ಶುಕ್ರವಾರ, ಡಿಸೆಂಬರ್ 6, 2019
19 °C

ಬಾಳು ಬೆಳಗಿದ ಬಂಪರ್‌ ಬಾಳೆ ಬೆಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಳು ಬೆಳಗಿದ ಬಂಪರ್‌ ಬಾಳೆ ಬೆಳೆ

ಕಂಪ್ಲಿ: ಬರದ ಛಾಯೆ, ಕುಸಿದ ಅಂತರ್ಜಲ ಮಟ್ಟ, ವಿದ್ಯುತ್ ಕಣ್ಣಾ ಮುಚ್ಚಾಲೆ, ಕೂಲಿ ಕಾರ್ಮಿಕರ ಸಮಸ್ಯೆ ನಡುವೆಯೂ ಸದಾ ಸೆಣಸಾಡುತ್ತಾ ಇದೀಗ ಯಶಸ್ಸು ಕಂಡಿರುವ ರೈತರೊಬ್ಬರು ಯಶೋಗಾಥೆ ಇದು. ಕಂಪ್ಲಿ ಹೋಬಳಿ ವ್ಯಾಪ್ತಿಯ ಅರಳಿಹಳ್ಳಿ ತಾಂಡಾ ಬಳಿಯ ಎ. ವೆಂಕಟ ನಾಯ್ಡು ಎನ್ನುವ ರೈತ ಸಣಾಪುರ ರಸ್ತೆ ಪಕ್ಕದ ತಮ್ಮ ಆರು ಎಕರೆ ಭೂಮಿಯಲ್ಲಿ ಬಾಳೆ, ತರಕಾರಿ, ಇತ್ಯಾದಿ ಬೆಳೆ ಬೆಳೆದು ಐದು ವರ್ಷಗಳಿಂದ ನಷ್ಟ ಅನುಭವಿಸುತ್ತಿದ್ದರು.

ಬಾಳೆ ಹೊಸ ತಳಿ ಹುಡುಕಾಟದಲ್ಲಿದ್ದ ಈ ರೈತರಿಗೆ ‘ಗ್ರ್ಯಾಂಡ್–9’ ತಳಿಯ ಹಸಿರು ಬಾಳೆ ಬಗ್ಗೆ ಆಪ್ತರಿಂದ ಮಾಹಿತಿ ದೊರೆಯಿತು. ಸೆಪ್ಟಂಬರ್‌ 2016ರಲ್ಲಿ ಗೌರಿಬಿದನೂರಿನಲ್ಲಿ ಜಿ–9 ತಳಿಯ ಬಾಳೆ ಖರೀದಿಸಿ ಎಕರೆಗೆ 1200 ಬಾಳೆ ಗಿಡ ನೆಡಲಾಗಿತ್ತು. ಇದರಲ್ಲಿ ಸದ್ಯ 900 ಬಾಳೆಗಿಡಗಳು ಬಾಳೆಗೊನೆ ಹೊತ್ತು ನಿಂತಿವೆ.

ಎಕರೆ ಬಾಳೆ ಬೆಳೆ ನಿರ್ವಹಣೆಗೆ ₹ 2ಲಕ್ಷ ಖರ್ಚು ಭರಿಸಲಾಗಿದೆ. ಸಮೃದ್ಧ ವಾಗಿ ಬೆಳೆದ ಬಾಳೆ ಸರಿ ಸುಮಾರು ಒಂಭತ್ತು ತಿಂಗಳ ನಂತರ ಫಲ ಕೊಡಲು ಆರಂಭಿಸಿದ್ದು, ಸದ್ಯ ಎಕರೆಗೆ 30ಟನ್ ಇಳುವರಿ ನಿರೀಕ್ಷಿಸಲಾಗಿದೆ. ಒಂದು ಬಾಳೆಗೊನೆ ಸುಮಾರು 30ಕೆ.ಜಿ ತೂಕವಿದ್ದು,  ಸದ್ಯ ಕಂಪ್ಲಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ ₹ 1400 ಧಾರಣಿ ದೊರೆಯುತ್ತಿದೆ ಎಂದು  ರೈತ ರಮೇಶ್‌ ನಾಯ್ಡು ವಿವರಿಸಿದರು.

