ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ ಸನಿಹದಲ್ಲೇ ಕನ್ಸರ್‌ವೆನ್ಸಿ ದುರ್ಗಂಧ

Last Updated 17 ಜುಲೈ 2017, 8:59 IST
ಅಕ್ಷರ ಗಾತ್ರ

ಶಿವಮೊಗ್ಗ: ಒಂದೆಡೆ ಫುಡ್‌ಕೋರ್ಟ್‌, ಇನ್ನೊಂದೆಡೆ ಆಸ್ಪತ್ರೆ, ಆಟೊ ನಿಲ್ದಾಣ. ಇಂತಹ ಜನನಿಬಿಡ ಪ್ರದೇಶದಲ್ಲಿ ಗಬ್ಬುನಾರುವ ದುರ್ಗಂಧ ಮತ್ತೊಂದೆಡೆ. ಇದು ಪಾರ್ಕ್‌ ಬಡಾವಣೆಯ ವಾತ್ಸಲ್ಯ ಆಸ್ಪತ್ರೆ ಪಕ್ಕದ ಕನ್ಸರ್‌ವೆನ್ಸಿಯ ದುಸ್ಥಿತಿ. ಇಲ್ಲಿಂದ ಹೊರಡುವ ಕೆಟ್ಟ ವಾಸನೆಯನ್ನು ಆಸ್ಪತ್ರೆಯ ರೋಗಿಗಳು, ಅವರ ಸಂಬಂಧಿಕರು, ಆಟೊ ಚಾಲಕರು, ಫುಡ್‌ಕೋರ್ಟ್‌ಗೆ ಭೇಟಿ ನೀಡುವವರು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಿದೆ.

ಪ್ರತಿನಿತ್ಯ ನೂರಾರು ರೋಗಿಗಳು, ಪಾದಚಾರಿಗಳು, ಸಾರ್ವಜನಿಕರು ಈ ಭಾಗದಲ್ಲಿ ಓಡಾಡುತ್ತಾರೆ. ಕನ್ಸರ್‌ವೆನ್ಸಿಯಿಂದ ಹೊರಬರುವ ದುರ್ವಾಸನೆಯಿಂದ ಓಡಾಡಲು ಕಷ್ಟವಾಗುತ್ತಿದೆ. ಈಚೆಗಷ್ಟೇ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ದುರಸ್ತಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಉದ್ಯಮಿ ಮಹೇಶ್ ಪೈ.

ಪಕ್ಕದಲ್ಲೇ ಆಸ್ಪತ್ರೆ ಇದೆ. ಚಿಕ್ಕಮಕ್ಕಳು, ಹಿರಿಯರು, ಗರ್ಭಿಣಿಯರು ಇಲ್ಲಿ ನಿತ್ಯ ಓಡಾಡುತ್ತಾರೆ. ಆದರೆ, ಇಂತಹ ಸ್ಥಳದಲ್ಲಿಯೇ ಶುಚಿತ್ವ ಮರೆಯಾಗಿದೆ. ತ್ಯಾಜ್ಯ ತುಂಬಿದ ನಿಂತ ನೀರಿನಿಂದ ಸೊಳ್ಳೆಗಳ ಉಗಮ ತಾಣವಾಗಿದೆ ಎನ್ನುತ್ತಾರೆ ರಂಗಕರ್ಮಿ ಪ್ರಭಾಕರ್. ಈಚೆಗೆ ಡೆಂಗಿ ಎಲ್ಲೆಡೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಆಸ್ಪದ ನೀಡುವಂತೆ ನಗರದ ಮಧ್ಯಭಾಗದಲ್ಲೇ ಗಬ್ಬುನಾತದ ತಾಣವಿದೆ. ಮಳೆಗಾಲದಲ್ಲಿ ವಾಸನೆ ಹೆಚ್ಚಾಗುತ್ತದೆ.

ಪಾರ್ಕ್‌ ಬಡಾವಣೆಯಲ್ಲಿ  ಸಾರ್ವಜನಿಕ ಶೌಚಾಲಯದ ಕನ್ಸರ್‌ವೆನ್ಸಿಯಲ್ಲಿಯೇ ಪುರುಷರು ಮೂತ್ರ ವಿಸರ್ಜನೆ ಮಾಡಲು ಬರುತ್ತಾರೆ. ಆಸ್ಪತ್ರೆಯಿಂದ ಹೊರಬಂದ  ಒಳಚರಂಡಿ ನೀರಿನಜತೆ ಮೂತ್ರದ ವಾಸನೆಯೂ ಮೂಗಿಗೆ ಬಡಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸು  ತ್ತಾರೆ ಸ್ಥಳೀಯ ದುರ್ಗೇಶ್.

ವಾತ್ಸಲ್ಯ  ಆಸ್ಪತ್ರೆ ಪಕ್ಕದ ಕನ್ಸರ್‌ವೆನ್ಸಿ ಅಭಿವೃದ್ಧಿಗೆ ವರ್ಷದ ಹಿಂದೆ ಟೆಂಡರ್ ಕರೆಯಲಾಗಿದೆ. ಈಚೆಗಷ್ಟೇ ಜೆಸಿಬಿ ಯಂತ್ರದ ಮೂಲಕ ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಆಸ್ಪತ್ರೆಯ ಯುಜಿ ಕೇಬಲ್‌ನಿಂದ ವಿದ್ಯುತ್ ಪ್ರವಹಿಸಿದೆ. ಹೀಗಾಗಿ ಖಾಸಗಿ ಕಟ್ಟಡದವರು ಕನ್ಸರ್‌ವೆನ್ಸಿಯಲ್ಲಿ ಯಾವುದೇ ವಿದ್ಯುತ್ ಕೇಬಲ್ ಅಳವಡಿಸಬಾರದು ಎಂದು ಸೂಚನೆ ನೀಡಲಾಗಿದೆ.

ಅಲ್ಲದೆ ಕನ್ಸರ್‌ವೆನ್ಸಿಯಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳಿಂದ ಪೌರಕಾರ್ಮಿಕರು ಕಸ ತೆಗೆದುಕೊಂಡು ಹೋಗಲು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಟ್ರಾನ್ಸ್‌ಫಾರ್ಮರ್‌
ಗಳನ್ನು ಸ್ಥಳಾಂತರ ಮಾಡಲು ಪಾಲಿಕೆ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯ ಗೋಪಾಲಕೃಷ್ಣ ತಿಳಿಸಿದ್ದಾರೆ.

ಕನ್ಸರ್‌ವೆನ್ಸಿ ಸ್ಥಳದಲ್ಲಿ ಹೊಸ ಒಳಚರಂಡಿ ಸಂಪರ್ಕ, ಸ್ಲ್ಯಾಬ್‌ಗಳ ನಿರ್ಮಾಣ, ವಾಹನ ನಿಲುಗಡೆ ತಾಣ, ಸುಸಜ್ಜಿತ ಆಟೊ ನಿಲ್ದಾಣ ಹಾಗೂ ಶೌಚಾಲಯ ನಿರ್ಮಿಸಲಾಗುವುದು. ಸದ್ಯ ₹ 6.5 ಲಕ್ಷದ ಟೆಂಡರ್‌ ಕರೆಯಲಾಗಿದ್ದು, ವಾರದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಆಸ್ಪತ್ರೆ ತ್ಯಾಜ್ಯಗಳನ್ನು ಕನ್ಸರ್‌ವೆನ್ಸಿಗೆ ಹಾಕದಂತೆ ನೋಟಿಸ್ ನೀಡಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT