ಶನಿವಾರ, ಡಿಸೆಂಬರ್ 14, 2019
22 °C

ಎಲ್ಲೆಂದರಲ್ಲಿ ಭೂಮಿ ಕೊರೆಯುವ ಸದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲೆಂದರಲ್ಲಿ ಭೂಮಿ ಕೊರೆಯುವ ಸದ್ದು

ಹೊಸದುರ್ಗ: ತಾಲ್ಲೂಕಿನಲ್ಲಿ ಈ ಬಾರಿಯೂ ಮುಂಗಾರು ಮಳೆ ಕೈಕೊಟ್ಟಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಭೂಮಿಯಲ್ಲಿರುವ ನೀರು ಹೊರತೆಗೆಯಲು ಹಗಲು, ರಾತ್ರಿ ಕೊಳವೆ ಬಾವಿ ಕೊರೆಸುತ್ತಿರುವ ಸದ್ದು ಕೇಳಿ ಬರುತ್ತಿದೆ.

ಉತ್ತಮವಾಗಿ ನೀರು ಪೂರೈಸುತ್ತಿದ್ದ  ಹಲವು  ಕೊಳವಬಾವಿಗಳು ಸ್ಥಗಿತವಾಗಿವೆ. 700–800 ಅಡಿ ಆಳದವರೆಗೆ ಭೂಮಿಯನ್ನು ಕೊರೆಸಿದರೂ ಬರೀ ದೂಳು ಹೊರ ಬರುತ್ತಿದೆ. ಏಪ್ರಿಲ್‌ ಹಾಗೂ ಮೇ  ತಿಂಗಳಲ್ಲಿ ಬಿತ್ತನೆ ಮಾಡಿದ್ದ ಸಾವಿರಾರು ಹೆಕ್ಟೇರ್‌ ಬೆಳೆ ಒಣಗಿದೆ.

ಎರಡು ಎಕರೆ ಜಮೀನು ಇರುವವರು ತೋಟಗಾರಿಕೆ, ತರಕಾರಿ ಬೆಳೆಗೆ ಕೊಳವೆಬಾವಿ ಕೊರೆಸುತ್ತಿದ್ದಾರೆ. ‘ಮಳೆ ಬರದಿದ್ದರೆ ಭೀಕರ ಜಲಕ್ಷಾಮ ಎದುರಿಸಬೇಕಾಗುತ್ತದೆ. ಮಳೆಗಾಲದಲ್ಲಿ ಮನೆಯ ಚಾವಣಿ ಮೇಲೆ ಬೀಳುವ ನೀರನ್ನು ನೆಲದಲ್ಲಿ ಇಂಗಿಸುವ ಕೆಲಸ ಮಾಡಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗುತ್ತದೆ’ ಎನ್ನುತ್ತಾರೆ ಹಿರಿಯ ನಾಗರಿಕರಾದ ಹನುಮಂತಪ್ಪ, ನಾಗಪ್ಪ.

ತಾಲ್ಲೂಕಿನಲ್ಲಿ 2,216 ಕೊಳವೆಬಾವಿಗಳು

33 ಗ್ರಾಮ ಪಂಚಾಯ್ತಿಗಳಲ್ಲಿ 2.12 ಲಕ್ಷ ಹಾಗೂ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ 28 ಸಾವಿರ ಜನಸಂಖ್ಯೆಯಿದೆ. ಇಡೀ ತಾಲ್ಲೂಕಿನಲ್ಲಿ ಒಟ್ಟು ಸುಮಾರು 2.41 ಲಕ್ಷವಿದೆ.

ಕುಡಿಯುವ ನೀರು ಪೂರೈಕೆಗೆ 276, ಕಿರು ನೀರು ಸರಬರಾಜಿಗೆ 638, ಕೈಪಂಪ್‌ಗೆ 1,301 ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 2,216 ಕೊಳವೆ ಬಾವಿ ಕೊರೆಸಲಾಗಿದೆ.

ಅಂತರ್ಜಲ ಕುಸಿತದಿಂದ 1,070 ಕೊಳವೆಬಾವಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ರೈತರು ಜಮೀನಿನಲ್ಲಿ ಕೊರೆಸಿದ ಕೊಳವೆಬಾವಿಗಳ ಮಾಹಿತಿ ಲಭ್ಯವಿಲ್ಲ ಎಂದು ತಾಲ್ಲೂಕು ಪಂಚಾಯ್ತಿ ಹಾಗೂ ಪುರಸಭೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸುಸ್ಥಿತಿಯಲ್ಲಿರುವ ಟ್ಯಾಂಕ್‌ಗಳು (ಅಂಕಿ–ಅಂಶ)

160 ಪೈಪ್‌ಲೈನ್‌ ಆಧಾರಿತ  ಘಟಕಗಳು

430 ಕಿರು ನೀರು ಸರಬರಾಜು ಘಟಕಗಳು

560 ಚಾಲನೆಯಲ್ಲಿರುವ ಕೈಪಂಪ್

ಪ್ರತಿಕ್ರಿಯಿಸಿ (+)