಗಟ್ಟಲೇ ಕಾಯಬೇಕಾ ಗುತ್ತದೆ. ಬಡವರು, ಕೂಲಿ ಕಾರ್ಮಿಕರೇ ಹೆಚ್ಚಾಗಿ ಇರುವ ನೆಹರು ನಗರ, ಹನುಮಗಿರಿ ಭಾಗದಲ್ಲಿ ಆಸ್ಪತ್ರೆ ತೆರೆದಿರುವುದು ಇಲ್ಲಿನ ಜನರಿಗೆ ಅನುಕೂಲವಾಗಿದೆ’ ಎಂದು ಸ್ಥಳೀಯ ಸುರೇಶ ಭಂಡಾರಿ ಹೇಳಿದರು.

* * 

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಕರೆಯಲಾಗಿದ್ದು, ಶೀಘ್ರ ಭರ್ತಿ ಮಾಡಲಾಗುವುದು

ಡಾ. ಅನ್ನಪೂರ್ಣಾ ವಸ್ತ್ರದ

ತಾಲ್ಲೂಕು ಆರೋಗ್ಯಾಧಿಕಾರಿ

ಪ್ರತಿಕ್ರಿಯಿಸಿ (+)