ಶುಕ್ರವಾರ, ಡಿಸೆಂಬರ್ 6, 2019
17 °C

ಇಲ್ಲಿದೆ ಸಿನಿಮಾ ಹಳ್ಳಿ

Published:
Updated:
ಇಲ್ಲಿದೆ ಸಿನಿಮಾ ಹಳ್ಳಿ

‘ಲೋ ನಿಂಗಯ್ಯ, ಕೋಳಿ ಪಿಳ್ಳೆಗಳಿಗೆ ಮೇವ್ ಹಾಕ್ದಾ? ಎತ್ತುಗಳಿಗೆ ನೀರುಣಿಸಿ ನೆರಳಲ್ಲಿ ಕಟ್ ಹಾಕೋ... ಮಳೆ ಬಂದು ಕಲ್ಯಾಣಿಯೊಳಗೆ ಕಸ ತುಂಬ್ಕೊಂಡದೆ, ಅದೆಲ್ಲಾ ತೆಗಿಬೇಕು. ಇವತ್ತು ಮಧ್ಯಾಹ್ನ ಹಳ್ಳಿಮನೆ ಎದುರಿಗೆ ಶೂಟಿಂಗ್ ಐತೆ ಕಣ್ಣಪ್ಪಾ, ವಸೀ ಒಪ್ಪ ಮಾಡು. ಇನ್ನೇನು ಧಾರಾವಾಹಿ ಟೀಮ್‌ನೋರು ಬರೋ ಟೈಮ್ ಆತು ಕಣೋ...’

ಹೀಗೆ; ಕುಣಿಗಲ್ ಕನ್ನಡಕ್ಕೆ ಬೆಂಗಳೂರು ಕನ್ನಡವನ್ನೂ ಬೆರೆಸಿ ಎಸ್ಟೇಟ್ ಕಾರ್ಮಿಕ ನಿಂಗಯ್ಯನ ಜತೆ ಮಾತನಾಡುತ್ತಾ, ಕೆಲಸದವರೊಂದಿಗೆ ‘ತೊಟ್ಟಿ ಮನೆ’ (ಶೂಟಿಂಗ್‌ಗಾಗಿ ನಿರ್ಮಿಸಿರುವ ಮನೆ) ಸುತ್ತ ಬೆಳೆದಿರೋ ಗಿಡಗಂಟಿ ಶುಚಿ ಮಾಡುತ್ತಾ, ಬರಮಾಡಿಕೊಂಡರು ಭೂಮಿಕಾ ಎಸ್ಟೇಟ್’ ಮಾಲೀಕ ಲಕ್ಷ್ಮಿನಾರಾಯಣ.

ಸಿನಿಮಾ ಹಳ್ಳಿ: ಹಲವು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅವರು, ಈ ಎಸ್ಟೇಟ್‌ನ ಮಾಲೀಕರೂ ಹೌದು. ನಟನೆಯ ದುಡಿಮೆಯಿಂದಲೇ ಪುಟ್ಟದೊಂದು ‘ಸಿನಿಮಾ ಹಳ್ಳಿ’ ನಿರ್ಮಿಸಿದ್ದಾರೆ.

ಕನಕಪುರ ರಸ್ತೆಯಲ್ಲಿರುವ ತಾತಗುಣಿ ಎಸ್ಟೇಟ್‌ ಸಮೀಪದ ‘ಭೂಮಿಕಾ ಎಸ್ಟೇಟ್’ ಕೆಲ ಧಾರಾವಾಹಿ ಮತ್ತು ಸಿನಿಮಾ ಮಂದಿಗೆ ನೆಚ್ಚಿನ ತಾಣ. ಹಳ್ಳಿ ವಾತಾವರಣದ ಚಿತ್ರೀಕರಣಕ್ಕಾಗಿ ದೂರದಲ್ಲಿ ಎಲ್ಲೋ ಲೊಕೇಷನ್ ಹುಡುಕುವ ತಲೆಬೇನೆ ಇಲ್ಲ; ಹಳ್ಳಿ ಸಿನಿಮಾ ಪರಿಸರಕ್ಕೆ ಹೊಂದಿಕೆಯಾಗುವ ತೊಟ್ಟಿ ಪಡಸಾಲೆ ಮನೆ, ನೀರು ಸೇದೋ ಬಾವಿ, ಕಲ್ಯಾಣಿ, ಹಳೆ ಕಾಲದ ಮಂಟಪ, ಗುಡಿ, ಗರಡಿ ಮನೆ, ಪಂಚಾಯಿತಿ ಕಟ್ಟೆ, ದನ–ಕರು, ಕೋಳಿ, ಹೊಲ–ಗದ್ದೆ, ತೆಂಗು–ಅಡಿಕೆ ತೋಟ, ಎತ್ತಿನಗಾಡಿ, ಜೀಪು, ಹೀಗೆ ಸಕಲ ಸೌಕರ್ಯದ ಹಳ್ಳಿಯೊಂದನ್ನು ನೈಜವಾಗಿ ಸೃಷ್ಟಿಸಿದ್ದಾರೆ.