ನಾಲ್ಕು ಕೊಳವೆ ಬಾವಿಗಳಲ್ಲಿ ಮೂರು ಅಂತರ್ಜಲಮಟ್ಟ ಕುಸಿದು ನಿರುಪಯುಕ್ತವಾಗಿದ್ದು, ಸದ್ಯ ಕಾರ್ಯ ನಿರ್ವಹಿಸುತ್ತಿರುವ ಏಕೈಕ ಕೊಳವೆಬಾವಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಜಿ–9 ಹಸಿರು ಬಾಳೆ ಬೆಳೆಯಲಾಗಿದೆ. ನೀರಿನ ಕೊರತೆ ಕಂಡುಬಂದಲ್ಲಿ ಪಕ್ಕದ ರೈತರ ಸಹಕಾರದಿಂದ ನೀರು ಪಡೆಯಲಾಗುತ್ತಿದೆ ಎಂದು ರೈತ ತಿಳಿಸಿದರು.

2014ರಲ್ಲಿ ಅಕಾಲಿಕ ಆಲಿಕಲ್ಲು ಮಳೆ, ಬಿರುಗಾಳಿಯಿಂದ ತೋಟದಲ್ಲಿನ ಬಾಳೆ ಗಿಡಗಳು ನೆಲಕಚ್ಚಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿತ್ತು. ಇದಾದ ನಂತರ 2012ರಲ್ಲಿ ಟೊಮೆಟೊ ಬೆಳೆದು ಲಾಭ ಗಳಿಸಿದ್ದೆ. ನಂತರವೂ ಟೊಮೆಟೊ, ಈರುಳ್ಳಿ ಬೆಳೆದು ಪ್ರಕೃತಿ ವಿಕೋಪದಿಂದ ಸರಣಿ ನಷ್ಟವಾಗಿ ಕೈಸುಟ್ಟುಕೊಂಡೆ. ಇಷ್ಟೆಲ್ಲ ಏರಿಳಿತದ ನಂತರ ಜಿ–9ಎನ್ನುವ ಬಾಳೆ ತಳಿ ನಮ್ಮನ್ನು ಕೈ ಹಿಡಿದಿದೆ ಎಂದು ರೈತನ ಮಗ ಎ. ರಮೇಶ್‌ನಾಯ್ಡು ಸಂತಸ ಹಂಚಿಕೊಂಡರು.

ಸದ್ಯ ಇವರ ತೋಟದಲ್ಲಿರುವ ಬಾಳೆ ಗಿಡಗಳು ಗೊನೆಗಳಿಂದ ತುಂಬಿದ್ದು, ರಸ್ತೆಯಲ್ಲಿ ತೆರಳುವವರ ಗಮನಸೆಯುತ್ತಿವೆ. ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ಒಂದು ಕಡೆ, ಬೆಳೆದ ಬೆಲೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಹೋರಾಟ ಮಾಡುವವರು ಮತ್ತೊಂದು ಕಡೆ.

ಇದರ ನಡುವೆ ಯಾವುದರ ಗೊಡುವೆಯೂ ಇಲ್ಲದೆ ಮರಳಿ ಪ್ರಯತ್ನ ಮಾಡು ಎನ್ನುವಂತೆ ಸತತ ನಷ್ಟದ ನಂತರ ಬರದಲ್ಲಿಯೂ ಜಿ–9 ಬಾಳೆ ಬೆಳೆದು ಬಾಳು ಹಚ್ಚು ಹಸಿರು ಮಾಡಿಕೊಂಡು ಯಶಸ್ಸು ಕಂಡು ಸುತ್ತಲಿನ ರೈತರ ಪಾಲಿಗೆ ರೈತ ವೆಂಕಟನಾಯ್ಡು ಬಂಗಾರ ಮನುಷ್ಯರಾಗಿ ಕಾಣುತ್ತಿದ್ದಾರೆ. ಜಿ–9 ಬಾಳೆ ತಳಿ ಸಲಹೆಗಾಗಿ ಮೊ: 96635 00041 ಸಂಪರ್ಕಿಸಬಹುದು.

* * 

ಹನಿ ನೀರಾವರಿ ಪೂರೈಕೆ ವೇಳೆ ಪೈಪ್‌ ಮೂಲಕವೇ ಸೂಕ್ಷ್ಮ ಪೋಷಕಾಂಶಗಳನ್ನು ಬಾಳೆ ಬುಡಕ್ಕೆ ತಲುಪಿಸುವ ವ್ಯವಸ್ಥೆ ಮಾಡುತ್ತಿರುವುದರಿಂದ ಬಾಳೆ ಬೆಳೆಗೆ ರೋಗ ರುಜಿನ ಭಾದೆ  ಕಡಿಮೆ

ರಮೇಶ್‌ನಾಯ್ಡು, ತೋಟದ ಮಾಲೀಕ

 

ಪ್ರತಿಕ್ರಿಯಿಸಿ (+)