ಭಾನುವಾರ, ಡಿಸೆಂಬರ್ 8, 2019
21 °C

ತಾಳು ಕಟ್ಟೆತಾಳು, ಸಿಗಲಿದೆ ಹೊಸಬಾಳು!

Published:
Updated:
ತಾಳು ಕಟ್ಟೆತಾಳು, ಸಿಗಲಿದೆ ಹೊಸಬಾಳು!

ಮೈಸೂರು ಜಿಲ್ಲೆಯ ಐತಿಹಾಸಿಕ ತಾಣಗಳಲ್ಲಿ ಒಂದಾದ ತಲಕಾಡಿನಲ್ಲಿ ದೇವಾಲಯಗಳ ದರ್ಶನಕ್ಕಾಗಿ ಮರಳಿನಲ್ಲಿ ಸುತ್ತಾಡಿ, ಸುಸ್ತು ಹೊಡೆವ ಬಹುತೇಕ ಪ್ರವಾಸಿಗರು ಪಕ್ಕದ ಹೆಮ್ಮಿಗೆಯತ್ತ ಪಾದ ಬೆಳೆಸುವುದೇ ಇಲ್ಲ. ‘ನೋಡಲು ಅಲ್ಲೇನಿದೆ’ ಎಂಬುದು ಅವರು ಕೇಳುವ ಪ್ರಶ್ನೆ. ಆದರೆ, ಇಲ್ಲಿನ ಕಟ್ಟೆತಾಳಿನ ಸೊಬಗನ್ನು ಒಮ್ಮೆ ಸವಿದವರು ಮುಂಗಾರು ಚುರುಕುಗೊಂಡು ಕಾವೇರಿ ಮೈದುಂಬಿ ಹರಿಯತೊಡಗಿದರೆ ತಪ್ಪದೇ ಈ ಊರಿಗೆ ಮುತ್ತಿಗೆ ಹಾಕುತ್ತಾರೆ!

‘ಏನಿದು ಕಟ್ಟೆತಾಳು’ ಎಂಬ ಪ್ರಶ್ನೆ ನದಿಯೊಳಗಿನ ಒಳಸುಳಿಗಳಂತೆ ನಿಮ್ಮ ತಲೆಯಲ್ಲಿ ಗಿರಿಕಿ ಹೊಡೆಯುತ್ತಿದೆಯೇ? ಸ್ವಲ್ಪತಾಳಿ ಸ್ವಾಮಿ, ನೀರು ಸಂಗ್ರಹಕ್ಕಾಗಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಕಲ್ಲಿನ ಒಡ್ಡಿದು. ಅಂದಹಾಗೆ, ‘ಮಾಧವ ಮಂತ್ರಿ ಅಣೆಕಟ್ಟು’ ಅಂತ ಇದಕ್ಕೆ ಹೆಸರು.

ಮಳೆಗಾಲದ ಸಂದರ್ಭದಲ್ಲಿ ಕಟ್ಟೆತಾಳಿನಿಂದ ನೀರು ‘ದಬ್‌ ದಬ್‌’ ಎಂದು ಬೀಳುವ ಸದ್ದು ದಿನದ 24 ಗಂಟೆಗಳವರೆಗೆ ಒಂದೇ ಸಮನೆ ಸುತ್ತಲಿನ ಹಳ್ಳಿಗಳಿಗೆ ಕೇಳುತ್ತಲೇ ಇರುತ್ತದೆ. ಕಾವೇರಿಯಿಂದ ಹೊರಡುವ ಆ ನಿನಾದ ಇಲ್ಲಿನ ಜನಕ್ಕೆ ಅದೇನೋ ಮಹದಾನಂದ ಉಂಟು ಮಾಡುತ್ತದೆ. ಹೌದು, ನೀರಿನ ಈ ಹಿಮ್ಮೇಳ ರೈತಾಪಿ ಜನ ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೇರೇಪಿಸುತ್ತದೆ. ಆದರೆ, ಮೂರು ವರ್ಷಗಳಿಂದ ಮಳೆ ಕೊರತೆಯ ಪರಿಣಾಮ ನೀರಿನ ರಾಗಾಲಾಪ ಕೇಳುವ ಭಾಗ್ಯ ಸರಿಯಾಗಿ ಸಿಗುತ್ತಲೇ ಇಲ್ಲವಲ್ಲ.

ಅಂದಹಾಗೆ, ತಲಕಾಡು, ಮುಡುಕತೊರೆ, ಮೊಳೆ, ಟಿ.ನರಸೀಪುರ ಹಾಗೂ ಸುತ್ತಲಿನ ಹಳ್ಳಿಗಳ ಜನ ಭತ್ತ ಬೆಳೆಯಲು ಈ ಅಣೆಕಟ್ಟೆಯೇ ಆಧಾರ. ಹಳ್ಳಿಗಳ ಜನ ಬಟ್ಟೆ ತಂದು, ಒಗೆದು, ಒಡ್ಡಿನ ಮೇಲೆ ಒಣಗಿಸಿಕೊಂಡು ಹೋಗುವುದು ಕೂಡ ರೂಢಿ. ಈ ಭಾಗದಲ್ಲಿ ನದಿಪಾತ್ರ ಸಮತಟ್ಟಾಗಿರುವ ಕಾರಣ ಯಾವುದೇ ಒಳಸುಳಿಗಳು ಇಲ್ಲಿಲ್ಲ. ಮೀನುಗಳು ದಂಡಿ ದಂಡಿಯಾಗಿ ಸಿಗುವುದರಿಂದ ಅವುಗಳಿಗೆ ಗಾಳ ಹಾಕುವವರು ಹಾಗೂ ಬಲೆ ಬೀಸುವವರು ಇಲ್ಲಿ ಧಾರಾಳವಾಗಿ ಸಿಗುತ್ತಾರೆ. ಸುತ್ತಲಿನ ಹಳ್ಳಿಗಳ ಜನರ ಬದುಕಿನೊಂದಿಗೆ ಅಣೆಕಟ್ಟು ಅಷ್ಟೊಂದು ಹಾಸುಹೊಕ್ಕಾಗಿದೆ.

ಅಣೆಕಟ್ಟಿನ ಹಿಂಭಾಗದಲ್ಲಿರುವ ಇಕ್ಕರೆ–ಅಕ್ಕರೆ ದಡಗಳ ನಡುವೆ ಒಂದು ಪುಟ್ಟ ದ್ವೀಪವಿದೆ. ಅದರಲ್ಲೊಂದು ಸಣ್ಣಗಾತ್ರದ ಗುಡ್ಡ ಬೇರೆ ಇದೆ. ಈ ದ್ವೀಪ ಹಲವು ವಿಧದ ಪಕ್ಷಿಗಳ ಆಶ್ರಯ ತಾಣ. ಸೋಪಾನ ಘಟ್ಟದಲ್ಲಿ ಪ್ರವಾಸಿಗರು ನದಿ ನೀರಿನೊಳಗೆ ಮುಳುಗಿ ಏಳುತ್ತಾರೆ. ನೀರಿನಿಂದ ಇತ್ತೀಚೆಗೆ ಹೆಚ್ಚುತ್ತಿರುವ ತುರಿತ ನದಿಸ್ನಾನದ ಸಂಭ್ರಮವನ್ನು ತುಸು ಕಡಿಮೆ ಮಾಡಿದೆ.

ಕಾವೇರಿ ನದಿ ತಲಕಾಡು ಭಾಗದಲ್ಲಿ ಪಶ್ಚಿಮವಾಹಿನಿಯಾಗಿ ಹರಿಯುತ್ತದೆ. ನದಿ ತೀರದ ಮೇಲೆ ನೆಲೆ ಕಂಡುಕೊಂಡ ಹೆಮ್ಮಿಗೆ, ಗಂಗರು, ಹೊಯ್ಸಳರು ಮತ್ತು ವಿಜಯನಗರದ ಅರಸರ ಕಾಲದಲ್ಲಿ ಒಂದು ಅಗ್ರಹಾರ ಆಗಿತ್ತು. ಅದನ್ನು ವಿಜಯನಗರದ ಅರಸು ಇಮ್ಮಡಿ ಹರಿಹರರಾಯ, ಅಲಳಾಳ ದೀಕ್ಷಿತರ ಮಗ ವರದಭಟ್ಟ ಎಂಬಾತನಿಗೆ ದಾನವಾಗಿ ಕೊಟ್ಟಿದ್ದ. ಅದರಂತೆ ಗ್ರಾಮದ ಹೆಸರು ‘ಹರಿಹರ ರಾಜೇಂದ್ರಪುರ’ ಎಂದಾಗಿತ್ತು. ಕಾಲಾನಂತರ ಹೆಮ್ಮಿಗೆ ಎಂದು ಹೆಸರಾಯಿತು ಎನ್ನುತ್ತವೆ ದಾಖಲೆಗಳು.

ಮಾಧವ ಮಂತ್ರಿ ಅಣೆಕಟ್ಟು ಇರುವುದು ಇದೇ ಊರಿನಲ್ಲಿ. ಅಣೆಕಟ್ಟೆಗೆ ಈ ಹೆಸರೇಕೆ ಎನ್ನುವ ಪ್ರಶ್ನೆ ಕಾಡುತ್ತಿದೆಯಲ್ಲವೆ? ಶತಮಾನಗಳ ಹಿಂದೆ ತಲಕಾಡು ಸೇರಿದಂತೆ ದಕ್ಷಿಣ ಕರ್ನಾಟಕದ ಹಲವು ಪ್ರಾಂತಗಳು ವಿಜಯ ನಗರ ಅರಸರ ಆಳ್ವಿಕೆಗೆ ಸೇರಿದ್ದವು. ಈ ಅರಸರ ಮಂತ್ರಿಮಂಡಲದಲ್ಲಿ ಮಾಧವ ಮಂತ್ರಿಯೂ ಇದ್ದನಂತೆ. ತಂತ್ರಜ್ಞನಾಗಿಯೂ ಆತ ಹೆಸರು ಮಾಡಿದ್ದನಂತೆ.

ಬಹಮನಿ ಸುಲ್ತಾನರ ವಶದಲ್ಲಿದ್ದ ಗೋವಾವನ್ನು ವಶಕ್ಕೆ ಪಡೆದುಕೊಳ್ಳಲು ಬುಕ್ಕರಾಯ, ಮಾಧವ ಮಂತ್ರಿಯನ್ನು ಕಳುಹಿಸಿಕೊಟ್ಟಿದ್ದ. ಅದರಂತೆ ಸೈನ್ಯದೊಂದಿಗೆ ದಂಡೆತ್ತಿ ಹೋದ ಆತ, ಗೋವಾ ಗೆದ್ದು ಅಲ್ಲಿ ಗೊಮ್ಮಟೇಶ್ವರ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದ. ಆ ನಂತರ ಬುಕ್ಕರಾಯ ಮೈಸೂರು ಪ್ರಾಂತದ ಆಡಳಿತ ಉಸ್ತುವಾರಿ ವಹಿಸಿಕೊಳ್ಳುವಂತೆ ಮಾಧವ ಮಂತ್ರಿಗೆ ತಿಳಿಸಿದ್ದ. ಆ ಸಂದರ್ಭದಲ್ಲೇ ಸುತ್ತಲಿನ ಹಳ್ಳಿಗಳ ನೀರಾವರಿ ಸೌಲಭ್ಯಕ್ಕಾಗಿ ಈ ಅಣೆಕಟ್ಟು ನಿರ್ಮಿಸಿದ್ದ ಎನ್ನುತ್ತವೆ ದಾಖಲೆಗಳು.

ಚೋಳರ ರಾಜನಾದ ಕರಿಕಾಳನ್ ತಿರುಚಿರಪಳ್ಳಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ದೊಡ್ಡ ಅಣೆಕಟ್ಟಿನ ನಂತರ ಎರಡನೇ ಪುರಾತನ ಅಣೆಕಟ್ಟು ಇದಾಗಿದೆ ಎಂಬುದು ಐತಿಹಾಸಿಕ ಮಾಹಿತಿ.

14ನೇ ಶತಮಾನದಲ್ಲಿ ಕಟ್ಟಿಸಿದ ಕಟ್ಟೆತಾಳು ಇದು ಎನ್ನುವ ಮಾಹಿತಿ ಇದೆ. ಈ ಒಡ್ಡಿನಿಂದಾಗಿ ಇಲ್ಲಿ ಹರಿಯುವ ನೀರು ಮಳೆಗಾಲದಲ್ಲಿ ಜಲಪಾತದಂತೆ ಧುಮ್ಮಿಕ್ಕುವ ದೃಶ್ಯ ನಯನ ಮನೋಹರ. ಈ ಅಣೆಕಟ್ಟಿನಿಂದ ಸದ್ಯ 5,600 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಬಿ.ಎಲ್‌. ರೈಸ್‌ ಅವರ ಸಂಪಾದಕತ್ವದಲ್ಲಿ ಹೊರತರಲಾದ ಮೈಸೂರು ಪ್ರಾಂತದ ಗ್ಯಾಸಟಿಯರ್‌ನಲ್ಲಿ ‘ಈ ಅಣೆಕಟ್ಟಿನಿಂದ 2,939 ಎಕರೆ ಜಮೀನಿಗೆ ನೀರು ಉಣಿಸಲಾಗುತ್ತಿದ್ದು, ಈ ಜಮೀನುಗಳಿಂದ ಬೊಕ್ಕಸಕ್ಕೆ ವಾರ್ಷಿಕ 13,677 ರೂಪಾಯಿ ಕಂದಾಯ ಬರುತ್ತಿದೆ’ ಎನ್ನುವ ವಿವರಣೆ ಉಂಟು.

ಅದು 2013ರ ಮಳೆಗಾಲ. ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದುಬಂದಾಗ ಅಣೆಕಟ್ಟಿನ ಒಂದು ಪಾರ್ಶ್ವದಲ್ಲಿ ಬಿರುಕು ಕಾಣಿಸಿಕೊಂಡು, ಅದರ ಕಲ್ಲುಗಳು ಸಡಿಲಗೊಂಡಿದ್ದವು. ನೀರು ಯರ್ರಾಬಿರ್ರಿಯಾಗಿ ಹರಿದು ನದಿ ಪಾತ್ರದ ಸುತ್ತಮುತ್ತ ಬೆಳೆದು ನಿಂತ ಬೆಳೆಗೆ ಹಾನಿಯಾಗಿತ್ತು. ಸಮರೋಪಾದಿಯಲ್ಲಿ ದುರಸ್ತಿ ಕೆಲಸಗಳನ್ನು ಜಿಲ್ಲಾಡಳಿತ ಕೈಗೊಂಡರೂ ಅದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಿರಲಿಲ್ಲ. ಹೊಸ ಅಣೆಕಟ್ಟಿನ ನಿರ್ಮಾಣಕ್ಕೆ ಇದೀಗ ₹62 ಕೋಟಿ ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಯೋಜನೆಯನ್ನು ತೀವ್ರಗತಿಯಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂಬ ಭರವಸೆ ಸಚಿವ ಎಚ್‌.ಸಿ. ಮಹದೇವಪ್ಪ ಅವರಿಂದ ಸಿಕ್ಕಿದೆ.

ಕೆ.ಆರ್.ಎಸ್. ಅಣೆಯಿಂದ ಹೆಚ್ಚಿನ ನೀರು ಬಿಡುವ ಸಂದರ್ಭಗಳಲ್ಲಿ ಈ ಅಣೆಕಟ್ಟಿಗೆ ಧಕ್ಕೆ ಆಗಿರಬಹುದು ಎಂದು ನೀರಾವರಿ ಇಲಾಖೆಯ ಎಂಜಿನಿಯರುಗಳು ಹೇಳುವುದುಂಟು. ಆದರೆ, ಇದನ್ನು ಅಲ್ಲಗಳೆಯುವ ಸ್ಥಳೀಯರು, ಕಳಪೆ ನಿರ್ವಹಣೆಯೇ ಅಣೆಕಟ್ಟೆಯ ಇಂದಿನ ದುಸ್ಥಿತಿಗೆ ಮುಖ್ಯ ಕಾರಣ ಎನ್ನುತ್ತಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಗ್ಗಿಲ್ಲದೆ ನಡೆದ ಮರಳು ಗಣಿಗಾರಿಕೆ ಕೂಡ ಈ ಜಲಾಶಯಕ್ಕೆ ಸಾಕಷ್ಟು ಹಾನಿಯನ್ನು ಉಂಟುಮಾಡಿದೆ ಎಂದು ಅವರು ದೂರುತ್ತಾರೆ. ಕಾವೇರಿ ಒಡಲಿನಲ್ಲಿದ್ದ ಮರಳನ್ನು ತೆಗೆದಿದ್ದರಿಂದ ಇದೀಗ ನದಿಯಲ್ಲಿ ಬರೀ ಜೊಂಡು ಮತ್ತು ಕಲ್ಲುಗಳೇ ತುಂಬಿವೆ.

ಚಕ್ರಾಕಾರವಾಗಿರುವ ಈ ನದಿಯಿಂದಾಗಿ ಇಲ್ಲಿ ಮರಳು ಕೊಚ್ಚಿಕೊಂಡು ಬಂದು ತಲಕಾಡಿಗೆ ಸೇರುತ್ತಿದ್ದಿದಂತೆ. ಸುಮಾರು 14ನೇ ಶತಮಾನದಲ್ಲಿ ಆಗ್ನೇಯ ದಿಕ್ಕಿನಿಂದ ಬೀಸಿದ ಗಾಳಿಯಿಂದಾಗಿ ಮರಳು ತೂರಿಕೊಂಡು ತಲಕಾಡಿನಲ್ಲಿ ಬಿದ್ದಿದ್ದರಿಂದ ಊರಿನ ದೇವಾಲಯ, ಕೊಳ, ಬಾವಿ, ಮನೆಗಳು ಮರಳಿನಿಂದ ಮುಚ್ಚಿಹೋಗಿದ್ದವು. ಹೆಮ್ಮಿಗೆಯಲ್ಲಿ ಕೆಲವು ಶಾಸನಗಳು ದೊರೆತಿದ್ದು ತಮಿಳು ಲಿಪಿಯಲ್ಲಿವೆ. ಈ ಊರಿನಲ್ಲಿ ಪುರಾತನವಾದ ಸೋಮೇಶ್ವರ ದೇವಾಲಯವಿದೆ. ಇದನ್ನು ಹೊಯ್ಸಳ ದಣ್ಣಾಯಕ ಕಟ್ಟಿಸಿದ್ದಾನೆಂದು ತಿಳಿದುಬರುತ್ತದೆ. ಅಲ್ಲದೆ ಗಂಗರ ಕಾಲದ ಸೂರ್ಯ ವಿಗ್ರಹವಿದೆ. ಅದಕ್ಕೆ ಸ್ಥಳೀಯರೊಬ್ಬರು ಪುಟ್ಟಗುಡಿ ಕಟ್ಟಿಸಿದ್ದಾರೆ. ಚೌಡೇಶ್ವರಿ ದೇವಾಲಯ, ಕಾಳೀಗುಡಿ ಹಾಗೂ ಮಾರಿಗುಡಿಗಳು ಇವೆ. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕಾಣದ ವಿಭೀಷಣ ದೇವಸ್ಥಾನವೊಂದು ಇಲ್ಲಿದೆ. ಇದರ ಸುತ್ತಲೂ ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳಿವೆ. ವಿಭೀಷಣನ ಜೊತೆ ರಾವಣ ಕುಂಭಕರ್ಣಾದಿ ದೇವತೆಗಳ ವಿಗ್ರಹಗಳು ಸಹ ಇಲ್ಲಿರುವುದು ಬಹುತೇಕರಿಗೆ ಗೊತ್ತಿಲ್ಲ.

ಕೆಲವು ವರ್ಷಗಳಿಂದ ಅಣೆಕಟ್ಟಿನ ಮತ್ತೊಂದು ಬದಿಯಲ್ಲಿ ಜಲವಿದ್ಯುತ್ ಉತ್ಪಾದನೆ ನಡೆಯುತ್ತಿದೆ. ಕಾವೇರಿ ತೀರದ ತಂಗಾಳಿ, ಸಂಜೆಗೆ ತೀರದಲ್ಲಿ ಇಳಿಯುವ ಪಕ್ಷಿಸಂಕುಲ, ಮುದ ನೀಡುವ ಏಕಾಂತದ ಪರಿಸರ. ಇಲ್ಲಿನ ಕಾವೇರಿ ಬಾಗಿಲಿನಲ್ಲಿ ಜನಜೀವನ ಸದ್ದು ಗದ್ದಲಗಳಿಲ್ಲದೆ ಶಾಂತಿ ನಿರಂತರ. ಹೀಗಾಗಿ ಇದು ಪಿಕ್‍ನಿಕ್ ಪ್ರಿಯರಿಗೆ ಸೊಗಸಾದ ತಾಣ. ಇಲ್ಲಿರುವ ಸೋಪಾನ ಘಟ್ಟ ಕೂಡ ಅಣೆಕಟ್ಟಿನ ನಿರ್ಮಾಣ ಕಾಲದಲ್ಲಿಯೇ ಆಗಿದ್ದು, ಪ್ರಸ್ತುತ ಅದೂ ಶಿಥಿಲಾವಸ್ಥೆ ತಲುಪಿದೆ. ಸ್ಥಳೀಯರು ಹಲವಾರು ಮನವಿಗಳನ್ನು ನೀಡಿದರೂ ಇದರ ಬಗ್ಗೆ ಇಲಾಖೆ ಗಮನ ಹರಿಸಿದಂತೆ ಕಾಣಿಸಿಲ್ಲ. ಅಲ್ಪ ವೆಚ್ಚದಲ್ಲಿಯೇ ಈ ಸ್ನಾನಘಟ್ಟವನ್ನೂ ಇಲಾಖೆ ದುರಸ್ತಿಗೊಳಿಸಿದಲ್ಲಿ, ಬರುವ ಪ್ರವಾಸಿಗರಿಗೆ ನಿಜಕ್ಕೂ ಹೆಮ್ಮಿಗೆ ಒಂದು ಸುಂದರ ಪ್ರವಾಸಿ ತಾಣವೆಂಬುದರಲ್ಲಿ ಎರಡು ಮಾತಿಲ್ಲ.

***

ಕೆಆರ್‌ಎಸ್‌ನಿಂದ ಮಾಧವಮಂತ್ರಿ ಅಣೆಕಟ್ಟಿಗೆ ದೂರ: 60 ಕಿ.ಮೀ.

ಅಣೆಕಟ್ಟು ಸ್ಥಾಪನೆ: ಕ್ರಿ.ಶ.1140

ಉದ್ದ: 1076 ಮೀಟರ್‌

ನಾಲೆಯ ಉದ್ದ: 29.10 ಕಿ.ಮೀ.

ಅಚ್ಚುಕಟ್ಟು ಪ್ರದೇಶ: 5828 ಎಕರೆ

ಪ್ರತಿಕ್ರಿಯಿಸಿ (+)