‘ಇದೆಲ್ಲಾ ಕನ್ನಡ ಸಿನಿಮಾ –ಧಾರಾವಾಹಿಗಳ ಚಿತ್ರೀಕರಣಕ್ಕೆ ಮಾಡಿರುವ ವ್ಯವಸ್ಥೆ ಅಷ್ಟೇ; ಇಲ್ಲಿಗೆ ಬರುವ ಎಷ್ಟೋ ಮಂದಿ ಈ ಎರಡೂವರೆ ಎಕರೆ ಜಮೀನು ಕೋಟ್ಯಂತರ ರೂಪಾಯಿಗೆ ಬೆಲೆ ಬಾಳುತ್ತೆ. ಮಾರಿಕೊಂಡು ಆರಾಮರಾಗಿ ಇರಬಹುದಲ್ವೆ ಎನ್ನುತ್ತಾರೆ. ಆದರೆ, ಇದ್ಯಾವುದೂ ಪಿತ್ರಾರ್ಜಿತ ಆಸ್ತಿ ಅಲ್ಲ; ಸ್ವಂತ ಪರಿಶ್ರಮದ ಕನಸಿನ ಯೋಜನೆ ಇದು’ ಎಂದು ನೆನೆಪುಗಳನ್ನು ಕೆದುಕುತ್ತಾ ಲಕ್ಷ್ಮಿನಾರಾಯಣ ಮಾತಿಗಿಳಿದರು.

ಕುಣಿಗಲ್‌ನಿಂದ ಬೆಂಗಳೂರಿಗೆ: ‘ನನ್ನೂರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ದೊಡ್ಡ ಮಧುರೆ ಗ್ರಾಮ. ಪಿಯುಸಿವರೆಗೆ ತಿಪಟೂರಿನಲ್ಲಿ ವಿದ್ಯಾಭ್ಯಾಸ. ಪದವಿ ವ್ಯಾಸಂಗಕ್ಕಾಗಿ 25 ವರ್ಷದ ಹಿಂದೆ ಬೆಂಗಳೂರಿಗೆ ಬಂದೆ; ನೆಂಟರಿಷ್ಟರ ಮನೆಯಲ್ಲಿ ಉಳಿದುಕೊಂಡು ವಿ.ವಿ.ಪುರಂ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಲೇ ಸಣ್ಣ –ಪುಟ್ಟ ಕೆಲಸ ಮಾಡುತ್ತಾ ತಿಂಗಳಿಗೆ ₹200 ರೂಪಾಯಿ ಸಂಪಾದನೆ ಮಾಡುತ್ತಿದ್ದೆ. ಬಿಡುವಾದಾಗ ಡ್ರೈವಿಂಗ್ ಕೆಲಸ ಮಾಡಿದ್ದೂ ಉಂಟು’ ಎಂದು ಮೆಲುಕು ಹಾಕಿದರು.

‘ಬೆಂಗಳೂರಿನಲ್ಲಿ ಕೆಲಸಕ್ಕಾಗಿ ಪ್ರಯತ್ತಿಸುತ್ತಿದ್ದೆ. ಅದೇ ಸಮಯಕ್ಕೆ ನಮ್ಮ ತಂದೆ ಊರಿನ ಜಮೀನು ಮಾರಬೇಕಾಯಿತು. ಬಂದ ಹಣದಲ್ಲಿ ಪಾಲು ಸಿಕ್ತು. ಕೃಷಿಯಲ್ಲಿ ಮೊದಲಿನಿಂದಲೂ ಆಸಕ್ತಿ ಇತ್ತು. ಕನಕಪುರ ರಸ್ತೆಯಲ್ಲಿರುವ ತಾತಗುಣಿ ಎಸ್ಟೇಟ್ ಸಮೀಪದ ವೈದ್ಯರೊಬ್ಬರಿಗೆ ಸೇರಿದ ಎರಡೂವರೆ ಎಕರೆ ಭೂಮಿ ಇತ್ತು. ಅದಕ್ಕಾಗಿ ಬ್ಯಾಂಕಿನಲ್ಲಿ ಅವರು ಸಾಲ ಪಡೆದಿದ್ದರು. ಸಾಲ ತೀರಿಸಲಾಗದೆ ಕೋರ್ಟ್ ಮೆಟ್ಟಿಲೇರಿ ಹಣಕ್ಕಾಗಿ ಪರದಾಡುತ್ತಿದ್ದರು. ನನ್ನ ಬಳಿ ಇದ್ದ ಹಣದೊಂದಿಗೆ ಬ್ಯಾಂಕ್‌ನಲ್ಲಿ ಸಾಲ ಮಾಡಿ 2001ರಲ್ಲಿ ಭೂಮಿ ಖರೀದಿ ಮಾಡಿದೆ’ ಎಂದು ವಿವರಿಸಿದರು.

ಸ್ಟುಡಿಯೊ ಹಿಂದಿನ ಕಥೆ: ಪಾಳುಬಿದ್ದ ಭೂಮಿ ಹಸನು ಮಾಡಿ ರಾಗಿ –ಜೋಳ, ಭತ್ತ ಬೆಳೆಯುತ್ತಿದ್ದೆ. ಹೀಗೊಮ್ಮೊ ಪರಿಚಿತರಾದ ನಿರ್ದೇಶಕ ಟಿ.ಎನ್. ಸೀತಾರಾಂ ಅವರನ್ನು ತೋಟ ನೋಡಲು ಆಹ್ವಾನಿಸಿದೆ. ಇಲ್ಲಿನ ಸುಂದರ ಪರಿಸರ ಅವರಿಗೆ ಇಷ್ಟವಾಗಿ ಚಿತ್ರೀಕರಣಕ್ಕಾಗಿ ಸ್ಟುಡಿಯೊ ನಿರ್ಮಾಣದ ಸಲಹೆ ನೀಡಿದರು.

ಹೀಗೆ ಆರಂಭವಾದ ಸ್ಟುಡಿಯೊದಲ್ಲಿ ಟಿ.ಎನ್. ಸೀತಾರಾಂ ಅವರು ಈಟಿವಿ ಕನ್ನಡ (ಈಗಿನ ಕಲರ್ಸ್ ಕನ್ನಡ) ವಾಹಿನಿಗೆ ನಿರ್ದೇಶಿಸಿದ ಜನಪ್ರಿಯ ಧಾರಾವಾಹಿಗಳಾದ ‘ಮುಕ್ತ ಮುಕ್ತ ಮುಕ್ತ’, ‘ಮಹಾಪರ್ವ’ದ ಕೆಲ ದೃಶ್ಯಗಳನ್ನು ಇಲ್ಲಿ ಚಿತ್ರೀಕರಣ ಮಾಡಲಾಗಿದೆ.

ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿರುವ ‘ಜೀವನದಿ’ ಕಲರ್ಸ್ ಕನ್ನಡದ ‘ಕಿನ್ನರಿ’, ‘ಗಾಂಧಾರಿ’, ‘ನಾ ನಿನ್ನ ಬಿಡಲಾರೆ’, ಜೀ– ಕನ್ನಡದ ‘ಜೋಡಿಹಕ್ಕಿ’ ಹೀಗೆ ಲೆಕ್ಕವಿಲ್ಲದಷ್ಟು ಧಾರಾವಾಹಿ ಹಾಗೂ ನಟ ದರ್ಶನ್‌ ಅಭಿನಯದ ‘ಸಂಗೊಳ್ಳಿ ರಾಯಣ್ಣ’, ಪುನೀತ್ ರಾಜ್‌ಕುಮಾರ್ ಅವರ ‘ದೊಡ್ಡ ಮನೆ ಹುಡ್ಗ’, ಸುಮನಾ ಕಿತ್ತೂರು ನಿರ್ದೇಶಿಸಿದ ‘ಕಿರಗೂರಿನ ಗಯ್ಯಾಳಿಗಳು’, ಬರಗೂರು ರಾಮಚಂದ್ರಪ್ಪ ಅವರ ‘ಮರಣ ದಂಡನೆ’... ಇಲ್ಲಿ ಚಿತ್ರೀಕರಣವಾದ ಧಾರಾವಾಹಿ–ಸಿನಿಮಾಗಳ ಪಟ್ಟಿ ಹೀಗೇ ಬೆಳೆಯುತ್ತಲೇ ಹೋಗುತ್ತದೆ.

‘ಶ್ರೀಮಂತರ ಮನೆ, ಬಡವರ ಬೀದಿ, ಆಸ್ಪತ್ರೆ, ಕೋರ್ಟ್‌, ಜೈಲು, ರೆಸಾರ್ಟ್, ಈಜುಕೊಳ ಸೇರಿದಂತೆ ಚಿತ್ರೀಕರಣಕ್ಕೆ ಪೂರಕವಾದ ಸ್ಥಳಗಳು ಇಲ್ಲಿದ್ದು, ದಿನವೊಂದಕ್ಕೆ ಎರಡರಿಂದ ಮೂರು ಧಾರಾವಾಹಿಗಳ ಚಿತ್ರೀಕರಣ ನಡೆಯುತ್ತದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಬರೋ ಆದಾಯ ಇಲ್ಲಿನ ನಿರ್ವಹಣೆಗೆ ವ್ಯಯ ಮಾಡುತ್ತಾ ನಾನೂ ಹಾಯಾಗಿದ್ದೇನೆ’ ಎಂದು ಮುಗುಳ್ನಕ್ಕರು ಲಕ್ಷ್ಮಿನಾರಾಯಣ.

ಮಾಹಿತಿಗೆ: 94480 42218

ಪ್ರತಿಕ್ರಿಯಿಸಿ (+)